ಹಿಂಡ್ಲೆಕಾಯಿ – ಕುಕುರ್ಟಿಟಿಯೇಸಿ ಕುಟುಂಬದ ಕುಕುಮಿಸ್ ಟ್ರಯಗೊನಸ್
ಆಧುನಿಕ ಭಾರತದ ದೀಪಾವಳಿಯ ಆಚರಣೆಯಲ್ಲಿ ಪಟಾಕಿಗಳಿಲ್ಲದೆ ದೀಪಾವಳಿಯ ಹಬ್ಬ ನಡೆಯದು ಎಂಬಷ್ಟರ ಮಟ್ಟಿಗೆ ಪಟಾಕಿಗಳಿಗೆ ಪ್ರಾಧಾನ್ಯ ಬಂದಿದೆ. ಆದರೆ ದೀಪಾವಳಿ ಕುರಿತ ಜನಪದ ಸಾಹಿತ್ಯದಲ್ಲಿ ಆದರ ಸೊಲ್ಲೇ ಇಲ್ಲ. ದೀಪಾವಳಿಯ ಯಾವ ಆಚರಣೆಯಲ್ಲಿಯೂ ಪಟಾಕಿಗಳಿಗೆ ಸ್ಥಾನವಿಲ್ಲ. ಯಾಕೆಂದರೆ ದೀಪಾವಳಿಯು ಆಧುನಿಕರ ಪಟಾಕಿಗಳ ಹಬ್ಬವಲ್ಲ, ಪ್ರಾಚೀನ ಕೃಷಿಕರ ಮದ್ದಿನ ಹಬ್ಬ. ಆದ್ದರಿಂದ ಇಲ್ಲಿಯ ಪ್ರತಿ ಆಚರಣೆಗಳಲ್ಲಿ ಮದ್ದಿನ ಗಿಡಗಳಿಗೆ ಹೆಚ್ಚು ಪ್ರಧಾನತೆಯಿದೆ. ತಗಟೆ, ಬೇವು, ನೆಲ ಬೇವು,ಲಿಂಗದೊಂಡೆಕಾಯಿ, ಹಾಲಿಮರ, ಗೊಬ್ಬರಕುಳಿ ಬೀಜ, ಕಹಿಜೀರಿಗೆ, ಗೊಂಡಹೂ, ಅರಿಶಿನ, ಅತ್ತಿ, ಆಲ, ಬಸರಿ, ಹಿಂಡ್ಲೆ ಮುಂತಾದ ಮದ್ದಿನ ಗಿಡಗಳು ದೀಪಾವಳಿ ಹಬ್ಬದಲ್ಲಿ ಬಳಕೆಗೊಳ್ಳುತ್ತವೆ. ಇವುಗಳಲ್ಲಿ ಹಿಂಡ್ಲೆ ಕಾಯಿಯು ಪ್ರಮುಖವಾದದ್ದು. ಕರಾವಳಿ ಮಲೆನಾಡುಗಳ ಬಹು ಭಾಗದಲ್ಲಿ ಹಿಂಡ್ಲೆಕಾಯಿಯಿಲ್ಲದೆ ದೀಪಾವಳಿಯ ಆಚರಣೆಗಳಿಲ್ಲ. ಇದು ಕರ್ನಾಟಕದ ಹಲವು ಕಡೆ ಬೆಳೆಯುವದು ಕಂಡುಬರುತ್ತದೆ. ಆದರೆ ಇದರ ಆರಾಧನೆ ಈ ಎಲ್ಲ ಕಡೆ ಕಂಡುಬರುವದಿಲ್ಲ. ಉತ್ತರ ಕರ್ನಾಟಕದಲ್ಲಿ ಹಿಂಡ್ಲೆಕಾಯಿಯ ಸ್ಥಾನದಲ್ಲಿ ಹಿಂಡ್ಲೆಕಾಯಿಯ ಕುಟುಂಬಕ್ಕೆ ಸೇರಿದ ಲಿಂಗದೊಂಡೆಕಾಯಿಯನ್ನು ಬಳಸುತ್ತಾರೆ. ಇದು ಕೂಡ ಕಹಿರುಚಿಯುಳ್ಳದ್ದು. ಹಿಂಡ್ಲೆಬಳ್ಳಿಯು ಪೂರ್ಣವಾಗಿ ಸವತೆಯ ಬಳ್ಳಿಯನ್ನು ಹೋಲುತ್ತದೆ. ಇದರ ಎಲೆ, ಹೂಮಿಡಿಗಳು ಕೂಡ ಸವತೆಯ ಎಲೆ ಮಿಡಿ ಹೂಗಳನ್ನು ಹೋಲುತ್ತವೆ. ಆದರೆ ಸವತೆ ಮತ್ತು ಹಿಂಡ್ಲೆಗಳ ಕಾಯಿ ಮತ್ತು ಬಳ್ಳಿಗಳ ರುಚಿಯಲ್ಲಿ ಅಗಾಧ ವ್ಯತ್ಯಾಸವಿದೆ. ಸವತೆ ಸಿಹಿ, ಹಿಂಡ್ಲೆ ಕಹಿ. ಹಿಂಡ್ಲೆ ಕಾಯಿಗಳು ಸಾಮಾನ್ಯವಾಗಿ ಕೋಳಿ ಮೊಟ್ಟೆಯ ಗಾತ್ರ ಹಾಗೂ ಹೋಲಿಕೆಯುಳ್ಳವಾಗಿದ್ದು ಇವಕ್ಕೆ ಬೂದು ಬಣ್ಣದ ಹತ್ತು ಪಟ್ಟಗಳಿರುತ್ತವೆ. ಹಿಂಡ್ಲೆ ಕಾಯಿಗಳು ವಿರಲವಾಗಿ ಗೇಣುದ್ದದಲ್ಲಿ ಬೆಳೆಯುವದುಂಟು. ಇವುಗಳನ್ನು ಹೆಬ್ಬಿಂಡ್ಲೆ ಎನ್ನುತ್ತಾರೆ. ಹೆಬ್ಬಿಂಡ್ಲೆ ಕಾಯಿಯು ಆಕಾರದಲ್ಲಿ ದೊಡ್ಡದು. ಸವತೆ ಕಾಯಿಯನ್ನು ಹೋಲುತ್ತದೆ. ಬಹುಕಾಲದಿಂದ ಸವತೆಯನ್ನು ಹಾಗೂ ಹಿಂಡ್ಲೆಯನ್ನು ಬಲ್ಲ ರೈತನೂ ಕೂಡ ಚೆನ್ನಾಗಿ ಬೆಳೆದ ಹಿಂಡ್ಲೆ ಬಳ್ಳಿಯನ್ನು ಕಂಡು ಅದನ್ನು ಸವತೆ ಬಳ್ಳಿಯೆಂದು ಭ್ರಮಿಸುವದುಂಟು. ನೆಟ್ಟಿದ್ದು ಸವತೆ ಬೀಜ ಬೆಳೆದದ್ದು ಹೆಬ್ಬಿಂಡ್ಲೆ ಎಂದು ರೈತರು ಹೇಳುವುದನ್ನು ಕೇಳಿದ್ದೇನೆ. ಸವತೆಯನ್ನು ನೆಟ್ಟರೆ ಸವತೆ ಓಳಿಯಲ್ಲಿ ಸವತೆ ಹೆಬ್ಬಿಂಡ್ಲೆಯಾಗಿ ಬೆಳೆಯುತ್ತದೆಯೇ? ಈ ಸೃಷ್ಠಿ ವೈಚಿತ್ರ್ಯ ನಿಜವೆ?
ಸವತೆ ಬಳ್ಳಿಯಲ್ಲಿ ಬೆಳೆಯುತ್ತಿರುವ ಹೆಬ್ಬಿಂಡ್ಲೆಯು ಹೂಬಿಟ್ಟು ಕಾಯಿಯಾಗಿ ಬೆಳೆದರೂ ತೋಟಿಗನಿಗೆ ಅದರ ಗುಟ್ಟು ಗೊತ್ತಾಗುವದಿಲ್ಲ. ಕೊಯ್ದು ತಿಂದು ನಾಲಿಗೆಗೆ ತಾಗಿಸಿದರೆ ಸಾಕು, ಇದು ಘೋರವಾದ ಕಹಿರುಚಿಯ ಹಿಂಡ್ಲೆ ಕಾಯಿಯೆಂಬುದು ತಿಳಿದು ಬರುತ್ತದೆ. ಇಂಥ ಸಂದರ್ಭದಲ್ಲಿ ರೈತ ಏನು ತಾನೆ ಮಾಡುತ್ತಾನೆ? ಇದನ್ನು ಕಿತ್ತು ಬೀಸಾಡುವದಿಲ್ಲ. ಯಾಕೆಂದರೆ ಆತ ದೀಪಾವಳಿಯ ಹೊತ್ತಿಗೆ ಹೆಬ್ಬಿಂಡ್ಲೆ ಕಾಯಿಗಳಿಗಾಗಿ ಹಿತ್ತಲಲ್ಲಿ ಹುಡುಕಬೇಕಾಗಿಲ್ಲ. ಹಾಗೂ ಆಚೀಚೆ ಮನೆಯವರಿಗೂ ತನ್ನ ತೋಟದಲ್ಲಿ ಬೆಳೆದ ಹೆಬ್ಬಿಂಡ್ಲೆ ಕಾಯಿಗಳಲ್ಲಿ ಕೆಲವನ್ನು ದಾನ ಮಾಡಬಹುದು.
ದೀಪಾವಳಿ ಹಬ್ಬದ ನರಕ ಚತುರ್ದಶಿಯ ಮುನ್ನಾದಿನ ಹಳ್ಳಿಗಳಲ್ಲಿ ಈ ಕಾಯಿಗಳ ಹುಡುಕಾಟ ನಡೆಯುತ್ತದೆ. ಕಬ್ಬಿನ ಗದ್ದೆಯ ಬೇಲಿಯಲ್ಲಿ ತಮ್ಮ ಹಿತ್ತಲಿನ ಮೂಲೆಯಲ್ಲಿ ಇದನ್ನು ಗುರುತಿಸಿಕೊಂಡವರು ಹತ್ತಿಪ್ಪತ್ತು ಕಾಯಿಗಳನ್ನು ಕಿತ್ತು ತರುತ್ತಾರೆ. ಹಳ್ಳಿಗಳಿಂದ ದೂರವಾದ, ಆದರೆ ಆಚರಣೆಯನ್ನು ತುಸು ತುಸು ಉಳಿಸಿ ಕೊಂಡ ಪಟ್ಟಣಿಗರಿಗಾಗಿ ಪಟ್ಟಣದ ಪೇಟೆಗಳಲ್ಲಿ ಇವು ಈ ದಿನ ಮಾರಾಟಕ್ಕೆ ಬಂದಿರುತ್ತವೆ. ಬೆಲೆಯೂ ಚೆನ್ನಾಗಿರುತ್ತದೆ.
ಹಿಂಡ್ಲೆ ಕಾಯಿಯು ತನ್ನ ಕುಟುಂಬದ ಅನೇಕ ಹಣ್ಣುಗಳಂತೆ ಹಣ್ಣಾದರೂ ಬೇಗ ಒಡೆದು ಹಾಳಾಗುವದಿಲ್ಲ. ಇದರ ಸಿಪ್ಪೆಗೆ ತನ್ನ ಒಳಭಾಗವನ್ನು ಬಹುಕಾಲ ರಕ್ಷಿಸುವ ಗುಣವಿದೆ. ಈ ಗುಣದಿಂದಾಗಿ ಇದು ಆಟಗೆಯೂ ಆಗಿದೆ. ಹಿಂಡ್ಲೆ ಕಾಯಿಯನ್ನು ಬಲ್ಲ ಮಕ್ಕಳಿಗೆ ಬೆಳೆದ ಹಿಂಡ್ಲೆ ಕಾಯಿಗಳನ್ನು ಒತ್ತಿ ಒತ್ತಿ ನುಳಿ ಮಾಡುವುದೊಂದು ಮೋಜಿನಾಟವಾಗಿದೆ. ಎಣ್ಣೆ ಹಚ್ಚಿದರೆ ಇದು ಬೇಗ ನುಳಿಯಾಗುತ್ತದೆಯಾದ್ದರಿಂದ ಎಣ್ಣೆ ಹಚ್ಚಿಕೊಂಡ ತಮ್ಮ ತಲೆಗೆ ಇದನ್ನು ತಿಕ್ಕುತ್ತಾರೆ. (ಕ್ರಿಕೇಟ ಆಟಗಾರರು ಕ್ರಿಕೇಟ್ ಬಾಲನ್ನು ತಮ್ಮ ಪ್ಯಾಂಟಿಗೆ ತಿಕ್ಕುವ ಹಾಗೆ) ನುಳಿ ನುಳಿಯಾದ ಹಿಂಡ್ಲೆಕಾಯಿಗಳ ಸಿಪ್ಪೆಯ ಮಾಂಸಲ ಒಳಭಾಗವು ಬದಿಗೆ ಸರಿದಾಗ ಬಿಳಿಎಳ್ಳಿಗಿಂತ ದೊಡ್ಡದಾದ ಬೆಳ್ಳಗಿನ ಒಳಗಿನ ಬೀಜ ಎದ್ದು ಕಾಣುತ್ತದೆ. ಈ ಬೀಜಗಳನ್ನು ಕಾಯಿಯೊಳಗೆ ಓಡಾಡಿಸಿ ನೋಡುವದು ಮತ್ತೊಂದು ಆಟ. ನುಳಿ ನುಳಿಯಾದ ಎತ್ತ ಒತ್ತಿದರೂ ಒತ್ತಿಸಿಕೊಳ್ಳುವ ಈ ಹಿಂಡ್ಲೆ ಕಾಯಿಯನ್ನು ಗಲ್ಲಕ್ಕೆ ಮೂಗಿಗೆ ತಗುಲಿಸಿಕೊಂಡು ಆನಂದ ಪಡುವುದು ಈ ಹಿಂಡ್ಲೆಕಾಯಿಯ ಆಟದ ಇನ್ನೊಂಡು ವಿಶೇಷ. ಹಿಂಡ್ಲೆಕಾಯಿಯು ಮಕ್ಕಳಿಗೆ ಆಟಿಕೆಯಾದರೆ ಮನೆಯ ಜನರಿಗೆ ಇದು ದೀಪಾವಳಿ ಹಬ್ಬದ ವಿಶೇಷ ಅತಿಥಿ. ಜನಪದರ ನಂಬಿಕೆಯಂತೆ ನಡೆಯುವ ಹಲವು ಆಚರಣೆಗಳಿಗೆ ಬಲಿ ವಾಮನ, ನರಕಾಸುರ ಪುರಾಣ ಸಂಬಂಧಿತ ಆಚರಣೆಗಳು ಸೇರಿಕೊಂಡಿವೆ.
ಹೊಂಡೆ:
ಪುರಾಣ ಕತೆಯಂತೆ ದೀಪಾವಳಿಯ ದಿನ ತನ್ನ ರಾಜ್ಯಕ್ಕೆ ಬರುವ ಬಲಿ ಚಕ್ರವರ್ತಿಯು ತನ್ನ ಕೋಟೆಯ ಮೇಲೆ ನಿ೦ತು ತನ್ನ ರಾಜ್ಯವನ್ನು ವೀಕ್ಷಿಸುತ್ತಾನೆಂಬ ನಂಬಿಕೆಯಿದೆ. ಈ ನಂಬಿಕೆ ಜನಪದಮೂಲದ ಆಚರಣೆಯನ್ನು ಮರೆಯಾಗಿಸಿದೆ. ಇವುಗಳಲ್ಲಿ ಹೊಂಡೆ ಆವರಣೆಯೂ ಒಂದು. ಹಿಂಡ್ಲೆ ಕಾಯಿಗಳಿಂದ ಕಟ್ಟುವ ಹೊಂಡೆಯನ್ನು ಪುರಾಣಮೂಲೀಯ ಬಲೀಂದ್ರನ ಈ ಕೋಟೆ ಎನ್ನುತ್ತಾರೆ. ಆದರೆ ಇದಕ್ಕೆ ಜಾನಪದ ಮೂಲದ ಹೊಂಡೆ ಎಂಬ ಹೆಸರು ಉಳಿದಿದೆ. ಅರ್ಥ ಮರೆಯಾಗಿದೆ.

ಹೊಂಡೆಗೆ ಹಿಂಡ್ಲೆಕಾಯಿಗಳೇ ಕಲ್ಲುಗಳು, ಒಂದು ಅಡಿಯಿಂದ ಒಂದುವರೆ ಅಡಿಯವರೆಗಿನ ವ್ಯಾಸದಲ್ಲಿ ಮನೆಯ ಗೋಡೆ ಕಟ್ಟಲು ಬಳಸುವ ನುಳಿಯಾದ ಹಸಿ ಮಣ್ಣನ್ನು ದೊಡ್ಡ ಬಟ್ಟಲಾಕಾರದಲ್ಲಿ ಗುಪ್ಪೆ ಮಾಡಿ ಅದರಲ್ಲಿ ಸುತ್ತ ಎರಡು ಮೂರು ಸಾಲುಗಳಲ್ಲಿ ಸುಮಾರು ಇಪ್ಪತ್ತು ಹಿಂಡ್ಲೆಕಾಯಿಗಳನ್ನು ಸುತ್ತ ಜೋಡಿಸುತ್ತಾರೆ. ಇದೇ ಹೊಂಡೆ . ಬಲೀಂದ್ರನನ್ನು ಇದರ ಮೇಲೆ ಕುಳ್ಳಿರಿಸಿ (ಸ್ಥಾಪಿಸಿ) ಪೂಜಿಸುವ ಮನೆಯಂಗಳದಲ್ಲಿ ಹೊಂಡೆಯನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ಆಯಾ ಮನೆಯ ಯಜಮಾನರೇ ಈ ಹೊಂಡೆಯನ್ನು ರಚಿಸುತ್ತಾರೆ. ನಡು ಮನೆಯಲ್ಲಿ ಪೂಜಾ ಸ್ಥಾನದಲ್ಲಿರುವ ಬಲೀಂದ್ರನನ್ನು ಪ್ರತಿದಿನ ಮುಂಜಾನೆ ಮಧ್ಯಾಹ್ನ, ಸಂಜೆ,ಹೀಗೆ ಮೂರು ಹೊತ್ತು ಹೊರ ತಂದು ಹೊಂಡೆಯ ಮೇಲೆ ಇಟ್ಟು ನಾಲ್ಕು ದಿಕ್ಕಿಗೆ ಮುಖವನ್ನು ತಿರುಗಿಸಲಾಗುತ್ತದೆ. ಇದು ಬಲೀಂದ್ರನು ತನ್ನ ರಾಜ್ಯವನ್ನು ತನ್ನ ಕೋಟೆಯ ಮೇಲೆ ನಿಂತು ಅವಲೋಕಿಸುವ ಪರಿ ಎನ್ನಲಾಗುತ್ತದೆ. ಪ್ರತಿಬಾರಿ ಈ ಕಾರ್ಯ ಮುಗಿಸಿದ ಬಳಿಕ ಬಲೀಂದ್ರನನ್ನು ನಡುಮನೆಯಲ್ಲಿ ಸ್ಥಾಪಿತವಾಗಿರುವ ಬೋರಜ್ಜಿ ಗೋಡೆಯ ಬಳಿ ಇರಿಸಲಾಗುತ್ತದೆ. ಹೊಂಡೆಗೆ ಹಿಂಡ್ಲೆಕಾಯಿಗಳೇ ಕಲ್ಲುಗಳು ಅಷ್ಟೇ ಅಲ್ಲ. ಹಿಂಡ್ಲೆಕಾಯಿಯು ಮದ್ದಿನ ದೇವರೂ ಹೌದು. ಮದ್ದಿನ ಅಧಿ ದೇವತೆಯಾದ ಬೂರೆ ಅಜ್ಜಿಯ ಕೊರಳಿಗೂ ಹಿಂಡ್ಲೆಕಾಯಿಯ ಪದಕವುಳ್ಳ ಹಿಂಡ್ಲೆಬಳ್ಳಿಯನ್ನು ತೊಡಿಸುತ್ತಾರೆ. ಸ್ನಾನದ ಹಂಡೆಗೂ ಹಿಂಡ್ಲೆಕಾಯಿಯ ಪದಕದ ಬಳ್ಳಿ ಬೇಕು. ತಮ್ಮತಮ್ಮ ಮನೆಯ ಈ ಆಚರಣೆ, ಪೂಜೆಯಲ್ಲಿ ಆಯಾ ಮನೆಯಗಂಡಸರು ಹೆಂಗಸರು ಮಕ್ಕಳು ಪಾಲ್ಗೊಳ್ಳುತ್ತಾರೆ. ಸದ್ಯ ಇಲ್ಲಿ ಇತರ ಪೂಜಾರಿಗಳ ಪ್ರವೇಶವಾಗಿಲ್ಲ.
ಬೋರಜ್ಜಿ ಗೋಡೆ:

ಇದು ಬೋರಜ್ಜಿಯನ್ನು ಕುಳ್ಳಿರಿಸುವ ತಾಣದ ಗೋಡೆ. ಹಬ್ಬಕ್ಕೆ ಕೆಲವು ದಿನ ಮುಂಚಿತವಾಗಿ ಬೋರಜ್ಜಿಯ ಹಲಿ ಬರೆಯಬಲ್ಲವರು ಒಳಮನೆಯಲ್ಲಿಯ ಬೋರಜ್ಜಿಗೋಡೆಗೆ ಜಾಂಜು ಸೇಡಿಗಳಿಂದ ಬೋರಜ್ಜಿಯ ಹಲಿಯನ್ನು ರಚಿಸುತ್ತಾರೆ. ಈ ಗೋಡೆಯ ತಳದ ನೆಲದ ಮೇಲೆ ಹೊಸ ಬತ್ತದ ಹುಲ್ಲಿನ ಇರಿಕೆ ಇಟ್ಟು ಅದರ ಮೇಲೆ ಹೊಸ ಬೋರಜ್ಜಿಕರಿಗೆಗಳನ್ನು ಕುಳ್ಳಿರುಸುತ್ತಾರೆ. ಕೈಹೊಕ್ಕಲು ಸಾಧ್ಯವಾಗುವಷ್ಟು ಚಿಕ್ಕ ಬಾಯಿಯಿರುವ ಸುಮಾರು ಅರ್ಧ ಅಡಿ ವ್ಯಾಸದ ಹೊಸಮಡಿಕೆಯು ಅಂಕೋಲೆಯ ಪ್ರಾದೇಶಿಕ ಮಾತಿನಲ್ಲಿ ಬೂರೆಕರಗೆ. ಅಥವಾ ಬೋರಜ್ಜಿ ಮಡಕೆಯೆಂದು ಗುರುತಿಸಿಕೊಳ್ಳುತ್ತದೆ. ಬೋರು ಇದು ತುಳುಭಾಷೆಯಲ್ಲಿ ಬಳ್ಳಿ ಎಂಬ ಅರ್ಥವನ್ನು ಹೊಂದಿದೆ.
ನೀರು ತುಂಬುವ ಆಚರಣೆ:

ನರಕ ಚತುರ್ದಶಿಯ ಮುನ್ನಾದಿನ ಹಳ್ಳಿಗಳಲ್ಲಿ ಬೋರಜ್ಜಿಕರಗಿಗೆ ನೀರು ತುಂಬುವ ಆಚರಣೆ ನಡೆಯುತ್ತದೆ. ನೀರು ತುಂಬುವ ದಿನ ಅಂದರೆ ನೀರು ಮೀಯುವ ಮುನ್ನಾದಿನ ಪರಂಪರಾಗತ ಆಚರಣೆಯಂತೆ ತಂದ ಹೊಸನೀರನ್ನು ಬೋರಜ್ಜಿಯ ಕರಗಿಯಲ್ಲಿತುಂಬಿ ಅದರಲ್ಲಿ ಹಿರಿಯ ಮಹಿಳೆಯರು ಬಲ್ಲ ಚರ್ಮರೋಗ ನಿವಾರಕ ಮದ್ದಿನ ಹಲವು ಬಗೆಯ ಬೇರನ್ನು ಚಕ್ಕೆಯನ್ನುಸೇರಿಸುತ್ತಾರೆ. ನೀರು ಮೀಯುವ ದಿನದ ಪವಿತ್ರ ಜಲವನ್ನು ಸಿದ್ಧಗೊಳಿಸಲು ಕುಳಿತ ಬೂರೆ ಅಜ್ಜಿಯ ಕೊರಳಿಗೆ ಹಿಂಡ್ಲೆಕಾಯಿಯುಳ್ಳ ಹಿಂಡ್ಲೆಬಳ್ಳಿಯನ್ನು ಸುತ್ತಲಾಗುತ್ತದೆ ಸ್ನಾನದ ಹಂಡೆಗೂ ಹಿಂಡ್ಲಿಕಾಯಿಯ ಬಳ್ಳಿಯನ್ನು ಸುತ್ತಲಾಗುತ್ತದೆ.
ಹಿಂಡ್ಲೆಕಾಯಿ ಮೆಟ್ಟುವ ಆಚರಣೆ:
ನರಕ ಚತುರ್ದಶಿಯ ದಿನ ಅಭ್ಯಂಗ ಸ್ನಾನ ಮಾಡಿದವರು ನಡೆಸುವ ಹಿಂಡ್ಲೆಕಾಯಿ ಮೆಟ್ಟುವ ಆಚರಣೆಗೆ ಮನೆಯ ಸದಸ್ಯರ ಸಂಖ್ಯೆಯಷ್ಟು ಹಿಂಡ್ಲೆಕಾಯಿಗಳು ಬೇಕು.


ನರಕ ಚತುರ್ದಶಿಯ ದಿನಮನೆಯಂಗಳದ ಶೇಡಿಯಂಕಣದಲ್ಲಿಟ್ಟ ಹಿಂಡ್ಲೆ ಕಾಯಿಗಳನ್ನು ಮೆಟ್ಟುವ ಆಚರಣೆ ನಡೆಯುತ್ತದೆ ಮನೆಯ ಹಿರಿಯ ಮುತ್ತೈದೆ ಆರತಿ ಎತ್ತಿ ಹಾನ ಬಳಿಯುತ್ತಾಳೆ; ಆರತಿಗೊಂಡವರ ಹಣೆಗೆ ಹಾನದಲ್ಲಿಯ ಕೆಂಪು ನೀರನ್ನು ಕುಂಕುಮ ದಂತೆ ಹಚ್ಚುತ್ತಾಳೆ.ಆಗ ಹಿಂಡ್ಲೆ ಕಾಯನ್ನು ಮೆಟ್ಟಲು ನಿಂತ ಪ್ರತಿ ಯೊಬ್ಬರು ಹಿಂಡ್ಲಿಕಾಯಿನ ಮೇಲಿಟ್ಟತಮ್ಮ ಬಲಗಾಲನ್ನು ಒತ್ತಿ ಒಡೆಯುತ್ತಾರೆ ಒಡೆದ ಹಿಂಡ್ಲೆಕಾಯಿಗಳ ಒಂದು ಚೂರನ್ನು ಪ್ರತಿಯೊಬ್ಬರೂ ತಿಂದು ಬಳಿಕ ಉಳಿದ ಭಾಗ ವನ್ನು ತಮ್ಮಮನೆಯ ಹುಲ್ಲಿನ ಛಾವಣಿಗೆ ಬೀಸಿಬೀಸಿ ಒಗೆಯುತ್ತಾರೆ. ಛಾವಣಿಯ ಈ ಹುಲ್ಲಿನ ಮೇಲೆ ಈ ಹಿಂಡ್ಲೆಕಾಯಿಯು ಮೇ ತಿಂಗಳವರೆಗೆ ವಿರಮಿಸುತ್ತವೆ. ಅವುಗಳ ಕಹಿ ರಸವು ಕೊಳೆತು ಒಣಗುತ್ತಿರುವ ಛಾವಣಿಯ ಹುಲ್ಲಿನಲ್ಲಿರುತ್ತವೆ. ಬೀಜಗಳು ಗೊಬ್ಬರದಂತಹ ಈ ಹುಲ್ಲಿನಲ್ಲಿ ಒಣಗುತ್ತವೆ. ಮಳೆಗಾಲಕ್ಕೆ ಮೊದಲು ಮನೆ ಹೊದಿಕೆಯ ಹೊತ್ತಿಗೆ ಹಳೆಯ ಹುಲ್ಲಿನೊಂದಿಗೆ ಅವು ಕೆಳಗೆ ಬರುತ್ತವೆ. ಗೊಬ್ಬರವಾಗಿ ಗದ್ದೆಗೆ ನಡೆಯುತ್ತವೆ. ಅಲ್ಲಿ ಹಿಂಡ್ಲೆಕಾಯಿ ಯ ಒಣ ರಸವು ಮಳೆ ನೀರಿನೊಂದಿಗೆಸೇರುತ್ತದೆ. ಮಳೆಯ ನೀರು ಸೇರಿದಾಗ ಊರಿನ ಪ್ರತಿಯೊಂದು ಗದ್ದೆಯಲ್ಲಿ ದೀಪಾವಳಿಯ ಈ ಕ್ರಿಮಿನಾಶಕ ಸಿದ್ಧವಾಗುತ್ತದೆ. ಎಂತಹ ಅಪೂರ್ವ ಕೃಷಿ ವಿಧಾನ ಅದ್ಭುತ ರೋಗ ನಿವಾರಣೋಪಾಯ. ಈ ಕಾರಣದಿಂದಲೇ ಅಲ್ಲವೇ ಹಿಂಡ್ಲೆ ಕಾಯಿಗೆ ದೈವತ್ವ ಬಂದಿರುವದು?
ಇದರ ಬೀಜವನ್ನು ಯಾರೂ ಸಂಗ್ರಹಿಸುವುದಿಲ್ಲ. ಬಿತ್ತನೆ ಮಾಡುವುದಿಲ್ಲ. ಇದು ಮಕ್ಕಳ ಆಟದ ವಸ್ತುವಾಗಿರುವ ಕಾರಣ ಈ ಮೂಲಕ ಇದು ಬೀಜ ಪ್ರಸಾರವಾಗುವುದುಂಟು. ದೀಪಾವಳಿಯ ಹಬ್ಬಕ್ಕೆ ಕಾಯಿಗಳು ಬೇಕು ಎಂಬ ಕಾರಣಕ್ಕಾಗಿ ಈ ಬಳ್ಳಿಯನ್ನು ಕಂಡವರು ಕಿತ್ತು ಬೀಸಾಡುವದಿಲ್ಲ. ಒಣಗಿದ ಬೀಜ ಗೊಬ್ಬರಕುಳಿಯ ಬದಿಗೆ ಸೇರಿಕೊಂಡು ಅಲ್ಲಿ ಗಿಡವಾಗುತ್ತದೆ. ಗೊಬ್ಬರದ ಜೊತೆ ಕಬ್ಬಿನ ಗದ್ದೆಯನ್ನು ಸೇರಿದ ಬೀಜ ಅಲ್ಲಿ ಸಂತಾನ ಬೆಳೆಸುತ್ತದೆ. ಹಬ್ಬದ ದಿನ ಹಿಂಡ್ಲೆಕಾಯಿ ಒಂದು ಚೂರನ್ನು ತಿನ್ನುವ, ನುಂಗುವ ದನಗಳಿಗೆ ನೆಗಡಿ ರೋಗ ಬಂದಾಗ ಹಿಂಡ್ಲೆಕಾಯಿಯನ್ನು ತಿನ್ನಿಸುವ ಒಂದೆರಡು ಅಂಶಗಳನ್ನು ಬಿಟ್ಟರೆ ಇದನ್ನು ಮನುಷ್ಯರ ರೋಗಕ್ಕೆ ಮದ್ದಾಗಿ ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಗಳು ಕರಾವಳಿ ಜಿಲ್ಲೆಗಳಲ್ಲಿ ದೊರಕುವದಿಲ್ಲ. ಆದರೆ ಕಂಬಳಿ ಹುಳವು ಮನುಷ್ಯರ ಮೈಗೆ ಅಂಟಿಕೊಂಡು ಮೈತುರಿಕೆ ತಂದಾಗ ಹಿಂಡ್ಲೆಕಾಯಿ ರಸವನ್ನು ಅಲ್ಲಿ ಹಚ್ಚಬೇಕೆಂಬುದು ಇಲ್ಲಿಯ ಮನೆಮದ್ದಿನ ಒಂದು ಕ್ರಮ. ಇದು ಜನರನ್ನು ಆರೋಗ್ಯವಾಗಿಡುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತದೆ ಯೆಂಬ ವರದಿಗಳು ಲಭ್ಯವಾಗಿವೆ. ಕೇರಳ [ಮಲೆಯಾಳ] ದಲ್ಲಿ ಇದು ಮನೆಮದ್ದಿನಲ್ಲಿ ಬಳಕೆಯಿರುವ ಬಗ್ಗೆ ಮಟೆರಿಯಾ ಮೀಡಿಕಾದ ನಾಡಕರ್ಣಿಯವರು ಬರೆಯುತ್ತಾರೆ.ಈ ರೀತಿಯಾಗಿ ಮದ್ದಿನಲ್ಲಿಸ್ಥಾನ ಪಡೆದಿರುವ ಹಿಂಡ್ಲೆಕಾಯಿಯ ಮದ್ದಿನ ಬಗ್ಗೆ ಕರಾವಳಿಯ ನಮ್ಮ ಜನ ಮರೆವು ಹೊಂದಿರುತ್ತಾರೆ. ಇಲ್ಲಿ ಆಚರಣೆ ಉಳಿದರೂ ಮದ್ದು ಮರೆತಿದೆ. ಇದು ಖೇದನೀಯ.
ಹೊಂಡೆ ಯಾಟ. ಬಲೀಂದ್ರನನ್ನು ಕಳಿಸುವ ದಿನ ಅಂಕೋಲೆಯ ಯುವಕರು ಹಿಂಡ್ಲೆಕಾಯಿಯಲ್ಲಿ ಯೇ ಹೊಡೆದಾಟ ಮಾಡುವದು ಈ ಹಬ್ಬದ ಆಚರಣೆಯ ಒಂದು ಅಂಗ. ಮದ್ದಿನ ಸಂಕ್ರಾಂತಿಯ ದಿನ ಹಿಂಡ್ಲೆಕಾಯಿ ದೀಪಗಳ ಹಬ್ಬವೇ ನಡೆಯುತ್ತವೆ. [ ಹಿಂಡ್ಲೆಕಾಯಿ ದೀಪಹಚ್ಚಿ ಸೊಳ್ಳೆ ಓಡಿಸಿ.]
ಹಿಂಡ್ಲೆಕಾಯಿಯ ದೀಪ:

ದೀಪಾವಳಿಯ ಮೂರನೆಯ ದಿನ ಕೊಟ್ಟಿಗೆಯಲ್ಲಿಯ ದನಗಳಿಗೆ ಹಿಂಡ್ಲೆಕಾಯಿಯ ದೀಪವನ್ನು ತೋರಿಸುವ ಒಂದು ಆಚರಣೆಯಿದೆ. ಹಿಂಡ್ಲೆಕಾಯಿಗಳನ್ನು ಅರ್ಧಕ್ಕೆ ಕತ್ತರಿಸಿ ತಿರುಳನ್ನು ಹೊರತೆಗೆದು ಅದರಲ್ಲಿ ಎಣ್ಣೆ ಹಾಕಿ ನೆಣೆಯಿಟ್ಟು ದೀಪ ಉರಿಸಿ ಮನೆಯ ಯಜಮಾನ ಈ ದೀಪದ ಬಟ್ಟಲನ್ನು ಕೊಟ್ಟಿಗೆಗೆ ಒಯ್ದು ದನಗಳಿಗೆ ಆರತಿ ಮಾಡುತ್ತಾನೆ. ಈ ಆಚರಣೆ ಕರಾವಳಿಯ ಕೃಷಿಕರಲ್ಲಿ ಕಂಡುಬರುತ್ತದೆ. ಈ ದಿನ ಹಾಲಕ್ಕಿ ಒಕ್ಕಲ ಊರ ಗೌಡನ ಮಗಳು ಹೆಬ್ಬಿಂಡ್ಲೆಕಾಯಿಯ ದೀಪವನ್ನು ಉರಿಸಿಕೊಂಡು ಕೇರಿಯ ಮನೆ ಮನೆಗೆ ಹೋಗಿ ದೀಪ ತೋರಿಸಿ ಬರುತ್ತಾಳೆ. ಸಹ್ಯಾದ್ರಿಯ ಕರೆಯಲ್ಲಿ ನೆಲೆಸಿರುವ ಕರೆ ಒಕ್ಕಲ ಸಮಾಜದಲ್ಲಿ ಕೊಟ್ಟಿಗೆಯಲ್ಲಿರುವ ದನಗಳಿಗೆ ದೀಪತೋರಿಸುವವರು ಹೆಂಗಸರೆಂಬುದು ಗಮನಾರ್ಹ.
ನೆನಪಿಡಿ ದೀಪಾವಳಿ ವಿದ್ಯುದ್ದೀಪಗಳ ಹಬ್ಬವಲ್ಲ. ವರ್ಷಾನು ಗಟ್ಟಲೆ ಕೊಟ್ಟಿಗೆಯ ಕತ್ತಲೆಯಲ್ಲಿಯೇ ರಾತ್ರಿಯನ್ನು ಕಳೆಯುವ ಕೊಟ್ಟಿಗೆಯ ದನಕರುಗಳಿಗೆ ಮೂರುದಿನ ದೀಪತೋರಿಸುವ ಆಚರಣೆಯನ್ನು ಅವುಗಳ ಯಜಮಾನ ಶೃದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಾನೆ ಮೊದಲದಿನ ರಾತ್ರಿ ಹಣತೆಯ ದೀಪ ಎರಡನೆಯ ದಿನ ರಾತ್ರಿ ಹಿಟ್ಟಿನ ದೀಪ ಮೂರನೆಯದಿನ ಹಿಂಡ್ಲೆಯ ಕಾಯಿಯ ದೀಪ ತೋರಿಸಲಾಗುತ್ತದೆ. ಹೀಗೆ ದನಗಳಿಗೆ ಇದು ನಿಜವಾದ ದೀಪಾವಳಿ.
ಕುಕುರ್ಟಿಟಿಯೇಸಿ ಕುಟುಂಬದ ಕುಕುಮಿಸ್ ಟ್ರಯಗೊನಸೆ ಹೆಸರಿನ ಇದನ್ನು ಕರಾವಳಿಯ ಕನ್ನಡದಲ್ಲಿ ಹಿಂಡ್ಲೆಕಾಯಿ ಸಿಂಡ್ಲೆಕಾಯಿಯೆಂದೂ ಇತರ ಪ್ರದೇಶದ ಕನ್ನಡದಲ್ಲಿ ಇದನ್ನು ಪೆಂಡಾರೆ , ಹಾವು ಮೆಕ್ಕೆ ಹಿರಿಮೆಕ್ಕೆ, ದೊಡ್ಡ ಮೆಕ್ಕೆ ಎಂಬ ಹೆಸರುಗಳಿವೆ. ಸಂಸ್ಕೃತದಲ್ಲಿ ಇದಕ್ಕೆ ಛೋಟಾ ಇಂದ್ರಾಯಣಿ ಎಂಬ ಹೆಸರು ಇದೆ. ಕೊಂಕಣಿ ಭಾಷೆಯಲ್ಲಿ ಕಾಯಟಿ, ಉರ್ದುವಿನಲ್ಲಿ ಕಾರೀತ ಸಂಸ್ಕೃತದಲ್ಲಿ ವಿಶಾಲಾ ಹಿಂದಿಯಲ್ಲಿ ಜಿಂಗ್ಲಿ ಇಂದ್ರಾಯನ, ತಮಿಳಿನಲ್ಲಿ ಕಾಟ್ಟು ಮಟ್ಟೆ ಎನ್ನುತ್ತಾರೆ. ಅನೇಕ ಗ್ರಂಥಗಳಲ್ಲಿ ಕೋಲಿಯಂಥಸ್ಸಿಗೂ ಇದೇ ಹೆಸರಿದೆಆಯುರ್ವೇದದಲ್ಲಿ ಇಂದ್ರ ವಾರುಣಿಯೆಂದು ತಿಳಿದಿರುವ ಇದೇ ಕುಟುಂಬದ ಈ ಫಲದಲ್ಲಿ ಹಿಂಡ್ಲೆ ಕಾಯಿಯ ಗುಣವಿದೆಯೆಂದು ತಿಳಿದು ಬರುತ್ತದೆ. ಈ ಇಂದ್ರ ವಾರುಣಿಯು ಜಗತ್ತಿನಲ್ಲಿ ಬಹುದೊಡ್ಡ ವಾಣಿಜ್ಯ ಬೆಳೆಯಾಗಿದ್ದುಇದು ಜಗತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದೆ. ಆದರೆ ಅನೇಕ ಸಸ್ಯ ಶಾಸ್ತ್ರ ಗ್ರಂಥ ಗಳಲ್ಲಿ ಕೊಲಿಯಂಥಸ್ಸಿಗೂ ಇದೇ ಹೆಸರಿದೆ. ಆಧುನಿಕ
ಪ್ರಯೋಗಗಳು ಕುಕುಮಿಸ್ ಕೊಲಿಯ್ಂತಸ ನಂತಹ ಗುಣಗಳು ಹಿಂಡ್ಲೆಯಲ್ಲಿವೆ ಎಂದು ತಿಳಿಸುತ್ತವೆ.
ಕೆಂಪು ಬೀಜದ ಇಂದ್ರಾಯಣವನ್ನು ಜಾಲದಲ್ಲಿ ಕುಕುಮಿಸ್ ಟ್ರಿಯಗೋನುಸ ಎಂದು ಗುರುತಿಸಿರುವದು ಕಂಡು ಬಂದಿದೆ. ಇದರ ಕಹಿರುಚಿ ಗುಣದ ಕಾರಣ ಇದನ್ನು ಯಾರೂ ತಿನ್ನುವದಿಲ್ಲ. ಇದನ್ನು ಸಿಟ್ರಲಸ ವಲ್ಗಾರಿಸ್ ದಂತೆ ಔಷಧಕ್ಕೆ ಬಳಸುತ್ತರೆಂದೂ ಇದನ್ನು ಮಲಬಾರ ಪ್ರದೇಶದ ಜನ ಈ ಕಾಯಿಗಳನ್ನು ಆಕಳ ಹಾಲಿನಲ್ಲಿ ಅರೆದು ಬಿಸಿಮಾಡಿ ತಲೆಗೆ ಹಚ್ಚುತ್ತಾರೆಂದೂ ಇದು ಅಶುಚಿಯನ್ನು ದೂರಮಾಡಿ. ಸ್ಮರಣ ಶಕ್ತಿಯನ್ನು ಹೆಚ್ಚಿಸುವುದಾಗಿಯೂ ತಲೆತಿರುಗುವದನ್ನು ದೂರಮಾಡುತ್ತದೆಯೆಂದೂ ಅವರು ತಿಳಿಯುತ್ತಾರೆಂದು ನಾಡಕರ್ಣಿಯವರ ಮಟೀರಾ ಮೀಡಿಕಾದಲ್ಲಿ ತಿಳಿಸುತ್ತಾರೆ. ಇದಲ್ಲದೆ ಸರ್ಪಸುತ್ತುವಿ [ಹರ್ಷಿ] ನಲ್ಲಿಯೂ ಅಲ್ಲಿ ಇದರ ಬಳಕೆಯಿದ್ದಿರುವುದಾಗಿಯೂ ತಿಳಿದು ಬರುತ್ತದೆ. ಆದರೆ ಇದು ಕರಾವಳಿಗರು ಬಲ್ಲ ಹಿಂಡ್ಲೆ ಕಾಯಿಯೇ? ಎಂಬುದನ್ನು ಖಚಿತ ಪಡಿಸಿ ಕೊಳ್ಳ ಬೇಕಾಗಿದೆ. [ಜಾಲತಾಣದಲ್ಲಿ ಹಿಂಡ್ಲೆಕಾಯಿಯನ್ನು ಸದ್ಯ ಕಾಣಲಾಗಿಲ್ಲ] ಇದರ ವೈದ್ಯಕೀಯ ಮಹತ್ವದ ಬಗ್ಗೆ ಜನಕ್ಕೆ ಹೆಚ್ಚು ತಿಳಿದು ಬಂದಾಗ ಕುಕುಮಿಸ ಕೊಲಿಯಂಥಸ್‌ದಂತೆ ಹಿಂಡ್ಲೆಕಾಯಿಯೂ ರೈತನ ಆರ್ಥಿಕ ಬೆಳೆಯಾಗಬಲ್ಲದು. ಸರ್ಪಸುತ್ತುನಲ್ಲಿ ಇದರ ಬಳಕೆಯಿದ್ದಿರುವುದಾಗಿಯೂ ಇದರ ಬೇರಿನ ಕಷಾಯವು ಮಲ ಶೋಧಕವಾಗಿ ಉಪಯುಕ್ತವಾಗಿದೆ. ಬೇರಿನ ಕಷಾಯವು ಹಣ್ಣಿನ ಕಷಾಯಕ್ಕಿಂತ ಹೆಚ್ಚು ಕಿರಿಕಿರಿಯದಲ್ಲವೆಂದು ಇವರು ತಿಳಿಸುತ್ತಾರೆ. ಆಧುನಿಕ ಪ್ರಯೋಗಗಳು ಕುಕುಮಿಸ್ ಕೋಲಿಯಂಥಸ್ ನಲ್ಲಿಯಂತಹ ಔಷಧ ಗುಣಗಳು ಹಿಂಡ್ಲೆಕಾಯಿಯಲ್ಲಿವೆಯೆನ್ನುತ್ತವೆ ಈ ಗುಣಗಳು ಸಣ್ಣ ಇಂದ್ರಾಯನವೆಂದು ಗುರುತಿಸಲ್ಪಡುವ ಹಿಂಡ್ಲೆಕಾಯಿಯಲ್ಲಿಯೂ ಇವೆಯೆಂದೂ ಪತಂಜಲಿ ಯೋಗ ಪೀಠದ ಜಡಿಬೂಟಿ ರಹಸ್ಯವೆಂಬ ಹಿಂದಿ ಭಾಷೆಯ ಗ್ರಂಥದಲ್ಲಿ ಹೇಳಿದೆ. ನೋಡಿ ಆಯುರ್ವೇದ ಜಡಿಬೂಟಿ ರಹಸ್ಯ ಪುಟ ೩೨೦ ರಲ್ಲಿ ಸೂಚಿಸುವಂತೆ ಕುಕುಮಿಸ್ ಕೋಲಿಯಂಥಸ್‌ನ ತಿರುಳಿನಲ್ಲಿ ಹಿಂಡ್ಲೆಕಾಯಿಯ ತಿರುಳನ್ನು ಕಲಬೆರಕೆ ಮಾಡುವದೂ ಉಂಟು. ಕೊಲಿಯಂಥಸ್‌ನ ಹೆಚ್ಚು ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಹಿಂಡ್ಲೆಕಾಯಿಯ ಅಧಿಕ ಸೇವನೆಯಲ್ಲಿಯೂ ಇದ್ದಿರಬಹುದು.

ದೊಡ್ಡ ಇಂದ್ರವಾರುಣಿಯು [ಕುಕುಮಿಸ್ ಕೊಲಿಯಂಥಸ್] ಜಗತ್ತಿನಲ್ಲಿ ಬಹುದೊಡ್ಡ ವಾಣಿಜ್ಯ ಬೆಳೆಯಾಗಿದ್ದು ಇದು ಜಗತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದೆ. ಕುಕುಮಿಸ್ ಕೊಲಿಯಂಥಸ್‌ನ ಅದ್ಭುತ ಔಷಧ ಮೌಲ್ಯವನ್ನು ಮತ್ತು ಅದು ಜಗತ್ತಿನ ಔಷಧ ಪ್ರಪಂಚದಲ್ಲಿ ಪಡೆದಿರುವ ಅದ್ಭುತ ಪ್ರಾಧಾನ್ಯವನ್ನು ಗಮನಿಸಿದಾಗ ನಮ್ಮ ಹಿಂಡ್ಲೆಕಾಯಿಯೂ ಯಾಕೆ ಇಷ್ಟೊಂದು ಹಿಂದೆ ಇದೆ? ಯೆಂಬುದು ಅರ್ಥವಾಗುತ್ತಿಲ್ಲ. ತನ್ನ ಅದ್ಭುತ ಔಷಧ ಗುಣಗಳಿಂದ ದೀಪಾವಳಿಯಂತಹ ದೊಡ್ಡ ಹಬ್ಬದಲ್ಲಿ ಪ್ರಧಾನ ಸ್ಥಾನ ಪಡೆದು ಮುಂದೆ ಕ್ರಮೇಣ ಆಚರಣೆಯಲ್ಲಿ ಮಾತ್ರ ಕೆಲವು ಕಡೆ ತನ್ನ ಸ್ಥಾನವನ್ನು ಉಳಿಸಿಕೊಂಡು ಆಧುನಿಕತೆಯೊಂದಿಗೆ ಆಚರಣೆಯಿಂದಲ್ಲೂ ದೂರವಾಗುತ್ತಲಿದೆ.
ಮಾಹಿತಿ ಮೂಲ: Folk Knowledge


Leave a Reply