ಜಾವದಿ ಕಾಡಿಗೆ ಹೆಜ್ಜೆಯನಿಟ್ಟು
ನೋವಿನ ವಿಷಯಗಳೆಲ್ಲವ ಬಿಟ್ಟು
ಸಾವಿರ ಗಿಡವನು ಹರುಷದಿ ನೆಟ್ಟು
ಭಾವದಿ ಪೊರೆದಳು ಮಮತೆಯ ಕೊಟ್ಟು//
ಅಕ್ಷರ ಕಲಿಯದೆ ಪರಿಸರ ಅರಿತು
ಲಕ್ಷವನಿಟ್ಟಲು ಗಿಡಗಳ ಕುರಿತು
ರಕ್ಷಿಸಿ ವನವನು ಜೊತೆಯಲಿ ಬೆರೆತು
ಶಿಕ್ಷಿತ ಮಂದಿಯು ತಿಳಿದರೆ ಒಳಿತು//
ಮೇದಿನಿಯಂತಹ ಸಹನೆಯ ಹೆಣ್ಣು
ಮೋದದಿ ಅಗೆದಳು ಹೊನ್ನಿನ ಮಣ್ಣು
ಖೇದವು ಕಾಣದ ಮಮತೆಯ ಕಣ್ಣು
ಮಾದರಿಯಾಗಿಹ ದೇಶದ ಹೊನ್ನು//
ಹಳ್ಳಿಯ ಮಹಿಳೆಯ ಸಾಧನೆ ನೋಡಿ
ದಿಲ್ಲಿಯವರೆಗೂ ಸುದ್ದಿಯ ಮಾಡಿ
ಮೆಲ್ಲಗೆ ನುಡಿಯುವ ಭಾಷೆಯ ಮೋಡಿ
ಬಲ್ಲಿದರೊಂದಿಗೆ ಜೊತೆಯಲಿ ಕೂಡಿ//
ಮತಿಯನು ಚಂಚಲ ಗೊಳಿಸಲು ಇಲ್ಲ
ಪಥವನು ಎಂದಿಗೂ ಬದಲಿಸಲಿಲ್ಲ
ಸತತವು ರಕ್ಷಿಸಿ ಗಿಡಗಳನ್ನೆಲ್ಲ
ಲತೆಯನು ವೃಕ್ಷಕೆ ಹಬ್ಬಿಸಿ ಮೆಲ್ಲ//
ಗಾಳಿಯ ಮಹತ್ವ ಅರಿತಳು ಅಂದು
ಬಾಳಿಗೆ ಹಸಿರದು ಉತ್ತಮವೆಂದು
ನಾಳಿನ ಮಂದಿಗೆ ಇರಬೇಕೆಂದು
ಬೇಲಿಯ ಬದಿಗೂ ನೆಟ್ಟಳು ತಂದು//
ಹೆಸರನು ಗಳಿಸಲು ಮಂದಿಯು ಹಲವು
ಕೆಸರಲೂ ಚಿನ್ನವ ಹುಡುಕುವ ಒಲವು
ಉಸಿರನು ನೀಡುವ ಜನಗಳು ಕೆಲವು
ಖುಷಿಯಲಿ ಕಾಯಕ ಮಾಡಲು ಗೆಲುವು//
ಕಪ್ಪಗೆ ಆಗುವೆ ಎನ್ನುವ ಭಯದಿ
ಕಪ್ಪೆಯ ಹಾಗೆಯೆ ಅವಿತರು ಕೊಳದಿ
ಸೊಪ್ಪನು ತಿಂದರು ಕಷ್ಟದಿ ದುಡಿದಿ
ತುಪ್ಪವ ತಿಂದವ ಬರೆದನು ವರದಿ//
ಕಡಿದಿಹ ಮರಗಳು ಬೇಸರ ತಂದು
ಹಡೆದಿಹ ಒಡಲದು ಬಹಳವೆ ನೊಂದು
ಮಿಡಿಯದ ಮನುಜರು ಕೇಳರು ಎಂದು
ನುಡಿವರು ಕೇಳಲು ಇವಳಾರೆಂದು//
ಹೊನ್ನಳಿ ಊರಿನ ಸಾಧಕಿ ತುಳಸಿ
ತನ್ನಯ ಬೆವರಿಗೆ ಪ್ರೀತಿಯ ಸುರಿಸಿ
ಚೆನ್ನದಿ ಸಲಹಿದೆ ಗಿಡಗಳ ಬೆಳೆಸಿ
ಬಿನ್ನಗೆ ಬಂದಿತು ಗೌರವ ಅರಸಿ//
ಫಲವನು ನೀಡುವ ಮರಗಳ ಬೆಳೆದು
ಫಲಿತದಿ ಸಿಹಿಸಿಹಿ ಹಣ್ಣನು ತಳೆದು
ಫಲವನು ಬಯಸದ ಸೇವೆಯು ನಡೆದು
ಫಲವದು ಸಿಕ್ಕಿತು ಸೇವೆಗೆ ಇಂದು//
ವಿಧವಿಧ ತರುಗಳ ಹೆಸರಿನ ಸಾಲು
ಅದರಲಿ ಔಷದ ಗುಣಗಳು ಮೇಲು
ಸುಧೆಯಲಿ ಮಿಂದಿತು ಮಂದಿಯ ಬಾಳು
ಮದದಲಿ ಮರಗಳ ಕಡಿದರೆ ಗೋಳು//
ಜನತೆಗೆ ನಿನ್ನಯ ಪ್ರೇರಣೆಯಾಗಿ
ವನಿತೆಯು ಎನ್ನುವ ಬೇಧವು ಹೋಗಿ
ಪಣವನು ತೊಡಲು ಸಾಧನೆಯಾಗಿ
ಮನಮನವೆಲ್ಲವೂ ಛಲದಲಿ ತೊಡಗಿ//
ವೀರತೆ ತೋರುತ ಮೇಲಕೆ ಎದ್ದಿ
ಕೇರಿಯ ತುಂಬವು ನಿನ್ನದೆ ಸುದ್ದಿ
ನಾರಿಯೇ ಕಲಿತರು ಎಲ್ಲರು ಬುದ್ಧಿ
ತಾರೆಯ ಹಾಗೆಯೇ ಬೆಳಗುತಲಿದ್ದಿ//
ಹೆಣ್ಣನು ಹಂಗಿಸು ಜನರಿಹರಿಲ್ಲಿ
ಕಣ್ಣನು ತೆರೆಸಿದೆ ಮಣ್ಣನೆಯಲ್ಲಿ
ಬಿನ್ನಹ ಮಾಡುವೆ ಕಂಬನಿ ಚೆಲ್ಲಿ
ಸುಣ್ಣದ ಬಣ್ಣದ ಬೇಧವ ಕೊಲ್ಲಿ//
ಅಳುವಿರಿ ಏತಕೆ ಹೆಣ್ಣಿನು ಹೆತ್ತು
ಕಲುಕದೆ ಮನವನು ಪ್ರೀತಿಯನಿತ್ತು
ಸಲಹಿತು ತಾಯಿಯು ನಿಮ್ಮನು ಹೊತ್ತು
ಬೆಳೆಸಲು ಸೋದರಿ ಕೊಟ್ಟಳು ತುತ್ತು //
ಸಾಧನೆ ಮಾಡಲು ಸುಲಭವು ಎಲ್ಲಿ
ಹಾದಿಯ ಸೆವೆಸಲು ಕಲ್ಲಿದೆಯಲ್ಲಿ
ತೇದರು ಗಂಧವು ಪರಿಮಳದಲ್ಲಿ
ನಾದವು ಹೊಮ್ಮಿತು ಸಂಕಟದಲ್ಲಿ//
ಕಾಲಿನ ಕೆಳಗಡೆ ಮುಳ್ಳಿನ ಹಾದಿ
ಬಾಳಲಿ ಸಂಕಟ ಬಂದವು ಯಾದಿ
ನಾಳಿನ ಭರವಸೆಯೊಂದಿಗೆ ಮನದಿ
ಖಾಲಿಯ ಪುಟದಲಿ ನೋವಿನ ವರದಿ//
ಎಲ್ಲೆಡೆ ಮೊಳಗಿತು ನಿನ್ನಯ ಕೀರ್ತಿ
ಚೆಲ್ಲಿದ ಹೂಗಳು ತುಂಬಿತು ಭರ್ತಿ
ಕಲ್ಲೆದೆಯಲ್ಲಿಯೂ ದೇವಿಯ ಮೂರ್ತಿ
ಮೆಲ್ಲಗೆ ಬರೆದೆನು ಕವನಕೆ ಸ್ಪೂರ್ತಿ//
ತೆಗಳಿದ ಜನಗಳು ಹತ್ತಿರ ಬಂದು
ಹೊಗಳುತ ನಿಂತರು ಸಾಧಕಿಯೆಂದು
ಮುಗಿಲನು ಮುಟ್ಟಿತು ಸಂತಸವಿಂದು
ನಗುತಿರು ಎಂದಿಗೂ ಹರಸುವೆನಿಂದು//
ರಚನೆ: ಲತಾ ಗೌಡ (ಶಿಕ್ಷಕಿ), ಉಂಚಗಿ, ಕುಮಟಾ.


Leave a Reply