ತುಳಸಿ ಹಬ್ಬ, ಉತ್ತರ ಕನ್ನಡದ ಪವಿತ್ರ ಹಬ್ಬ.

Posted by

·

ತುಳಸಿ ಪುಜೆಯು ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಮತ್ತು ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇಲ್ಲಿನ ಆಚರಣೆ ಕರ್ನಾಟಕದ ಇತರೆ ಭಾಗಗಳಿಗಿಂತ ವಿಭಿನ್ನವಾಗಿದೆ. ಇದು ಉತ್ತರ ಕನ್ನಡಿಗರ ಅತೀ ನೆಚ್ಚಿನ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಸಮುದಾಯದ ಎಲ್ಲಾ ಭಾಂದವರು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುತ್ತಾರೆ. ಹಾಲಕ್ಕಿ ಒಕ್ಕಲಿಗರಿಗೆ ಇದು ಅತ್ಯಂತ ಪ್ರಿಯ ಮತ್ತು ಪವಿತ್ರ ಹಬ್ಬವಾಗಿದೆ.

ತುಳಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರಾದನುತೇ ನಾರಾಯಣ ಮನಃಪ್ರಿಯೇ||

ಹಿಂದೂಗಳಿಗೆ ತುಲಸಿ ಕೇವಲ ಸಸ್ಯವಲ್ಲ, ದೇವಸದನ, ತುಳಸಿಯಲ್ಲಿ ವೆಂಕಟರಮಣನಿರುವನೆಂಬ ನಂಬಿಕೆಯಿಂದ ಹಾಲಕ್ಕಿ ಒಕ್ಕಲಿಗರು ಮನೆ ಮುಂದೆ ತುಲಸಿ ಪ್ರತಿಷ್ಠಾಪಿಸಿ, ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಊಟದ ಮೊದಲು ತುಲಸಿಯನ್ನು ಪೂಜಿಸುತ್ತಾರೆ. ಪ್ರತಿ ಶನಿವಾರ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅವರಿಗೆ ತುಳಸಿ ಕಣ್ಣ ಮುಂದಿನ ಕೈಲಾಸ…

ತುಳಸಿ ಮನೆಯನ್ನು ಸಿಂಗರಿಸಿರುವುದು
ಶ್ರೀ ತುಳಸಿ ವೆಂಕಟೇಶ್ವರ

*ತುಳಸಿಯ ಕುರಿತು ಹಾಲಕ್ಕಿ ಒಕ್ಕಲಿಗರ ಹಾಡು*

ತೊಳಶ್ಯಮ್ಮನ ಮನಿಯಾ ನೋಡುವ ಬನ್ನೀರೋ
ಮನೆಯು ಮಾಬುಲದ ಪುರದಂಗೆ। ತೊಳಶ್ಯಮ್ಮ
ಮಾತೇ ಮಲ್ಲುಗಿಯ ಮೊಕೆಯಂಗೋ। ತೊಳುಶ್ಶಮ್ನ
ನೀತಿ ಶಂಪುಗಿಯ ಎಶೂಳಂಗೋ

ತುಳಸಿ ಹಾಲಕ್ಕಿ ಒಕ್ಕಲಿಗರಿಗೆ ಪವಿತ್ರ ದೇವತೆ. ಅವಳ ಮಾತು, ನೀತಿ, ಮಲ್ಲಿಗೆ, ಸಂಪಿಗೆಯಂತೆಯೆಂದು ಬಣ್ಣಿಸಿದ ಅವರ ಪ್ರತಿಭೆ ನವುರಾಗಿದೆ.

ಹಾಲಕ್ಕಿ ಒಕ್ಕಲಿಗರ ಎಲ್ಲ ಮಂಗಲ ಕಾರ್ಯ ಹಾಗೂ ಕಲಾ ಪ್ರದರ್ಶನಗಳ ಕೇಂದ್ರಸ್ಥಾನ ತುಳಸಿ, ಕಾರ್ತಿಕ ಶುದ್ಧ ದ್ವಾದಶಿಯಿಂದ ಹುಣ್ಣಿಮೆಯವರೆಗೆ ತುಳಸಿಯ ಅಯನವನ್ನು ಮಾಡುತ್ತಾರೆ. ಅಂದು ತುಳಸಿ ಹಾಗೂ ವೆಂಕಟರಮಣನ ಮದುವೆಯಾಗುತ್ತದೆಯೆಂಬ ನಂಬಿಕೆ ಅವರದು. ಅಂದು ತುಳಸಿ ಮನೆಯ ಅವಾರವನ್ನು ಸ್ವಚ್ಛಗೊಳಿಸಿ, ಸಾರಿಸಿ ಸೇಡಿ ಬರೆದು ತುಳಸಿಯ ಸುತ್ತಲು ಕಬ್ಬು ನಿಲ್ಲಿಸಿ, ಹೂಮಾಲೆಗಳಿಂದ ಸಿಂಗರಿಸಿ, ತುಳಸಿಯ ಬೃಂದಾವನದಲ್ಲಿ ನೆಲ್ಲಿಕಾಯಿ ಹಾಗೂ ಹುಣಸೆಯ ಕಾಯಿಗಳನ್ನಿಡುತ್ತಾರೆ. ಬಾಳೆಯ ಹಂಬೆಯ ಮಂಟಪ, ಕಟ್ಟುತ್ತಾರೆ. ರಾತ್ರಿಯೂಟದ ಮೊದಲು ಕೊಪ್ಪದ ಜನರೆಲ್ಲಾ ನೆರೆದು ತುಳಸಿಯ ಸುತ್ತಲು ಹಣತೆಯ ದೀಪಗಳನ್ನು ಹಚ್ಚಿ. ಬಿರುಸು ಬಾಣಗಳನ್ನು ಸುಟ್ಟು, ತುಳಸಿ ಅಯನ ಆಚರಿಸುತ್ತಾರೆ. ಮನೆಯ ಯಜಮಾನ ತುಳಸಿಯನ್ನು ಪೂಜಿಸುವಾಗ, ಗೋಯ್ದ (ಗೋವಿಂದ) ಎಂದ ಕೂಡಲೇ ನೆರೆದವರೆಲ್ಲ ‘ಗೋಯ್ದ’ ಎಂದು ಗೋವಿಂದನನ್ನು ತುಳಸಿಯ ಮದುವೆಗೆ ಕರೆಯುತ್ತಾರೆ. ಕೊಪ್ಪದ ಎಲ್ಲ ಮನೆಯ ಪೂಜಾ ಕಾರ್ಯಕ್ರಮ ನಡೆದ ಮೇಲೆ ರಾತ್ರಿ ಮನೆಯ ಅಂಗಳದಲ್ಲಿ ಬೆಳದಿಂಗಳ ಊಟವನ್ನು ಮುಗಿಸಿ, ರಾತ್ರಿ ಗೌಡನ ಮನೆಯಂಗಳದಲ್ಲಿ ನೆರೆದು ‘ಗುಮಟೆಯ ಪದ’ ಹಾಡಿ ಖುಷಿಪಡುತ್ತಾರೆ.

ತುಳಸಿ ಕಟ್ಟೆಯನ್ನು ಕಬ್ಬು ಮತ್ತು ಬಾಳೆ ದಿಂಡಿನಿಂದ ಅಲಂಕರಿಸಿರುವುದು

Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading