ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು – ಡಾ.ಲೀನಾ ನಾಯ್ಕ

Posted by

·

ಡಾ. ಲೀನಾ ನಾಯ್ಕ ಅವರ ಕೃತಿ-ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು. ಹಾಲಕ್ಕಿ ಜನಾಂಗವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬುಡಕಟ್ಟು ಜನಾಂಗ. ಅದು ತನ್ನ ಜೀವನ ಶೈಲಿ, ಉಡುಗೆ ತೊಡುಗೆ ಹಾಗೂ ಆಚರಣೆಗಳಿಂದ ಹೇಗೆ ದೂರ ಸರಿಯುತ್ತಿದೆ ಮತ್ತು ಅವರ ಮೌಖಿಕ ಸಾಹಿತ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಚಯಿಸುವ ಕೃತಿ ಇದು. ಈ ಬದಲಾವಣೆಗಳು ಬುಡಕಟ್ಟಿನ ಬುಡವನ್ನೇ ಏರುಪೇರು ಮಾಡುವ ಸಾಮರ್ಥ್ಯ ಹೊಂದಿರುವುದು ಕಳವಳಕಾರಿ ವಿಷಯ. ಇಂತಹ ಎಲ್ಲ ಸ್ಥಿತ್ಯಂತರಗಳನ್ನು ವಿವರವಾಗಿ ಚರ್ಚಿಸಲಾಗಿದೆ.

ಹಾಲಕ್ಕಿ ಜನಾಂಗವೂ ಬದಲಾವಣೆಗೆ ಹೊರತಲ್ಲ. ಆದರೆ ಈ ಬದಲಾವಣೆ ಸ್ವಾಭಾವಿಕವಾಗಿ ಜರುಗದೇ ಹೊರ ಜಗತ್ತಿನ ವ್ಯಾಪಕ ಸಂಪರ್ಕ ಹಾಗೂ ತಮ್ಮ ಸಂಸ್ಕೃತಿಯ ನಿರ್ಲಕ್ಷ್ಯದಿಂದ ನಡೆಯುತ್ತಿರುವುದು ವಿಷಾದಕರ. ಈ ಬದಲಾವಣೆಗಳ ವೇಗ. ಕೇವಲ ಒಂದು ತಲೆಮಾರಿನ ಅಂತರದಲ್ಲೇ ಹಾಲಕ್ಕಿ ಒಕ್ಕಲಿಗರು ತಮ್ಮ ಜೀವನದ ಎಲ್ಲಾ ಆಯಾಮಗಳಲ್ಲಿ ಮಾಡಿಕೊಂಡಿರುವ ಬದಲಾವಣೆ ಆ ಸಮಾಜದ ಹಿರಿಯ ತಲೆಗಳನ್ನೇ ಚಿಂತೆಗೀಡು ಮಾಡಿರುವುದು ಕಂಡುಬರುತ್ತದೆ. ಇವರದ್ದು ಸಂಕೀರ್ಣ ಪದ್ಧತಿಗಳನ್ನು ಮತ್ತು ವೈವಿಧ್ಯಮಯ ಆಚರಣೆಗಳನ್ನು ಹೊಂದಿರುವ ಅಪೂರ್ವ ಬುಡಕಟ್ಟು ಜನಾಂಗ. ಆಧುನಿಕತೆಯ ವ್ಯಾಮೋಹದಿಂದ ಸಂಕೀರ್ಣವಾಗಿರುವುದೆಲ್ಲವೂ ತೀರಾ ಸರಳವಾಗಿ ಬದಲಾಗಿದೆ. ಉಡುಗೆ ತೊಡುಗೆ, ಹಬ್ಬಗಳ ಆಚರಣೆ, ವೈಯುಕ್ತಿಕ ಸಂಬಂಧ, ಮದುವೆ, ಸೀಮಂತ ಹೀಗೆ ಎಲ್ಲೆಡೆ ಸರಳತೆ ಎದ್ದು ಕಾಣುತ್ತಿದೆ. ಸಂಕೀರ್ಣವಾಗಿದ್ದರೂ ಅರ್ಥಪೂರ್ಣವಾಗಿದ್ದ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ.

ಹಾಲಕ್ಕಿ ಜನಾಂಗದ ಜೀವನ ಶೈಲಿಯ ಪ್ರಮುಖ ಅಂಗ ಅವರ ಹಾಡುಗಳು. ಪ್ರತಿಯೊಂದು ಆಚರಣೆಗೂ ಹಾಗೂ ಪ್ರತಿಯೊಂದು ಸಂದರ್ಭಕ್ಕೂ ಇರುವ ಹಾಡುಗಳು ಅರ್ಥಗರ್ಭೀತವಾಗಿರುವುದಲ್ಲದೆ, ಸಾಮಾಜಿಕ ಸಂದೇಶವನ್ನೂ, ಸಂಬಂಧಗಳ ಗಾಢತೆಯನ್ನೂ ಬಿಂಬಿಸುತ್ತವೆ. ಎಲ್ಲಾ ಹಾಲಕ್ಕಿ ಹೆಂಗಸರು ಹಾಡುವುದನ್ನು ಬಲ್ಲವರಾಗಿದ್ದರೂ ಕೆಲವರು ಅದರಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ. ಇಂಥವರಿಗೆ ಶುಭ ಸಮಾರಂಭಗಳಲ್ಲಿ ಕರೆಸಿ ಹಾಡಿಸುವುದು ಪದ್ಧತಿ. ಇಂತಹ ಮಹಿಳೆಯರ ಕೊನೆಯ ತಲೆಮಾರು ಈಗ ಜೀವಂತವಿದೆ. ಇಂದಿನ ಯುವ ಹಾಲಕ್ಕಿ ಮಹಿಳೆಯರು ಹಾಡುಗಳನ್ನು ಕಡೆಗಣಿಸಿದ್ದಾರೆ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಮರೆತಿದ್ದಾರೆ.

ವಿದ್ಯಾಭ್ಯಾಸ, ಕುಲಕಸುಬು ಹೊರತುಪಡಿಸಿ ಇತರ ವೃತ್ತಿ, ಪರ ಊರಿನ ಸಂಪರ್ಕ, ಬೇರೆ ಜನಾಂಗಗಳ ಸಂಪರ್ಕ, ಸವಲತ್ತುಗಳು ಹಾಗೂ ಮಾಹಿತಿ ಇವೆಲ್ಲವೂ ಈ ಬದಲಾವಣೆಗಳಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿವೆ ಎನ್ನಬಹುದು. ಹಾಲಕ್ಕಿ ಸಮಾಜದ ಒಳಹೊಕ್ಕರೆ ತಿಳಿದುಬರುವ ವಿಷಯಗಳ ಕಣಜ ಅಗಾಧ. ಈ ವಿಶಿಷ್ಟ ಬುಡಕಟ್ಟಿನ ಬುಡವನ್ನೇ ಏರುಪೇರು ಮಾಡುವ ಸಾಮರ್ಥ್ಯವಿರುವ ತಲ್ಲಣಗಳು ಅಲ್ಲಿ ಕಂಡುಬರುತ್ತವೆ. ಒಂದು ಸೀಮೆಯಲ್ಲಿ ಜಾರಿಯಲ್ಲಿರುವ ಆಚರಣೆಗಳು ಇನ್ನೊಂದು ಸೀಮೆಯಲ್ಲಿ ಅದಾಗಲೇ ಸರಳಗೊಂಡಿರುವುದು ಕಂಡುಬರುತ್ತದೆ ಇತ್ಯಾದಿ ಸಂಗತಿಗಳ ಸವಿಸ್ತಾರ ಚಿತ್ರಣವನ್ನು ಈ ಕೃತಿ ಒಳಗೊಂಡಿದೆ.

ಡಾ.ಲೀನಾ ನಾಯ್ಕ ಅವರ ‘ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು’ ಸಂಶೋಧನಾ ಗ್ರಂಥದಲ್ಲಿ, ಈ ಸಂಶೋಧನೆಗೆ ಮಾರ್ಗದರ್ಶಕರಾಗಿದ್ದ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು ಡಾ. ಎಚ್ ಎಮ್ ಮಹೇಶ್ವರಯ್ಯ ಅವರು ಬೆನ್ನುಡಿ ಬರೆದಿದ್ದು, ನಿಮ್ಮ ಓದಿಗಾಗಿ..

ನನಗೆ ನೆನಪಿರುವಂತೆ, ತನ್ನ ಸಂಶೋಧನಾ ಕಾರ್ಯಕ್ಕೆ ನನ್ನ ಮಾರ್ಗದರ್ಶನ ಕೋರಿ ಲೀನಾ ನನ್ನ ಬಳಿ ಬಂದಾಗ, ಜೊತೆಗೆ ಇನ್ನಿಬ್ಬರು ವಿದ್ಯಾರ್ಥಿನಿಯರೂ ಇದ್ದರು. ಅದಾಗಲೇ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಮ್ಮತಿಸಿದ್ದರಿಂದ, ಇವರಲ್ಲಿ ಒಬ್ಬಳಿಗೆ ಮಾತ್ರ ಆಯ್ಕೆ ಮಾಡಲು ಸಾಧ್ಯವಿತ್ತು. ಕೊನೆಗೆ ಲೀನಾಳನ್ನೇ ಆಯ್ಕೆ ಮಾಡಿದ್ದು ಸರಿಯಾದ ನಿರ್ಧಾರವೆಂದು ಆಕೆಯ ಪ್ರಯತ್ನ ಮತ್ತು ಸಾಧನೆ ಸಾಬೀತುಪಡಿಸಿತು.

ಲೀನಾ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ ನನ್ನ ಮಾರ್ಗದರ್ಶನದಲ್ಲಿ ಮೂಡಿ ಬಂದಂತಹ ಉತ್ತಮ ಕೃತಿಗಳಲ್ಲೊಂದು. ಒಬ್ಬ ಉತ್ತಮ ವಿದ್ಯಾರ್ಥಿನಿಯೆಂದು ಎರಡು ವರ್ಷಗಳಿಂದ ಆಕೆಯನ್ನು ಬಲ್ಲೆನಾಗಿದ್ದೆ. ನಂತರದ ನಾಲ್ಕು ವರ್ಷಗಳಲ್ಲಿ ಆಕೆ ಸಮರ್ಥ ಸಂಶೋಧಕಿ ಎನ್ನುವುದನ್ನೂ ಸಾಬೀತು ಪಡಿಸಿದಳು. ಒಂದು ಯಶಸ್ವಿ ಸಂಶೋಧನೆಯ ಮೂಲ ಇರುವುದು ಕ್ಷೇತ್ರಕಾರ್ಯದಲ್ಲಿ. ಕ್ಷೇತ್ರಕಾರ್ಯದ ಮೂಲಕ ಲೀನಾ ಕಲೆಹಾಕಿದ ಮಾಹಿತಿ ಅಗಾಧ. ಹಾಲಕ್ಕಿ ಹಾಡು ಎಂದರೆ ಸುಕ್ರಿ ಬೊಮ್ಮ ಗೌಡ ಮಾತ್ರ ಎಂಬಂತಿರುವಾಗ, ಇನ್ನೂ ಇಬ್ಬರು ಪ್ರತಿಭಾವಂತ ಹಾಲಕ್ಕಿ ಹಾಡುಗಾರ್ತಿಯರನ್ನು ಹುಡುಕಿದ್ದು ಆಕೆಯ ಕ್ಷೇತ್ರಕಾರ್ಯ ಕ್ಷಮತೆಗೆ ಹಾಗೂ ಸಾಧನೆಗೆ ಸಾಕ್ಷಿ.

ಲೀನಾಳ ಶ್ರದ್ಧೆ, ಬದ್ಧತೆ, ಹಿರಿಯರಿಗೆ ನೀಡುವ ಗೌರವ, ನಮ್ರತೆ ಮತ್ತು ನಗುಮೊಗದಿಂದ ತನ್ನ ಕಾರ್ಯವನ್ನು ನಿಷ್ಠೆಯಿಂದ ಮಾಡುವ ಗುಣಗಳು ನಿಗದಿತ ಸಮಯದೊಳಗೆ ಒಂದು ಅತ್ಯುತ್ತಮ ಸಂಶೋಧನೆಯನ್ನು ಪೂರ್ಣಗೊಳಿಸಲು ಆಕೆಗೆ ಸಹಕಾರಿಯಾದವು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಸದಾ ನೆನಪಿನಲ್ಲಿ ಉಳಿಯುತ್ತಾರೆ. ನನ್ನ ವೃತ್ತಿ ಜೀವನದಲ್ಲಿ ಕಂಡಂತಹ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಲೀನಾ ಒಬ್ಬಳು.

ಒಂದು ಸಂಶೋಧನೆಗೆ ವ್ಯಾಪ್ತಿ ಇರುವುದಿಲ್ಲ. ಅದು ಅಗಾಧ. ಅದರಲ್ಲೂ ಒಂದು ಜನಾಂಗದ ಕುರಿತು ಸಂಶೋಧನೆ ಮಾಡಿದರೆ ಅದಕ್ಕೆ ಕೊನೆ ಇರುವುದಿಲ್ಲ. ಹಾಗಿರುವಾಗ ವ್ಯಾಪ್ತಿಯನ್ನು ಮಾರ್ಗದರ್ಶಕರೇ ಸೀಮಿತಗೊಳಿಸಬೇಕಾಗುತ್ತದೆ. ಈ ಸೀಮಿತ ವ್ಯಾಪ್ತಿಯೊಳಗೆ ಇದುವರೆಗೆ ತಿಳಿಯದ ವಿಷಯಗಳನ್ನು ಸಂಗ್ರಹಿಸಿ ಪ್ರಸ್ತುತಪಡಿಸಿದರೆ ಅಂತಹ ಸಂಶೋಧನೆ ಪ್ರಶಂಸೆಗೆ ಅರ್ಹವೆನಿಸುತ್ತದೆ. ಲೀನಾಳ ಈ ಕೃತಿಯೂ ಅಂತಹ ಸಂಶೋಧನೆಗಳಲ್ಲೊಂದು.

Author : ಲೀನಾ ನಾಯ್ಕ

Pages 250

₹ 270.00

Year of Publication: 2021
Published by: ಡಾ. ಲೀನಾ ನಾಯ್ಕ,
Address: ಪಂಚಾಕ್ಷರಿ, 3-3-71A, ಜನಾರ್ದನ ದೇವಸ್ಥಾನ ರಸ್ತೆ, ಅಂಬಲಪಾಡಿ, ಉಡುಪಿ-576103
Phone: 9480503162.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading