ಬಂಡಿಹಬ್ಬ… ಬೆಸುಗೆ ಇಲ್ಲದೇ ಬಂಧಿಸಿದ ನಮ್ಮೂರ ಹೆಮ್ಮೆಯ ಹಬ್ಬ.

Posted by

·

ನಮ್ಮ ಜಿಲ್ಲೆಯ ಜನಕ್ಕೆ ಅದೇನೋ, ಬಂಡಿಹಬ್ಬ ಎಂದೊಡನೆ ಉತ್ಸಾಹದಿಂದ ಮೈ ನಿಮಿರೇಳುವುದು ಸಹಜ. ಎಲ್ಲ ವರ್ಗದ, ಎಲ್ಲರೂ ಸಂಭ್ರಮಿಸುವ ಬಹಳ ಗಮ್ಮತ್ತಿನ ಹಬ್ಬವೇ ಈ ಬಂಡಿಹಬ್ಬ. ಗ್ರಾಮದೇವಿ, ಕಲಶ ದೇವರು ವಿವಿಧ ಗಡಿ ಮತ್ತು ಗುತ್ತಿದೇವರುಗಳ ಸಮ್ಮಿಲನಕ್ಕೆ ವಾರ್ಷಿಕ ಪೂಜೆ, ಹರಕೆ ಸಮರ್ಪಿಸುವ ಅವಕಾಶದ ಹಬ್ಬ. ಇಲ್ಲಿ ಆ ಜಾತಿ ಈ ಜಾತಿ ಎನ್ನದೇ ಎಲ್ಲರೂ “ನಮ್ಮೂರಿನ ಹಬ್ಬ” ಎಂದು ಸಂಭ್ರಮಿಸುವ ಸಂದರ್ಭ.

ಅಂಕೋಲೆಯ ಬಂಡಿಹಬ್ಬ ಎಂದರೆ ನಾಡಿನಲ್ಲೇ ಪ್ರಸಿದ್ಧವಾದುದು. ಈ ಹಬ್ಬ ಎಂದು ಆರಂಭವಾಯಿತು ಎಂಬ ನಿರ್ದಿಷ್ಟ ದಾಖಲೆಗಳು ಖಂಡಿತ ಇಲ್ಲವಾದರೂ ಬ್ರಿಟಿಷರು ಆಡಳಿತ ಮಾಡುವ ಬಹಳ ಪೂರ್ವದಿಂದ ಇದ್ದುದಂತೂ ಸತ್ಯ.. ಅಂದರೆ ಗ್ರಾಮದೇವರ ಸ್ಥಾಪನೆಯಾದಾಗಿನಿಂದಲೇ ಈ ಪದ್ಧತಿ ಜನಿಸಿರಬಹುದು. ಈಗ ನಾನು ನಮ್ಮೂರಿನ ಈ ಹಬ್ಬದ ವರ್ಣನೆ ಮಾಡುವುದಕ್ಕಿಂತಲೂ, ಈ ಸುಂದರ ಹಬ್ಬಾಚರಣೆಯ ನಾಂದಿ ಹಾಡಿ ಅತ್ಯಂತ ಘಟ್ಟಿಯಾದ ಮತ್ತು ಕಳಚಲಾಗದ ಅಡಿಪಾಯವನ್ನು ಹಾಕಿದ ನನ್ನೂರಿನ ಹಿರಿಯ, ದೂರದ್ರಷ್ಟಿಯ, ಸಮನ್ವಯತೆಯ ಹರಿಕಾರರಿಗೆ ಕ್ರತಜ್ಞತೆಯಿಂದ ಸ್ಮರಿಸಸಬಯಸುತ್ತೇನೆ. ಜಾತಿ ಪದ್ಧತಿ, ಭೇದ ಭಾವದ ಪದ್ಧತಿ, ಮೇಲು ಕೀಳು… ಇತ್ಯಾದಿ ಎಲ್ಲವನ್ನೂ ಆ ಕಾಲದಲ್ಲೇ ಚಿವುಟಿ, ಮರೆಯುವಂತೆ ಮಾಡಿ, ನಾವೆಲ್ಲರೂ ದೇವರ ಮಕ್ಕಳು ಹೀಗಾಗಿ ಎಲ್ಲರೂ ದೇವರಮುಂದೆ ಸರಿಸಮಾನರು ಎಂದು ಸಾರುವ ಮಹತ್ವದ ಸಂದೇಶದೊಂದಿಗೆ ಬಂಡಿಹಬ್ಬಕ್ಕೆ ಚಾಲನೆ ನೀಡಿದ ಆ ನಿರ್ದೇಶಕ, ನಿರ್ಮಾಪಕರಿಗೆ ಶತ ಶತ ಅಭಿನಂದನೆಗಳು. ಬಹುಷಃ ಇದು ಆರಂಭವಾದಾಗ ಜಾತಿ ರಾಜಕಾರಣ ಅಥವಾ ಅಸ್ಪೃಶ್ಯತೆ ಇತ್ಯಾದಿ ಹುಟ್ಟಿಕೊಂಡಿರಲಿಲ್ಲ.

ತಾವು, ಬಂಡಿಹಬ್ಬದ ಶ್ರೀ ಕಳಸ ದೇವರ ಮೆರವಣಿಗೆಯನ್ನು, ವಿಜೃಂಭಣೆಯಿಂದ ವೈಭವದಿಂದ ಸಾಗುವ ಆ ಪರಿವಾರದವರನ್ನು ಅಕ್ಷಯ ತದಿಗೆಯ ದಿನದಿಂದ ಆರಂಭವಾಗಿ, ಕೊನೆಯ ದಿನದವರೆಗೂ ಅನೇಕ ವರ್ಷಗಳಿಂದ ನೋಡುತ್ತಿರಬಹುದು. ಹಾಗಿದ್ದರೂ ಅನೇಕರು ತಿಳಿಯದ ವಿಶೇಷತೆ ಒಂದುಇದೆ. ಅದೇ ದೇವರೆದುರು ಎಲ್ಲರೂ ಸರಿಸಮಾನರು ಮತ್ತು ನಮ್ಮ ನಮ್ಮ ಜಾತಿ ಗುದ್ದಾಟ ಏನಿದ್ದರೂ ಮನೆ ಮತ್ತು ಖಾಸಗಿ ಆಚರಣೆಯಲ್ಲಿ ಮಾತ್ರ ಎಂದು ಸಾರುವುದೇ ಈ ಹಬ್ಬದ ವಿಶೇಷ. ಜಾತಿಗಳ ಬಂಧನದ ಬೆಸುಗೆಯೇ ಈ ಬಂಡಿಹಬ್ಬ.

ನಮ್ಮ ಪೂರ್ವಜರ ಆಗಿನ ದಿವ್ಯದ್ರಷ್ಟಿ ನೋಡಿ. ಹಬ್ಬ ಆರಂಭವಾದಾಗ ಊರಲ್ಲಿ ಇದ್ದ ಎಲ್ಲಾ ಜಾತಿಗಳನ್ನು, (ಮೇಲ್ವರ್ಗ + ಕೆಳ ವರ್ಗ ಎಂಬ ಛಾಪು ಮರೆತು) ಒಂದೇ ಛತ್ರದಡಿ ತಂದು ಹಬ್ಬದ ಹೊಳಪನ್ನು ನೀಡಿದ್ದು ಚಮತ್ಕಾರವೇ ಸರಿ. ಬಂಗಾರದ ಕಳಸವನ್ನು ಹೊರುವ ಗುನುಗರು, ಬಿಡುಗುನುಗರು ಕುಂಬಾರರಾದರೆ, ಅದಕ್ಕೆ ಭಕ್ತರು ನೀಡಿದ ತಾಟಿನ ಆರತಿ ಮಾಡುವವರು ಹವ್ಯಕ ಬ್ರಾಹ್ಮಣರು. ದೇವರ ಮುಂದೆ ಸರಿಯಾಗಿ ಎಲ್ಲ ವ್ಯವಸ್ಥೆ ನಿರಾತಂಕವಾಗಿ ಸಾಗುವಂತೆ ನೋಡಿಕೊಳ್ಳುವವರು ಆಡಳಿತ ವರ್ಗದ ಕಾರಭಾರಿ ಬ್ರಾಹ್ಮಣ ನಾಡಕರ್ಣಿಗಳು. ಕಳಸದ ಮೆರವಣಿಗೆಯಲ್ಲಿ ಕಟ್ಟಿಗೆದಾರರಾಗಿ ಆಯಾ ಗುತ್ತಿ / ದೇವರುಗಳನ್ನು ಪ್ರತಿನಿಧಿಸುವವರೆಂದಂತೆ ನಾಡವರು, ಶೆಟ್ಟರು, ಬಂಟರು, ಐಗಳರು, ಹುಲಸ್ವಾರರು. ತೋರಣ ಕಟ್ಟುವ ಕಾರ್ಯ ಕೋಮಾರಪಂತರು ಮಾಡಿದರೆ, ನಾಮಧಾರಿಗಳು ಕಟ್ಟಿಗೆದಾರರಲ್ಲದೆ, ಮುಂಚೂಣಿಯಲ್ಲಿ ಬೆಂಕಿಯ ಚೂಡಿ ಹಿಡಿದು ಸಾಗುವುದು, ಹಾಲಕ್ಕಿಗಳು ಬಟ್ಟೆಯ ತೋರಣ ಹಿಡಿದು ಪಾತಾಕೆಯೊಂದಿಗೆ ಮೆರವಣಿಗೆಯಲ್ಲಿ ಸಾಗುವುದಲ್ಲದೆ, ಅಂತಿಮ ದಿನದ ಹರಿಕೆ ಕೋಳಿ ಕುರಿ ಆಹುತಿಗೆ ಅವರ ಪಾತ್ರವೇ ಮುಖ್ಯ. ಆಚಾರಿಗಳು ಆಡುಕಟ್ಟೆಯ ಉಯ್ಯಾಲೆಯ ಉಸ್ತುವಾರಿ ನೋಡಿಕೊಂಡರೆ, ಮಡಿವಾಳರು ಗುನುಗರಿಗೆ ದಿನನಿತ್ಯವೂ ಶುಭ್ರವಾಗಿ ವೊಗೆದ ಬಟ್ಟೆವೊದಗಿಸುವುದು, ದೇವಳಿಗಳು ಕಳಶಕ್ಕೆ ಅವಶ್ಯವುಳ್ಳ ಹೂವು ತಂದು ನೀಡಿ, ದೇವಸ್ಥಾನ ಪ್ರವೇಶಿಸುವಾಗ ಕಲಶಧಾರಿ ಗುನುಗರ, ಬಿಡುಗುನಗರ ಕಾಲಿಗೆ ನೀರು ಹಾಕಿ ಶುದ್ಧಿಕರಿಸುವುದು, ಕೆಲಸಿಗಳು ಪಾನಕ ವ್ಯವಸ್ಥೆಮಾಡುವುದಲ್ಲದೇ ಮೈಮೇಲೆ ಭಾರಬಂದು ಕಳಸದೇವರನ್ನು ಸ್ವಾಗತಿಸುವುದು,ವಾಜಂತ್ರಿಗಳು ಪಂಚ ವಾದ್ಯನುಡಿಸುತ್ತ ಸಾಗುವುದು, ಆಗೇರರು ತಮ್ಮ ಹಲಗೆ, ಶೆಹೆನಾಯಿ, ಡೊಳ್ಳು ವಾದ್ಯದೊಂದಿಗೆ ಬಾರಿಸುತ್ತ ಮುಂದೆ ಸಾಗುವುದು, ಭೋಯಿ ಜನ ಛತ್ರ ಚಾಮರ, ದೀವಿಟೆ ಹಿಡಿದು ಸಾಗುವುದು, ಹರಿಕಂತ್ರರು ಬಲಿಮಕ್ಕಳ ವೇಷತೊಟ್ಟು ಸೇವೆನೀಡುವುದು, ಗುಡಿಗಾರರು ಪರಿವಾರ ದೇವತೆಗಳ ಮುಖವಾಡ ತಯಾರಿಸುವುದು ಮತ್ತು ಬಣ್ಣ ಹಚ್ಚುವುದು, ದೇವರು ಕರೆಯುವ ದಿನ ಕಳಶವು ಹಳೆಯ ಬಜಾರದಿಂದ ಶ್ರೀ ಮಾರಿಕಾಂಬೆಯ ಗುಡಿಯಿಂದ ಮುಂದೆ ಸಾಗುವಾಗ ಚಮಗಾರರ ವಿಶೇಷ ತೋರಣ ಸೇವೆ ಮತ್ತು ಕಳಶಕ್ಕೆ ಗ್ರಾಮದೇವಿ ಮಂದಿರದವರೆಗೆ ಸಾಥ್ ನೀಡುವುದು, ಉಪ ನಾಡವರು ಮಾಜಿ ಗಾವಕಾರಎಂದು ಹಬ್ಬದ ಹೇಳಿಕೆ ನೀಡುವುದು, ಆಭರಣಗಳ ಸ್ವಚ್ಛತೆಯನ್ನು ಸೋನಾರರು ನೋಡಿಕೊಳ್ಳುವುದು. ಹೀಗೆ ಊರಿನಲ್ಲಿ ಆ ಕಾಲದಲ್ಲಿದ್ದ ಸರಿಸುಮಾರು.

ಎಲ್ಲಾ ಇಪ್ಪತ್ತೆರಡು ಜಾತಿಗಳನ್ನು ಒಂದೇ ಛತ್ರದ ಅಡಿಯಲ್ಲಿ “ದೇವರಸೇವೆ” ಎಂಬ ಬಂಧನದಲ್ಲಿ ನೆಣೆದಿರುವ ಇತಿಹಾಸ ಬೇರೆಡೆ ಕಾಣಸಿಗುವುದು ವಿರಳ. ಆ ಬೆಸುಗೆ ಇಂದಿಗೂ ಹರಿಯಲಾಗದಷ್ಟು ಘಟ್ಟಿತನ ಉಳಿಸಿಕೊಂಡಿದೆ.

ಹೀಗೆ ಅಂದಿನ ಎಲ್ಲಾ ಸಮಾಜಗಳ ಹೃದಯಗಳ ಬಂಧನದ ಹಬ್ಬವೇ ಬಂಡಿಹಬ್ಬವಾಗಿ ಇಂದಿಗೂ ಮುಂದುವರೆದಿದೆ. ಇಂದಿನ ದಿನದಲ್ಲಿ ನಾವು ಜಾತಿ ಜಾತಿ ಎಂದು ಬಡಿದಾಡಿ ವಿಭಜಿಸುವ ಮನಸ್ಕರು, ಈ ನಮ್ಮ ಹಿರಿಯರು ಪೋಣಿಸಿದ ಕಳಚಿಕೊಳ್ಳದ “ಫೆವಿಕಾಲ್” ಅಂಟುತನದ ಪಾಠದಿಂದ ಕಲಿಯುವರೇ.. ಖಂಡಿತ ಕಲಿಯೋಣ. ಕಲಿತು ಒಂದಾಗೋಣ. ಹಬ್ಬವನು ಸಂಭ್ರಮಿಸಿ ನಲಿಯೋಣ. 🙏🏼🙏🏼🙏🏼

ಮೂಲ ಮಾಹಿತಿ: ಸುಭಾಶ ನಾರ್ವೇಕರ, ವಕೀಲರು, ಅಂಕೋಲಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading