ಅಜ್ಜಿ ಹಬ್ಬ, ಭಟ್ಕಳದಲ್ಲಿನ ವಿಶೇಷ ಆಚರಣೆ

Posted by

·

ಅಜ್ಜಿಯು ಬುಡಕಟ್ಟು ಜನರ ಒಬ್ಬಳು ಕಾಲ್ಬನಿಕ ದೇವರು. ಅಜ್ಜಿ ಆರಾಧನೆಯು ಭಟ್ಕಳದಿಂದ ದಕ್ಷಿಣಕ್ಕೆ ಗಂಗಾವಳಿಯ ವರೆಗೂ ಕಂಡುಬರುತ್ತವೆ. ತುಳು ನಾಡಿನಲ್ಲಿಯೂ ಈ ಆಚರಣೆ ಇದ್ದಿರಬಹುದು. ಈ ಹಬ್ಬದ ಆರಾಧನೆಯಲ್ಲಿ ಬಳಸಲಾಗುವ ಒಂದು ಸಸ್ಯವನ್ನು ಅಜ್ಜಿ ಕುಡಿ ಎನ್ನುತ್ತಾರೆ. ಆದ್ದರಿಂದ ಅಜ್ಜಿ ತರುವ ಹಬ್ಬ ವನ್ನು ಅಜ್ಜಿ ಕುಡಿ ಹಬ್ಬವೆಂತಲೂ ಕರೆಯುತ್ತಾರೆ ಇದನ್ನು ಶ್ರಾವಣ ಮಾಸದಲ್ಲಿ ಹೊಸ್ತಿಲ ಪೂಜೆಗೆ ಬಳಸುವ ಕಾರಣ ಇದಕ್ಕೆ ಶ್ರಾವಣ ಕುಡಿ, ಸೋಣೆ ಕುಡಿ ಎಂಬ ಹೆಸರುಗಳು ಕರಾವಳಿಯ ಹಲವು ಕಡೆ ರೂಢಿಯಲ್ಲಿವೆ. ಶಾಲೆಯ ಮಕ್ಕಳು ಇದರ ಎಲೆ ಹೂಗಳನ್ನು ಹೊರತೆಗೆದು ದೇಟನ್ನು ಸಂಗ್ರಹಿಸಿ ತಮ್ಮ ಪಾಟಿಯಲ್ಲಿಯ ಬರೆಹವನ್ನು ಉಜ್ಜಿ ತೆಗೆಯಲು ಬಳಸುತ್ತಿದ್ದರು. ಇದರಲ್ಲಿಯ ನೀರಿನಂಶ ಒರೆಸುವ ಕೆಲಸಕ್ಕೆ ಅನುಕೂಲಿಸುತ್ತಿತ್ತು.

ಹಬ್ಬದ ದಿನ ಮನೆಯನ್ನು ಸಾರಿಸಿ ಅಲ್ಲಿ “ಅಜ್ಜಿ ಹೆಜ್ಜೆ’ ಎಂಬ ವಿಶೇಷ ಶೇಡಿ ಬರೆಯುತ್ತಾರೆ. ಮನೆಯ ಹೊರಗಿನಿಂದ ಮನೆಯ ಒಳಗಿನವರೆಗೆ ಅಜ್ಜಿಯ ಹೆಜ್ಜೆಯನ್ನು ಶೇಡಿಯಲ್ಲಿ ಮೂಡಿಸುತ್ತಾರೆ. ಇದು ಅಜ್ಜಿಯು ಮನೆಗೆ ಬಂದಿರುವ ಸಂಕೇತ. ಹೊಸ್ತಿಲ ಮೇಲೆ ಶೇಡಿ ಬರೆದು ಅಲ್ಲಿ ಅಜ್ಜಿ ಕುಡಿ ಹಾಗು ಹೂ ಇಟ್ಟು ನಮಸ್ಕರಿಸುತ್ತಾರೆ. ಈ ಆಚರಣೆಯನ್ನು ಭಟ್ಕಳದ ಗೊಂಡರು ಶ್ರಾವಣಮಾಸದ ಪ್ರತಿ ಸೋಮವಾರ, ಶನಿವಾರ ಅಥವಾ ಪ್ರತಿದಿನ ನಡೆಸುತ್ತಾರೆ. ಈ ಕ್ರಮ ಮುಂದಿನ ತಿಂಗಳ ಸಂಕ್ರಾಂತಿಯವರೆಗೂ ನಡೆಯುತ್ತದೆ. ಅಜ್ಜಿಯು ಮನೆಗೆ ಬಂದು ಒಂದು ತಿಂಗಳು ಸಮೀಪಿಸುತ್ತಲೆ ಆ ತಿಂಗಳ ಸಂಕ್ರಾಂತಿಯ ಮುಂಚೆಯೆ ಒಂದು ಶನಿವಾರ ಅಜ್ಜಿ ಕಳಿಸುವ ಆಚರಣೆ ನಡೆಯುತ್ತದೆ. ಆ ದಿನ ಶನಿವಾರದ ಇತರ ಆಚರಣೆಗಳು ನಡೆಯುವದಿಲ್ಲ.

ಟಿಪ್ಪಣೆ:
ಶ್ರಾವಣ ಕುಡಿ – ಒಂದು ಬಗೆಯ ನೀರ ಸಸ್ಯ.
ಶೇಡಿ – ರಂಗೋಲಿ ಬರೆಯುವ ಜೇಡಿಮಣ್ಣು.
ಅಜ್ಜಿ- ದೇವರು.
ಹೊಸ್ತಿಲಜ್ಜಿ- ಹೊಸ್ತಿಲ ದೇವರು.

ಮಾಹಿತಿ: ಡಾ|| ಶಾಂತಿ ನಾಯಕ
ಮೂಲ: “ಸೊಪ್ಪೊಡತಿ” ಕೃತಿ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading