ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಲಸಿ ‌ಗೌಡ

Posted by

·

ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೊವಿಂದ್ ಅವರು ವೃಕ್ಷಮಾತೆ ತುಲಸಿ ಗೌಡ ಇವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು.

ವೃಕ್ಷಮಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ತುಳಸಿ ಗೌಡ ಅವರದು ವಿಶಿಷ್ಟವಾದ ವ್ಯಕ್ತಿತ್ವ. ಪರಿಸರದ ಬಗ್ಗೆ ಅಪಾರ ಒಲವು ಹೊಂದಿರುವ ಇವರು ಒಂದಲ್ಲಾ, ಎರಡಲ್ಲಾ ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಎಪ್ಪತ್ತರ ವಯಸ್ಸಿನ ತುಳಸಿಯವರು ಇಂದಿಗೂ ಗಿಡ ಮರಗಳ ಪೋಷಣೆಯಲ್ಲಿ ಸಕ್ರಿಯರಾಗಿದ್ದಾರೆ. ಇವರ ಪರಿಸರದ ರಕ್ಷಣೆ, ಮರಗಿಡಗಳ ಪೋಷಣೆ, ಕಾಳಜಿ ಇವುಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸಸ್ಯ ಹಾಗು ಅರಣ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಇವರನ್ನು ನಡೆದಾಡುವ ಅರಣ್ಯ ವಿಶ್ವಕೋಶ (Encyclopedia of Forest) ಎಂದು ಕರೆಯಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗಳಿಗೆ ೧೯೪೪ ರಲ್ಲಿ ಜನಿಸಿದ ಇವರು ಬಡಕುಟುಂಬದ ಹಿನ್ನೆಲೆ ಉಳ್ಳವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ತುಳಸಿಯವರು ಶಾಲೆಯ ಮೆಟ್ಟಿಲೆರಲಿಲ್ಲ. ಗೋವಿಂದೇ ಗೌಡ ಎನ್ನುವವರ ಜೊತೆ ತುಳಸಿಯವರ ಬಾಲ್ಯ ವಿವಾಹವಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡರು. ಜೀವನ ನಿರ್ವಹಣೆಗೆ ಕಾಡಿನಿಂದ ಒಣ ಕಟ್ಟಿಗೆ ಸಂಗ್ರಹಿಸಿ ಮಾರಾಟಮಾಡಿ‌ ಜೀವನ ಸಾಗಿಸುತ್ತಿದ್ದರು.

ಹಾಲಕ್ಕಿ ಒಕ್ಕಲು ಸಮುದಾಯಕ್ಕೆ ಸೇರಿದ ತುಳಸಿ ಗೌಡ ಅವರಿಗೆ ಪರಿಸರ ಪ್ರೇಮ ಎನ್ನುವುದು ಹುಟ್ಟಿನಿಂದಲೇ ಬಂದಿತ್ತು. ಇವರಿಗೆ ಪರಿಸರದ ಜೊತೆ ಒಳ್ಳೆಯ ಒಡನಾಟವಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಬೀಜಗಳನ್ನು ಶೇಖರಣೆ ಮಾಡಿ, ಸಸಿಗಳನ್ನಾಗಿ ಮಾಡಿ ಕೊಡುವ ಕೆಲಸಕ್ಕೆ ದಿನಗೂಲಿ ನೌಕರರಾಗಿ ತುಂಬಾ ಸಂತೋಷದಿಂದ ಸೇರಿಕೊಂಡರು. ತಾವು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಪ್ರದೇಶಗಳಲ್ಲಿ ನೆಡಲು ಪ್ರಾರಂಭಿಸಿದರು. ಹೊನ್ನಳ್ಳಿ, ಮಾಸ್ತಿಕಟ್ಟಾ, ಹೆಗ್ಗೂರು, ಡೊಂಗ್ರಿ, ಕಲ್ಲೇಶ್ವರ, ಅಡ್ಲೂರು, ಅಗಸೂರು, ಶಿರಗುಂಜಿ ಹೀಗೆ ಖಾಲಿ ಭೂಮಿಯಲ್ಲಿ ಅರಣ್ಯ ಇಲಾಖೆ ಇವರ ಗಿಡಗಳನ್ನು ನೆಡಿಸಿತು. ಇಂದು ಅದೇ ಸಸಿ ೩೦ ಸಾವಿರಕ್ಕೂ ಅಧಿಕ ಮರಗಳಾಗಿವೆ. ೩೫ ವರ್ಷಗಳ ಕಾಲ ಮತ್ತಿಘಟ್ಟ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಇಂದಿಗೂ ಅಲ್ಲಿಗೆ ಹೋಗಿ ಯುವಜನತೆಗೆ ತರಬೇತಿ, ಮಾರ್ಗದರ್ಶನ ನೀಡುತ್ತಾರೆ.

ಗ್ರಾಮಸ್ಥರಿಗೆ, ಸುತ್ತಮುತ್ತಲಿನ ಜನರಿಗೆ ತುಳಸಜ್ಜಿ ಎಂದೇ ಜನಪ್ರಿಯರಾಗಿರುವ ಇವರಿಗೆ ಜನರು ಪ್ರೀತಿಯಿಂದ “ವೃಕ್ಷಮಾತೆ” ಎಂದು ಕರೆಯುತ್ತಾರೆ.
ತುಳಸಿ ಗೌಡ ರ ಪರಿಸರ ಕಾಳಜಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಹಾಗೂ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ತುಳಸಿಯವರಿಗೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸರಳತೆಯ ಸಾಕಾರಮೂರ್ತಿಯಂತಿರುವ ತುಳಸಜ್ಜಿ ಈ ಶತಮಾನ ಕಂಡ ನಿಜವಾದ ಪರಿಸರ ಪ್ರೇಮಿ ಎಂದೇ ಹೇಳಬಹುದು. ಇವರ ಈ ಪರಿಸರ ಪ್ರೇಮ, ಕಾಳಜಿ, ಘೋಷಣೆಯನ್ನು ನಾವು ಸ್ವಲ್ಪಮಟ್ಟಿಗಾದರು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಪರಿಸರ ಹಾಗೂ ಅರಣ್ಯಗಳನ್ನು ರಕ್ಷಣೆ ಮಾಡುವಲ್ಲಿ ನಾವು ಸಹ ಕೈ ಜೋಡಿಸಿದ ಹಾಗೆ ಆಗುತ್ತದೆ. ಇಂದು ಜಗತ್ತು ವಾಯು ಮಾಲಿನ್ಯ, ಅಧಿಕ ತಾಪಮಾನ, ಅರಣ್ಯ ನಾಶ ದಂತಹ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ನಾವೆಲ್ಲರೂ ತುಳಸಿ ಗೌಡ ಅವರು ಹಾಕಿಕೊಟ್ಟ ಪರಿಸರ ರಕ್ಷಣೆಯ,ಪೋಷಣೆಯ ಮಾರ್ಗದರ್ಶನವನ್ನು ರೂಢಿ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಮಹಾನ್ ಮಹಿಳೆಯಾದ ತುಳಸಿ ಗೌಡ ರವರಿಗೆ ಇನ್ನೂ ಅನೇಕ ರಾಜ್ಯ, ರಾಷ್ಟ್ರಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ದೊರೆಯಲಿ ಎಂದು ಆಶಿಸುತ್ತೇವೆ.

ರಚನೆ: ಅಕ್ಷತಾ ಜಗದೀಶ್ (ಸಮಯಾ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading