ಕರಾವಳಿ ಪ್ರದೇಶ ಎಂದಾಕ್ಷಣ ನೆನಪಾಗುವುದು ಇಲ್ಲಿಯ ಸುಂದರ ಕಡಲತೀರ, ಸಹ್ಯಾದ್ರಿಯ ಸಾಲುಗಳು, ರುಚಿಕರ ಊಟ, ಜಲಪಾತಗಳು ಮತ್ತು ದೇವಾಲಗಳು. ಆದರೆ ಇವೆಲ್ಲಕ್ಕೂ ಮೀರಿ ನಮ್ಮ ಕರಾವಳಿ ಭಾಗದಲ್ಲಿ ಒಂದು ವಿಶೇಷವಾದ ಕಲೆ ಇದೆ. ಅದುವೇ ‘ಯಕ್ಷಗಾನ’. ಗಂಡುಕಲೆ ಎಂದು ಹೆಸರಾಗಿರುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷವಾಗಿದೆ. ನೃತ್ಯ, ಹಾಡುಗಾರಿಕ, ಮಾತುಗಾರಿಕೆ, ವಿಶೇಷವಾದ ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಇದಾಗಿದ್ದು, ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಯಕ್ಷಗಾನ. ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

ಯಕ್ಷಗಾನ ಎಂಬುದು ಕರಾವಳಿಯ ಅದ್ಭುತ ಕಲೆಗಳಲ್ಲಿ ಒಂದಾಗಿದ್ದು, ಯಕ್ಷಗಾನದ ಮೂಲವಾದ ಕರಾವಳಿ ಪ್ರದೇಶವು ತನ್ನದೇ ಆದ ಆಚಾರ-ವಿಚಾರ, ಕಲೆ-ಸಂಸ್ಕೃತಿ, ಭಾಷೆ ಹೊಂದಿದ್ದು ಸಾಂಪ್ರದಾಯಿಕವಾಗಿ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಮನರಂಜನೆಯ ಮೂಲವಾಗಿ ರೂಪುಗೊಂಡ ಈ ಕಲೆ ಇಂದು ಸಂಸ್ಕೃತಿಯ ಒಂದು ಭಾಗವಾಗಿ ಮಾರ್ಪಟ್ಟಿದೆ. ಇದರಲ್ಲಿ ಪ್ರಮುಖವಾಗಿರುವುದೆಂದರೆ ಪ್ರಸಂಗಗಳು, ವೇಷಭೂಷಣ, ಭಾಗವತಿಕೆ, ಮಾತುಗಾರಿಕೆ, ಕುಣಿತ ಮತ್ತು ಹೀಮ್ಮೇಳ, ಹಾಸ್ಯಪಾತ್ರಗಳು ಹಾಗೂ ಸ್ತ್ರೀಪಾತ್ರಗಳು ಯಕ್ಷಗಾನ ಕಲೆಗೆ ಜೀವಾಳ.

ಹಿನ್ನಲೆ: ಸಾರ್ಣದೇವನ ಸಂಗೀತರತ್ನಾಕರದಲ್ಲಿ (ಕ್ರಿ.ಶ. 1210)ರಲ್ಲಿ ಯಕ್ಷಗಾನದ ಕುರಿತು ಉಲ್ಲೇಖವಿದ್ದು, ಇದನ್ನು ‘ಜಕ್ಕ’ ಎಂದು ವರ್ಣಿಸಲಾಗಿದೆ. ಮುಂದೆ ಇದು ‘ಯಕ್ಕಲಗಾನ’ ಎಂದು ಕರೆಯಲ್ಪಟ್ಟಿತ್ತು ಎಂದು ಹೇಳಲಾಗಿದೆ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ಧತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯರೂಪ ತಳೆದು ಯಕ್ಷಗಾನವಾಯಿತು ಎಂಬುದು ಶಿವರಾಮ ಕಾರಂತರ ‘ಯಕ್ಷಗಾನ ಬಯಲಾಟ’ ಎಂಬ ಸಂಶೋಧನಾ ಗ್ರಂಥದಲ್ಲಿ ಕಾಣಬಹುದಾಗಿದೆ. ಕೆಲವು ವಿದ್ವಾಂಸರ ಪ್ರಕಾರ ಯಕ್ಷಗಾನ 15ನೇ ಶತಮಾನದಲ್ಲಿ ರೂಪುಗೊಂಡು 17ನೇ ಶತಮಾನದಲ್ಲಿ ಬೆಳೆದು 19ನೇ ಶತಮಾನದಲ್ಲಿ ಪರಿಪೂರ್ಣತೆಯನ್ನು ಹೊಂದಿತು ಎಂದು ಹೇಳಲಾಗಿದೆ. ಕೆಲವು ಕಲೆಗಳಾದ ಬಂಗಾಲದ ಯಾತ್ರಾ, ಆಸ್ಸಾಮದ ಆಂಖಯಾ, ತಮಿಳಿನ ತೆರುಕ್ಕೂತ್ತು ಇವು ನಮ್ಮ ಯಕ್ಷಗಾನವನ್ನೇ ಹೋಲುತ್ತವೆ ಎನ್ನಬಹುದು.

ಯಕ್ಷಗಾನದಲ್ಲಿ ಇರುವ ಪ್ರಮುಖ ಅಂಶಗಳೆಂದರೆ: ಪ್ರಸಂಗ, ಪಾತ್ರಧಾರಿಗಳು, ವೇಷಭೂಷಣ, ಭಾಗವತಿಕೆ, ಮಾತುಗಾರಿಕೆ, ನೃತ್ಯ ಹಾಗೂ ಕುಣಿತ. ಯಕ್ಷಗಾನದಲ್ಲಿ ಮುಖ್ಯವಾಗಿ 2 ಪ್ರಕಾರಗಳಿದ್ದು, ಅದನ್ನು ಮೂಡಲಪಾಯ ಮತ್ತು ಪಡುವಲಪಾಯ ಎಂದು ವಿಂಗಡಿಸಲಾಗಿದೆ. ಪಶ್ಚಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವುದು ಮೂಡಲಪಾಯವಾಗಿದ್ದು. ಮಲೆನಾಡು ಮತ್ತು ಕರಾವಳಿಗಳಲ್ಲಿ ಪ್ರಚಲಿತವಿರುವುದು ಪಡುವಲಪಾಯ ರೀತಿಯದಾಗಿದೆ. ಇದರಲ್ಲಿ ಎರಡು ವಿಧಗಳಿದ್ದು, ಅದನ್ನು ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂದು ಕರೆಯುವರು.
ತೆಂಕುತಿಟ್ಟು – ಈ ಶೈಲಿಯ ಯಕ್ಷಗಾನವನ್ನು ನಾವು ಹೆಚ್ಚಾಗಿ ದಕ್ಷಿಣ ಕನ್ನಡದಲ್ಲಿ ಕಾಣುತ್ತೇವೆ. ಇಲ್ಲಿ ಭಾಗವತರು ಜಾಗಟೆಯನ್ನು ಬಳಸುವರು ಹಾಗೂ ಚಂಡೆಯು ಭಾಗವತನ ಎಡಭಾಗದಲ್ಲಿ ನಿಂತು ಬಾರಿಸುವುದು ತೆಂಕುತಿಟ್ಟಿನ ವಿಶೇಷವಾಗಿದೆ. ಪಾತ್ರಧಾರಿಗಳ ವೇಷಭೂಷಣ ಮುಖವರ್ಣಿಕೆ ಸ್ವಲ್ಪ ಭೀಕರತೆಯಿಂದ ಕಂಡು ಬರುವುದು ಹಾಗೂ ಈ ಪಾತ್ರಧಾರಿಗಳು ಹೆಚ್ಚಾಗಿ ಕೀರಿಟವನ್ನು ಬಳಸುತ್ತಾರೆ.
ಬಡಗುತಿಟ್ಟು – ಈ ಶೈಲಿ ಯಕ್ಷಗಾನವು ಉತ್ತರ ಕನ್ನಡ, ಶಿವಮೊಗ್ಗ. ಕುಂದಾಪುರ ಮತ್ತು ಉಡುಪಿಯ ಕೆಲಭಾಗದಲ್ಲಿ ಕಂಡುಬರುತ್ತದೆ. ಇದರಲ್ಲಿ ನೃತ್ಯ ಮತ್ತು ಆ೦ಗೀಕ ಅಭಿನಯ ಪ್ರಧಾನವಾಗಿದ್ದು, ಚಂಡೆವಾದಕರು ಕುಳಿತು ಚಂಡೆಯನ್ನು ಬಾರಿಸುತ್ತಾರೆ. ಇಲ್ಲಿ ಹೆಚ್ಚಾಗಿ ಪಗಡೆ, ಮು೦ಡಾಸುಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಕುಣಿತವು ಸ್ವಲ್ಪ ಭರತನಾಟ್ಯದ ಕುಣಿತವನ್ನು ಹೋಲುತ್ತದೆ.

ಪ್ರಮುಖ ಯಕ್ಷಗಾನ ಮೇಳಗಳು: ಶ್ರೀ ಇಡುಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ; ಶ್ರೀ ಗುರುನರಸಿಂಹ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ; ಶ್ರಿ ಕಲಾಧಾರ ಯಕ್ಷರ೦ಗ ಬಳಗ, ಜಲವಳ್ಳಿ; ಶ್ರೀ ಆನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪೆರ್ಡೂರು; ಕೊಂಡದಕುಳಿ ಮೇಳ ಹಾಗೂ ಮುಂತಾದ ಮೇಳಗಳಿವೆ.

ಪ್ರಮುಖ ಪಾತ್ರಧಾರಿಗಳು: ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಆಕ್ಟರ್ ಜೋಷಿ ಗೋಕರ್ಣ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊ೦ಡದ ಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ಎಮ್. ಸುಧೀ೦ದ್ರ ಹೊಳ್ಳ, ಮಂಟಪ ಪ್ರಭಾಕರ ಉಪಾಧ್ಯಾಯ, ಗೋಡೆ ನಾರಾಯಣ ಹೆಗಡೆ, ಬಳ್ಳೂರು ಕೃಷ್ಣಯಾಜಿ, ಕರೆಮನೆ ಶಿವಾನ೦ದ ಹೆಗಡೆ, ಹಡಿನಬಾಳ ಶ್ರೀಪಾದ ಹೆಗಡೆ, ಜಲವಳ್ಳಿ ಕಣ್ಣಿಮನೆ ಗಣಪತಿ ಹೆಗಡೆ, ಪಿ.ವಿ ಹಾಸ್ಯಗಾರ, ನಾರಾಯಣ ಹಾಸ್ಕಗಾರ, ಕೃಷ್ಣ ಹಾಸ್ಯಗಾರ, ಲಕ್ಷ್ಮಣ ಹೆಗಡೆ, ಮೂರೂರು ದೇವರು ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಟ್ಟೂರು ನಾರಾಯಣ ಭಾಗವತ ಹಾಗೂ ಪ್ರಮುಖರ
ಮತ್ತು ಕಲಾವಿದರ ಪಟ್ಟಿ ದೊಡ್ಡದಿದೆ.

ಪಡುವಣದತ್ತ ಸೂರ್ಯ ಪಯಣಿಸುತ್ತಿದಂತೆ ಇಳಿ ಸಂಜೆಯಲ್ಲಿ ಚಂಡೆ ಮದ್ದಳೆಯ ಶಬ್ದಕ್ಕೆ ವೇಷಭೂಷಣಗಳನ್ನು ಧರಿಸಿ ತಮ್ಮ ಮಾತುಗಾರಿಕೆಯ ಮೂಲಕ ಅಂಗಾಭಿನಯದ ಮೂಲಕ ಕಥೆಗಳನ್ನು ಹೇಳುವ ಕಲೆಯಾದ ಈ ಯಕ್ಷಗಾನವನ್ನು ನೋಡಲು ದೂರದ ಊರುಗಳಿಗೂ ತೆರಳಿ ವಿಕ್ಷಿಸುವ ಅಭಿಮಾನಿ ವರ್ಗವನ್ನು ಇಂದಿಗೂ ಸಹ ಕರಾವಳಿ ಭಾಗದಲ್ಲಿ ಕಾಣಬಹುದಾಗಿದೆ. ಒ೦ದು ಕಾಲದಲ್ಲಿ ಒ೦ದೇ ಪ್ರಸ೦ಗ ರಾತ್ರಿ ಇಡೀ ಪ್ರಯೋಗವನ್ನು ಕಾಣುತ್ತಿತ್ತು. ಆದರೆ ಈಗ ಮೂರು ತಾಸಿನ ಆಖ್ಯಾನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ನಗರವಾಸಿಗಳಲ್ಲೂ ಯಕ್ಷಗಾನದ ಒಲವು ಮೂಡುತ್ತಿದ್ದು, ಅವರು ಸಹ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಯಕ್ಷಗಾನ ಕಲೆಗಿರುವ ಶಕ್ತಿ ಎಂದೇ ಹೇಳಬಹುದು. ಪುರಾಣದ ಪ್ರಸ೦ಗಗಳನ್ನು ಮಾತ್ರವಲ್ಲದೇ ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ದೇಶದೆಲ್ಲೆಡೆ ಪ್ರಚಾರಗೊ೦ಡು ತನ್ನದೇ ಆದ ಹಿರಿಮೆಯ ಮೂಲಕ ಕನ್ನಡದ ಜಾನಪದ ಲೋಕದ ಜನಪ್ರಿಯ ಕಲೆಯಾಗಿ ಮುನ್ನುಗುತ್ತಿದೆ, ಈ ಅದ್ಭುತ ಕಲೆ ‘ಯಕ್ಷಗಾನ’ವನ್ನು ನಮ್ಮ ಕಲೆ ಎಂದು ಹೇಳುವುದು ಕರಾವಳಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಮಾಹಿತಿ: ಅಕ್ಷತಾ ಜಗದೀಶ್ (ಸಮಯಾ)


Leave a Reply