ನಮ್ಮೂರು ಬದಲಾಗಿಲ್ಲ 🙂 ಅದೇ ಗದ್ದೆ, ಅದೇ ಅಂಚು. ಅದೇ ಸುಗ್ಗಿಗದ್ದೆಯ ಬೇಲಿ, ಸಂಕದಗುಂಡಿ.
ಅದೇ ಕಾಲುಸಂಕ, ಕಡು, ದಣಪೆ. ಮನೆಯಂಗಳದಲ್ಲಿ ನಾಮಕಾವಸ್ತೆಗಾದರೂ ಗರ್ವದಿಂದ ನಿಂತ ಮೇಟಿಕಂಬಗಳು. ಗದ್ದೆಮದ್ಯೆಯಲ್ಲಿ ಯಾವುದೇ ಹಕ್ಲು/ತೊಪ್ಲು/ಬೆಟ್ಟು ಗಳ ಹಂಗಿಲ್ಲದೆ ಬೇರೆಯದೇ ಗ್ರಹದಂತಿರುವ ಕಬ್ಬಿನಗದ್ದೆಯ ಮೂರು ಮನೆಗಳು. ನೆಲಗಡಲೆ ಕಿತ್ತಮೇಲೆ ಗದ್ದೆಯಲ್ಲಿ ಹುಟ್ಟುವ ತುಂಬೆಯ ಬೆಳ್ಳನೆಯ ಹೂಗಳು. ಬೀಸಣಿಕೆಯಂತೆ ಬೀಸುವ ತೆಂಗಿನಮರಗಳು.
ಆದರೆ ಜನ ಬದಲಾಗಿದ್ದಾರೆ 🙂 ಜನಜೀವನವೂ ಬದಲಾಗಿದೆ
*ಎತ್ತಿನಗಾಡಿ, ನೇಗಿಲು ನೊಗ ಹುಡುಕಲು ಬೂತಕನ್ನಡಿಯೇ ಬೇಕು
*ತೆಂಗಿನಗರಿಯ ಚಪ್ಪರದ ಜಾಗೆಯನ್ನು ಬಣ್ಣಬಣ್ಣದ ಪ್ಲಾಸ್ಟಿಕ್ ತಾಡಪತ್ರಿಗಳು ಆವರಿಸಿವೆ.
*ಮನೆಗೆಲಸ ಮುಗಿಸಿ ಮಧ್ಯಾಹ್ನ ಮಲಗುತ್ತಿದ್ದ ಮಹಿಳೆಯರು ಈಗ ಧಾರಾವಾಹಿಯ ಪಾತ್ರದೊಳು ಪರಕಾಯ ಪ್ರವೇಶ ಮಾಡಿರುತ್ತಾರೆ.
*ಮನೆಗೆ ಬಂದವರಿಗೆ “ಒಂಚೂರ್ ಚಾ ಮಾಡ್ತೆ ಕೂತ್ಕೋ ತಮ್ಮಾ” ಅನ್ನುತ್ತಿದ್ದವರು ಈಗ “ಸ್ವಲ್ಪ sprite ಕೊಡ್ಲಾ” ಅಂತಿದ್ದಾರೆ.
*ಮನೆಮನೆಗಳ ಮಧ್ಯೆ ಗಡಿರೇಖೆಯಂತಿದ್ದ ಹೂವಿನಗಿಡ ಬಣ್ಣದ ಗಿಡಗಳು ಮಾಯವಾಗಿ ಎದ್ದುನಿಂತಿರುವ ಆಳೆತ್ತರದ ಪಾಗಾರಗಳು.
*ನೂರು ಮೀಟರ್ ದೂರದ ಪಕ್ಕದ ಮನೆಯವರನ್ನು “ಕೂ” ಹೊಡೆದು ಕರೆಯುತ್ತಿದ್ದವರು ಈಗ ಕರೆಯುವುದು ಮೊಬೈಲ್ ನಲ್ಲಿ.
*ಸ್ವಲ್ಪವೆ ಉಸಿರು ಹಿಡಿದುಕೊಂಡು ನಿಂತಿರುವ ಒಂಬತ್ತು ಕನ್ನಡಶಾಲೆಗಳು, ವರ್ಷಕ್ಕೆ ಎರಡರಂತೆ ಹುಟ್ಟಿಕೊಳ್ಳುತ್ತಿರುವ ಹೊಸ ಹೊಸ ಆಂಗ್ಲ/ಕೇಂದ್ರೀಯ ಶಾಲೆಗಳು.
ಆಧುನಿಕತೆಗೆ ಮೈಯೊಡ್ಡಿ ಮಲಗುವುದು ಎಷ್ಟು ಸಹಜವೋ
ಮಲಗಿರುವ ನೆಲದ ಸೊಗಡನ್ನು ಉಳಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಆದ್ರೆ ನಾವು ಸೋಲುತ್ತಿರುವುದೇ ಇಲ್ಲಿ.
ನಗರಗಳಿಗಿಂತ ವೇಗವಾಗಿ ಹಳ್ಳಿಗಳು ಆಧುನಿಕತೆಗೆ ತೆರೆದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ
ಹಳ್ಳಿಗಳಲ್ಲಿ ಅಟ್ಟಸೇರಿದ್ದ ತಾಮ್ರದ ಚೆಂಬು, ಮೂಲೆ ಸೇರಿದ ಮಸಿಕೆಂಡ (ಇದ್ದಿಲು) – ಪಟ್ಟಣದಲ್ಲಿ Dr. Copper, Charcoal paste ಆಗಿ ಮತ್ತೆ ಚಲಾವಣೆಗೆ ಬಂದಂತೆ ಮುಂದೆ ಒಂದೊಂದಾಗಿ ಬರಬಹುದೇನೋ.
ಲೇಖನ: ಮನೋಜ್ ನಾಯಕ್, ಶಿರೂರು


Leave a Reply