ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸುತ್ತಲಿನ ಕಾಡಿನಲ್ಲಿ ಶತಮಾನಗಳ ಹಿಂದೆ ಜಂಬೆ (Xylia xylocarpa) ಮರಗಳು ಜಾಸ್ತಿ ಇದ್ದವು. ಹಿಂದೆ ನಗರದ ಬಡವರು ಬೇಸಿಗೆಯಲ್ಲಿ ಜಂಬೆ ಓಡು (ಕಾಯಿಯ ಸಿಪ್ಪೆ) ಆರಿಸಲು ಕಾಡಿಗೆ ಹೋಗುತ್ತಿದ್ದರು. ಎತ್ತಿನ ಗಾಡಿಗಳಲ್ಲಿ ಇವನ್ನು ತುಂಬಿ ಉರುವಲಾಗಿ ಮಾರಾಟಕ್ಕೆ ಒಯ್ಯುತ್ತಿದ್ದರು.

ಬೇಸಿಗೆಯಲ್ಲಿ ಕಾಡಿನ ತೆರಕು ತರಲು ಹೋಗುವ ಕೃಷಿಕರಿಗೆ ಕಾಲಿಗೆ ಚುಚ್ಚುವ ಜಂಬೆ ಕಾಯಿಯ ಸಿಪ್ಪೆಗಳು, ಕಾಡಿನ ದಾರಿಯಲ್ಲಿ ಬೈಸಿಕಲ್ ಹೊಡೆಯುವಾಗ ಈ ಸಿಪ್ಪೆಗಳ ಕಾರಣ ಸೈಕಲ್ ಪಂಕ್ಚರ್ ಮಾಮೂಲಿ. ಅದಕ್ಕೆ ನನ್ನ ಪರಿಚಿತರೊಬ್ಬರು ಬೈಸಿಕಲ್ ಟ್ಯೂಬ್ ತೆಗೆದು ಟಯರ್ ಒಳಗಡೆ ಭತ್ತದ ಹುಲ್ಲು ತುಂಬಿ ಸೈಕಲ್ ಓಡಿಸುವ ಸಾಹಸ ಮಾಡಿದ್ದರು, ಅದೇನು ಯಶಸ್ವಿ ಆಗಲಿಲ್ಲ ಬಿಡಿ.
ಮಲೆನಾಡಿನಲ್ಲಿ ಜಂಬೆ ಅಡವಿ, ಜಂಬೆ ಮನೆ, ಜಂಬೆ ಕೊಪ್ಪ ಹೆಸರಿನ ಹಿಂದೆ ಇರೋದು ಕಾಡಿನ ಇದೇ ಜಂಬೆ ಮರಗಳು. ಬಹಳ ಗಟ್ಟಿಯಾದ ಮರ, ನೇರ ಬೆಳೆಯುವುದು ಕಡಿಮೆ, ಮರದಲ್ಲಿ ಗಂಟು ಜಾಸ್ತಿ. ಹಳೆಯ ಹಿರಿಯರ ತಾಕತ್ತು ಪರಿಚಯಿಸುವ ಹೊತ್ತಿನಲ್ಲಿ ‘ಜಂಬೆ ಕೊರಲು’ ಎಂದು ಗಟ್ಟಿತನ ಹಿನ್ನಲೆಯಲ್ಲಿ ಕಾಡು ಭಾಷೆಯಲ್ಲಿ ಹೇಳುವುದುಂಟು. ಚಪ್ಪಟೆ ಗಾತ್ರದ ಕಾಯಿ, ಅದರಲ್ಲಿ ಎರಡು ಮೂರು ಚಪ್ಪಟೆ ಬೀಜಗಳು ಇರುತ್ತವೆ. ಮರವನ್ನು ಅಡಿಕೆ ಅಟ್ಟದ ಕಂಬ, ಮನೆಯ ತೊಲೆಗೂ ಬಳಕೆ ಮಾಡುತಿದ್ದರು. ಒಮ್ಮೆ ಮನೆ ನಿರ್ಮಾಣಕ್ಕೆ ಬಳಸಿದರೆ ಶತಮಾನ ಕಳೆದರೂ ಹಾಗೇ ಉಳಿಯುವ ಸಂಕುಲ. ಕಿಟಕಿ ಪಟ್ಟಿಗೂ ಸೈ… ಉರುವಲಾಗಿ ಜಂಬೆ ಕೆಲವೊಮ್ಮೆ ನಮ್ಮ ಬಚ್ಚಲು ಒಲೆ, ಅಡಿಕೆ ಒಲೆ, ಮಳೆಗಾಲದ ಹೊಡತಲು ಸೇರುತ್ತಿದ್ದವು. ಆಗ ಬೆಂಕಿ ಕಿಡಿ ಸಿಡಿತ ಜಾಸ್ತಿಯಾಗಿ ಚಳಿ ಕಾಯಿಸುತ್ತಿದ್ದ ನಮಗೆ ತಾಗಿ ಚುರುಕು ಮುಟ್ಟಿಸುತ್ತಿತ್ತು. ಈಗ ಮರದಿಂದ ಹೆಸರು ಪಡೆದ ಕಾಡಿನ ನೆಲೆಗಳ ಸಸ್ಯ ಜಾತಿಗಳು ಬದಲಾಗಿವೆ ಮತ್ತು ಅಲ್ಲಿ ಅಕೇಶಿಯ ನೆಡುತೋಪು ತಲೆ ಎತ್ತಿವೆ.
ಕೊನೆಯ ಮಾತು, ನಮ್ಮ ಕಾಡಿನ ಮಂಗಗಳು ಜಂಬೆ ಮರದ ಕಾಯಿ ಒಡೆದು ಬೀಜ ತಿನ್ನುತ್ತಿದ್ದವು. ಡಿಸೆಂಬರ್ ಜನವರಿ ಹೊತ್ತಿಗೆ ಮಂಗಗಳು ಈ ಮರದಲ್ಲಿ ಇರುತ್ತಿದ್ದವು. ಕೆಲವೊಮ್ಮೆ ನಾವು ಈ ಬೀಜ ತಿನ್ನುತ್ತಿದ್ದೆವು.
(ಇವತ್ತು ಕ್ರಿಸ್ತ ಶಕ 1911-12 ರ ಶಿರಸಿ ಅರಣ್ಯ ಕಾರ್ಯ ಯೋಜನೆ ಓದುವಾಗ ಇಲ್ಲಿನ ಜಂಬೆ ಮರಗಳು ನೆನಪಾದವು. ಹಿಂದೆ ಈ ನೆಲದಲ್ಲಿ ಏನೆಲ್ಲ ಮರಗಳು ಇದ್ದವೆಂದು ಸಸ್ಯ ವೈವಿಧ್ಯ ಕೆಲವು ಸಂಗತಿಗಳು ಬ್ರಿಟಿಷ್ ದಾಖಲೆಯಲ್ಲಿ ಸಿಗುತ್ತವೆ)


Leave a Reply