ಸಹಸ್ರ ಲಿಂಗ ದರ್ಶನ – ಶಿವರಾತ್ರಿ ವಿಶೇಷ

Posted by

·

ಕರ್ನಾಟಕದ ಪಶ್ಚಿಮ ಘಟ್ಟಗಳು ಹಚ್ಚ ಹಸಿರಿನಿಂದ ಕೂಡಿದ, ಕಣ್ಮನ ‌ಸೆಳೆಯುವ ಜಲಪಾತಗಳಿಂದ ಮೈ ತುಂಬಿಕೊಂಡಿರುವಿದಷ್ಷೇ ಅಲ್ಲದೆ, ಹಲವಾರು ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾದ ತಾಣವಾಗಿದೆ. ಅಂತಹ‌ ಧಾರ್ಮಿಕ ಸ್ಥಳಗಳಲ್ಲಿ ಒಂದು‌ “ಸಹಸ್ರಲಿಂಗ” ಎಂಬ‌ ತಾಣ.

“ಸಹಸ್ರಲಿಂಗ” ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಿಂದ ಸುಮಾರು ೧೭ ಕಿ.ಮಿ. ದೂರದಲ್ಲಿರುವ ಒಂದು ಧಾರ್ಮಿಕ ಕ್ಷೇತ್ರ. ಬೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರ ಐತಿಹಾಸಿಕ ಮಹತ್ವವನ್ನು‌ ಹೊಂದಿದ್ದು, ಜನಾಕರ್ಷಣೆಯ ತಾಣವಾಗಿದೆ. ಸಾವಿರಾರು ಶಿವಲಿಂಗಗಳು ಈ ಸ್ಥಳದಲ್ಲಿ ಇರುವುದರಿಂದ ಈ ಸ್ಥಳಕ್ಕೆ ಸಹಸ್ರಲಿಂಗ ಎಂದು ಹೆಸರು ಬಂದಿದೆ.

ಹಿಂದೆ ಸದಾಶಿವರಾಯ ಎಂಬ ಅರಸನು ಶಿರಸಿ ಪ್ರದೇಶದಲ್ಲಿ ೧೬೭೮-೧೭೧೮ ರ ಸಮಯದಲ್ಲಿ ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಶಿವಲಿಂಗಗಳನ್ನು ನಿರ್ಮಾಣ ಮಾಡಿಸಿದ್ದರು ಎನ್ನಲಾಗಿದೆ. ಪರಶಿವನ ಪರಮ ಭಕ್ತನಾಗಿದ್ದ ಈ ದೊರೆ ೧೭ ನೇ ಶತಮಾನದಲ್ಲಿ ಶಾಲ್ಮಲಾ ನದಿಯ ತಟದಲ್ಲಿ ಶಿವನ ಕೈಲಾಸವನ್ನೇ ನಿರ್ಮಿಸಿದ್ದಾರೆ. ಎಲ್ಲಿ ನೋಡಿದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗ ಹಾಗೂ ನಂದಿಯ‌ ಕೆತ್ತನೆ‌ ಕಂಡುಬರುತ್ತದೆ. ಪ್ರಕೃತಿಯ ಮಡಿಲಲ್ಲಿ ಶಾಲ್ಮಲಾ ನದಿಯ ತಟದಲ್ಲಿ ಕಾಣಸಿಗುವ ಸಹಸ್ರಾರು ಸಂಖ್ಯೆಯ ಶಿವಲಿಂಗ ‌ಕಂಡಾಕ್ಷಣ ಮನದಲ್ಲಿ ಭಕ್ತಿ ಹಾಗೆ ಮೂಡಿಬರುತ್ತದೆ. ಮನಸ್ಸಿಗೆ‌ ಶಾಂತಿ ನೀಡುವ ಈ ತಾಣ ಸುಂದರ ಹಾಗೂ ಅದ್ಬುತ…..!

ಮಹಾ ಶಿವರಾತ್ರಿಯ ಸಂದರ್ಭದಲ್ಲಿ ನಾಡಿನ ಹಲವೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಆ ದಿನ ಪೂಜಾ ಕಾರ್ಯಗಳು ಲಿಂಗದ ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ. ಸುಮಾರು‌ ೫೦೦ ವರ್ಷಗಳಷ್ಟು ಹಳೆಯದಾದ ಈ ಲಿಂಗಗಳಿಗೆ‌ ಶಿವರಾತ್ರಿ ಹಾಗೂ ಸಂಕ್ರಾಂತಿಯ ಸಂದರ್ಭದಲ್ಲಿ ಭಕ್ತಾದಿಗಳಿಂದ ಪೂಜೆ ನೆರವೇರುತ್ತದೆ. ಶಿವಲಿಂಗಗಳು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು, ದೊಡ್ಡ ಗಾತ್ರದ ಹಾಗೂ ಚಿಕ್ಕ ಗಾತ್ರದ ನಂದಿಯ ವಿಗ್ರಹವನ್ನು ಇಲ್ಲಿ ಕಾಣಬಹುದಾಗಿದೆ.

ಆದರೆ ಇತ್ತೀಚೆಗೆ ಇಲ್ಲಿಯ ಶಿವಲಿಂಗಗಳ ಸಂಖ್ಯೆ ಕಡಿಮೆಯಾಗುತ್ತ ಸಾಗಿದೆ. ಕೆಲವು ‌ನೀರಿನ ರಭಸಕ್ಕೆ ಸವೆದು ಹೋಗಿದ್ದರೆ ಇನ್ನೂ ಹಲವು ಕಿಡಿಗೇಡಿ ಪ್ರವಾಸಿಗರು ಮೋಜಿಗಾಗಿ ಕಲ್ಲನ್ನು ಒಡೆದು ಹಾಕಿರುವ ದೂರುಗಳಿವೆ. ಅದೇನೆ ಇರಲಿ ಇಂತಹ ಐತಿಹಾಸಿಕ, ಸುಂದರ‌ ಧಾರ್ಮಿಕ ತಾಣಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಸಹಸ್ರಾರು ಶಿವಲಿಂಗದ ದರ್ಶನ ಪಡೆದು‌ ಪುನೀತರಾಗೋಣ. ಸಹಸ್ರಲಿಂಗ ಎಂಬ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗೋಣ….

✍🏻 ಅಕ್ಷತಾ ಜಗದೀಶ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading