ವಿಜಯನಗರದರಸರು ಸುಗ್ಗಿ ಹಬ್ಬವನ್ನು ವೈಭವಯುತವಾಗಿ ಆಚರಿಸುತ್ತಿದ್ದುದನ್ನು ಕೃಷ್ಣದೇವರಾಯನ ಕಾಲಕ್ಕೆ ವಿಜಯನಗರಕ್ಕೆ ಭೆಟ್ಟಿಯಿತ್ತ ಡಾಮಿಂಗೋ ಪಾಯೆಸ್ ವರ್ಣಿಸಿದ್ದಾನೆ. ಕನಕದಾಸರ ಮೋಹನ ತರಂಗಿಣಿಯಲ್ಲಿ ಈ ಹಬ್ಬದ ಸುಂದರ ಚಿತ್ರವಿದೆ. ಕೌಮುದಿ ಮಹೋತ್ಸವ, ವಸಂತೋತ್ಸವವೂ ಇದೇ ಆಗಿದೆ. ಈ ಹಬ್ಬಕ್ಕೆ, ಹೋಲಿಕಾದಹನ, ಹುತಾಶನೀ ಪೂರ್ಣಿಮಾ, ಕಾಮದಹನ, ಸಿಗ್ಮಾ ಎಂಬ ಹೆಸರುಗಳಿದ್ದರೂ ಉತ್ತರ ಕನ್ನಡದ ಕರಾವಳಿಗರು ಈ ಹಬ್ಬವನ್ನು ಸುಗ್ಗಿ ಇಲ್ಲವೆ ಹೋಳಿ ಹಬ್ಬವೆನ್ನುತ್ತಾರೆ. ಪುರಾಣ ಹಾಗೂ ಕಾವ್ಯಗಳಲ್ಲಿಯ ಕಾಮದಹನ ಆಚರಣೆಗಳಿಗೂ, ಜಾನಪದೀಯ ಆಚರಣೆಗಳಿಗೂ ಅಂತರವಿದೆ. ಹಾಲಕ್ಕಿಗಳು ಆಚರಿಸುವ ಸುಗ್ಗಿಯ ಆಚರಣೆಯಲ್ಲಿ ವಸಂತೋತ್ಸವ, ಹೋಲಿಕಾದಹನ, ಸಸ್ಯಾರಾಧನೆ, ಫಲ ಸಮೃದ್ಧಿ ವಿಧಿಗಳಿವೆ.
ಹಾಲಕ್ಕಿಗಳು ಸುಗ್ಗಿಯ ಹಬ್ಬವನ್ನು ಪಾಲ್ಗುಣ ಶುದ್ಧ ದಶಮಿಯಿಂದ ಹುಣ್ಣಿಮೆಯವರೆಗೆ ಆಚರಿಸುತ್ತಾರೆ. ಇವರ ಸುಗ್ಗಿ ಆಚರಣೆಯ ವಿಧಿವಿಧಾನಗಳು ಸೀಮೆಯಿಂದ ಸೀಮೆಗೆ ಸ್ವಲ್ಪ ಬಿನ್ನ. ಸುಗ್ಗಿಯನ್ನು ಗೋಕರ್ಣ ಸೀಮೆಯವರು ಚೈತ್ರ ಶುದ್ಧ ಹುಣ್ಣಿಮೆಗೆ ಆಚರಿಸಿದರೆ, ಉಳಿದ ಸೀಮೆಯವರು ಹೋಳಿ ಹಬ್ಬದ ಒಂದಂಗವಾಗಿ ಆಚರಿಸುತ್ತಾರೆ. ಪಾಲ್ಗುಣ ಶುದ್ಧ ದಶಮಿಗೆ ಬನದ ಹೂ, ಹಣ್ಣು, ಚಿಗುರುಗಳನ್ನು ಹೋಲುವ ತುರಾಯಿ ಕಟ್ಟಿಕೊಂಡು ಸುಗ್ಗಿ ಮೇಳದವರು, ಹುಣ್ಣಿಮೆಯವರೆಗೆ ಊರುರು ಸುತ್ತಿ, ಕೋಲಾಡಿ ಕುಣಿದು ಹುಣ್ಣಿಮೆಗೆ ಪುನಃ ಊರನ್ನು ಸೇರಿ, ಕೋಲಾಡಿ, ಕರಿಕಳಕ್ಕೆ ಬಂದು ಸುಗ್ಗಿಯ ಪೋಷಾಕು ಕಳಚಿ, ಸುಗ್ಗಿ ಕುಣಿತವನ್ನು ಮುಗಿಸುತ್ತಾರೆ.
ಅಂದು ರಾತ್ರಿ ಕಾಮನ ಸುಡಲು ತಯಾರಿ ನಡೆಸುತ್ತಾರೆ. ಕಾಮನನ್ನು ಸುಡುವ ಮೊದಲು, ಗಂಡು ಮಕ್ಕಳು ವಿವಿಧ ಸೋಗುಹಾಕಿ, ಮನೆಮನೆ ತಿರುಗಿ ಹಣ ಸಂಗ್ರಹಿಸುತ್ತಾರೆ. ಕೆಲವರು ಕಾಮನನ್ನು ಸುಡಲು, ಕಾಯಿ, ಬೆಲ್ಲ, ದುಡ್ಡುಗಳನ್ನು ಕಾಮನ ಪಟ್ಟಿಯಾಗಿ ಬೇಡಲು ಹೊಗುತ್ತಾರೆ. ಆಗ ಕಾಮನನ್ನು ಸುಡುವ ಕಟ್ಟಿಗೆ ಹಾಗು ತೆಂಗು ಅಡಿಕೆ ಮುಂತಾದ ಫಲ ವಸ್ತುಗಳನ್ನು ಕಳವು ಮಾಡುತ್ತಾರೆ. ಅಂದು ಕಳವು ಮಾಡಿದರೆ ಅಪರಾಧವಲ್ಲ.
ಸುಮಾರು ಮಧ್ಯರಾತ್ರಿಗೆ ಕಾಮದಹನಕ್ಕೆ ಅಡಿಕೆಯ ಸಸಿ, ಮಾವಿನ ಇಲ್ಲವೇ ಬೋಕುಳ ಟೊಂಗೆಯನ್ನು, ಹೋಳಿಯ ಕಟ್ಟಿಗೆಯನ್ನು ಊರವರು ಮೆರವಣಿಗೆಯಿಂದ ಹೊತ್ತೊಯ್ದು ಅದಕ್ಕೆ ಒಣ ಕರಡ ಕಟ್ಟಿ, ಬೆಂಕಿ ಹಾಕಿ “ದುಮ್ ಸಾಯ್ಲೊ’ ಪದ ಹೇಳುತ್ತಾರೆ:
ದುಮ್ ಸಾಯ್ತೋ ತಮ್ಮ ದುಮ್ ಸಾಯ್ಲೋ
ಕಾಮನೋ ಭೀಮನೋ ದುಮ್ ಸಾಯ್ಲೋ
ಕಾಮನೋ ಭೀಮನೋ ಕಳ್ಳ ಭಟ್ಟಿ ಮಗ್ನೋ| ದುಮ್ ಸಾಯ್ಲೋ
ಕಾಮ್ ಸತ್ತ ಮರ್ದಿನೆ ಬೆಲ್ಲಕಾಯು ತಿನ್ನೀರೋ| ದುಮ್‌ಸಾಯ್ಲೋ
ಕಾಮ್ ಸತ್ತ ಮರ್ದಿನೆ ಬೆಲ್‌ಕಾಯ್ಸ್ ಉಣ್ಣೀರೋ| ದುಮ್‌ಸಾಯ್ಲೋ
ಹೆಣ್ ಕೇಳೂಕ್ ಹೋಗೀರೋ ದುಮ್‌ಸಾಯ್ಲೋ| ದುಮ್‌ಸಾಯ್ಲೋ
ಹೆಣ್ ಬಾಳ್ ದೊಡ್ಡ ಗಂಡು ಬಾಳ್ ಸಣ್ಣ| ದುಮ್ಸಾಯ್ತೋ.
ಹೀಗೆ ಪದವನ್ನು ಹೇಳುತ್ತ ಉನ್ಮತ್ತರಂತೆ ಕೂಗಿಕುಣಿದು ಕಾಮ (ಮಾವಿನ ಟೊಂಗೆ ಇಲ್ಲವೆ ಅಡಿಕೆಯ ಸಸಿಯ)ನನ್ನು ಸುಡುತ್ತಾರೆ. ಪ್ರಕೃತಿ ಸುಸಿಲಾಡಿಸುವ ತನಗಿಂತ ಹಿರಿಯಳಾದ ತನ್ನ ಸಾಕುತಾಯಿ ರತಿಯನ್ನೇ ವರಿಸಿದ ಉನ್ಮತ್ತ ಕಾಮನನ್ನು ಹಾಲಕ್ಕಿಗಳು ‘ಕಳ್ಳುಬಟ್ಟೆ’ಯ ಮಗನೆಂದು ವರ್ಣಿಸುವುದು ಔಚಿತ್ಯಪೂರ್ಣವಾಗಿದೆ. ಉನ್ಮತ್ತ ಕಾಮನನ್ನು ದಹಿಸಿದಲ್ಲಿ ಮಾತ್ರ ಪರಿಶುದ್ದ ಪ್ರೇಮದ (ಕಾಯಿ ಬೆಲ್ಲ ಪಾಯಸದ) ಸ್ನಿಗ್ದ ಸವಿಯನ್ನು ಸವಿಯಲು ಸಾಧ್ಯವೆನ್ನುವ ಭಾವನೆ ಹಾಲಕ್ಕಿಗಳದು.
ಚಂದಾವರ ಸೀಮೆಯಲ್ಲಿ ಮಾತ್ರ ಕಾಮನನು ಸುಟ್ಟ ಮೇಲೆ ತಮ್ಮೂರ ಗೌಡನ ಮನೆಯಲ್ಲಿ ಕೋಲಾಡಿ ಸುಗ್ಗಿ ಪೋಷಾಕು ಕಳಚಿ ಕರಿ ಹೊಯ್ಯುತ್ತಾರೆ. ಕರಿ ಹೊಯ್ಯುವಾಗ “ದುಮ್ ಸಾಯ್ಲೊ ಪದ” ಹಾಡುತ್ತ ಸುಗ್ಗಿ ಕಲಾವಿದರು ತುಲಸಿಗೆ ಪ್ರದಕ್ಷಿಣೆ ಹಾಕುವಾಗ, ಅವರ ಸುತ್ತಲಿದ್ದವರು ಅವರ ಮೇಲೆ ಸಗಣಿಯ ನೀರು, ಕರಿ ಬೂದಿಯನ್ನು ಎಸೆಯುತ್ತಾರೆ. ಆಗ ತುಲಸಿ ಪ್ರದಕ್ಷಿಣೆಯನ್ನು ಹಾಕುವವರು ‘ಹೊಯ್ಕೆ’ ಹಾಕುತ್ತ ಕರಿದೇವರೆಡ ಓಡಿ, ಕರಿದೇವರ ಪ್ರದಕ್ಷಿಣೆಯನ್ನು ಹಾಕಿ, ಹೊಳೆಗೆ ಹೋಗಿ ಸ್ನಾನ ಮಾಡಿ ಕರಿದೇವರನ್ನು ಪೂಜಿಸುತ್ತಾರೆ; ನೆರೆದವರಿಗೆ ಪ್ರಸಾದಕಡಿ ವಿತರಿಸುತ್ತಾರೆ. ಆಮೇಲೆ ದೇವರಿಗೆ ಒಡೆದಕಾಯಿ, ಮನೆಯಿಂದ ತಂದ ರೊಟ್ಟಿಗಳನ್ನು ಒಟ್ಟಿಗೆ ಸೇರಿಸಿ, ಸಾಮೂಹಿಕವಾಗಿ ಹಂಚಿಕೊಂಡು ತಿನ್ನುತ್ತಾರೆ.
ಕೆಲವೆಡೆ ಕಾಮನನ್ನು ಸುಟ್ಟ ಮರುದಿನ ಕರಿಕಳದಲ್ಲಿ ಕೋಲಾಡಿ ಮುಗಿಸಿ, ಕರಿಗುತ್ತಿನಲ್ಲಿ ಕೋಲು ಹುಗಿದು, ತುರಾಯಿ ಬಾಗಿಲಿಗೆ ಕಟ್ಟಿ, ಮಿಂದು ಕರಿದೇವರನ್ನು ಪೂಜಿಸಿ, ಅವಲಕ್ಕಿ ಕಲಸಿ ತಿಂದು ಮನೆಗೆ ಬರುತ್ತಾರೆ.
ಕಾಮನ ಸುಡುವುದು ವಸಂತಾಗಮನದ ಸಂಧಿಕಾಲದಲ್ಲಿ ಕೋಡುಗಟ್ಟಿಸುವ ಶಿಶಿರ ಸೀತವನ್ನು ಮೆಟ್ಟಿ, ಸುಟ್ಟು, ಬೆಚ್ಚಗಿನ ಸುಖಪ್ರದ ವಸಂತನನ್ನು ಸ್ವಾಗತಿಸುವ ವಸಂತೋತ್ಸವ ಈ ಸುಗ್ಗಿಹಬ್ಬ. ಸುಗ್ಗಿಯ ನಂತರ ಚಳಿಯಿಲ್ಲ, ಪ್ರಕೃತಿ ಚಿಗಿತು, ಹೂ, ಮಿಡಿಬಿಟ್ಟು, ಚೈತನ್ಯ ಪೂರ್ಣವಾಗಿರುತ್ತದೆ. ಪ್ರಕೃತಿಯೊಡನೆ ನಿಕಟ ಸಂಬಂಧವನ್ನು ಬೆಳೆಸಿಕೊಂಡ ಹಾಲಕ್ಕಿಗಳು, ಅದರೊಡನೆ ತಾದಾತ್ಮ್ಯವನ್ನು ಹೊಂದಿ, ಭಾವ ಸಮಾದಿ, ಪಡೆಯಲು ಅದನ್ನನುಕರಿಸಿ, ಕುಣಿದು ತಣಿದರು; ಹಾಗೆ ಕುಣಿದಲ್ಲಿ ಫಲ ಸಮೃದ್ಧಿಯಾಗುವುದೆಂದು ಬಗೆದರು; ‘ಸುಗ್ಗಿ ಕಟ್ಟದ ಊರಲ್ಲಿ ಶುಭವಿಲ್ಲ’ ಎಂಬ ನಂಬಿಕೆಯನ್ನು ನೆಟ್ಟರು.
ಧಾನ್ಯ ಸಮೃದ್ಧಿಗಾಗಿ ವನದೇವತೆಯನ್ನು ಆರಾಧಿಸುವ ಪದ್ಧತಿಯಿದೆ. ನಾಶವಾದ ವನಸ್ಪತಿಗಳು ಪುನಃ ಬೆಳೆಯುವಂತೆ ಧಾನ್ಯ ದೇವತೆ “ಒಸಿರಿಸ್” ಮರಣ ಹೊಂದಿ ಪುನಃ ಜೀವ ಪಡೆಯುವ ಕಥೆ ಇಜಿಪ್ತದಲ್ಲಿ ಪ್ರಖ್ಯಾತವಾಗಿದೆ. ಹಾಲಕ್ಕಿಗಳ ಸುಗ್ಗಿ ಕುಣಿತ, ಕಾಮದಹನಗಳು ಇದನ್ನೇ ಸಂಕೇತಿಸುತ್ತವೆ. ಸುಗ್ಗಿಯ ಮೇಳ ಕುಣಿತವು ವಸಂತ ಬನಸಿರಿಯನ್ನು ಪ್ರತಿನಿಧಿಸುತ್ತದೆ. ಕಾಮದಹನಕ್ಕೆ ಬಳಸುವ ಮಾವಿನಟೊಂಗೆ, ಸಿಂಗಾರಸಸಿ, ಬಕುಳ ಮುಂತಾದವನ್ನು ಸುಡುವ ಆಚರಣೆಯಿಂದ, ಸೃಷ್ಟಿಯಲ್ಲಿ ಹಸಿರು ಸೂಸಾಡಲಿ, ಮಾಧುರ್ಯ ಶೃಂಗಾರಾದಿಗಳ ಸುಸಿಲಾಡಲಿ, ಎಂಬ ಹಾರೈಕೆಯಿದೆ. ಸಸ್ಯ ಸಮೃದ್ಧಿಗಾಗಿ ತುರಾಯಿ ಕಟ್ಟಿಕೊಂಡು ಗಿಡಗಳಂತೆ ತೂಗಿ, ತೊನದು ಬನಸಿರಿ ಅನುಕರಿಸಿ, ಗಿಡನೆಟ್ಟು, ಸುಟ್ಟು, ಸೃಷ್ಟಿ-ಲಯ ಸೂಚಿಸಿ, ಆರಾಧಿಸುವ ರೀತಿಯನಿಲ್ಲಿ ಗುರುತಿಸಬಹುದು. ಸಸ್ಯಾರಾಧನೆಯ ಆಚರಣೆಯೊಡನೆ ಕ್ರಮೇಣ ಕಾಮದಹನದ ಪೌರಾಣಿಕ ಕಥೆಯ ಸೇರ್ಪಡೆಯೂ ಇಲ್ಲಿ ಸೇರಿಕೊಂಡಂತಿದೆ. ಹೀಗೆ ಸುಗ್ಗಿ ಆಚರಣೆಯಲ್ಲಿ ಫಲ ಸಮೃದ್ಧಿಯ ವಿಧಿ ವಸಂತೋತ್ಸವ, ಕಾಮದಹನ, ಸಸ್ಯಾರಾಧನೆ ಮೊದಲಾದ ಸಂಗತಿಗಳು ಮಿಳಿತವಾಗಿರುವುದನ್ನು ಗುರುತಿಸಬಹುದು. ಮೂಲತಃ ಭಿನ್ನ ಸಂಸ್ಕೃತಿ ಸಂಪ್ರದಾಯಗಳ ಈ ಆಚರಣೆಗಳು ಸಂಸ್ಕೃತಿ ಸಂಕರದ ಕಾಲಕ್ಕೆ ಕೆಲವು ಸಮಾನ ಆಶಯಗಳ ಕಾರಣದಿಂದಾಗಿ ಒಂದಾಗಿ ಬೆರೆರಂತಿದೆ. ಈ ಎಲ್ಲ ಆಚರಣೆಗಳ ಮೂಲ ಆಶಯ ಒಂದೇ; ಪ್ರಕೃತಿಯನ್ನು ವಸಂತೋತ್ಸಾಹದಿಂದ ಅನುಕರಿಸಿ ದಹಿಸುವುದು; ಕಾಡು ಕಾಮನೆಗಳನ್ನು ಹುಟ್ಟು ಹಾಕುವುದು ಮತ್ತು ಸುಟ್ಟು ಹಾಕುವುದು; ಚಿರಯೌವನ ಪಡೆಯುವುದೇ ಆಗಿದೆ.
ಮಾಹಿತಿ: ಪುಸ್ತಕ – ಹಾಲಕ್ಕಿ ಒಕ್ಕಲಿಗರು, ಒಂದು ಸಾಂಸ್ಕೃತಿಕ ಅಧ್ಯಯನ. ಸಂಪಾದಕರು – ಡಾ. ಎನ್. ಆರ್. ನಾಯಕ (ರಾಜ್ಯ ಪ್ರಶಸ್ತಿ ಪುರಸ್ಕೃತ ಲೆಕಖ)
ಫೋಟೋ: ಪ್ರಮೋದ್ ಗೌಡ, ಬೆಳಸೆ, ಅಂಕೋಲಾ
ವಿಡಿಯೋ: ವಿವೇಸ್ ViWays


Leave a Reply