ನಮ್ಮೂರಿನ ರೈತರು

Posted by

·

ಮಳೆ ಹಾಗೆ ಸುರಿಯುವುದಿಲ್ಲಾ ಒಂದಿಷ್ಟು ಹಸಿ ನೆನಪುಗಳನ್ನು ನಮ್ಮೆದೆಗೆ ಸುರಿದೇ ಹೋಗುತ್ತದೆ. ಈ ನೆನಪು ೧೫-೨೦ ವರ್ಷಗಳ ಹಿಂದಿನದು.‌ ಕರಾವಳಿಯ ಗದ್ದೆಗಳು ಭತ್ತದ ಸಸಿಯಿಂದ ಕಂಗೊಳಿಸುತ್ತಿದ್ದ ಹಸಿರು ಕಾಲ. 

ಬೇಸಿಗೆಯಲ್ಲೇ ಕಾಡು ಮೇಡು ಸುತ್ತಿ ತರಕು ಸಂಗ್ರಹಿಸಲಾಗುತ್ತಿತ್ತು.ಮೇ ಅಂತ್ಯಕ್ಕೆ ಭತ್ತದ ಗದ್ದೆಗಳಿಗೆ ತರಕು ಗೊಬ್ಬರ ಬಿದ್ದಾಗಿರುತ್ತಿತ್ತು. ಜೂನ್ ಆರಂಭದಲ್ಲೇ ಮಳೆರಾಯ ಬಿಡುವಿಲ್ಲದೇ ಸುರಿಯುತ್ತಿದ್ದ. 

ಮನೆಯ ಅಂಗಳದಲ್ಲಿ ನಾಲ್ಕಾರು ಸುಳಿ ಮುಟ್ಟಿಗಳು. ಅದರಲ್ಲಿ ಹುಲ್ಲಿನ ಸಿಂಬೆಯಲ್ಲಿ ಬೆಚ್ಚಗೆ ಕುಳಿತ ಸಾವಿರಾರು ಭತ್ತದ ಬೀಜಗಳು. ದಿನಕ್ಕೆ ೪-೫ ಬಾರಿಯಂತೆ ಕೊಡದಲ್ಲಿ ನೀರೊಯ್ದು ಬೀಜ ಮೊಳಕೆ ಒಡೆದೊಡನೆ ಹುಲ್ಲಿನಿಂದ ಬೀಜಗಳನ್ನು ಬೇರ್ಪಡಿಸಿ ನೆಲದಲ್ಲಿ ಹರಡಲಾಗುತ್ತಿತ್ತು. ಅದರಿಂದ ಮೆಲ್ಲಗೆ ಹೊರಗೆ ಬರುತ್ತಿದ್ದ ಘಮ ಜೊತೆಗೆ ಹಾರಾಡುತ್ತಿದ್ದ ಹೊಗೆ ಆ ಬೀಜದ ಪಿಂಡಿಗಳನ್ನು ಹತ್ತಾರು ಕೈಗಳು ಬಿಡಿಸುತ್ತಿದ್ದವು. ಕೊನೆಗೆ ಆ ಬೀಜಗಳೂ ಇನ್ನೊಂದು ಬುಟ್ಟಿಗೆ ತಲುಪಿ ರೈತನ ಕೈಗಳಿಂದ ಭೂತಾಯಿಯ ಮಡಿಲ ಸೇರುತ್ತಿದ್ದವು. 

ಬೀಜ ಬಿತ್ತಿದ ಸುದ್ದಿ ಪರಿಸರದ ತುಂಬಾ ಹರಡಿ ಕೆಲವು ಹಕ್ಕಿಗಳು ಈ ಬೀಜವನ್ನು ಸವಿಯಲೆಂದೆ ಬರುತ್ತಿದ್ದವು. ಒಂದಿಷ್ಟು ದಿವಸ ಇವುಗಳನ್ನು ಕಾಯದೇ ಉಪಾಯವಿಲ್ಲ. 

ಮಳೆ ಜೋರಾಗಿಯೇ ಹೊಡಿಯುತ್ತಿತ್ತು. ಯಾವ ಮಳೆ ಗಾಳಿಯನ್ನು ಲೆಕ್ಕಿಸದೆ ಮನೆಯ ಗಂಡಸರು ಒರ್ಲಾ ಕಟ್ಟಿ ಗದ್ದೆ ಹೂಡುತ್ತಾನೆ ಇದ್ದಾರೆ. ಭತ್ತದ ಸಸಿಗಳು ಬೆಳೆದು ನಳನಳಿಸುತ್ತಿವೆ. ಊರಲೆಲ್ಲಾ ಇನ್ನೇನು ಸಸಿ ನೆಟ್ಟಿ ಶುರು ಆಗಿಬಿಟ್ಟಿದೆ. ಹತ್ತಾರು ಮೈಲಿ ದೂರದಿಂದ ಮನೆಗಳಿಗೆ ಇರಾಳು ಬಂದಿದ್ದಾರೆ. ೧೫-೨೦ ದಿನವಾದರೂ ಬೇಕು ಸಸಿ ನೆಡೋಕೆ. ಈಗಂತೂ ಮನೆಯ ಹೆಂಗಸರಿಗೆ ಅಡಿಗೆ ಮಾಡುವುದೇ ದೊಡ್ಡ ಕೆಲಸ‌. ಗದ್ದೆ ಕೆಲಸ ಮುಗ್ಸಿ ಹಂಡೆ ನೀರ್ ಮೀಯ್ಯದೆ ಆ ದಿನ ಪೂರ್ಣ ಆಗುತ್ತಿರಲಿಲ್ಲ. ರಾತ್ರಿ ಆಗೋಕು ಇರಾಳು, ಮನೆ ಮಂದಿ ಸೇರಿ ಕಾಡು ಹರಟೆ ಹೊಡೆಯೋದು ಏನ್ ಕಮ್ಮಿ ಇಲ್ಲ. ಬೆಟ್ಟದ ಬದಿಯಲ್ಲಿ ಸಿಗುವ ಕಳಲೆ , ಅಣಬೆ, ಮೊಲ, ಕಡ, ಹಂದಿಯ ವಿಷಯಗಳು ಎಷ್ಟೋ ಸಾರಿ ಬಂದು ಹೋಗುತ್ತಿದ್ವು. ಎಲ್ಲರ ಬಾಯಲ್ಲೂ ಕಾವಳ ಹೊರಳಾಡುತ್ತಿತ್ತು. 

ಸಸಿ ನೆಟ್ಟಿ , ಕಳೆ ಕೀಳೋದು ಎಲ್ಲಾ ಮುಗೀತು ಗದ್ದೆಯಲ್ಲಿ ಭತ್ತದ ಸಸಿಗಳು ನಿಧಾನಕ್ಕೆ ದೊಡ್ಡದಾಗುತ್ತಿವೆ…….

~°೫-೧೦ ವರ್ಷಗಳ ನಂತರ°~

ನೇಗಿಲಿನ ಬದಲಾಗಿ ಟ್ಯಾಕ್ಟರ್ ಬಂದಿದೆ. ಎಲ್ಲರಲ್ಲೂ ಹೊಸ ಹುರುಪು ಹೊಸ ಬಗೆಯ ವಸ್ತುವೊಂದನ್ನು ಊರೋರಿಗೆ ಪರಿಚಯಿಸುವ ಹಂಬಲ. ಸಾರಿಗೆ ವ್ಯವಸ್ಥೆ ಮೊದಲಿಗಿಂತ ಬಹಳಷ್ಟು ಸುಧಾರಿಸಿದೆ. ಆಗಿನಂತೆ ಇರಾಳು ಇಲ್ಲಾ. ಯಾರು ಮನೆಯಲ್ಲಿ ಉಳಿಯುವುದಿಲ್ಲ. ಹುತ್ತಿನಾಳು ಬಂದು ಹೋಗ್ತಾರೆ ಅಷ್ಟೇ. ಆದ್ರು ಅವರಿಗೂ ಸಂಬಳ ಕೊಡೋಕೆ ಸಾಧ್ಯ ಆಗ್ತಿಲ್ಲಾ. ಭತ್ತಕ್ಕಂತೂ ಬೆಲೆಯೇ ಇಲ್ಲವಾಗಿದೆ. ಇಳುವರಿಯೂ ಮೊದಲಿನಷ್ಟಿಲ್ಲಾ. ಆದ್ರು ಹುಟ್ಟಿನಿಂದ ಹಿಡಿದು ಮಾಡಿದ ಕೆಲಸ ಇದು. ಬಿಡುವುದಾದರೂ ಹೇಗೆ? ಒಂದಿಷ್ಟು ಸಾಲವನ್ನಾದರೂ ಮಾಡಿ ಈ ಸಲವೂ ಗದ್ದೆ ಮಾಡಲೇ ಬೇಕು. ಹೀಗೆ ಪ್ರತಿವರ್ಷವೂ ಅಂದುಕೊಳ್ಳುತ್ತಾ ರೈತ ಗದ್ದೆ ಹೂಡುತ್ತಾನೆ. ಗದ್ದೆಯಲ್ಲಿ ಭತ್ತದ ಸಸಿಗಳು ನಿಧಾನಕ್ಕೆ ದೊಡ್ಡದಾಗುತ್ತಿವೆ…………..

~°ಪ್ರಸ್ತುತ ವರ್ಷ -೨೦೨೩°~

ಎಷ್ಟೋ ರೈತರು ಟ್ಯಾಕ್ಟರ್ಗಳನ್ನು ಮಾರಿ ಆಗಿದೆ. ಗದ್ದೆಯಲ್ಲಿ ರೈತನ ‘ರೇ ರೇ’ ಅನ್ನುವ ಲಾಲಿತ್ಯವಿಲ್ಲಾ. ಗದ್ದೆಯೇ ನಾಚಿಸುವಂತೆ ಮಾತಾಡುತ್ತಿದ್ದ ರೈತ ಮಹಿಳೆಯರ ಪಿಸು ಮಾತಿಲ್ಲಾ. ಕೆಲವು ಗೇಣಿದಾರರು ಹೆಣಗಾಡುತ್ತಾ ತಮ್ಮ ಕುಟುಂಬದವರನ್ನೇ ಹಾಕಿಕೊಂಡು ಒಂದಿಷ್ಟು ಗದ್ದೆ ಮಾಡುತ್ತಿದ್ದಾರೆ. ಯುವ ಮುಖಗಳು ಗದ್ದೆಗಳಲ್ಲಿ ಕಾಣಿಸುತ್ತಿಲ್ಲಾ. ಹಳಬರಾದ ನನ್ನೂರಿನ ರೈತರೇ ಇನ್ನು ಗದ್ದೆಯಲ್ಲಿ ಗೇಯುತ್ತಿದ್ದಾರೆ. ಭತ್ತದ ಕೆಲವು ಗದ್ದೆಗಳು ಅಡಿಕೆ ತೋಟವಾಗಿವೆ. ಇನ್ನು ಕೆಲವೊಂದಿಷ್ಟು ಗದ್ದೆಗಳು ಹಾಗೆ ಬಂಜರು ಬಿದ್ದಿವೆ. 

ಉಪಸಂಹಾರ:-

ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಭತ್ತವೂ ಒಂದು. ಆದರೆ ವರ್ಷದಿಂದ ವರ್ಷಕ್ಕೆ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಏನು ಬೆಳೆಯದೇ ಹಾಗೆ ಬಂಜರು ಬೀಳುತ್ತಿದೆ. ಪ್ರಸಕ್ತ ವರ್ಷ ನಮ್ಮ ಜಿಲ್ಲೆಯಲ್ಲಿ ಭತ್ತದ ಬೀಜ ಖರೀದಿಸಿದವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಕಾರಣಗಳು ಹಲವಾರು ಇವೆ. ಹವಾಮಾನ ಬದಲಾವಣೆಯು ಕೃಷಿಗೆ ಒಂದು ದೊಡ್ಡ ಪಿಡುಗಾಗಿರುವುದಂತು ನಿಜ. 

ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:-

∆ ಆಗಾಗ ಬರುವ ಪ್ರವಾಹಗಳು ಭತ್ತದ ಗದ್ದೆಗಳನ್ನು ಮುಳುಗಿಸಿ. ರೈತ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುವುದು. (೨೦೧೯,೨೦೨೦,೨೦೨೧)ರ ಪ್ರವಾಹಗಳು ಇದಕ್ಕೆ ಸಾಕ್ಷಿ. 

∆ ಉಪ್ಪು ನೀರು ಕೃಷಿ ಜಮೀನುಗಳಿಗೆ ನುಗ್ಗುತ್ತಿರುವುದು.

∆ ಒಮ್ಮೆ ಮಳೆ ಜಾಸ್ತಿ ಒಮ್ಮೆ ಮಳೆ ಕಡಿಮೆ. ಮಳೆಗಾಲದಲ್ಲೂ ಮಳೆ ಬಾರದೇ ಭತ್ತದ ಗದ್ದೆಗಳಿಗೆ ಬಾವಿ, ಬೋರ್ವೆಲ್ಗಳಿಂದ ನೀರು ಒದಗಿಸುವ ಪರಿಸ್ಥಿತಿ ಬಂದಿದೆ.

∆ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವು ಅಭಿವೃದ್ಧಿ ಯೋಜನೆಗಳು. ಕಾಮಗಾರಿಗಳನ್ನು ಮಳೆಗಾಲ ಹತ್ತಿರವಾದರೂ ಪೂರ್ಣಗೊಳಿಸದೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿ ಮಳೆ ನೀರು ಹೋಗುವ ನೈಸರ್ಗಿಕ ಕಾಲುವೆಗಳನ್ನು ಮುಚ್ಚಿರುವುದರಿಂದ ಗದ್ದೆಗಳು ಜಲಾವೃತಗೊಂಡು ಕೃಷಿ ಮಾಡಲು ಆಗುತ್ತಿಲ್ಲ .

∆ ಭತ್ತಕ್ಕೆ ಅಷ್ಟೊಂದು ಬೆಲೆ ಇರದ ಕಾರಣ ಅಡಿಕೆ ಬೆಳೆ ಎಲ್ಲೆಡೆ ವ್ಯಾಪಿಸುತ್ತಿದೆ. 

∆ ಕೆಲಸಗಾರರ ಸಮಸ್ಯೆಯೂ ಇದೆ. 

ಹೀಗೆ ಹಲವಾರು ಕಾರಣಗಳಿಂದ ಭತ್ತದ ಗದ್ದೆಗಳು ಕಣ್ಮರೆ ಆಗುತ್ತಿವೆ. ನಮ್ಮ ರೈತ ಮುದುಕಾಗುತ್ತಿದ್ದಾನೆ. ಹಳ್ಳಿಗಳೂ ಬರಿದಾಗುತ್ತಿವೆ. ಕೇವಲ ೧೫-೨೦ ವರ್ಷಗಳ ಹಿಂದೆ ಭತ್ತದ ಸಸಿಗಳಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ಹಾಗೆ ಬಂಜರು ಬಿದ್ದಿರೋದು ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿ. 

ಚಿತ್ರದಲ್ಲಿ ಮಾಣಣ್ಣ ನಮ್ಮೂರಿನ ಹಿರಿಯ ರೈತ (ಪ್ರಥಮ ಚಿತ್ರ). ಈಗ್ಲೂ ನಮ್ಮ ಊರಿನ ಹಿರಿಯ ಕೃಷಿಕರು ನೇಗಿಲು ಹಿಡಿದೇ ಗದ್ದೆ ಮಾಡುತ್ತಿರುವುದು ಯುವ ಜನತೆಗೆ ಸ್ಫೂರ್ತಿ. ಕೆಲವು ಭತ್ತದ ಗದ್ದೆಗಳು ಈಗಲೂ ಹಸಿರಾಗಿವೆ ಆದರೆ ಇನ್ನು ಎಷ್ಟು ವರ್ಷ? 

✍️ ನಿಶ್ಚಿತಾ

nayaknishchita5@gmail.com

Instagram 👉 ನಿಶ್ಚಿತಾ🌱🐾

📷 Credits – Nishchita


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading