ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ತನ್ನದೇ ಆದ ವೈಶಿಷ್ಟ್ಯ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಯಾಗಿದೆ. ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಜಿಲ್ಲೆಯ ವೈಶಿಷ್ಟ್ಯಕ್ಕೆ ಇನ್ನೊಂದು ಹಿರಿಮೆ ಆಗಿದೆ. ಮುರುಡೇಶ್ವರ ಎಂದೊಡನೆ ನಮಗೆ ನೆನಪಾಗುವುದು ಅಲ್ಲಿಯ ಎತ್ತರದ ಶಿವನ ಪ್ರತಿಮೆ.
“ಕಂಡುಕಾ ಗಿರಿ” ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆ ಆಗಿದೆ. ಅಂಕಿ ಅಂಶಗಳ ಪ್ರಕಾರ ನೇಪಾಳದ ಕೈಲಾಸನಾಥ ಮಹಾದೇವ ಪ್ರತಿಮೆಯ ನಂತರ ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ ಎಂದು ಹೇಳಲಾಗುತ್ತದೆ. ಶಿವನ ಪ್ರತಿಮೆ ಸುಮಾರು ೧೨೩ ಅಡಿ ಎತ್ತರವಾಗಿದೆ. “ಕಿಂಗ್ ಆಪ್ ಟವರ್ಸ” ಎಂದರೆ ರಾಜ ಗೋಪುರ ಮುರುಡೇಶ್ವರ ರಾಜನಿದ್ದಂತೆ. ಈ ರಾಜ ಗೋಪುರದಲ್ಲಿ ೨೦ ಮಹಡಿಗಳಿದ್ದು , ಲಿಫ್ಟನ ವ್ಯವಸ್ಥೆಯು ಇದೆ. ಗೋಪುರದ ಮೇಲಿನ ಕೊನೆಯ ಮಹಡಿಯಲ್ಲಿ ನಿಂತು ನೋಡಿದರೆ ನಾವು ಮುರುಡೇಶ್ವರದ ಸಂಪೂರ್ಣ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಶಿವನ ಪ್ರತಿಮೆಯು ಅತಿ ಸಮೀಪವಿದ್ದಂತೆ ಕಾಣುತ್ತದೆ.
ಈ ಕ್ಷೇತ್ರದಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು ಐತಿಹಾಸಿಕವಾಗಿಯೂ ಪ್ರಖ್ಯಾತಿಯನ್ನು ಹೊಂದಿದೆ. ಇತ್ತಿಚಿನ ದಿನಗಳಲ್ಲಿ ಈ ಕ್ಷೇತ್ರ ಪ್ರವಾಸಿ ತಾಣವಾಗಿಯು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮ ಮಂದಿರವನ್ನು ಹಾಗೂ ಶನಿ ದೇವಾಲಯವನ್ನು ಮಾಡಲಾಗಿದೆ.
ಪುರಾಣದ ಕಥೆಯ ಪ್ರಕಾರ ಗೋಕರ್ಣದ ಸುತ್ತಮುತ್ತಲಿನ ಪಂಚಲಿಂಗ ದೇವಾಲಯಗಳಲ್ಲಿ ಮುರುಡೇಶ್ವರ ಕೂಡ ಒಂದಾಗಿದೆ. ಗೋಕರ್ಣದಲ್ಲಿ ಆತ್ಮಲಿಂಗ ಸ್ಥಾಪನೆಯಾದಾಗಲೇ ಮುರುಡೇಶ್ವರ, ಧಾರೇಶ್ವರ, ಸಜ್ಜೇಶ್ವರ , ಗುಣವಂತೇಶ್ವರ ಈ ಕ್ಷೇತ್ರಗಳಲ್ಲೂ ರಾವಣನಿಂದಲೇ ಲಿಂಗಗಳು ಸ್ಥಾಪನೆಯಾಯಿತು ಎಂಬುದು ಪುರಾಣದಲ್ಲಿ ಉಲ್ಲೇಖ. ಶಿವನ ಪ್ರತಿಮೆಯ ಬುಡದಲ್ಲಿರುವ ಮೃದೇಶ್ವರ ಲಿಂಗವನ್ನು ಆತ್ಮಲಿಂಗದ ಮೂಲ ತುಣುಕು ಎಂದು ಕರೆಯುವರು. ಮೃದೇಶ್ವರ ಕ್ಷೇತ್ರವನ್ನೇ ಈಗ ಮುರುಡೇಶ್ವರ ಎಂದು ಮರುನಾಮಕರಣ ಮಾಡಲಾಗಿದೆ.
ಸುಂದರವಾದ ಕಡಲದಂಡೆಯ ಮೇಲಿರುವ ಮುರುಡೇಶ್ವರ ಕ್ಷೇತ್ರ ನಯನ ಮನೋಹರವಾಗಿದೆ. ಶಿವನ ಪ್ರತಿಮೆಯನ್ನು ಕಾಶಿನಾಥ ಎಂಬುವವರು ನಿರ್ಮಿಸಿದ್ದು, ಉದ್ಯಮಿಯಾದ ಶ್ರೀಯುತ ಆರ್.ಎನ್. ಶೆಟ್ಟಿ ಯವರು ಈ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ. ಶಿವನ ಈ ಪ್ರತಿಮೆ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದು ಸಾರ್ವಕಾಲಿಕವಾಗಿ ಪ್ರತಿಮೆ ಹೊಳೆಯುವಂತೆ ನಿರ್ಮಿಸಲಾಗಿದ್ದು , ಸರಿಸುಮಾರು ಇದನ್ನು ನಿರ್ಮಿಸಲು ೨ ವರ್ಷ ತೆಗೆದುಕೊಂಡಿದೆ ಎನ್ನಲಾಗುತ್ತದೆ. ಶಿವನ ಪ್ರತಿಮೆಯ ಕೆಳಗಿರುವ ಭೂ ಕೈಲಾಸ ಗುಹೆಯಲ್ಲಿ ಭೂಮಿಯ ಮೇಲೆ ಶಿವನ ಆತ್ಮಲಿಂಗ ಪ್ರತಿಷ್ಟಾಪನೆ ಆದ ಪೌರಾಣಿಕ ಕತೆಯನ್ನು ಪ್ರತಿಮೆಗಳ ಮೂಲಕ ಮನೋಹರವಾಗಿ ವಿವರಿಸಲಾಗಿದೆ. ಸುಂದರ ಪ್ರತಿಮೆಗಳು ಘತಕಾಲದ ಘಟನೆಗಳಿಗೆ ಜೀವ ತುಂಬುವಂತಿದೆ. ಭೂಮಿ ಕೈಲಾಸವಾದ ಬಗೆಯನ್ನು ವಿವರಿಸಿದೆ. ಮೂರು ಕಡೆಯಿಂದಲೂ ಅರಬ್ಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ದೇವಾಲಯ ನಯನ ಮನೋಹರವಾಗಿದೆ. ಸಮುದ್ರದಲ್ಲಿ ಜಲಕ್ರೀಡೆ ಆಡುವುದೇ ಒಂದು ಸುಂದರ ಅನುಭವ.
ಒಟ್ಟಾರೆ ಆಧುನಿಕ ಹಾಗೂ ಸಾಂಪ್ರದಾಯಿಕ ವಾಸ್ತುಶಿಲ್ಪದ ಮಿಶ್ರಣ ಹೊಂದಿದ ಈ ಮುರುಡೇಶ್ವರ ಕ್ಷೇತ್ರ ಧಾರ್ಮಿಕ ಕ್ಷೇತ್ರವಷ್ಟೆ ಅಲ್ಲದೇ ಪ್ರವಾಸಿ ತಾಣವೂ ಆಗಿದೆ. ಈ ಕ್ಷೇತ್ರಕ್ಕೆ ಭೇಟಿ ನೀಡಿಯೇ ಇಲ್ಲಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು.
ಮಾಹಿತಿ: ಅಕ್ಷತಾ ಜಗದೀಶ್ (ಸಮಯಾ)


Leave a Reply