ನಮ್ಮ ಭಾರತ ದೇಶದಲ್ಲಿ ರಹಸ್ಯಮಯವಾದ ಪ್ರಾಣಪ್ರತಿಷ್ಠೆಮಾಡುವ ವೈಜ್ಞಾನಿಕ ವಿಧಾನಗಳನ್ನು ತಿಳಿಸಿಕೊಟ್ಟ ನಮ್ಮ ಋಷಿಮುನಿಗಳ ಕೊಡುಗೆ ಅಪಾರ. ಅದರಂತೆ ಅವರು ಬಹಳಷ್ಟು ಶಕ್ತಿ ಸ್ಥಳಗಳನ್ನು ಎಲ್ಲರ ಅಭ್ಯುದಯಕ್ಕಾಗಿ ನಿರ್ಮಿಸಿದ್ದಾರೆ. ಅಂಥಹ ಮಹತ್ತರವಾದ ಶಕ್ತಿ ಕೇಂದ್ರಗಳಲ್ಲಿ ತಿರುಮಲ ಯೋಗಿವರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಕ್ಷೇತ್ರ ಮಂಜಗುಣಿಯೂ ಒಂದು. ಈ ಶ್ರೀ ಕ್ಷೇತ್ರವು ಆಧ್ಯಾತ್ಮಿಕವಾಗಿ ಅಂತರ್ಮುಖಗೊಳಿಸಲಿಚ್ಛಿಸುವ ಸಾಧಕರಿಗೆ ಅತ್ಯಂತ ಸಹಾಯಕವಾದ ಸ್ಥಳವಾಗಿ ಮಾರ್ಪಟ್ಟಿದೆ.


ಶಿರಸಿಯಿಂದ ೨೫ ಕಿಲೊಮೀಟರ್ ಅಂತರದಲ್ಲಿ ಶಿರಸಿ ಕುಮಟಾ ಮಾರ್ಗದ ಬಲಭಾಗದಲ್ಲಿರುವ ಮಂಜುಗುಣಿ ಕ್ಷೇತ್ರ ಕರ್ನಾಟಕದ ತಿರುಪತಿ ಎಂದೇ ಪ್ರಖ್ಯಾತವಾಗಿರುವ ಪರಮ ಪಾವನ ಪ್ರದೇಶವಾಗಿದೆ, ಭಾವುಕ ಭಕ್ತರ ಪಾಲಿಗೆ ಅತ್ಯಂತ ಶಕ್ತಿ ಸ್ಥಳ. ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ, ಧ್ಯಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಇದೊಂದು ಅವಿಛಿನ್ನತೆಯ ಅನಂತ ಕ್ಷೇತ್ರ. ಸಹ್ಯಾದ್ರಿಯ ಒಡಲಿನಲ್ಲಿರುವ ಈ ರಮ್ಯ ಪ್ರದೇಶ ಪೌರಾಣಿಕ ಹಿನ್ನಲೆಯುಳ್ಳದ್ದಾಗಿದೆ, ಅಲ್ಲದೇ ಶ್ರೀ ವಾದಿರಾಜ ಯತಿಗಳು ತಮ್ಮ ತೀರ್ಥಪ್ರಬಂಧ ಎಂಬ ಗ್ರಂಥದಲ್ಲಿ ಶ್ರೀ ವೆಂಕಟರಮಣ ದೇವರು ಮಂಜುಗುಣಿಗೆ ತಿರುಮಲ ಯೋಗಿಗಳ ಮೂಲಕ ಬಂದು ನೆಲೆಸಿದ ವರ್ಣನೆ ಇದೆ. ಅಂತೆಯೇ ಶ್ರೀ ಸ್ವರ್ಣವಲ್ಲೀ ಮಠದ ಚರಿತ್ರೆಯನ್ನು ತಿಳಿಸುವ ಜ್ಞಾನದೀಪಿಕಾ ಎಂಬ ಸಂಸ್ಕೃತ ಕಾವ್ಯದಲ್ಲೂ ಮಂಜುಗುಣಿಯ ಪ್ರಸ್ತಾಪವಿದೆ. ಹಾಗೆಯೇ ಸಹ್ಯಾದ್ರಿ ಖಂದ ಮಹಾಪುರಾಣದಲ್ಲಿ ೧೮ ಅಧ್ಯಾಯಗಳ ವೆಂಕಟೇಶ ಮಹಾತ್ಮೆಯಲ್ಲಿ ಮಂಜುಗುಣಿಯ ವರ್ಣನೆ ಇದೆ. ತಿರುಮಲ ಯೋಗಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಕಾರಣಕ್ಕಾಗಿ ತಿರುಮಲ ದೇವರು ತಿರುಮಲೇಶ್ವರನಾಗಿ ಭಕ್ತರ ಹೃದಯಕಮಲದಲ್ಲಿ ಸದಾ ಪೂಜಿಸಲ್ಪಡುತ್ತಿದ್ದಾನೆ.


ಪೌರಾಣಿಕ ಹಿನ್ನೆಲೆ:
ಒಮ್ಮೆ ಶ್ರೀ ಹರಿಯು ಲೋಕಕಲ್ಯಾಣಕ್ಕಾಗಿ ಕೈಯಲ್ಲಿ ಬಿಲ್ಲು ಬಾನವನ್ನು ಹಿಡಿದು ಅರ್ಥಾತ್ ಧನುರ್ಧಾರಿಯಾಗಿ ಬೇಟೆಗೆಂದು ಶೇಷಾಚಲವೇಂದೇ ಪ್ರಸಿದ್ಧವಾಗಿದ್ದ ಶ್ರೀಗಿರಿಪರ್ವತಕ್ಕೆ ಬರುತ್ತಾನೆ. ಅದೊಂದು ದಟ್ಟ ಕಾನನವಾಗಿತ್ತು. ದುಷ್ಟ ಮೃಗಗಳು ನೆಲೆಸಿದ್ದ ಆ ಕಾನನದಲ್ಲಿ ಶ್ರೀಹರಿಯು ಬೇಟೆಯಾಡುತ್ತಾ ದುಷ್ಟ ಮೃಗಗಳನ್ನು ಸಂಹರಿಸಿ ಶಿಷ್ಯರನ್ನು ಸಂರಕ್ಷಿಸುತ್ತ ಚೋಳ ದೇಶ, ಪಾಂಡ್ಯ ದೇಶವನ್ನೆಲ್ಲಾ ಸಂಚರಿಸಿ ಕರ್ನಾಟಕದ ಕಡೆ ಬಂದನು.
ಕರ್ನಾಟಕದ ಸಹ್ಯಾದ್ರಿಯ ಪರ್ವತದ ವರಾಹ ಶಿಖರಕ್ಕೆ ಬಂದು ಇಲ್ಲಿಂದ ಕೊಡಚಾದ್ರಿಗೆ ಬಂದು ಕೊಡಚಾದ್ರಿಯಿಂದ ಸೋಮಘನಾಶಿನಿ ಎಂಬ ಸುಂದರವಾದ ನದಿ ತೀರಕ್ಕೆ ಬಂದನು. ಇದು ಅತ್ಯಂತ ರಮಣೀಯ ಪ್ರದೇಶವಾಗಿರುತ್ತದೆ. ಅಘನಾಶಿನಿ ತೀರದಿಂದ ಪಶ್ಚಿಮದಲ್ಲಿರುವ ಕಂಕಹ್ರದ ಎಂಬ ಪ್ರದೇಶದಲ್ಲಿ ಸ್ವಲ್ಪ ಕಾಲ ಬಂದು ನೆಲೆಸಿದನು, ಇಲ್ಲಿ ಮಹಾವಿಷ್ಣುವು ವೆಂಕಟೇಶನಾಗಿ ಕಂಕಹ್ರದ ತೀರದಲ್ಲಿನ ಶಿಲೆಯೊಂದರ ನಡುವೆ ಬಹಳಷ್ಟು ಕಾಲ ನೆಲೆ ನಿಂತನು. ಈ ಪ್ರದೇಶವೇ ಈಗ ಗಿಳಲಗುಂಡಿ (ಗಿಳಿಗುಂಡಿ) ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.


ಒಂದು ದಿನ ವೆಂಕಟೆಶನು ನೆಲೆನಿಂತಹ ಈ ಪ್ರದೇಶಕ್ಕೆ ಮಹಾವಿಷ್ಣುವಿನ ಶ್ರೇಷ್ಠ ಭಕ್ತರಾದ ಯೋಗಿಯೊಬ್ಬರು ದೇಶವನ್ನೆಲ್ಲಾ ಸಂಚರಿಸುತ್ತಾ ಕಂಕಹ್ರದ ಪ್ರದೇಶಕ್ಕೆ ಬಂದರು. ನಂತರ ಆ ತೀರ್ಥದಲ್ಲಿ ಸ್ನಾನ ಪೂರೈಸಿ ಅನುಷ್ಠಾನಕ್ಕಗಿ ಪಿತೃ ದೇವತೆಗಳಿಗೆ ತರ್ಪಣ ಕೊಟ್ಟು ತೀರ್ಥವನ್ನು ಕುಡಿದರು. ಮತ್ತು ಅಲ್ಲೆ ಇದ್ದ ವೃಕ್ಷವೊಂದರ ಕೆಳಗೆ ಸುಸ್ಥಳವನ್ನು ಆಯ್ದು ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡುತ್ತ ಕುಳಿತರು. ಈ ಯೋಗಿಗಳೆ ತಿರುಮಲ ಯೋಗಿಗಳು. ಹೀಗೆ ಪ್ರತಿನಿತ್ಯ ತಿರುಮಲ ಯೋಗಿಗಳು ಆ ಸ್ಥಳದಲ್ಲಿ ಇದೇ ರೀತಿಯ ಅನುಷ್ಠಾನವನ್ನು ಮಾಡುತ್ತಾ ದಿನಕಳೆಯುತ್ತಿರುವಾಗ ಒಂದು ದಿನ ಮುಂಜಾನೆ ಎಂದಿನಂತೆ ತೀರ್ಥಸ್ನಾನ ಮಾಡಿ ವಿಷ್ಣುವನ್ನು ಧ್ಯಾನಿಸುತ್ತಿದ್ದಾಗ ಅವರಿಗೆ ಅಶರೀರವಾಣಿಯೊಂದು ಕೇಳಿಸಿತು. ಅದೇನೆಂದರೆ “ಎಲೈ ತಿರುಮಲ ಯೋಗೀಂದ್ರನೆ ಮಂಗಳಕರವಾದ ಇದೇ ಕಂಕಹ್ರದ ಪ್ರದೇಶದ ನಡುವಣ ಬಂಡೆಯ ಮಧ್ಯದಲ್ಲಿ ಜಗನ್ಮಯನಾದ ವೆಂಕಟೇಶ್ವರನು ತನ್ನ ಪರಿವಾರದೊಂದಿಗೆ ನೆಲೆಸಿದ್ದಾನೆ. ಆ ಶಿಲೆಯನ್ನು ಸೀಳಿ ಅಲ್ಲಿರುವ ವೆಂಕಟೇಶ್ವರನ ಸುಂದರವಾದ ವಿಗ್ರಹವನ್ನು ತೆಗೆದುಕೋಂಡು ಇಲ್ಲಿಂದ ಉತ್ತರಕ್ಕೆ ಅರ್ಧಯೋಜನದಷ್ಟು ದೂರ ಒಯ್ಯಬೇಕು, ಆ ಮಂಜುಗುಣಿ ಎಂಬ ಹೆಸರಿನ ಶುಭಕರವೂ ಸುಂದರವೂ ಆದ ಒಂದು ಪ್ರದೇಶವಿದೆ. ಸೋಮಾಘನಾಶಿನಿ ನದಿಯ ಪಷ್ಚಿಮ ತೀರದಲ್ಲಿರುವ ಆ ಸ್ಥಳವು ಅಶೋಕವೃಕ್ಷಗಳ ಗುಂಪಿನಿಂದ ಕೂಡಿದೆ. ಆ ವೃಕ್ಷರಾಶಿಯ ಮಧ್ಯದಲ್ಲೇ ನೆರಳಿನಲ್ಲಿ ಒಂದು ಹುತ್ತವಿದೆ. ಅಲ್ಲಿಯೇ ಒಂದು ಸ್ಥಾನ ಕಲ್ಪಿಸಿ ಆ ವಿಗ್ರಹವನ್ನು ಅರ್ಥಾತ್ ಶ್ರೀ ವೆಂಕಟೇಶನನ್ನು ಪ್ರತಿಷ್ಠಾಪಿಸು. ಆ ಹುತ್ತದ ಈಶಾನ್ಯ ದಿಕ್ಕಿಗೆ “ಕೋನಾರಿ” ಎಂಬ ತೀರ್ಥವಿದೆ, ಅಲ್ಲಿ “ವಸು” ಎಂಬ ವೈಶ್ಯಪುತ್ರನು ಬಹಳ ಹಿಂದೇಯೇ ತುಂಬಾ ದ್ರವ್ಯವನ್ನಿಟ್ಟಿದ್ದಾನೆ. ಅದೆಲ್ಲವನ್ನೂ ತೆಗೆದುಕೊಂಡು ಶಿಲಾಮಯವಾದ ದೇವಸ್ಥಾನವನ್ನು ಕ್ರಮಬದ್ಧವಾಗಿ ನಿರ್ಮಿಸಿ ಶ್ರೀ ವೆಂಕಟೆಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸು, ಆಮೇಲೆ ನೀನು ಅದೇ ಪ್ರದೇಶದಲ್ಲಿ ತಪಸ್ಸನ್ನು ಮಾಡು, ದೇವರ ಪ್ರತಿಷ್ಠೆಯನ್ನು ಮಾತ್ರ ವಿಷ್ಣ್ವಾಗಮೋಕ್ತವಾದ ಮಾರ್ಗದಲ್ಲಿಯೇ ಕೂರ್ಮಸ್ಥಾಪನಪೂರ್ವಕವಾಗಿ ಮಾಡಬೇಕು. ಕರ್ಷಣದಿಂದ ಪ್ರತಿಷ್ಠೆಯವರೆಗೂ ವಿಧಿ ವಿಧಾನಗಳಂತೆ ಎಲ್ಲ ಕ್ರಿಯೆಗಳನ್ನೂ ನೀನೇ ಮಾಡಬೇಕು.”
ಇಷ್ಟು ಹೇಳಿ ಅಶರೀರವಾಣಿ ನಿಂತಿತು. ಇದನ್ನು ಕೇಳಿ ಆಶ್ಚರ್ಯಗೊಂಡು ತಿರುಮಲಯೋಗಿಗಳು ಯೋಗನಿದ್ರೆಗೆ ಹೋಗಿಬಿಟ್ಟರು. ಆಗ ತಿರುಮಲಯೋಗಿಗಳ ಕನಸಿನಲ್ಲಿ ಪ್ರತ್ಯಕ್ಷನಾದ ಮಹಾವಿಷ್ಣುವು “ಭಕ್ತಶ್ರೇಷ್ಠನಾದ ತಿರುಮಲಯೋಗಿಯೇ ನಿನ್ನ ತಪಸ್ಸಿಗೆ ನಾನು ಮೆಚ್ಚಿದ್ದೇನೆ, ವೆಂಕಟಾದ್ರಿಯಲ್ಲಿರುವ ನಾನು ಇಲ್ಲಿಯೇ ನೆಲೆಸಲು ಇಚ್ಚಿಸಿದ್ದೇನೆ, ಇಲ್ಲಿರಲು ನನಗೆ ತುಂಬಾ ಸಂತೋಷ ಎನಿಸುತ್ತಿದೆ, ಭಕ್ತಿಯಿಂದ ಭಜಿಸುವವರ ಇಷ್ಟಾರ್ಥವನ್ನು ಈಡೇರಿಸುತ್ತಾ ನಿನಗೆ ಮೋಕ್ಷವನ್ನು ಕರುಣಿಸುತ್ತೇನೆ, ಅಷ್ಟೇ ಅಲ್ಲದೆ ನಿನ್ನ ಹೆಸರಿನಲ್ಲೇ ನಾನಿಲ್ಲಿ ಇರುತ್ತೇನೆ, ನನ್ನನ್ನು ನೆಲಕ್ಕೆ ಸ್ಪರ್ಶಿಸದೆ, ಇಲ್ಲಿಂದ ಉತ್ತರ ದಿಕ್ಕಿನಲ್ಲಿರುವ ಮಂಜುಗುಣಿ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗು, ಅಲ್ಲಿ ಚಕ್ರತೀರ್ಥ, ಧೇನುತೀರ್ಥ, ಪತಂಗತೀರ್ಥ, ಇಂದುತೀರ್ಥಗಳಿವೆ, ಅಂತಹ ಶ್ರೇಷ್ಠವಾದ ಪವಿತ್ರ ಸ್ಥಳದಲ್ಲಿ ನನ್ನನ್ನು ಪ್ರತಿಷ್ಠಾಪಿಸು” ಎನ್ನುತ್ತ ಮಾಯವಾದನು ಎಚ್ಚರಗೋಂಡ ತಿರುಮಲ ಯೋಗೀಂದ್ರರು ಪರಮಾನಂದದೊಂದಿಗೆ ವಿಷ್ಣುವು ಸೂಚಿಸಿದ ಪ್ರದೇಶದ ಕಡೆಗೆ ಸಲಾಕೆ ಮತ್ತು ಸಲಕರಣೆಯ ಜೊತೆಯಲ್ಲಿ ಹೊರಟರು. ಅಲ್ಲಿಗೆ ಹೋಗಿ ಶಿಲೆಯನ್ನು ಒಡೆದು ವಿಗ್ರಹವನ್ನು ಕೆತ್ತಿದರು. ಆದರೆ ವಿಗ್ರಹದ ತಲೆಗೆ ಆಯುಧ ಬಡಿದು ರಕ್ತ ಉಕ್ಕಲು ಪ್ರಾರಂಭಿಸಿದಾಗ ತಿರುಮಲಯೋಗಿಗಳು ಗಾಬರಿಗೊಂಡು “ನನ್ನಿಂದ ಮಹಾಪರಾಧವಾಯಿತು ಕ್ಷಮಿಸು” ಎಂದು ಪರಿಪರಿಯಾಗಿ ಬೇಡಿಕೊಂಡಾಗ ಮತ್ತೆ ಅಶರೀರವಾಣಿಯಾಯಿತು, “ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ, ವಿಗ್ರಹದ ತಲೆಗೆ ಆದ ಗಾಯವನ್ನು ಒತ್ತಿಹಿಡಿ, ಆಗ ರಕ್ತಸ್ರಾವ ನಿಲ್ಲುತ್ತದೆ” ಎಮ್ದು ಹೇಳಿ ಅಶರೀರವಾಣಿ ನಿಂತಿತು. ತಿರುಮಲಯೋಗಿಗಳು ಹಾಗೆಯೇ ಮಾಡಿದಾಗ ರಕ್ತ ಉಕ್ಕುವುದು ನಿಂತಿತು. ಆಗ ತಿರುಮಲಯೋಗಿಗಳು “ನಿನ್ನ ವಿಗ್ರಹವನ್ನು ನಾನು ಸುರಕ್ಷಿತವಾಗಿ ನೀನು ಹೇಳಿದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸುವಂತೆ ಅನುಗ್ರಹಿಸು” ಎಂದು ಮಹಾವಿಷ್ಣುವಿನಲ್ಲಿ ಪ್ರಾರ್ಥಿಸಿ ಅದನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು.


ಅಷ್ಟರಲ್ಲಿ ಗೋವಿನ ರೂಪದಲ್ಲಿದ್ದ ಬ್ರಹ್ಮ ಮತ್ತು ಕರುವಿನ ರೂಪದಲ್ಲಿದ್ದ ಈಶ್ವರನು ಅಲ್ಲಿಗೆ ಬಂದು ಶ್ರೀ ವೆಂಕಟೇಶ್ವರನನ್ನು ಈ ಯೋಗಿಯು ಒಯ್ಯುತ್ತಿದ್ದಾನೆಂದು ಭಾವಿಸಿ ಹಸುವು ತನ್ನ ಮುಖದಿಂದ ತಿರುಮಲ ಯೋಗಿಗಳನ್ನು ತಿವಿಯಲು ಪ್ರಾರಂಭಿಸಿತು, ಆಗ ಮತ್ತೆ ಆಕಾಶದಿಂದ “ಧೇನುರೂಪಿಯಾದ ಬ್ರಹ್ಮನೇ ನನ್ನ ವಿಗ್ರಹವನ್ನು ಒಯ್ಯುತ್ತಿರುವುದು ನನ್ನ ಭಕ್ತನೇ ವಿನಃ ಬೇರರೂ ಅಲ್ಲ, ಅನ್ಯಥಾ ಭಾವಿಸಬೇಡ” ಎಂದು ಅಶರೀರವಾಣಿಯಾಯಿತು. ಇದನ್ನು ಕೇಳಿದ ಹಸುವು ಕ್ಷೀರಧಾರೆಯನ್ನು ಸುರಿಸಿ ಅಭಿಷೇಕ ಮಾಡಿಸಿತು. ಆಗ ನಾಲ್ಕೂ ವೇದಗಲ ಘೋಷ ಮೊಳಗಿತು, ತಿರುಮಲಯೋಗಿಗಳು ದನಕರುಗಳಿಗೆ ಪಾದಸ್ಪರ್ಶಿಸಿ ನಮಸ್ಕರಿಸಿ, ನೀವು ನಿಜರೂಪ ತೋರಿಸಿ ಎಂದು ಪ್ರಾರ್ಥಿಸಿದಾಗ ಈಶ್ವರ ಮತ್ತು ಬ್ರಹ್ಮರು ಪ್ರತ್ಯಕ್ಷರಾದರು, ತಿರುಮಲ ಯೋಗಿಗಳು ಭಕ್ತಿಯಿಂದ ನಮಸ್ಕರಿಸುತ್ತಲೇ ಅವರು ಮಾಯವಾದರು. ಹಾಗೆಯೇ ತಿರುಮಲ ಯೋಗಿಗಳು ಹಂಸರೂಪದಲ್ಲಿ ಬಂದು ಸೂರ್ಯದೇವರ ಸಹಾಯದಿಂದ ವಂಕಟೇಶ್ವರನ ವಿಗ್ರಹವನ್ನು ಶುಭ್ರಗೊಳಿಸಿಕೊಂಡು ಅಲ್ಲಿಯೇ ಪುಂಡ್ರನಾಮವನ್ನು ಮುಗಿಸಿಕೊಂಡು ಉತ್ತರ ದಿಕ್ಕಿನಲ್ಲಿಯೇ ಮುಂದೆ ಬಂದರು. ಹೀಗೆ ಅವರು ಸೋಮಾಘನಾಶಿನಿಯ ನದಿಯ ತೀರದ ಬಳಿ ಇರುವ ಅಶೋಕ ವೃಕ್ಷಗಳ ತೊಪಿನ ಬಳಿ ಬಂದಾಗ ಸಾಕ್ಷಾತ್ ಶ್ರೀ ವೆಂಕಟೇಶನೇ ತಿರುಮಲಯೋಗಿಗಳಿಗೆ ಇದೇ ಮಂಜುಗುಣಿ ಎಂಬ ಪುಣ್ಯಸ್ಥಳವೆಂದು ತಿಳಿಸಿದನು, ಅಲ್ಲಿ ಒಂದು ಎತ್ತರವಾದ ಹುತ್ತವಿತ್ತು, ಅದರ ಸಮೀಪಕ್ಕೆ ಬರುತ್ತಿದ್ದಂತೆ ತಿರುಮಲ ಯೋಗಿಗಳ ಕೈಯಲ್ಲಿನ ವಿಗ್ರಹ ಭಾರವಾಗಲಾಗಿ ತಿರುಮಲಯೋಗಿಗಳು ಆ ಹುತ್ತದ ಮೇಲೇ ವಿಗ್ರಹವನ್ನಿಟ್ಟುಬಿಟ್ಟರು, ಮತ್ತೆ ಅದನ್ನು ಎತ್ತಲು ಯೋಗಿಗಳು ಪ್ರಯತ್ನಿಸಿದಾಗ ಅದು ಮೇಲೆ ಬರಲೇ ಇಲ್ಲ.
ಆಗ ಮತ್ತೆ ಇದೇ ಸ್ಥಳದಲ್ಲಿ ನನ್ನನ್ನು ಪ್ರತಿಷ್ಠಾಪಿಸು ಎಂದು ಅಶರೀರವಾಗಿ ಕೇಳಿಸಿತು. ಅನಂತರದಲ್ಲಿ ತಿರುಮಲಯೋಗಿಗಳು ಕ್ರಮಾನುಸಾರವಾಗಿ ಆ ಪವಿತ್ರ ಸ್ಥಳದಲ್ಲಿಯೇ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ನಂತರ ಈ ಹಿಂದೇಯೇ ಆದ ಅಶರೀರವಾಣಿಯನ್ವಯ ತ್ರಿಸಂಧ್ಯದಲ್ಲಿ ದ್ವಾದಶನಾಮಗಳನ್ನು ಪಠಿಸಿ ಕೋನಾರಿ ತೀರ್ಥದಲ್ಲಿ ವಸುವೆಂಬ ವೈಶ್ಯಪುತ್ರನು ಕೂಡಿಟ್ಟಿದ್ದ ಅಪಾರವಾದ ಸಂಪತ್ತನ್ನು ತೆಗೆದುಕೊಂದು ಪ್ರತಿಷ್ಟಾಪಿಸಿದ ವಿಗ್ರಹಕ್ಕೆ ಕ್ರಮಾನುಸಾರವಾಗಿ ಶಿಲಾಮಯ ದೇವಾಲಯವನ್ನು ಸ್ಥಾಪಿಸಿದರು. ಇದು ಶ್ರೀ ಕ್ಷೇತ್ರ ಮಂಜುಗುಣಿಗೆ ಸಂಬಂಧಿಸಿದ ಹಾಗೆ ಭಕ್ತ ಜನರು ನಂಬಿರುವ ಪುರಾಣೋಕ್ತ ಹಿನ್ನಲೆ.
ಐತಿಹಾಸಿಕ ಹಿನ್ನೆಲೆ:
ಮಂಜುಗುಣಿಯ ದೇವಾಲಯದ ಚರಿತ್ರೆಯನ್ನು ಪೌರಾಣಿಕ ಮತ್ತು ಐತಿಹಾಸಿಕ ಆವರಣದ ನೆಲೆಯಲ್ಲಿ ಪರಿಗಣಿಸಿ ಹೇಳುವುದಾದರೆ ಒಂದನೊಂದು ಕಾಲದಲ್ಲಿ ತಿರುಮಲಯೋಗಿಗಳೆಂಬ ಶ್ರೇಷ್ಠ ವಿಷ್ಣು ಭಕ್ತರು ತನಗೆ ಒದಗಿಸಿದ ಸೂಚನೆಗಳಿಗೆ ಅನ್ವಯವಾಗಿ ತನ್ನ ಬುದ್ಧಿ ಮತ್ತು ಸಿದ್ಧಿಗಳ ಮುಖೇನವಾಗಿ ದೇವರನ್ನು ಒಲಿಸಿಕೊಂಡು ಶ್ರೀ ವೆಂಕಟೆಶ್ವರನ ವಿಗ್ರಹವನ್ನು ಪುಣ್ಯಭೂಮಿಯಾದ ಮಂಜುಗುಣಿಯಲ್ಲಿ ಸ್ಥಾಪಿಸಿ, ಗರ್ಭಗೃಹ, ಅಂತರಾಳ, ಸುಖನಾಸಿ ಮತ್ತು ನವರಂಗಗಳಿರುವ ಶಿಲಾಮಯ ದೇವಾಲಯವನ್ನು ನಿರ್ಮಿಸಿದರು. ಅನಂತರದಲ್ಲಿ ಸುಧಾಪುರ ಕ್ಷೇತ್ರ (ಸೊಂದಾ) ದಲ್ಲಿ ತಮ್ಮ ಕೊನೆಯ ೧೮ ವಸಂತಗಳನ್ನು ಕಳೆದ ಮಹಾ ತಪಸ್ವಿಗಳಾದ ಶ್ರೀ ವಾದಿರಾಜರು ಸೋದೆಯ ಅರಸನಾದ ಇಮ್ಮಡಿ ಅರಸಪ್ಪನಾಯಕನ ಮೂಲಕವಾಗಿ ಈ ದೇವಾಲಯದ ಬೃಹತ್ ಮುಖಮಂಟಪ ಮತ್ತು ಸಭಾಮಂಟಪವನ್ನು ನಿರ್ಮಿಸಿಕೊಟ್ಟಿರಬಹುದೆಂದು, ಅಧಾರಗಳಾದ ಮುಖಮಂಟಪ ಮತ್ತು ಸಭಾಮಂಟಪದ ವಾಸ್ತುಶಿಲ್ಪದ ಶೈಲಿಯನ್ನಾಧರಿಸಿ ಹೇಳಬಹುದು, ಅದೇ ರೀತಿ ವಿಜಯನಗರ ಸಾಮ್ರಾಜ್ಯದ ದೊರೆ ಬುಕ್ಕರಾಯನ ಹದಿನಾಲ್ಕನೇ ಶತಮಾನದ ಒಂದು ದಾನ ಶಾನವೂ ಹದಿನಾಲ್ಕನೇ ಶತಮಾನಕ್ಕಿಂತ ಪೂರ್ವದಲ್ಲೇ ಮಂಜುಗುಣಿಯ ವೆಂಕಟರಮಣ ದೇವಾಲಯ ನಿರ್ಮಿತವಾಗಿತ್ತು ಎಂಬುದಕ್ಕೆ ಪ್ರಮುಖ ಐತಿಹಾಸಿಕ ಪುರಾವೆಯಾಗಿದೆ.


ಇನ್ನು ಮೂಲದೇವಾಲಯ ನಿರ್ಮಾಣವಾದ ಕಾಲ ಯಾವುದು ಎಂಬ ಅತ್ಯಂತ ಪ್ರಮುಖವಾದ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರ ಸಿಗದಿದ್ದರೂ ತಿರುಮಲಯೋಗಿಗಳ ಕಾಲ ಸುಮಾರು ೯ನೆಯ ಶತಮಾನವದುದರಿಂದ ಅದೇ ಕಾಲದಲ್ಲಿ ಮಂಜುಗುಣಿಯ ದೇವಾಲಯ ಸ್ಥಾಪಿತವಾಗಿರಬಹುದು. ತದನಂತರದಲ್ಲಿ ಉತ್ತರಕನ್ನಡ ಜಿಲ್ಲೆಯನ್ನಾಳಿದ ಬನವಾಸಿ ಕದಂಬರು, ಸೋದೆಯ ಅರಸರು, ಬಿಳಗಿಯ ಅರಸರು ಗೇರುಸೊಪ್ಪೆಯ ಅರಸರು, ಮುಖ್ಯವಾಗಿ ಮಣಿಮತ್ಪುರದ ಅರಸರಿಂದ ಹಿಡಿದು ಪ್ರತಿಯೊಂದು ಅರಸು ಮನೆತನದವರೂ ಮಂಜುಗುಣಿಯನ್ನು ಆದ್ಯಕ್ಷೇತ್ರವನ್ನಾಗಿ ಕಂಡಿದ್ದರು. ಮಂಜುಗುಣಿ ದೇವಾಲಯದ ಸಭಾಮಂಟಪ ಮತ್ತು ಮುಖಮಂಟಪದಲ್ಲಿ ಮಾಧ್ವಪರಂಪರೆಯ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದರಿಂದಾಗಿ ಮತ್ತು ವಾದಿರಾಜ ತೀರ್ಥಪ್ರಬಂಧ ಗ್ರಂಥದಲ್ಲಿ ವೆಂಕಟೆಶ ಮಹಾತ್ಮೆಯೂ ಉಲ್ಲೇಖವಾದ ಹಿನ್ನಲೆಯಲ್ಲಿ ವಾದಿರಾಜರೇ ಅದನ್ನು ನಿರ್ಮಿಸಿದರು ಎಂಬುದು ಸ್ಪಷ್ಟವಾಗುತ್ತದೆ.
ವಾದಿರಾಜರು ಸೋದೆಯಲ್ಲಿದ್ದಾಗ ಸೋದೆಯ ಅರಸನಾಗಿದ್ದವನು ಇಮ್ಮಡಿ ಅರಸಪ್ಪನಾಯಕ, (ಕ್ರಿ,ಶ ೧೫೫೫-೧೬೦೩) ಈತ ತುಂಬಾ ಪ್ರಸಿದ್ಧ ಮತ್ತು ಪರಾಕ್ರಮಿ ಅರಸನಾಗಿದ್ದ ಈತನ ಕಾಲಾವಧಿಯಲ್ಲಿ ಸುಧಾಪುರ ಕ್ಷೇತ್ರ ಸರ್ವತೋಮುಖ ಬೆಳವಣಿಗೆಯನ್ನು ಕಂಡಿತ್ತು, ಈತ ವಾದಿರಾಜರ ಪ್ರಭಾವಕ್ಕೆ ಒಳಗಾಗಿದ್ದ ಅರಸನಾಗಿದ್ದ, ವಾದಿರಾಜರ ಆಣತಿಯಂತೆ ವಾದಿರಾಜ ಮಠದಲ್ಲಿ ಹದಿನಾರನೇ ಶತಮಾನದ ಪ್ರಥಮಾರ್ಧದಲ್ಲಿ ರಮಾತ್ರಿವಿಕ್ರಮ ದೇವಾಲಯವನ್ನು ಅದೇ ರೀತಿಯಲ್ಲಿ ಸೋದೆಯಲ್ಲಿ ಎರಡು ವೆಂಕಟರಮಣ ದೇವಾಲಯವನ್ನು ನಿರ್ಮಿಸಿದ್ದ, ಈತನೇ ಮಂಜುಗುಣಿಯ ವೆಂಕಟರಮಣ ದೇವಾಲಯದ ಸಭಾಮಂಟಪ ಮತ್ತು ಮುಖಮಂಟಪವನ್ನು ವಾದಿರಾಜರ ಆಣತಿಯಂತೆ ನಿರ್ಮಿಸಿದಂತೆ ವಾಸ್ತುಶಿಲ್ಪ ಮತ್ತು ಮತ್ತಿತರ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯವಾದ ಒಂದು ದಾಖಲೆಯನ್ನು ಇಲ್ಲಿ ಹೇಳುವುದಾದರೆ ಅರಸಪ್ಪ ನಾಯಕ ಸೋದೆಯಲ್ಲಿ ನಿರ್ಮಿಸಿದ ವೆಂಕಟರಮಣ ದೇವಾಲಯದ ಸಭಾಮಂತಟಪ ಮತ್ತು ಮುಖಮಂಟಪದ ಕಕ್ಷಾಸನಕ್ಕೂ ಹಗೂ ಮಂಜುಗುಣಿ ದೇವಾಲಯದ ಮುಖಮಂಟಪದ ವಾಸ್ತುಶಿಲ್ಪಕ್ಕೂ ಶೆಕಡಾ ೯೦ ರಷ್ಟು ಸಾಮ್ಯತೆ ಇದೆ. ಅದೇ ರೀತಿ ಕ್ರಿ.ಶ ೧೭೪೮ ರ ಸೋದೆ ಅರಸನಾದ ಮುಮ್ಮಡಿ ಸದಾಶಿವ ರಾಯನ ಶಾಸನಾಧಾರವೂ ಸೋದೆ ಅರಸರ ಮತ್ತು ಮಂಜುಗುಣಿ ದೇವಾಲಯದ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ.

ಮಂಜುಗುಣಿ – ಒಂದು ಅಧ್ಬುತವಾದ ಪ್ರಾಚೀನ ಅದ್ಧ್ಯಾತ್ಮಿಕ ಕ್ಷೇತ್ರ:
ಇಲ್ಲಿ ಧ್ಯಾನ ಮಾಡಲು ಕಷ್ಟಪಡಬೇಕಾದ ಅವಶ್ಯಕತೆಯೇ ಇಲ್ಲ. ಧ್ಯಾನದ ವಿಧಾನವನ್ನೇ ಅರಿಯದವರೂ ಕೂಡ ಇಲ್ಲಿ ಕೇವಲ ಕಣ್ಮುಚ್ಚಿ ಮೌನವಾಗಿ ಕುಳಿತುಕೊಳ್ಳುವುದರಿಂದ ಆಳವಾದ ಧ್ಯಾನದ ಸ್ಥಿತಿಯನ್ನು ತಲುಪಬಹುದು.
ಮಂಜಗುಣಿಯ ದೇವಾಲಯವು ವಿಶಿಷ್ಠವಾದ ಅಧ್ಯಾತ್ಮಿಕ ಮಹತ್ವವನ್ನು ಒಳಗೊಂಡಿದೆ. ಸುಮಾರು ೨೦೦೦ ವರ್ಷಗಳಷ್ಟು ಹಿಂದಿನ ಇತಿಹಾಸ ಪೂರ್ವದ ವಿವರಗಳು, ಇತಿಹಾಸದ ದಾಖಲೆಗಳು ಮತ್ತು ಮುಖ್ಯವಾಗಿ ಇಲ್ಲಿನ ಶಿಲ್ಪಗಳು ದೇವಸ್ಥಾನದ ಅಧ್ಯಾತ್ಮಿಕ ಮಹತ್ವವನ್ನು ತೋರಿಸುತ್ತದೆ.
ದೇವಸ್ಥಾನದ ಪ್ರವೇಶ ಧ್ವಾರವನ್ನು ಪ್ರವೇಶಿಸುವ ಮೊದಲು ಇರುವ ಅನಾದಿಕಾಲದ ರಸ್ಥೆಯು ವಾಮ ವೃತ್ತಾಕರವಾಗಿದೆ (Anti clockwise), ಯಾವುದೇ ಲೌಕಿಕ ಸಂಪತ್ತಿನ ಅಥವಾ ಲೌಕಿಕದ ಸಮಸ್ಯೆಗಳ ಪರಿಹಾರದ ಆಶಯಗಳಿಲ್ಲದೇ, ತಮ್ಮ ಅಧ್ಯಾತ್ಮಿಕ ಅಭ್ಯುದಯಕ್ಕಾಗಿ ಬರುವಂತಹ ಸಾಧಕರು ಈ ರೀತಿಯ ವಾಮವೃತ್ತದಲ್ಲಿ ಬರುವ ಪದ್ಧತಿ ಇದೆ.
ಈ ದೇವಸ್ಥಾನದ ಅನುಭವಾತ್ಮಕ ದರ್ಶನವಾಗಬೇಕಾದರೆ, ದೇವಸ್ಥಾನದ ಧ್ವಾರವನ್ನು ಪ್ರವೇಶಿಸುವ ಮೊದಲು ನಿಮ್ಮ ಎಲ್ಲ ಸಮಸ್ಯೆಗಳು, ಬಯಕೆಗಳ ಹೊರೆಯನ್ನು ಧ್ವಾರದ ಹಿಂದೆಯೇ ಬಿಟ್ಟು ಬರುತ್ತಿರುವ ಭಾವನೆಯಿಂದ ಪ್ರವೇಶಿಸಬೇಕು. ಒಬ್ಬ ವ್ಯಕ್ತಿಯು ಅಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ ಲೌಕಿಕ ಜೀವನವನ್ನೂ ಕೂಡ ವಿವೇಕದಿಂದ ನಿಭಾಯಿಸುವ ಸಾಮರ್ಥ್ಯ ದೊರೆಯುತ್ತದೆ, ಆದ್ದರಿಂದ ಮನಸ್ಸಿನ ಎಲ್ಲ ಹೊರೆಗಳನ್ನು ಬಿಟ್ಟು, ದೇವಸ್ಥಾನ ಅನುಭೂತಿಯನ್ನು ಪಡೆಯಲು ಮುಕ್ತ ಮನಸ್ಸಿನಿಂದ ಬರಬೇಕೆಂಬುದು ಇದರ ಉದ್ದೇಶ.

ಧ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲ ಭಾಗದಲ್ಲಿ ರಮಣೀಯವಾದ ಪ್ರಕೃತಿಯ ಮಧ್ಯದಲ್ಲಿ ಚಕ್ರತೀರ್ಥವಿದೆ, ಇದರಲ್ಲಿ ತೀರ್ಥ ಸ್ನಾನವನ್ನು ಮಾಡುವುದರಿಂದ ದೇಹ – ಮನಸ್ಸನ್ನು ಶಾಂತಗೊಳಿಸುವುದಲ್ಲದೇ, ಭೂತ ಶುದ್ಧಿಯಲ್ಲಿ ಮಹತ್ತರದ ಪಾತ್ರವನ್ನು ವಹಿಸುತ್ತದೆ.
ನಂತರ ಸಿಗುವ ಆಂಜನೇಯನ ದೇವಸ್ಥಾನದಲ್ಲಿ, ದಾಸ ಮಾರುತಿಯ ದರ್ಶನವಾಗುತ್ತದೆ. ಇಲ್ಲಿ ಕೆಲ ಕಾಲ ಮೌನವಾಗಿ ಕುಳಿತುಕೊಳ್ಳುವುದರಿಂದ, ನಮ್ಮಲ್ಲಿಯೂ ಆಂಜನೇಯನ ಭಕ್ತಿ ಭಾವ ಜಾಗೃತವಾಗಿ ವೆಂಕಟರಮಣನ ನಿಜವಾದ ದರ್ಶನ ಪಡೆಯುವಲ್ಲಿ ಸಹಾಯ ಮಾಡುತ್ತದೆ.
ಆಮೆಯ ಶಿಲ್ಪ:
ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೀಗೆ ಹೇಳುತ್ತಾನೆ –
ಆಮೆ ತನ್ನ ಅಂಗಗಳನ್ನು ಚಿಪ್ಪಿನೊಳಗೆ ಸೆಳೆದುಕೊಳ್ಳುವಂತೆ, ಇಂದ್ರಿಯ ವಸ್ತುಗಳಿಂದ ತನ್ನ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳಲು ಶಕ್ತನಾದವನು ಪರಿಪೂರ್ಣ ಪ್ರಜ್ಞೆಯಲ್ಲಿ ಸ್ಥಿರನಾಗಿರುತ್ತಾನೆ.

ಆಮೆಯು ಸಂಪೂರ್ಣವಾಗಿ ತನ್ನ ಚಿಪ್ಪಿನ ಕವಚದೊಳಗೆ ಸೇರಿಕೊಳ್ಳಬಹುದು, ಹಾಗೆಯೇ ಯೋಗಿಯು ತನ್ನ ಇಂದ್ರಿಯಗಳಿಂದ ಭೌತಿಕಪ್ರಪಂಚದಲ್ಲಿ ಉಳಿಯದೇ ಅಂತರ್ಮುಖಿಯಾಗಿ ದೇವಸ್ಥಾನವನ್ನು ಪ್ರವೇಶಿಸಬೇಕು ಎಂಬುದನ್ನು ಆಮೆಯ ಶಿಲ್ಪವು ಪ್ರತಿನಿಧಿಸುತ್ತದೆ.
ಮಂಜುಗುಣಿ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಂತೆ ನಿಮ್ಮ ಅಂತಃಕರಣ ಪ್ರಸನ್ನವಾಗುತ್ತದೆ. ಶ್ರೀ ಕ್ಷೇತ್ರದ ಆವರಣದಲ್ಲಿ
ಕೆಲವೇ ನಿಮಿಷಗಳಕಾಲ ಮೌನವಾಗಿ ಕುಳಿತುಕೋಂಡರೂ ಧ್ಯಾನದ ಅನುಭೂತಿಯನ್ನು ಅನುಭವಿಸುವುದಲ್ಲದೇ, ವೆಂಕಟೇಶ್ವರನ ಅನುಗ್ರಹವನ್ನೂ ಪಡೆಯಬಹುದಾಗಿದೆ.
ಇಲ್ಲಿ ನೀವು ಧ್ಯಾನ ಸ್ಥಿತಿಯಲ್ಲಿ ಕುಳಿತುಕೊಂಡು, ಅಂದರೆ ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮ ಅಂಗೈಗಳನ್ನು ಮೇಲ್ಮುಖವಾಗಿ ತೊಡೆಗಳಮೇಲೆ ಇಟ್ಟುಕೊಂಡು ಅಥವಾ ನಿಮ್ಮಿಷ್ಟದ ಮುದ್ರೆಯೊಂದಿಗೆ ಸ್ವಲ್ಪಹೊತ್ತು ಕಳೆದರೆ ಸಾಕು ನಿಮ್ಮ ವಿಜ್ಞಾನಮಯ ಕೋಶವು ಅನುಭೂತಿಯನ್ನು ಪಡೆಯುತ್ತದೆ.
ಇಲ್ಲಿ ಧ್ಯಾನ ಮಾಡಲು ಕಷ್ಟಪಡಬೇಕಾದ ಅವಶ್ಯಕತೆಯೇ ಇಲ್ಲ. ಧ್ಯಾನದ ವಿಧಾನವನ್ನೇ ಅರಿಯದವರೂ ಕೂಡ ಇಲ್ಲಿ ಕೇವಲ ಕಣ್ಮುಚ್ಚಿ ಮೌನವಾಗಿ ಕುಳಿತುಕೊಳ್ಳುವುದರಿಂದ ಆಳವಾದ ಧ್ಯಾನದ ಸ್ಥಿತಿಯನ್ನು ತಲುಪಬಹುದು.
ವಾಸ್ತುಶಿಲ್ಪ:
ವಾಸ್ತುಶಿಲ್ಪದ ದೃಷ್ಟಿಕೋನದಿಂದ ಮಂಜಗುಣಿಯ ವೆಂಕಟರಮಣ ದೇವಾಲಯವನ್ನು ಅಭ್ಯಸಿಸಿದಾಗ ಅನೇಕ ವಿಶಿಷ್ಟವಾದ ಅಪರೂಪವಾದ ಅಂಶಗಳು ಗಮನಕ್ಕೆ ಬರುತ್ತದೆ. ಪ್ರಸ್ತುತದಲ್ಲಿ ಮುಖ್ಯ ದೇವಾಲಯದ ಎದುರಿಗೆ ಬೃಹತ್ ಧ್ವಜಸ್ಥಂಬ, ಬಲಿಪೀಠ, ಆಮೇಲೆ ದೇವಾಲಯವನ್ನು ಪ್ರವೇಶಿಸಿದರೆ ಮುಖಮಂಟಪ, ಸಭಾಮಂಟಪ ಹಾಗೂ ಮೂಲ ದೇವಾಲಯದ ನವರಂಗ, ಸುಖನಾಸಿ, ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ. ಒಂದು ಶಾಸ್ತ್ರೀಯ ದೇವಾಲಯಕ್ಕೆ ಇರಬೇಕಾದ ಸರ್ವಲಕ್ಷಣಗಳನ್ನೂ ಮಂಜುಗುಣಿಯ ವೆಂಕಟರಮಣ ದೇವಾಲಯದಲ್ಲಿ ಕಾಣಬಹುದು.


ಇನ್ನು ದೇವಾಲಯದ ವಾಸ್ತು ಶಿಲ್ಪದ ವೈವಿಧ್ಯತೆಯನ್ನು ಪ್ರತ್ಯೇಕವಾಗಿ ನೋಡಿದರೆ, ಎದುರಿಗೆ ೨ ಅಡಿ ಎತ್ತರದ ಅಧಿಷ್ಠಾನದ ಮೇಲೆ ಬೃಹತ್ ಧ್ವಜ ಸ್ಥಂಭವಿದೆ. ಧ್ವಜಸ್ಥಂಬದ ಮೇಲೆ ಪುಟ್ಟ ಗೋಪುರವಿದೆ, ಅದರಲ್ಲಿ ಗರುಡನ ವಿಗೃಹವಿದೆ. ಇದರ ಎದುರಿಗೆ ಬಲಿಪೀಠ ಮತ್ತು ಇತ್ತೀಚೆಗೆ ಪ್ರತಿಷ್ಠಾಪಿಸಿದ ಮತ್ತೊಂದು ಗರುಡ ವಿಗ್ರಹದ ಪುಟ್ಟ ಗುಡಿ ಇದೆ. ಇನ್ನು ದೇವಾಲಯವನ್ನು ಪ್ರವೇಶಿದರೆ ಮೆಟ್ಟಿಲುಗಳ ಸೋಪಾನದಲ್ಲಿರುವ ಎರಡು ಶಿಲಾನಿರ್ಮಿತ ಆನೆಗಳು ಭಕ್ತರನ್ನು ಸ್ವಾಗತಿಸುತ್ತದೆ, ಮುಖಮಂಟಪದ ಕಕ್ಷಾಸನದ ಹೊರಪಾರ್ಶ್ವ ಸಂಪೂರ್ಣವಾಗಿ ವಿಜಯನಗರ ಶೈಲಿಯ ಕೆತ್ತನೆಗಳನ್ನೊಳಗೊಂಡಿದೆ, ಮುಖಮಂಟಪದ ಕಕ್ಷಾಸನದ ಅಧಿಷ್ಠಾನ ಭಾಗದಲ್ಲಿ ಪದ್ಮ, ಕಂಠ, ಕಪೋತಗಳಿವೆ. ಧ್ವಾರಬಂದದಲ್ಲಿ ಶಿಲಾಬಾಲಿಕೆಯರ ವಿಗ್ರಹಗಳಿವೆ. ಕಕ್ಷಾಸನದಲ್ಲಿರುವ ಪ್ರಮುಖ ಉಬ್ಬು ಶಿಲ್ಪಗಳೆಂದರೆ, ಕೀರ್ತಿ ಮುಖ ಅರ್ಧಕಂಬಗಳ ಸಾಲು, ಗೋಪುರ ಮಾದರಿ, ರಸ್ಸೆಟ್ ಹಾಗೂ ದಂತ ಪಂಕ್ತಿಗಳ ಶಿಲ್ಪರಚನೆಗಳಿವೆ. ಅಂತೆಯೇ ಕಕ್ಷಾಸನದ ಮೇಲ್ಭಾಗದಲ್ಲಿ ರಾಮಾಯಣದ ಸನ್ನಿವೇಶಗಳನ್ನು ಕೆತ್ತಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಇಲ್ಲಿನ ಪ್ರತಿ ಶಿಲ್ಪಗಳು ಒಂದೊಂದು ಸಿದ್ದಾಂತವನ್ನು ಪ್ರತಿಪಾದಿಸುವಂತಿದೆ. ಅಂತೆಯೇ ಅಧಿಷ್ಠಾನದಲ್ಲಿ ಹಂಸಗಳ ಸಾಲು ಹಾಗೂ ವಿವಿಧ ಪ್ರಾಣಿಗಳ ಚಿತ್ರವನ್ನು ಕೆತ್ತಲಾಗಿದೆ. ದೇವಾಲಯದ ಬಲಭಾಗದ ಕಕ್ಷಾಸದಲ್ಲಿ ವಿಶೇಷವಾದ ಶಿವಲಿಂಗದ ಚಿತ್ರವಿದೆ. ವಿಷ್ಣುವಿನ ದೇವಾಲಯದಲ್ಲಿ ಶಿವಲಿಂಗವಿರುವುದು ತೀರ ಅಪರೂಪವೇ ಆಗಿದೆ. ಇನ್ನು ದೇವಾಲಯದ ಒಳಭಾಗವನ್ನು ಪ್ರವೇಶಿಸಿದರೆ ಬೃಹತ್ತಾದ ಮುಖಮಂಟಪ ಮತ್ತು ಸಭಾಮಂಟಪ ನಯನ ಮನೋಹರವಾಗಿದೆ. ಬೃಹತ್ ಗಾತ್ರದ ಚೌಕಾಕಾರದ ಕಂಬಗಳು ನಯನ ಮನೋಹರವಾಗಿದೆ. ಈ ಸ್ಥಂಭಗಳ ಮೇಲೆ ವೈವಿಧ್ಯಮಯವಾದ ಅನೇಕ ಉಬ್ಬು ಶಿಲ್ಪಗಳನ್ನು ಕಾಣಬಹುದು. ವಿಶೇಷವಾಗಿ ಭಾಗವತ ಸಂಪ್ರದಾಯದ ಅನೇಕ ಶಿಲ್ಪಗಳಿವೆ. ಮುಖ್ಯವಾಗಿ ಉಡುಪಿಯ ಶ್ರೀ ಕೃಷ್ಣನ ವಿಗ್ರಹ, ಮೂಲ ವಿಗ್ರಹಕ್ಕೆ ಹೋಲುವ ವೆಂಕಟರಮಣನ ಶಿಲ್ಪ, ಚತುರ್ಭುಜ ಕೃಷ್ಣ, ಹಯಗ್ರೀವ, ಅಪರೂಪದ ಬಲದಂತ ಮುರಿದ ಗಣಪತಿ, ತೀರಾ ಅಪರೂಪವಾದ ಬ್ರಹ್ಮನ ಶಿಲ್ಪ, ನರ್ತಕಿಯರು, ವೀರಾಂಜನೇಯ, ಕಾಳಿಂಗಮರ್ಧನ ಕೃಷ್ಣ, ವಿಶಿಷ್ಟವಾದ ಮೀನುಗಳ ಶಿಲ್ಪ, ವಠಪತ್ರದ ಮೇಲಿರುವ ಬಾಲಕೃಷ್ಣ, ಅನ್ನಲಕ್ಷ್ಮೀ, ಅನಂತಶಯನ, ಲಕ್ಷ್ಮೀ, ಅದೇ ರೀತಿ ಇಲ್ಲೂ ಕೂಡ ಛತ್ತಿನಲ್ಲಿ ಅಷ್ಟಕೋನಾಕೃತಿಯ ಮಧ್ಯದಲ್ಲಿ ಅರಳಿದ ಕಮಲದ ಚಿತ್ರವಿದೆ. ಸಭಾಮಂಟಪದಿಂದ ಮೂಲ ದೇವಾಲಯದ ನವರಂಗ ಮಂಟಪಕ್ಕೆ ಪ್ರವೇಶಿಸುವ ಧ್ವಾರದ ಲಲಾಟ ಬಿಂಬದಲ್ಲಿ ಗಜಲಕ್ಷ್ಮೀಯ ಚಿತ್ರವಿದ್ದು ಧ್ವಾರಪಟ್ಟಿಕೆಯ ಗೋಡೆಯ ಮೇಲೆ ಜಯ ವಿಜಯ ಹಾಗೂ ಗುರು ಹನುಮಂತರ ಶಿಲ್ಪವಿದೆ. ಮೂಲ ದೇವಾಲಯದ ನವರಂಗ ಮಂಟಪದ ಸ್ಥಂಭಗಳಿಗೂ ಸುಂದರವಾದ ಶಿಲ್ಪಗಳನ್ನು ಕೆತ್ತಲಾಗಿದೆ. ಮುಖ್ಯವಾದ ಅರ್ಧನಾಮ, ಅರ್ಧಕಮಲ, ಶಂಖ, ಚಕ್ರ, ಹಂಸ ಹಾಗೆಯೇ ಮನುಷ್ಯನೋರ್ವ ಮೀನಿನ ಮೇಲೆ ಚಿಂತಾಕ್ರಾಂತನಾಗಿ ತಲೆಯ ಮೇಲೆ ಕೈಹೊತ್ತು ಕುಳಿತ ಚಿತ್ರ, ನವನೀತ ಕೃಷ್ಣ, ಯೋಗಾನರಸಿಂಹ ಮುಂತಾದ ವೈವಿದ್ಯಮಯವಾದ ಉಬ್ಬುಶಿಲ್ಪಗಳಿವೆ, ಇಲ್ಲಿನ ನವರಂಗದ ಮೇಲಿನ ಛತ್ತಿನ ಭಾಗದಲ್ಲೂ ಅಷ್ಟಕೋನಾಕೃತಿಯಲ್ಲಿ ಅರಳಿದ ಕಮಲದ ಚಿತ್ರವಿದೆ. ಈ ಭಾಗದಿಂದ ಮುಂದೆ ಹೋದರೆ ಸುಖನಾಸಿ ಪ್ರದೇಶ ಕಾಣುತ್ತದೆ. ಸುಖನಾಸಿಯ ಗೋಡೆಯ ಧ್ವಾರಬಂಧದಲ್ಲಿ ತಿರುಪತಿಯ ರೀತಿಯ ಶಂಖಪಾಣಿ ಚಕ್ರಪಾಣಿಯ ಅರ್ಧಭಾಗ ಮಾತ್ರ ಕಾಣುವಂತೆ ಇಡಲಾಗಿದೆ. ಇನ್ನುಳಿದಂತೆ ಸುಖನಾಸಿಯ ವಾಸ್ತು ಶಿಲ್ಪ ಸರಳವಾಗಿದೆ. ಇದರ ನಂತರ ಸರಳ ವಿನ್ಯಾಸದ ವಾಸ್ತು ಪ್ರಾಕರವಿದೆ. ಅದಾದ ಮೇಲೆ ಗರ್ಭಗೃಹವಿದೆ. ಗರ್ಭಗೃಹದ ಲಲಾಟಬಿಂಬದಲ್ಲಿ ಅರ್ಚನ ಲಕ್ಷ್ಮಿಯ ಶಿಲ್ಪವಿದೆ. ಅದೇ ರೀತಿ ಗರ್ಭಗುಡಿಯ ಗೋಡೆಯ ಮೇಲೆ ಪುಷ್ಪಪ್ರಾಣಿ. ಶಂಖಚಕ್ರ, ಧನಸ್ಸು, ಬಾಣದ ಚಿತ್ರವಿದೆ.


ಅದೇ ರೀತಿ ಗರ್ಭಗೃಹದ ಛತ್ತಿನಲ್ಲೂ ಅಷ್ಟಕೋನಾಕೃತಿಯ ಚಿತ್ರವಿದೆ. ಸರಳವಾದ ಚೌಕಾಕಾರದ ಗರ್ಭಗೃಹದಲ್ಲಿ ಕೋಟ್ಯಾಂತರ ಭಕ್ತರ ಆರಾಧ್ಯ ದೈವಾಗಿರುವ ಮಂಜುಗುಣಿ ವೆಂಕಟೆಶನ ಆಕರ್ಷಕವಾದ ವಿಗ್ರಹವಿದೆ. ಇನ್ನು ದೇವಾಲಯದ ಹೊರಭಾಗಕ್ಕೆ ಬಂದರೆ ಅತ್ಯಂತ ಸರಳವಾದ ವಾಸ್ತುಶಿಲ್ಪದಿಂದ ಕೂಡಿದೆ. ಶಿಖರವು ಚಾಲುಕ್ಯ ಶೈಲಿಯನ್ನು ಹೋಲುವಂತಿದೆ. ಅತ್ಯಂತ ವಿಶೇಶವಾದ ಒಂದು ಅಂಶವೆಂದರೆ ಮೂಲದೇವಾಲಯದ ಗರ್ಭಗ್ರಹದ ಹೊರಭಾಗದ ಗೋಡೆಯಲ್ಲಿ ಒಂದು ವಿಶಿಷ್ಟ ಗುಣವಿರುವ ಶಿಲಾ ಹಲಗೆಯನ್ನು ಜೋಡಿಸಲಾಗಿದೆ. ಆ ವಿಶಿಷ್ಟ ಗುಣವೆಂದರೆ, ಆ ಶಿಲೆಯಿಂದ ಅಪ್ರಿಲ್, ಮೇ ತಿಂಗಳಿನಲ್ಲಿ ನೀರು ಬಸಿಯುತ್ತದೆ! ಹಾಗೆಯೇ ಮತ್ತೊಂದು ವಿಶಿಷ್ಟವೆಂದರೆ ದೇವಾಲಯದ ಎಡಭಾಗದ ಮುಂಚಾಚುವಿನ ಮೇಲ್ಭಾಗದಲ್ಲಿ ಪರಸ್ಪರ ಒಂದೇ ಕಡೆ ಮುಖಮಾಡಿರುವ ಎರಡು ಮೀನುಗಳ ಚಿತ್ರವಿದೆ. ಆಂಧ್ರದ ಕಾಳಹಸ್ತಿಯ ದೇವಾಲಯದಲ್ಲೂ ಈ ರೀತಿಯ ಶಿಲ್ಪವನ್ನು ಗಮನಿಸಬಹುದಾಗಿದೆ. ಒಟ್ಟಾರೆಯಾಗಿ ಮಂಜುಗುಣಿಯ ವೆಂಕಟರಮಣ ದೇವಾಲಯ ವಿಶಿಷ್ಟವಾದ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿದೆ.
ಮಾಹಿತಿ: ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಆಧಿಕೃತ ಜಾಲತಾಣಕ್ಕೆ ಪ್ರವೇಶಿಸಿ – ಶ್ರೀ ಕ್ಷೇತ್ರ ಮಂಜುಗುಣಿ


Leave a Reply