ಕಾಡು ಬದುಕಿನ ನೆನಪಿನ ಲೋಕ – ಕಳವೆ ಡೈರಿ

Posted by

·

ಹಳೆಯ ಚಿತ್ರ ನೋಡಿದಾಗ ಸುತ್ತಾಟದ ನೆನಪಾಗುತ್ತದೆ. ದಾರಿಯೇ ಇಲ್ಲದ ಎತ್ತರದ ಊರು ಉತ್ತರ ಕನ್ನಡ ಜಿಲ್ಲೆಯ ಮೇದಿನಿಗೆ ಹೋದಾಗ ಅಕ್ಕಿ ಕುಟ್ಟುವ ದೃಶ್ಯ ನೋಡಿದ್ದೆ. ಅಲ್ಲಿ ರಟ್ಟೆ ಬಲದಲ್ಲಿ ನಿತ್ಯ ಉಣ್ಣುವ ಅನ್ನದ ತಯಾರಿ ನಡೆಯುತ್ತಿತ್ತು.

ಭತ್ತದ ಕೊಯ್ಲು ಮುಗಿದು ಬಣವೆ ಹಾಕಿದ ನೋಟ ಜೊಯಿಡಾ ತಾಲೂಕಿನ ಹಳ್ಳಿಯದು. ಗದ್ದೆಯ ತೇವ, ಆನೆಯ ಹಾವಳಿಯಿಂದ ಬಚಾವು ಮಾಡಲು ಎತ್ತರದ ಅಟ್ಟಲಿನ ಮೇಲೆ ಬಣವೆ ಹಾಕುತ್ತಿದ್ದರು. ಕೃಷಿ ಸಾಹಸದಲ್ಲಿ ಬಣವೆ ಶಿಸ್ತು ಸೊಗಸಾಗಿದೆ.

ಅಂಕೋಲೆಯ ಆಗಸೂರು ಹೋಗಿದ್ದಾಗ ಮುಡೇ ಕಟ್ಟುತ್ತಿದ್ದ ಹಿರಿಯರಲ್ಲಿ ಐವತ್ತು ಕಿಲೋ ತೂಕದ ಮುಡೇ ಕಟ್ಟಲು ಕೇಳಿದ್ದೆ. ‘ನಮ್ಗೆ ಕಿಲೋ ನೆಕ್ಕ ಗುತ್ತಾಗುದಿಲ್ಲ, ಪಾಯಲಿ ಲೆಕ್ಕದಲ್ಲಿ ಕಟ್ಟುವೆ’ ಎಂದಿದ್ದರು. ಕೊನೆಗೆ ನಗುತ್ತ ಮುಡೇ ಪಾಯದ ಬಳ್ಳಿಯನ್ನು ಪಾದಕ್ಕೆ ಸಿಕ್ಕಿಸಿ ಮೊಣಕಾಲು ಚಿಪ್ಪಿನ ತನಕ ಅಳೆದು ಹಿಡಿದು ಏನೋ ಲೆಕ್ಕ ಮಾಡಿದರು… ಕೊನೆಗೆ ಕಟ್ಟಿದರು. ತೂಗಿ ನೋಡಿದರೆ ಅದು ಐವತ್ತು ಕೆಜಿ ನಾನೂರು ಗ್ರಾಂ ಇತ್ತು! ಬಳ್ಳಿಯ ಅಂದಾಜಿನಲ್ಲಿ ಮುಡೇ ಒಳಗೆ ಹಿಡಿಯುವ ಅಕ್ಕಿಯ ತೂಕ ಅಂದಾಜಿಸಿ ಕಟ್ಟಿದ್ದರು ಈ ಹಿರಿಯರು!

ಆಡಿಕೆ ಪತ್ರಿಕೆಗೆ ಸುಮಾರು 20 ವರ್ಷ ನಾನೊಂದು ಅಂಕಣ ಬರೆಯುತ್ತಾ ಇದ್ದೆ…. ಅದರ ಹೆಸರು ‘ಮುಡೇ ಬಳ್ಳಿ…’ ಕೆಲವರಿಗೆ ಓದಿದ್ದು ನೆನಪು ಇರಬಹುದು. ಇದೇ ಅಜ್ಜನ ಕೃಷಿ ಕೌಶಲ್ಯ ತಜ್ಞತೆಯ ನೆನಪಿಗೆ ಅಂಕಣಕ್ಕೆ ಹೆಸರು ನೀಡಿದ್ದೆ.

ಅಬ್ಬಾ! ಹಳೆಯ ನೆಗೆಟಿವ್ ಗಳು, ಚಿತ್ರಗಳ ನೋಡುತ್ತ ಹೋದರೆ ಕಾಲ ಲೋಕ ಹೇಗೆ ತೆರೆದು ಕೊಳ್ಳುತ್ತದೆ ಅಲ್ಲವೇ?

✍️ ಶಿವಾನಂದ್ ಕಳವೆ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading