ಗೋವಿನಹಬ್ಬ – ದೀಪಾವಳಿ

Posted by

·

ದೀಪಾವಳಿ ಗೋ ಪೂಜೆ

ದೀಪಾವಳಿ ಹಬ್ಬವು ಸುಖ ಸಂಪತ್ತಿನ ಅಧಿನಾಯಕಿ ಲಕ್ಷ್ಮಿ ದೇವಿಯ ಆರಾಧನೆ, ವಿದ್ಯುತ್ ದೀಪ, ಪಟಾಕಿಗಳ ಶಭ್ದಗಳಿಂದ ಕೂಡಿದ ವಿಜ್ರಂಭಣೆಯ ಹಬ್ಬ ಅಷ್ಟೇ ಅಲ್ಲದೇ ಇದು ರೈತ ಮತ್ತು ಗೋಮಾತೆಯ ನಡುವಿನ ಸಂಬಂಧವನ್ನು ಸಾರುವ ಮತ್ತು ಪ್ರೀತಿಯನ್ನು ಇನ್ನಷ್ಟು ಗಟ್ಟಿ ಮಾಡುವ ಹಬ್ಬವಾಗಿದೆ.

ಕೊಟ್ಟಿಗೆ (ಹಟ್ಟಿ)ಯನ್ನು ಸಿಂಗರಿಸಿರುವುದು
ಕೊರಳಿಗೆ ಚವಲ ಕಟ್ಟುತ್ತಿರುವುದು
ದನ ಬಿಡುವ ಸಂಪ್ರದಾಯ

ದನಕರುಗಳೇ ರೈತರ ಬದುಕಿಗೆ ಆಧಾರ. ಜೀವನ ಪೂರ್ತಿ ಒಕ್ಕಲಿಗನಿಗಾಗಿ ದುಡಿಯುವ ಎತ್ತು ಆತನಿಗೆ ಸಾಕ್ಷಾತ್ ಬಸವಣ್ಣ, ಹಾಲು ಹೈನದ ಧಾರೆಯೆರೆಯುವ ಆಕಳು ಗೋಮಾತೆ. ಈ ಗೋಜಾತಿಯನ್ನು ಬಡಿಯುವುದು ಪಾಪ, ಅವನ್ನು ಕೊಂದ ಪಾಪವು “ಹುಟ್ಟೇಳು ಜನುಮಕುತಪ್ಪದು” (ಹಾಲಕ್ಕಿ ಒಕ್ಕಲಿಗರ ನಂಬಿಕೆ) ಎಂಬ ನಂಬಿಕೆ ಅವರದ್ದು. ಪೂಜ್ಯ ಗೋಮಾತೆಯನ್ನು ಬಲಿಪಾಡ್ಯದಂದು ಪೂಜಿಸಿ, ಗೋವಿನ (ಹಟ್ಟಿಯ) ಹಬ್ಬವನ್ನು ಆಚರಿಸುತ್ತಾರೆ. ಅಂದು ಕೊಟ್ಟಿಗೆ ಸ್ವಚ್ಛಮಾಡಿ, ದನದ ಕೊರಳಿಗೆ ಹೊಸ ‘ದಾಬು’ ಹಾಕಿ, ಹೂಮಾಲೆ ರೊಟ್ಟಿಪೊಟ್ಟಣ ಕಟ್ಟುತ್ತಾರೆ. ಕೋಡು ಮೂಡಿದ ದನಗಳ ಕೊಂಬಿಗೆ ಬಣ್ಣ ಬಳಿಯುತ್ತಾರೆ. ಮದಿಸಿದ ಎತ್ತುಗಳ ಕೊರಳಿಗೆ ಗಂಟೆಸರ, ಕೋಡುಗಳಿಗೆ ಚವಲ ಕಟ್ಟುತ್ತಾರೆ. ಒಂದು ಆಕಳ ಕೊರಳಿಗೆ ಬಲೀಂದ್ರನ ಕಾಯಿ ಕಡಿ ಕಟ್ಟುತ್ತಾರೆ. ಬಲೀಂದ್ರನ ತೀರ್ಥದಿಂದ ತಯಾರಿಸಿದ ಬಿಳಿ ಹಾಗೂ ಕೆಂಪು ಮಂಗಲ ನೀರನ್ನು ಹರಿವಾಣದಲ್ಲಿ ತುಂಬಿಕೊಂಡು, ಸಿದ್ದೆಯ ಬಾಯನ್ನು ಮಂಗಲ ನೀರಿನಲ್ಲಿ ಅದ್ದಿ ಎಲ್ಲ ದನಕರುಗಳ ಮೇಲೆ ಮುದ್ರೆ ಒತ್ತತ್ತಾರೆ. ದನಗಳನ್ನು ಪೂಜಿಸಿ ಗೋಗ್ರಾಸ ಕೊಡುತ್ತಾರೆ. ಆಮೇಲೆ ದನಗಳ ಕಣ್ಣಿಬಿಚ್ಚಿ ಹೊರಗೆ ಅಟ್ಟಿ, ಗಂಟಿ ‘ದೆಮ್‌ಟೆ’ಗಳನ್ನು ಬಡಿದು ದನಗಳನ್ನು ಬೆಚ್ಚಿಸಿ ಓಡಿಸುತ್ತಾರೆ. ಯುವಕರು ಮದಿಸಿದ ಎತ್ತುಗಳ ಚವಲ, ರೊಟ್ಟಿಪೊಟ್ಟಣ, ಕಾಯಿ ಕಡಿ ಹರಿಯಲು ಮೇಲಾಟ ನಡೆಸುತ್ತಾರೆ. ಈ ಹಬ್ಬವನ್ನು ಚಂದಾವರ ಸೀಮೆಯಲ್ಲಿ (ಹೊನ್ನಾವರ) ಕಾರ್ತಿಕ ಹುಣ್ಣಿಮೆಗೆ ಆಚರಿಸಿ, ಹಬ್ಬಕ್ಕೆ ‘ಗಂಟಿ ಹುಣ್ಣಿಮೆ’ಯೆಂದು ಕರೆಯುತ್ತಾರೆ.

ಫೋಟೋ ಮತ್ತು ವಿಡಿಯೋ ಕ್ರಪೆ: ಉತ್ತರಕನ್ನಡ ಗೌಡ್ರಮಕ್ಳು (ಇನ್ಸ್ಟಾಗ್ರಾಮ್ ಪೇಜ್)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading