ಪ್ರಕೃತಿ ಮಾತೆಯ ಅದೆಷ್ಟೋ ಸೋಜಿಗಗಳು ಮಾನವನ ಕುತೂಹಲಗಳಿಗೆ ಕಾರಣವಾಗಿದೆ. ಪ್ರಕೃತಿಯ ಕೈಗಳಿಂದ ಕೆತ್ತಲ್ಪಟ್ಟ ಕೆಲವು ಶಿಲೆಗಳು ಮಾನವನ ಕಲ್ಪನೆಗೆ ನಿಲುಕದ್ದು. ಕಡಿದಾದ ಕಪ್ಪು ಕಲ್ಲಿನಿಂದ ರೂಪಗೊಂಡ ಎತ್ತರದ ಶಿಖರ ನಮ್ಮ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ, ಅದುವೇ ನಮ್ಮ ಯಾಣ. ಯಾಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿದೆ. ಹಚ್ಚ ಹಸಿರಿನ ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ದಟ್ಟವಾದ ಕಲ್ಲು ಬಂಡೆಯ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ ಯಾಣ. ಯಾಣದ ಪ್ರಮುಖ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಇದು ಶಿರಸಿಯಿಂದ ೪೫ ಕಿ.ಮೀ. ಹಾಗೂ ಕುಮಟಾದಿಂದ ೩೧ ಕಿ.ಮೀ. ದೂರದಲ್ಲಿದೆ.

ಮುಗಿಲನ್ನೇ ಚುಂಬಿಸುವಂತೆ ಕಾಣುವ ಯಾಣದ ಶಿಖರವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀ. ಎತ್ತರವಾಗಿದ್ದು ಸುಮಾರು ಅಷ್ಟೇ ಅಗಲವಾದ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಾರವಿದೆ. ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವರ ಲಿಂಗ ಎರಡು ಮೀ. ಎತ್ತರವಾಗಿದೆ. ಲಿಂಗದ ಮೇಲೆ ಸದಾ ಕಾಲ ನೀರು ಒಸರುತ್ತಿರುತ್ತದೆ. ಭೈರವೇಶ್ವರ ಮತ್ತು ಮೋಹಿನಿ ಶಿಖರವು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀ. ಎತ್ತರವಾಗಿದೆ. ಮೋಹಿನಿ ಶಿಖರವು ೯೦ ಮೀ. ಎತ್ತರವಿದೆ. ಸ್ಕಂದ ಪುರಾಣದಲ್ಲಿ ಯಾಣದ ಕಥೆ ನಿರೂಪಿತವಾಗಿದ್ದು, ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳ ಇದೆಂದು ಪ್ರತೀತಿ ಇದೆ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.

“ರೊಕ್ಕಿದ್ದರೆ ಗೋಕರ್ಣ, ಸೊಕ್ಕಿದ್ದರೆ ಯಾಣ” ಎಂಬ ಮಾತು ಉತ್ತರ ಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಕಾರಣ ಹಿಂದಿನ ಕಾಲದಲ್ಲಿ ಯಾಣಕ್ಕೆ ಯಾತ್ರೆ ಕೈಗೊಳ್ಳುವುದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ರಸ್ತೆ ಆಗಿದೆ. ಕೇವಲ ಒಂದು ಕಿ.ಮೀ. ದೂರವನ್ನಷ್ಷೆ ನಡೆಯಬೇಕಾಗುವದು. ಪ್ರಕೃತಿಯ ಮಡಿಲಿನ ಪ್ರಯಾಣ ವರ್ಣಿಸಲು ಅಸಾಧ್ಯವಾದುದು. ಎತ್ತರ ಗಿಡಗಳ ದಟ್ಟ ವಿಸ್ತಾರವಾದ ಕಾಡು, ಸಮೃದ್ಧವಾದ ಪ್ರದೇಶ ಪ್ರಯಾಣದ ಆಯಾಸವನ್ನು ಮರೆಸಿಬಿಡುತ್ತದೆ.
ಶಿವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರಜಾ ದಿನಗಳಲ್ಲೂ ಪ್ರವಾಸಿಗರು ಯಾಣ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಪ್ರಕೃತಿಯ ಮಡಿಲಿನ ಈ ಶಿಖರವನ್ನೊಮ್ಮೆ ನೋಡಿಯೇ ಕಣ್ತುಂಬಿಕೊಳ್ಳಬೇಕು.
ರಚನೆ: ಅಕ್ಷತಾ ಜಗದೀಶ


Leave a Reply