ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂತಾರಾಧನೆ ಇದೆಯೇ? ಇದ್ದರೆ ಅಲ್ಲಿನ ದೈವಗಳ ಹೆಸರುಗಳೇನು?

Posted by

·

ಉತ್ತರಕನ್ನಡದಲ್ಲಿ ಭೂತಾರಾಧನೆ ಎಂಬ ಪದ್ಧತಿ ಇಲ್ಲ. ಆದರೆ, ಭೂತದಂತಹ ದೈವಗಳಿಗೆ ಪೂಜೆ ಮಾಡುವ ಸಂಪ್ರದಾಯ ಇದೆ.

ಭೂತ, ಜಟಗ, ಚೌಡಿ, ಬೀರ್ಲ, ಕ್ಷೇತ್ರಪಾಲ ಮುಂತಾದ ಗ್ರಾಮರಕ್ಷಕ ದೈವಗಳಿಗೆ ಪೂಜೆ ಮಾಡುತ್ತಾರೆ.

ಇಲ್ಲಿ ಪೂಜೆ ಎಂದರೆ ಅಂತಹ ವೈಭವ ಏನೂ ಇರುವುದಿಲ್ಲ. ಪ್ರತಿ ವರ್ಷವೂ ದೀಪಾವಳಿ, ಆರದ್ರಾ ಮಳೆ ಹಬ್ಬದಂದು ಮತ್ತು ನಾಗರಪಂಚಮಿಯಂದು ಈ ದೈವಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಮಾಡಲೇಬೇಕು.

ಇದನ್ನು ಬಿಟ್ಟು, ‘ಜಟಗನ ಹಬ್ಬ’ ಎಂದು ಕೂಡಾ ಒಂದು ಆಚರಣೆ ಇದೆ. ಅಂದು ಜಟಗನಿಗೆ ವಿಶೇಷ ಪೂಜೆ ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲ ಗ್ರಾಮದಲ್ಲಿಯೂ ‘ಜಟಗನ ಬನ’ ಇರುತ್ತದೆ. ಜಟಗನ ಹಬ್ಬದಂದು ಅಲ್ಲಿ ಚಪ್ಪರ ಹಾಕಿ, ತೋರಣ ಕಟ್ಟಿ ಊರವರೆಲ್ಲ ಒಟ್ಟಿಗೆ ಸೇರಿ ಪೂಜೆ ಮಾಡುತ್ತಾರೆ. ಬೆಳಿಗ್ಗೆ ತಿಂಡಿಗೂ ಮೊದಲು ಈ ಪೂಜೆ ನಡೆಯಬೇಕು.

ಈ ಎಲ್ಲ ದೈವಗಳು ಇರುವ ಸ್ಥಳಗಳಿಗೆ ಸ್ತ್ರೀಯರು ಹೋಗುವಂತಿಲ್ಲ.

ಆರದ್ರಾ ಮಳೆ ಹಬ್ಬವನ್ನು ಕೂಡಾ ಕೆಲವು ಕಡೆ ಸಂಭ್ರಮದಿಂದ ಆಚರಿಸುತ್ತಾರೆ. ನೆಂಟರನ್ನು ಕರೆದು ವಿಶೇಷ ಭೋಜನ ಬಡಿಸುತ್ತಾರೆ. ಈ ಹಬ್ಬದಂದು ಎಲ್ಲ ಗ್ರಾಮರಕ್ಷಕ ದೈವಗಳಿಗೂ ಪೂಜೆ ನಡೆಯುತ್ತದೆ. ಆ ದೈವಗಳ ಬನದಲ್ಲಿ ಚಪ್ಪರ ಹಾಕಿ, ತೋರಣಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತದೆ.

ಇಲ್ಲಿ ಪೂಜೆ ಮಾಡುವ ದೈವ ಯಾವುದೇ ಇದ್ದರೂ ಕೂಡಾ, ಪೂಜೆಯ ಉದ್ದೇಶ ಮಾತ್ರ ಪ್ರಕೃತಿಯ ಆರಾಧನೆ. ಅದೇ ದೇವ, ಅದೇ ದೈವ.

ಅದಕ್ಕಾಗಿಯೇ ಈ ದೈವಗಳಿಗೆ ಯಾವುದೇ ರೂಪವಿಲ್ಲ. ಯಾವುದೋ ಒಂದು ಕಲ್ಲು ಅಥವಾ ಮರವೇ ಈ ದೈವದ ಮೂರ್ತ ರೂಪವಾಗಿರುತ್ತದೆ. ಹರಿಯುವ ನೀರು ಕೂಡಾ ದೈವದ ರೂಪವಾಗಿರಬಹುದು. ಈ ಎಲ್ಲ ಪೂಜೆಗಳೂ ಊರಿಂದ ಊರಿಗೆ ಸ್ವಲ್ಪ ಬೇರೆ ಬೇರೆ ರೀತಿಯಾಗಿ ಇರುತ್ತವೆ.

ಕೆಲವು ಕಡೆ ಪ್ರಾಣಿಬಲಿ ಕೊಡುವ ಪದ್ಧತಿ ಕೂಡಾ ಇದೆ. ಕಳ್ಳಭಟ್ಟಿ ಸಾರಾಯಿಯ ನೈವೇದ್ಯ ಕೂಡಾ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆಚರಣೆಗಳು ಸ್ವಲ್ಪ ಕಡಿಮೆಯಾಗಿವೆ.

ನಾವು ತೆಂಗಿನಕಾಯಿ ಒಡೆದು, ಸಿಹಿತಿಂಡಿ, ಕಡುಬು, ಹಣ್ಣು, ಪಾಯಸ ಮತ್ತು ಅನ್ನದ ನೈವೇದ್ಯ ಮಾಡಿ ಈ ಹಬ್ಬ ಆಚರಿಸುತ್ತೇವೆ.

ನನ್ನ ಅನುಭವದ ಪ್ರಕಾರ, ಈ ಆಚರಣೆಗಳು ಖಂಡಿತ ಮೂಢನಂಬಿಕೆಗಳಲ್ಲ. ಈ ದೈವಗಳು ಖಂಡಿತವಾಗಿ ಗ್ರಾಮರಕ್ಷಕರು ಹೌದು. ಇವುಗಳು ಕೇಳುವುದು ಕೇವಲ ವರ್ಷಕ್ಕೆ ಒಂದೆರಡು ಪೂಜೆ, ಕೆಲವೊಮ್ಮೆ ಹಸಿವಾದಾಗ ಒಂದು ತೆಂಗಿನಕಾಯಿ ಮಾತ್ರ. ಅಷ್ಟು ಸಲ್ಲಿಸಿಬಿಟ್ಟರೆ ಈ ದೈವಗಳು ಸಂತೃಪ್ತರಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತವೆ.

ಚಿಕ್ಕ ಮಕ್ಕಳು ಊರಿಗೆ ಬಂದಾಗ ಕೂಡಾ ಇವು ತೆಂಗಿನಕಾಯಿ ಬೇಕೆಂದು ಕೇಳುತ್ತವೆ. ಮಕ್ಕಳು ಅತಿಯಾಗಿ ಅಳುತ್ತಲೇ ಇದ್ದರೆ, ಈ ದೈವಗಳಿಗೆ ತೆಂಗಿನಕಾಯಿ ಬೇಕು ಎಂದು ಅರ್ಥ. ಈ ದೈವದ ಹೆಸರಿನಲ್ಲಿ ಒಂದು ತೆಂಗಿನಕಾಯಿ ತೆಗೆದಿಟ್ಟುಬಿಟ್ಟರೆ ಮಕ್ಕಳ ಅಳು ಆಶ್ಚರ್ಯಕರ ರೀತಿಯಲ್ಲಿ ನಿಂತುಹೋಗುತ್ತದೆ.

✍️ ಪ್ರಸನ್ನ ಹೆಗ್ಡೆ

ಮೂಲ: Quora


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading