ಇಂದು ಮಾನವ ತಾನು ಆಚರಿಸುತ್ತಿರುವ ಹಬ್ಬಗಳ, ಸಂಪ್ರದಾಯಗಳ ಆಚರಣೆಗಳ ಹಿನ್ನಲೆಯನ್ನು ತಾತ್ವಿಕವಾಗಿ ಮರೆಯುತ್ತಿರುವುದು ವಿಷಾದನೀಯವಾಗಿದೆ. ನಮ್ಮ ನಾಡಿನ ಪ್ರತಿಯೊಂದು ಹಬ್ಬಗಳ ಸಂಪ್ರದಾಯಗಳ ಆಚರಣೆಯ ಆಚಾರ ವಿಚಾರಗಳ ಬಗ್ಗೆ ಮಹತ್ವಪೂರ್ಣವಾದ ಹಿನ್ನಲೆಯು ಇದೆ. ಅಷ್ಟೇ ಅಲ್ಲದೇ ಅವುಗಳು ನಮ್ಮ ನಾಡಿನ ಸಾಂಸ್ಕೃತಿಕ ಸೊಬಗಿನ ಪರಂಪರೆಯನ್ನು ಸಾರುತ್ತಲೇ ಸಾಗಿದೆ. ಹಬ್ಬ-ಹುಣ್ಣಿಮೆ ಆಚರಿಸುವುದು ಬರೀ ಮೂಢನಂಬಿಕೆ ಅಲ್ಲ. ಇದರಲ್ಲಿ ವೈಜ್ಞಾನಿಕತೆಯಿದೆ. ವಿಚಾರವಂತಿಕೆ, ಮಡಿವಂತಿಕೆ ಇದೆ. ಆನಂದ ಖುಷಿ ಸಂತಸವಾಗಿ ಬಾಳಬೇಕಾಗಿರುವುದು ನಮ್ಮ ಬದುಕಿನ ಉದ್ದೇಶವಾಗಿರುತ್ತದೆ. ಈ ಆನಂದವು ನಮಗೆ ಸುಕಾ ಸುಮ್ಮನೆ ಸಿಗುವುದಿಲ್ಲ. ಇದನ್ನು ವಸ್ತುಗಳಂತೆ ಅಂಗಡಿಯಲ್ಲಿ, ಪೇಟೆಗಳಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಇದಕ್ಕಾಗಿ ಮಾನವನು ಸನ್ನಿವೇಶವನ್ನು ತಾನೇ ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಕಂಡು-ಕೊಂಡ ಮಾರ್ಗವೆಂದರೆ ಹಬ್ಬಗಳು, ಆಚರಣೆಗಳು, ಸಮಾರಂಭಗಳು ಎನ್ನುವುದನ್ನು ನಾವಿಂದು ಮರೆತಂತೆ ಕಾಣುತ್ತದೆ. ಮಾನವ ಆರೋಗ್ಯವಂತನಾಗಿರಲು ಈ ಆಚರಣೆ, ಹಬ್ಬಗಳು, ಸಮಾರಂಭಗಳ ನಮಗೆ ತೀರಾ ಅಗತ್ಯವು, ಸಹಕಾರಿಯು ಆಗಿದೆ ಅಲ್ಲವೇ?
ಮಾನವರು ಆರೋಗ್ಯವಂತನಾಗಿರಲು ಈ ಆಚರಣೆಯಿಂದ ಮಾನಸಿಕ ಒತ್ತಡ ನಿವಾರಣೆ ಜೊತೆಗೆ ನಾವು ಮಾಡುವ ಸಂಪ್ರದಾಯಗಳು, ಪೂಜೆ, ವಿಶೇಷ ತಿಂಡಿ, ಸೊಗಸಾದ ಭೋಜನ, ಹೊಸ ಹೊಸ ಬಟ್ಟೆ ಧರಿಸುವುದು, ಬಂಧುಬಳಗದ ಆಗಮನ ಇವೆಲ್ಲ ಹಬ್ಬದ ಸಂದರ್ಭಗಳಲ್ಲಿ. ಆಚರಣೆಯ ಕಾಲದಲ್ಲಿ, ಸಮಾರಂಭಗಳ ಸಮಯದಲ್ಲಿ, ಮನೆಯಲ್ಲಿ ಸಂತಸದ ಕ್ಷಣಗಳು ನಿರ್ಮಾಣಮಾಡುತ್ತವೆ. ಹಿರಿಯರು, ಕಿರಿಯರು, ಹೆಂಗಸರು-ಗಂಡಸರು, ಮಕ್ಕಳು ಎಲ್ಲ ವರ್ಗದ ಜನರು ಸಂತಸವನ್ನು ಅನುಭವಿಸುತ್ತಾರೆ. ತಮ್ಮತಮ್ಮಲ್ಲಿ ಕಷ್ಟದ ಕ್ಷಣಗಳನ್ನು, ನೋವುಗಳನ್ನು ಮರೆಯುತ್ತಾರೆ. ಆನಂದದ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತ, ಊಟ-ಕೂಟವೆಲ್ಲದರಲ್ಲಿ ಕ್ಷಣ ಕ್ಷಣವೂ ಹಂಚಿಕೊಳ್ಳುತ್ತಾರೆ. ಇದರಿಂದ ಆನಂದ, ಆರೋಗ್ಯ, ಮನೋವೈಜ್ಞಾನಿಕ ಸಂತಸ ಕ್ಷಣದ ಬದಲಾವಣೆಗಳು ನಡೆಯುತ್ತಲೇ ಸಾಗುತ್ತದೆ. ಜಾತಿ, ಧರ್ಮ, ವರ್ಣ, ವರ್ಗ, ಪಕ್ಷ, ಪಂಗಡ, ಭಾಷೆ ಹೀಗೆ ಭಿನ್ನತೆಯಿಂದ ಕೂಡಿರುತ್ತದೆ. ಜಗಳ, ಸೇಡು-ಪ್ರತಿಸೇಡಿಗೆ, ನೋವು-ಸಾವಿಗೆ, ಅವಕಾಶ ಮಾಡದೆ ಪ್ರಜೆಗಳಲ್ಲಿ ಸಾಮರಸ್ಯ ಮೂಡಿಸಿ ಪ್ರೀತಿ ಸೌಹಾರ್ದತೆಯಿಂದ ಬಾಳುವಂತೆ ಕ್ಷೇಮಕರ ವಾತಾವರಣವನ್ನು ದೇಶದಲ್ಲಿ ನಿರ್ಮಾಣ ಮಾಡುವ ಜೊತೆಗೆ ಪ್ರಜಾಪ್ರತಿನಿಧಿ ಹೊಣೆಗಾರಿಕೆಯಿಂದ ಪ್ರಜೆಗಳ ಕ್ಷೇಮಕ್ಕಾಗಿ, ಒಳಿತಿಗಾಗಿ ಅಧಿಕಾರವನ್ನು ನಿರ್ವಹಿಸಬೇಕು. ಕಾನೂನು ಪಾಲಿಸಬೇಕು ಎನ್ನುವ ಒಳನೋಟದ ವಿಚಾರಗಳು ಅಡಕವಾಗಿದೆ. ಇದು ಪ್ರಜಾಪತಿ, ಪ್ರಜೆಗಳ ಒಡೆಯ ಗಣಪತಿ ಹಬ್ಬದ ಆಚರಣೆಯ ಒಳನೋಟದ ಮಹತ್ವವಾಗಿದೆ. ತಂದೆ-ತಾಯಿಗಿಂತ ಯಾವ ದೇವರೂ ಹೆಚ್ಚಲ್ಲ ಎಂಬ ತತ್ವವನ್ನು ಗಣೇಶ ನಮಗೆ ತಿಳಿಸಿಕೊಟ್ಟದ್ದಾನೆ. ಅದಲ್ಲದೇ ಮಹಾಭಾರತದ ಬರವಣಿಗೆಯಲ್ಲಿ ಲಿಪಿಕಾರನಾಗಿ ವೇದವ್ಯಾಸರು ಗಣೇಶನನ್ನು ಆಯ್ಕೆ ಮಾಡಿಕೊಂಡು ನಾನು ಬರೆಯುವ ವೇಗದಲ್ಲಿ ನೀನು ಶ್ಲೋಕವನ್ನು ಹೇಳಬೇಕು ಎಂದಾಗ ವೇದವ್ಯಾಸರು ನಾನು ಹೇಳುವುದನ್ನು ಅರ್ಥಮಾಡಿಕೊಂಡು ಬರೆಯಬೇಕು ಎನ್ನುತ್ತಾರೆ. ಇಲ್ಲಿ ನಾವು ಇಂದು ವಿದ್ಯಾರ್ಥಿಗಳಲ್ಲಿ ಇದನ್ನೇ ಅರಿಯಬೇಕಾಗಿದೆ.
ತಾವೇನು ಬರೆಯುತ್ತೇವೆ ಎನ್ನುವುದನ್ನು ಅರಿಯದೇ ಒಟ್ಟಾರೆಯಾಗಿ ಇಂದಿನ ಮಕ್ಕಳು ಶಾಲೆಯಲ್ಲಿ ಬರೆಯುವುದನ್ನು ನಾವು ಕಾಣುತ್ತಿದ್ದೇವೆ. ಬರವಣಿಗೆಯು “ಮೈಂಡರೈಟಿಂಗ್” ಆಗಿರಬೇಕು ಎನ್ನುವ ಅರಿವನ್ನು ಗಣಪತಿಯ ಲಿಪಿಕಾರಿಕೆ ಇಂದು ನಮಗೆಲ್ಲ ಸಾಕ್ಷಿಯಾಗಿದೆ ಅಲ್ಲವೇ?
ಗಣೇಶನನ್ನು ಕಾಡಲು ಬಂದ ಶನಿದೇವನಿಗೆ ನಿಲ್ಲಿಸಿ ಗಣೇಶನಿತ್ತ ಉಪಚಾರ ಮನ್ನಣೆ ನೀಡಿದ ಮೇಲೆ ಕಾಡಲು ಬಂದ ಶನಿದೇವನಿಗೆ ತನ್ನ ಉದ್ದೇಶವನ್ನು ತಿಳಿಸಿದ. ಅಲ್ಲದೇ ಎಲ್ಲರೂ ನನ್ನನ್ನು ಕಾಣಲು ನೋಡಲು ಹೆದರುತ್ತಾರೆ ಈ ಲೋಕದಲ್ಲಿ ನನ್ನನ್ನು ಎಲ್ಲರೂ ಕಾಡುವ ಶನಿ ಪೀಡಿಸಲು ಬಂದ ಎಂದು ಕಾಣುವಾಗ ನಾ ಬಂದರೆ ದೂರವಾಗುತ್ತಾರೆ. ಎಲ್ಲರೂ ನನ್ನನ್ನು ಹೀಯಾಳಿಸಿತ್ತಾರೆ, ಜರಿಯುತ್ತಾರೆ. ಹೀಗಿರುವಾಗ ಕಾಡಲು ಬಂದ ನನಗೆ ಉಪಚಾರವಿತ್ತು ಗೌರವಿಸಿ ನಿನ್ನಿಂದ ನನ್ನ ವರ್ತನೆಯನ್ನು ಬದಲಾಯಿಸಿಕೊಂಡು ನಾನು ಸಂತುಷ್ಣನಾಗಿದ್ದೇನೆ ಎನ್ನುತ್ತಾನೆ ಶನಿದೇವ. ನಿನ್ನ ಭಕ್ತರೆ ನನ್ನ ಭಕ್ತರು. ಅವರನ್ನೆಲ್ಲ ಪೀಡಿಸಲಾರೆ ಎಂದು ಶನಿದೇವ ತನ್ನ ಮನ:ಪರಿವರ್ತಿತನಾಗಿ ತೆರಳುತ್ತಾನೆ. ಈ ಸಂದೇಶವನ್ನು ನಾವಿಂದು ಅರಿಯಬೇಕಾಗಿದೆ. ನಿಜಕ್ಕೂ ಸಂಸ್ಕಾರಗಳು, ನಮ್ಮ ಆಚಾರ-ವಿಚಾರಗಳು ಸನ್ಮಾಮಾರ್ಗಯುತವಾಗಿ ಇದ್ದರೆ ಎಂಥ ಕಲ್ಲು ಹೃದಯವನ್ನಾದರೂಕರಗಿಸಬಲ್ಲದು ಎಂದು ನಾವಿಂದು ಅರಿಯಬೇಕಾಗಿದೆ.
ದುಷ್ಟಬುದ್ಧಿಯ ಜನರಲ್ಲೂ ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ನಾವು ಹುಡುಕಿ ಗಣೇಶನ ಹಾಗೆ ಪರಿವರ್ತಿಸಲು ಸಾಧ್ಯ ಎನ್ನುವುದು ನಮ್ಮ ಜನತೆ ಇಂದು ಅರಿಯಬೇಕಾಗಿದೆ ಅಲ್ಲವೇ? ನಾವಿಂದು. ಹೀಗೆ ಹಬ್ಬ, ಆಚರಣೆ, ಸಂಸ್ಕಾರಗಳು, ಮೌಲ್ಯಗಳು, ತಿಳಿದರೆ ನಮ್ಮ ಬಾಳು ಪಾವನವಾದೀತು ಅಲ್ಲವೇ ಶಿವ-ಪಾರ್ವತಿಯರ ಮಗನಾದ ಗಣೇಶನ ಜನನವು ಮಣ್ಣುಂಡೆಯಿಂದ (ಬೆವರಿನಿಂ) ಜನಿಸಿದ ಇವನಲ್ಲಿ ಆನೆಯ ಶಿರವನ್ನು ನೀಡಿ ಗಣೇಶ ಎಂದು ನಾಮಾಂಕಿತಗೊಳಿಸಲಾಯಿತು. ಈ ಕಥೆ ಎಲ್ಲರಿಗೂ ತಿಳಿದ ವಿಚಾರ. ಇದರಿಂದ ನಾವಿಂದು ಅರಿಯಬೇಕಾದ ವಿಚಾರ ಮಗುವಿನ ಸಂಸ್ಕಾರಯುತ ಜನನದಲ್ಲಿ ತಂದೆ-ತಾಯಿಗಳ ಪಾತ್ರವು ಪ್ರಮುಖ ಎನ್ನುವ ಕಾರಣವನ್ನು ಲೋಕಕ್ಕೆ ಸಾರಬೇಕಾಗಿದೆ. ಮಾನವರಾದ ನಾವಿಂದು ಇವುಗಳನ್ನೆಲ್ಲ ಸೂಕ್ಷ್ಮವಾಗಿ ಅರಿತು ನಮ್ಮ ಬಾಳಿನ ಬದುಕಿನಲ್ಲಿ ರೂಪಿಸಿಕೊಳ್ಳುವುದನ್ನು ಇಂದಿನ ಆಧುನಿಕ ಸಮಾಜದ ಜನತೆ ಮರೆತಂತೆ ಕಾಣುತ್ತಿದೆ. ನಮ್ಮ ಸಂಸ್ಕಾರ ರಚನೆಗೆ ಇವೆಲ್ಲವೂ ದೀಪ್ತಿಯಾದೀತು ಎನ್ನುವ ಸಂಗತಿಯನ್ನು ಮರೆಮಾಚುವಂತಿಲ್ಲ ಅಲ್ಲವೇ?
ಲೇಖಕರು: ಚಂದ್ರಶೇಖರ ಪಡುವಣಿ,
ತೆಂಗಿನಗುಂಡಿ, ಭಟ್ಕಳ.


Leave a Reply