ಬೆಚ್ಚಿನ ಹಬ್ಬ, ಗದ್ದೆ ಗಂಡನ ಹಬ್ಬ

Posted by

·

ಹಾಲಕ್ಕಿ ಒಕ್ಕಲಿಗರ ಸಂಪ್ರದಾಯದ ಪ್ರಕಾರ

ಮಣ್ಣಿನ ಮಕ್ಕಳಾದ ಹಾಲಕ್ಕಿಗಳು ಹೊನ್ನ ಬೆಳೆ ತೆಗೆಯುವುದು ಭೂಗರ್ಭದಿಂದಲೇ. ತಾವು ಬಿತ್ತಿದ ಗದ್ದೆಗೆ ಗಂಡನನ್ನು ಮಾಡಿದಲ್ಲಿ ಮಾತ್ರ ಬೆಳೆ ಬರುವುದೆಂದು ಪರಿಭಾವಿಸಿ, ಬೆಚ್ಚಿನ ಸಂಕ್ರಾಂತಿಯಂದು ಗದ್ದೆಗೆ ಗಂಡನನ್ನು ತರುತ್ತಾರೆ. ಅಂದು ಬೆಳಿಗ್ಗೆ ನಸುಕಿನಲ್ಲೆದ್ದು ಮುಂಡಕಿ ಇಲ್ಲವೆ ಬೋಕುಳ ಟೊಂಗೆಯನ್ನು ಕಡಿದು ತಂದು, ಗದ್ದೆಯ ಹಾಳೆಯ ಮೇಲೆ ನೆಟ್ಟು ಪೂಜೆಯನ್ನು ಮಾಡಿ, ‘ಹುಯ್ಯೋ’ ಎಂದು ಕೂಗುತ್ತಾರೆ. ಅನಂತರ ಗೇಣಿದಾರ ಒಕ್ಕಲು ಮಕ್ಕಳಾದರೆ ಒಡೆಯನೆಡೆ ಹೋಗಿ,

ಕೇಲಾಲೆ ಕೇಲಿ ವಡೆದೀರೆ ನೀವ್‌ ಕೇಲಿ
ಹಿತ್ತಲಿಗೆ ಬೆಚ್ಚ ಹುಗುದೇವು! ವಡೆಯರೆ
ಲದಕೆ ಹಿಂಗರವ ಕೊಡಬೇಕು! ವಡೆಯರೆ
ಸಂಕ್ರಾಂತಿ ಪೂಜೆಗೆಯುಬೇಕು। ವಡೆಯರೆ
ಬೆಚ್ಚಿನ ಕಾಯ ಕೊಡಬೇಕು

ಎಂದು ಒಡೆಯನಿಂದ ಅಡಿಕೆ, ಹಿಂಗಾರ ತೆಂಗಿನಕಾಯಿ ಪಡೆದು, ಮನೆಗೆ ಬಂದು ತುಲಸಿಯನ್ನು ಪೂಜಿಸಿ ಹಬ್ಬದೂಟವನ್ನು ಮಾಡುತ್ತಾರೆ.

ಗದ್ದೆಯಲ್ಲಿ ಹಾಗು ಹಿತ್ತಿಲಲ್ಲಿ ನೆಟ್ಟ ಮುಂಡಕಿಯ ಮುಂಡಿಗೆ, ಇಲ್ಲವೆ ಬೋಕುಳದ ಟೊಂಗೆ ಪುರುಷತ್ವದ ಸಂಕೇತ. ಜಾನಪದರು ಗದ್ದೆಯ ಗಂಡನೆಂದು ಕರೆಯುವುದು ಅದನ್ನೆ. ಕೆಲವೆಡೆ ಹಾಳೆಯಿಂದ ನೀರು ಬೀಳುವ ಹರ್ಗಂಡಿಯಲ್ಲಿ ನೆಲ್ಲಿಯ ಸೊಪ್ಪನ್ನು ಹಾಕುತ್ತಾರೆ. ಹೀಗೆ ಗದ್ದೆಗೆ ಗಂಡನನ್ನು ಮಾಡದಿದ್ದಲ್ಲಿ ಬತ್ತದ ತೆನೆ ಸುಗ್ಗಿಯದು, ಕಾಳು ಗಟ್ಟಿಯಾಗದು ಎನ್ನುತ್ತಾರೆ. ಹೀಗೆ ಬೆಚ್ಚು ನೆಡುವುದರಿಂದ ಬತ್ತದ ತನೆಗೆ ಯಾವುದೇ ಬಗೆಯ ರೋಗ ಬರುವುದಿಲ್ಲ, ದೃಷ್ಟಿ ತಾಗುವುದಿಲ್ಲ, ಕೀಟ ಬಾಧೆ ತಟ್ಟುವುದಿಲ್ಲವೆಂದೂ ಹೇಳುತ್ತಾರೆ. ಬೆಚ್ಚಿಗಾಗಿ ನೆಡುವ ವೃಕ್ಷಗಳ ಟೊಂಗೆಗಳಲ್ಲಿ ರೋಗ ನಾಶಕಗುಣಗಳಿರುವುದೇ ಎನ್ನುವುದನ್ನು ಸಸ್ಯ ವಿಜ್ಞಾನಿಗಳು ಪತ್ತೆ ಹಚ್ಚಿದರೆ, ಈ ಆಚರಣೆಯ ರಹಸ್ಯ ಬಯಲಾಗಬಹುದು. ಗ್ರೀಕರು ಭೂಮಿ ಅಕಾಶವನ್ನಪ್ಪಿ ಗರ್ಭ ತಳೆಯುತ್ತಾಳೆಂದು ನಂಬಿದರೆ ಹಾಲಕ್ಕಿಗಳು ಬೆಚ್ಚಿನಿಂದ ಭೂದೇವಿ ಬಸುರಾಗುತ್ತಾಳೆಂದು ನಂಬುತ್ತಾರೆ. ಈ ಬೆಚ್ಚಿನಾಚರಣೆಯಲ್ಲಿ ಫಲ ಸಮೃದ್ಧಿವಿಧಿಯಿದೆ.

ಮಾಹಿತಿ: ಹಾಲಕ್ಕಿ ಒಕ್ಕಲಿಗರು (ಒಂದು ಸಾಂಸ್ಕ್ರತಿಕ ಅಧ್ಯಯನ), ಲೇಖಕರು – ಡಾ. ಎನ್. ಆರ್. ನಾಯಕ್ (ರಾಜ್ಯ ಪ್ರಶಸ್ತಿ ಪುರಸ್ಕೃತ ಲೇಖಕ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading