ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಜಿಲ್ಲೆಯ ಕರಾವಳಿ ಭಾಗದಲ್ಲಿ ನಾಗನಿಗೆ ವಿಶಿಷ್ಟ ಆಚರಣೆಯ ಮೂಲಕ ಪೂಜೆ ಸಲ್ಲಿಸುತ್ತಾರೆ.
ನಾಗ ರೈತನ ಬೆಳೆಯನ್ನು ತಿಂದು ನಾಶಮಾಡುವ ಇಲಿಗಳ ಬೇಟೆಯಾಡಿ ತಿಂದು, ರೈತರಿಗೆ ಹಿತವನ್ನು ಮಾಡುವ ಮಿತ್ರ. ಸತ್ತವರ ಆತ್ಮ ನಾಗನಲ್ಲಿಡಗಿದೆ ಎಂದು ತಿಳಿದ ಕರಾವಳಿಗರು ನಾಗನಿಗೆ ‘ಹೆರಿಯವ್ರು’ ‘ಹಳ್ಯೋರು’ ಎಂದು ಗೌರವಿಸುತ್ತಾರೆ. ಭೂಮಿ ತಾಯಿ ಆದಿಶೇಷನ ಹೆಡೆಯ ಮೇಲಿದೆಯೆಂದು ಭಾವಿಸುತ್ತಾರೆ. ನಾಗ ಸತ್ಯಶೀಲರನ್ನು ಕಾಪಾಡುವ, ಸಂಪತ್ತನ್ನು ರಕ್ಷಿಸುವ, ಸಂತಾನವನ್ನು ದಯಪಾಲಿಸುವ, ಬೆಳೆಯನ್ನು ಕಾಯುವ ದೇವತೆಯೆಂದು ನಂಬಿದ ಕರಾವಳಿಗರು ಹಾವನ್ನು ಕೊಲ್ಲರು. ಹಾವು ಬಂದಾಗ ತುಲಸಿಯ ನೀರನ್ನು ಚಿಮುಕಿಸಿ, “ನಾಗಪ್ಪನಾದರೆ ಹೋಗಪ್ಪ ಹುತ್ತಿಗೆ” ಎಂದು ಕೈಮುಗಿಯುವರು. ತಮ್ಮ ಮಕ್ಕಳಿಗೆ ನಾಗನ ಹೆಸರು ಹಾಕಿ, ತಮ್ಮ ಭಕ್ತಿ, ನಿಷ್ಠೆ ವ್ಯಕ್ತಪಡಿಸುತ್ತಾರೆ. ಕರಾವಳಿಗರು ನಾಗನಿಗೆ ನಿಷ್ಠೆ ತೋರಲು ನಾಗರ ಪಂಚಮಿಯಂದು ನಾಗರ ಗುತ್ತಿಗೆ ಬಂದು ತೆಂಗಿನ ಮಡಲಿನಿಂದ ತಯಾರಿಸಿದ ಹಾವನ್ನು ಪೇರಿಸಿ, ಹಾಲೆರೆದು ಪೂಜೆ ಮಾಡುತ್ತಾರೆ. ಅಂದು ತೆಂಗಿನಕಾಯಿ ಸುಳಿಯ ರೊಟ್ಟಿ ಮಾಡಿ ನಾಗರ ಹಬ್ಬ ಆಚರಿಸುತ್ತಾರೆ. ಕಾರವಾರ ಭಾಗದಲ್ಲಿ ಮತ್ತು ಕೊಂಕಣಿಯಲ್ಲಿ ಸುಳಿರೊಟ್ಟಿಯನ್ನು ‘ಪಾತೊಳಿ’ ಎಂದು ಕರೆಯುತ್ತಾರೆ.






Leave a Reply