
ಅಕ್ಷರ ವಿರಲಿ ಲೆಕ್ಕವೇ ಇರಲಿ
ಆಟದಿ ಕಲಿವುದೆ ನನಗಿಷ್ಟ
ಬೋಧನೆಯೊಂದೆ ಕೇಳುತ ಕುಳಿತರೆ
ಕಲಿಯುವುದಂತೂ ಬಲುಕಷ್ಟ
ಮಕ್ಕಳ ಸಾಹಿತ್ಯ ಎನ್ನುವುದು ಮಗುವಿನ ಮನಸ್ಸಿನ ಸಮಾರಾಧನೆಯಾಗಬೇಕು ಎನ್ನುವುದು ಹಿರಿಯರ ಮಾತು. ಮಕ್ಕಳು ಶಾಲಾ ಪಠ್ಯದಲ್ಲಿ ಮುಳುಗಿರುತ್ತಾರೆ, ಅವರಿಗೆ ಹೇಳಿದ್ದನ್ನೇ ಹೇಳುವ ಕೇಳಿದ್ದನ್ನೇ ಕೇಳುವ ಅನಿವಾರ್ಯತೆಯಾಗಿದೆ. ಮಕ್ಕಳ ಭಾವ ವಿಸ್ತಾರಕ್ಕಿಂತ ಅವರ ಕೌಶಲ್ಯ ವಿಸ್ತಾರಕ್ಕೆ ಮಹತ್ವ ಸಿಗುತ್ತಿರುವ ಈ ಸಂದರ್ಭದಲ್ಲಿ ಇದು ಸಹಜ ಕೂಡಾ ಅನಿಸುತ್ತದೆ. ಅದಕ್ಕಾಗಿಯೇ ಈಗ ಮಕ್ಕಳ ಚೀಲದ ತುಂಬಾ ಸಾಮಾನ್ಯ ಜ್ಞಾನದ ಪುಸ್ತಕಗಳು, ಗಣಿತದ ಸುಲಭ ಕಲಿಕೆ, ವಿಜ್ಞಾನದ ಮಾರ್ಗದರ್ಶಿ ಪುಸ್ತಕ, ಪಠ್ಯಕ್ಕೆ ಪೂರಕವಾದ ತಜ್ಞರು ಬರೆದ ಪ್ರಶ್ನೆ ಉತ್ತರ, ಪ್ರಬಂಧಗಳು ಇಂತಹವೇ ತುಂಬಿರುತ್ತವೆ. ಇವೆಲ್ಲ ಪಠ್ಯದ ಸುತ್ತಲೇ ಸುತ್ತುವುದರಿಂದ ಹೊಸದಕ್ಕೆ ತೆರೆದುಕೊಂಡಂತೆ ಅನಿಸುವುದಿಲ್ಲ. ಮಕ್ಕಳ ಮನಸ್ಸಿಗೆ ಸಮಾರಾಧನೆಯಾಗುವ ಸಾಹಿತ್ಯವೆಲ್ಲ ದೂರಾಗುತ್ತಿರುವ ಈ ಸಂದರ್ಭದಲ್ಲಿ ಅವರ ಭಾವ ವಿಸ್ತಾರ ಹೇಗೆ ಎನ್ನುವುದು ನಮ್ಮನ್ನು ಕಾಡುತ್ತದೆ.
ನಮ್ಮ ಮಕ್ಕಳು ಎಲ್ಲರೊಂದಿಗೆ ಒಂದಾಗುವುದಿಲ್ಲ. ಅವರು ಮೊಬೈಲ ಟಿವಿಗಳಂತಹ ಇಲೆಕ್ಟ್ರಾನಿಕ್ ಮಾಧ್ಯಮಗಳೊಂದಿಗೆ ಹೆಚ್ಚು ಆಪ್ತತೆ ಬೆಳೆಸಿಕೊಳ್ಳುತ್ತ ಜೀವಪರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅದೇ ಸಮಾಜದ ಈಗಿನ ಅನಿಷ್ಠಗಳಿಗೆಲ್ಲ ಕಾರಣವಾಗುತ್ತಿದೆ ಎಂದೆಲ್ಲಾ ಹೇಳುತ್ತೇವೆ ಆದರೆ ಇದರೆಲ್ಲದರ ಮೂಲ ಎಲ್ಲಿದೆ ಎಂದು ನಮಗೆ ಅರಿವಾಗುವುದಿಲ್ಲ. ಯಾವುದೇ ಕಲಿಕೆ ಇರಲಿ ಅದನ್ನು ಮಕ್ಕಳು ಖುಷಿ ಖುಷಿಯಾಗಿ ಕಲಿಯಬೇಕೆಂದರೆ ಅದು ಆಟದರೂಪದಲ್ಲಿದ್ದರೆ ಒಳಿತು. ಅಂದರೆ ಮಕ್ಕಳು ಆನಂದ ಹೊಂದುತ್ತ ಅರಿವಿಲ್ಲದಂತೆ ಕಲಿಕೆ ಆಗುವಂತಿದ್ದರೆ ಚನ್ನ ಎಂಬುದನ್ನು ಮೇಲಿನ ಪದ್ಯದಲ್ಲಿ ಹೇಳಲಾಗಿದೆ. ಇದನ್ನು ಬರೆದವರು ಶಿಕ್ಷಕ ಮಿತ್ರರಾದ ಸಾತು ಗೌಡ ಬಡಗೇರಿ ಅವರು. ಮಕ್ಕಳ ಮನೋವಿಜ್ಞಾನದ ಅರಿವು ತಾನೇ ತಾನಾಗಿ ಅಂತರ್ಗತವಾಗುವುದು ಶಿಕ್ಷಕರಿಗೆ ಅನ್ನಬಹುದು. ಅವರಿಗೆ ಇರುವ ಮಕ್ಕಳ ಸಾಮಿಪ್ಯದ ಕೊಡುಗೆ ಇದು. ಸಾತು ಗೌಡ ಅವರು ಮಕ್ಕಳ ಪ್ರೀತಿಯ ಶಿಕ್ಷಕರು. ಬಹಳ ವರ್ಷಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡವರು. ಅವರು ಭಾವಗೀತೆಗಳನ್ನು ರಚಿಸಿ ಸ್ನೇಹಿತರ ಸಹಾಯದಿಂದ ಧ್ವನಿ ಸಂಯೋಜಿಸಿ ಅಂತರ್ಜಾಲದಲ್ಲಿ ಹರಿಬಿಡುತ್ತಾರೆ. ಮಕ್ಕಳಿಗೆ ನಾಟಕ ಕಲಿಸುತ್ತಾ ಪ್ರಬುದ್ಧರ ನಾಟಕಗಳನ್ನೂ ನಿರ್ದೇಶಿಸಿದ್ದಾರೆ. ತಾವೇ ಬಣ್ಣ ಹಚ್ಚಿಕೊಂಡು ಪಾತ್ರವಾಗಿದ್ದಾರೆ. ಚಿತ್ರಕಲೆಯಲ್ಲಿಯೂ ಆಸಕ್ತಿಹೊಂದಿರುವ ಇವರು ಮಕ್ಕಳ ಆಪ್ತತೆಯನ್ನು ತಾನೇ ತಾನಾಗಿ ಪಡೆದುಕೊಂಡಿದ್ದಾರೆ. ಇವರ ಉತ್ತಮ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಅಂಕೋಲಾ ಬಡಗೇರಿಯವರಾದ ಇವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದನಗೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬರಹದ ಪ್ರಾರಂಭದಲ್ಲಿರುವ ಸಾತು ಗೌಡ ಅವರ ಪದ್ಯದ ಸಾಲುಗಳು ಸಹಜ ಆಗಿವೆ. ಉತ್ತರ ಕನ್ನಡದ ಪ್ರತಿಭಾನ್ವಿತ ಕವಿಗಳಾದ ಸ್ನೇಹಿತ ಫಾಲ್ಗುಣ ಗೌಡ ಅವರು ನನಗೆ ಸಾತು ಅವರನ್ನು ಪರಿಚಯಿಸಿದರು. ಪರಿಚಯ ಸ್ನೇಹವಾಯಿತು. ಸಾತು ಅವರು ಬಹಳ ಹಿಂದಿನಿಂದ ಬರೆಯುತ್ತಿದ್ದರೂ ಈವರೆಗೂ ಪುಸ್ತಕ ಪ್ರಕಟಿಸಿಲ್ಲ. ಈಗ ಅವರು “ಪುಟ್ಟಿ ಮತ್ತು ಕನ್ನಡಿ”ಮಕ್ಕಳ ಕವನ ಸಂಕಲನ ಪ್ರಕಟಸುತ್ತಿದ್ದಾರೆ. ಅವರ ಕವನಗಳ ಕಟ್ಟನ್ನು ನನಗೆ ನೀಡಿ ಮೊದಲ ಓದಿನ ಜವಾಬ್ಧಾರಿ ನೀಡಿದ್ದಾರೆ.
ಸಾಮಾನ್ಯವಾಗಿ ಅಣ್ಣ ತಂಗಿ ಇದ್ದಾಗ ಅಣ್ಣನದೇ ಮೇಲುಗೈ. ಇದನ್ನು ನಾವು ನೋಡುತ್ತಿರುತ್ತೇವೆ. ವಯಸ್ಸಿನಲ್ಲಿ ಹಿರಿಯ ಎನ್ನುವ ಕಾರಣವೊಂದೆ ಅಲ್ಲದೆ ಗಂಡುಮಕ್ಕಳಿಗೆ ಇರುವ ಹೆಚ್ಚಿನ ಅವಕಾಶಗಳೂ ಕೂಡಿಕೊಂಡಿರುತ್ತವೆ. ಈ ಸಂಕಲನದ ‘ಪುಟ್ಟಿಯ ದೂರು’ ಎನ್ನುವ ಪದ್ಯದಲ್ಲಿ ಸಾತು ಗೌಡ ಅವರು ಅಂತಹ ನಡೆಯನ್ನು ಸಹಜವಾಗಿ ಮಕ್ಕಳ ಮುಂದೆ ಇಟ್ಟಿದ್ದಾರೆ.
ಅಮ್ಮ ನನ್ನ ಮುದ್ದು ಮಾಡೆ
ಅಣ್ಣ ಗುದ್ದು ಹಾಕಿದ
ತನ್ನ ಪುಸ್ತಕ ಹರಿದೆನೆಂದು
ತಳ್ಳ ದೂರ ನೂಕಿದ
ಹೀಗೆ ಸಾಗುವ ಪದ್ಯ ಕೊನೆಯಲ್ಲಿ ತಂಗಿ ತಾನೂ ಶಾಲೆಗೆ ಹೋಗಿ ಜಾಣ ಪೋರಿ ಆಗುವೆ ಎಂದು ಹೇಳುವುದು ಇದೆ.
“ಅಪ್ಪನಲ್ಲಿ ಹೇಳೆ ಅಮ್ಮ
ನಾನೂ ಶಾಲೆಗೆ ಹೋಗುವೆ
ಅಣ್ಣನಂತೆ ನಾನು ಕಲಿತು
ಜಾಣ ಪೋರಿ ಆಗುವೆ.”
ಪುಟ್ಟ ಮಕ್ಕಳೆಲ್ಲ ಹಿರಿಯರ ಅನುಕರಣೆ ಮಾಡುತ್ತ ಬೇಗ ಬೇಗ ತಾವು ದೊಡ್ಡವರಾಗಬೇಕು ಎಂದು ಆಸೆಪಡುತ್ತಾರೆ. ಆದರೆ ಇಳಿವಯಸ್ಸಿನ ಹಿರಿಯರು ತಮ್ಮ ಬಾಲ್ಯವನ್ನು ನೆನಪಿಸಿಕೊಳುತ್ತ ತಮ್ಮ ಮುಂದಿರುವ ಮಕ್ಕಳನ್ನು ಎತ್ತಿ ಮುದ್ದಾಡುತ್ತ ಬಾಲ್ಯದ ಕಡೆಗೆ ಒಲವನ್ನು ತೊರುತ್ತಾರೆ. ಹಾಗಾಗಿಯೇ ಮಕ್ಕಳನ್ನು ತುಂಬಾ ಪ್ರೀತಿಸುವ ಹಿರಿಯರನ್ನು ಕಂಡರೆ ಮಕ್ಕಳಿಗೂ ಬಹಳ ಪ್ರೀತಿ ಹಾಗೂ ಕುತೂಹಲ. ಅಜ್ಜ ಪದ್ಯದಲ್ಲಿ ಮಗು ಅಂತಹುದೇ ಕುತೂಹಲದಿಂದ ಅಜ್ಜನಿಗೆ ಏನೆಲ್ಲಾ ಪಶ್ನೆಗಳನ್ನು ಕೇಳುತ್ತಾ ಹೋಗುತ್ತದೆ.
ಅಜ್ಜಾ ಅಜ್ಜಾ ನಮ್ಮಜ್ಜಾ
ಕಣ್ಣಲಿ ಚಾಳೀಸು ಏಕಜ್ಪಾ?
ಕಣ್ಣಲಿ ಧೂಳುಸೇರುವುದೆಂದು
ಅಂಜಿಕೆ ಏನು ಹೇಳಜ್ಜಾ?
ಎನ್ನುವಂತಹ ಪ್ರಶ್ನೆಗಳು ಸಹಜವಾಗಿ ಬಂದಿವೆ. ಪುಟ್ಟಿಯ ಕನ್ನಡಿ ಪದ್ಯದಲ್ಲಿ ಪುಟ್ಟಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡುತ್ತ ತನ್ನಬಗ್ಗೆ ತಾನೇ ಖುಷಿಪಟ್ಟು ಅಮ್ಮನಲ್ಲಿ ಹೇಳಿಕೊಳ್ಳುವುದು ಇದೆ. ಇಲ್ಲಿ ಮಕ್ಕಳಿಗೆ ಆಪ್ತವಾಗುವ “ಪ್ರಕೃತಿಯ ವಸ್ತುಸಂಗತಿಗಳನ್ನು ಹೋಲಿಕೆಗೆ ನೀಡಿರುವುದು ಗೆಲುವಾಗಿದೆ. ಕೂದಲನ್ನು ಕಪ್ಪನೆಯ ಮೋಡಕ್ಕೆ ಕಣ್ಣಿನ ಹೊಳಪನ್ನು ಚಂದ್ರನಿಗೆ, ಹಲ್ಲಿನ ಹೊಳಪನ್ನು ಮಿಂಚಿಗೆ, ತನ್ನ ಬಣ್ಣವನ್ನು ಟೊಮಾಟೋ ಹಣ್ಣಿನ ಬಣ್ಣಕ್ಕೆ ಹೋಲಿಸಿರುವುದು ಮಕ್ಕಳಿಗೆ ಚಂದ್ರ ಮಿಂಚು, ಕಾಮನಬಿಲ್ಲು, ಟೊಮಾಟೋ ಹಣ್ಣು, ಮಿಣುಕು ಹುಳ ಮುಂತಾದವುಗಳ ಚಿತ್ರಗಳು ಕಣ್ಣ ಮುಂದೆ ಬರುವಂತಾಗಿ ಅವರ ಅರಿವಿನ ವಿಸ್ತಾರಕ್ಕೆ ಪದ್ಯ ಪೂರಕವಾಗಿದೆ.
ಬೆಳಕಿನ ಕಿರಣ ಧರೆಯಲಿ ಚಿಮ್ಮಲು
ಕತ್ತಲೆ ದೂರ ಸರಿಯುವುದು
ಸೃಷ್ಟಿಯು ತನ್ನ ಸೊಬಗಿನ ಅಂದವ
ಜನತೆಯ ಕಣ್ಣಲಿ ಕುಣಿಸುವುದು.
‘ಬೆಳಕು’ ಪದ್ಯದ ಸಾಲುಗಳು. ಬೆಳಕಿನ ಕಿರಣ ಕತ್ತಲೆ ದೂರ ಸರಿಸುವುದು ಎನ್ನುವುದು ಮಕ್ಕಳಲ್ಲಿ ಕತ್ತಲೆಯನ್ನು ದೂರ ಸರಿಸಲು ಬೆಳಕು ಸಹಾಯಕ ಎನ್ನುವ ಅರಿವಿನೊಂದಿಗೆ ಸ್ವಲ್ಪ ಬೆಳೆದ ಮಕ್ಕಳು ಇದನ್ನು ಜ್ಞಾನದ ಬೆಳಕಾಗಿಯೂ ವಿಸ್ತರಿಸಿಕೊಳ್ಳಬಹುದಾಗಿದೆ. ಇದೇ ಪದ್ಯದ ಕೆಳಗಿನ ಸಾಲುಗಳು ವೈಜ್ಞಾನಿಕ ಸಂಗತಿಯನ್ನು ಮಕ್ಕಳಿಗೆ ಸುಲಭವಾಗಿ ದಾಟಿಸುವಂತಿರುವುದನ್ನು ಕಾಣಬಹುದು. “ಪಾರದರ್ಶಕ ವಸ್ತುವು ಇರಲು ಕಿರಣವು ಅದರಲಿ ಹರಿಯುವುದು ಅಪಾರ ದರ್ಶಕ ವಸ್ತುವಿನಲ್ಲಿ ಕಿರಣವು ಮರಳಿ ಹೋಗುವುದು.”
ಮಕ್ಕಳಿಗೆ ಕಥೆಗಳೆಂದರೆ ಇಷ್ಟ ಹಾಗಾಗಿ ಮಕ್ಕಳ ಕವನಗಳಲ್ಲಿ ಕಥನ ಕವನಗಳಿಗೆ ವಿಶಿಷ್ಟ ಸ್ಥಾನವಿದೆ. ಗದ್ಯಕ್ಕಿಂತ ಪದ್ಯಗಳಲ್ಲಿ ಮಗು ಹೆಚ್ಚು ತಲ್ಲೀನತೆ ಹೊಂದಲು, ಗುನುಗುನಿಸಿ ಅನುಭವಿಸಲು ಸಾಧ್ಯವಾಗುತ್ತದೆ. ಸಾತು ಗೌಡ ಅವರ ಈ ಹೊತ್ತಿಗೆಯಲ್ಲಿ ಮೋಸಹೋದ ನಾಯಿ, ತಿಪ್ಪ ಓದು ಕಲಿತ, ದುಡುಕಿನ ಫಲ, ನನಸಾದ ಕನಸು, ಗೆಳೆತನ ಮುಂತಾದ ಕಥನಕವನಗಳನ್ನು ನೀಡಿದ್ದಾರೆ. ದುಡುಕಿನ ಫಲ ಕವನದಲ್ಲಿ ಬೆಕ್ಕು ಮುಖ ಪರಿಚಿತೆಂದು ಸಿಟ್ಟಾಗಿ ಬೆಕ್ಕನ್ನು ಓಡಿಸುವುದು, ಇದರಿಂದಾಗಿ ಇಲಿಯ ಉಪಟಳ ಜಾಸ್ತಿ ಆಗುವುದು ಇದೆ. ಇಲಿಯನ್ನು ಮನೆಯಿಂದ ಓಡಿಸಬೇಕೆಂಬ ಸಿಟ್ಟಿನಲ್ಲಿ ಧನಿಕ ತನ್ನ ಮನೆಗೆ ಬೆಂಕಿ ಇಡುವ ಪ್ರಸಂಗ ಕವಿತೆಯಲ್ಲಿ ಬರುತ್ತದೆ.
ಸೇಡಿನಿಂದ ಮಹಡಿ ತುಂಬಾ
ಸೀಮೆ ಎಣ್ಣೆ ಚೆಲ್ಲಿದ ಕೈಯಲಿದ್ದ ಜ್ವಾಲೆಯಿಂದ
ಮನೆಗೆ ಬೆಂಕಿ ಹಚ್ಚಿದ
ಸಿಟ್ಟಿನಲ್ಲಿ ಮಾಡುವ ದುಡುಕು ನಮ್ಮನ್ನು ಕೆಡುಕಿನ ಕಡೆಗೆ ದೂಡುತ್ತದೆ ಎನ್ನುವುದನ್ನು ಕವನ ಹೇಳುತ್ತದೆ. ಕಥನ ಕವನಗಳಲ್ಲದೆ ದೇಶ, ನಾಡು, ಭಾಷೆ ಕುರಿತಾದಕವನಗಳು ಮತ್ತು ಆರೋಗ್ಯ, ಮತದಾನ ಮುಂತಾದವುಗಳ ಕುರಿತು ಆಶಯ ಗೀತೆಗಳೂ ಇದರಲ್ಲಿವೆ.
ಮಕ್ಕಳ ಕವಿತೆಗಳನ್ನೋ, ಕಥೆಗಳನ್ನೋ ಬರೆಯುವುದು ಸುಲಭವೆಂದುಕೊಂಡರೆ ಆಗದು. ಅದೂ ಒಂದು ಸೃಜನಶೀಲ ಸಾಹಿತ್ಯವೇ. ಮಕ್ಕಳ ಮೇಲಿನ ಒಲವು ಹಾಗೂ ಅದನ್ನು ಬರೆಯಬೇಕೆಂಬ ತುಡಿತರುವವರು ಇದರಲ್ಲಿ ತೊಡಗುತ್ತಾರಷ್ಟೆ. ಹಾಗಾಗಿ ಎಲ್ಲ ರೀತಿಯ ಸಾಹಿತ್ಯ ರಚನೆಗೆ ಏನೆಲ್ಲ ಸಿದ್ಧತೆ ಬೇಕೋ ಮಕ್ಕಳ ಸಾಹಿತ್ಯ ರಚನೆಗೂ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯವನ್ನು ಹಿರಿಯರೂ, ದುಡಿಯುತ್ತಿರುವ ವಯಸ್ಕರು ಓದಿ ಆನಂದ ಪಟ್ಟು ಮಕ್ಕಳಿಗೂ ಸಾರಾಂಶ ತಿಳಿಸಿಕೊಡುತ್ತಿರುವುದು ಖುಷಿಯ ಸಂಗತಿ. ಸ್ನೇಹಿತ ಸಾತು ಗೌಡ ಅವರು ತುಂಬಾ ಉತ್ಸಾಹದಿಂದ ಈ ಸಂಕಲನವನ್ನು ರೂಪಿಸಿದ್ದಾರೆ. ಅವರು ಮಕ್ಕಳ ಸಾಹಿತ್ಯ ರಚನೆಯಲ್ಲಿ ಹಾಗೂ ಅಭ್ಯಾಸದಲ್ಲಿ ತೊಡಗಿರುತ್ತಾರೆಂದು ನನಗೆ ಅನಿಸಿದೆ.
ಅವರು ಪ್ರೀತಿಯಿಂದ ಮೊದಲ ಓದಿಗೆ ನೀಡಿದ್ದನ್ನು ಒಪ್ಪಿಕೊಂಡು ಅಷ್ಟೇ ಪ್ರೀತಿಯಿಂದ ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ. ಅವರ ವಸ್ತು ವೈವಿಧ್ಯತೆ, ಸರಳ ಭಾಷೆ, ಚಿತ್ರಕ ಶಕ್ತಿ, ಮಕ್ಕಳ ಮನೋವಿಜ್ಞಾನದ ಅರಿವು. ಎಲ್ಲವುಗಳಿಂದಲೂ ನಾವು ಅವರಿಂದ ಇನ್ನಷ್ಟು ಒಳ್ಳೆಯ ಸಾಹಿತ್ಯ ನಿರೀಕ್ಷಿಸಬಹುದಾಗಿದೆ. ಈ ಕೃತಿಗೆ ಈ ಹಿಂದೆ ರಾಜ್ಯ ಮಟ್ಟದ “ಬಸವಜ್ಯೋತಿ”ಕರುನಾಡು ಹಣತೆ ಬಳಗದಿಂದ ರಾಜ್ಯ ಮಟ್ಟದ ಸಾಹಿತ್ಯಸಿರಿ ಪ್ರಶಸ್ತಿದೊರಕಿತ್ತು. ಇದೀಗ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿಯು ಇವರ ಕೃತಿಗೆ ಮೂರನೇ ಪ್ರಶಸ್ತಿಯಾಗಿದೆ. ಸಾತು ಗೌಡ ಅವರ ಮೊದಲ ಪ್ರಯತ್ನಕ್ಕೆ ಓದುಗರು ಸ್ಪಂದಿಸಲಿ ಕನ್ನಡದ ಮಕ್ಕಳು ಈ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಳ್ಳುವಂತಾಗಲಿ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳು ಅವರಿಂದ ಬರಲಿ ಎಂದು ಆತ್ಮೀಯವಾಗಿ ಹಾರೈಸುತ್ತೇನೆ.
– ಡಿ ತಮ್ಮಣ್ಣ ಬೀಗಾರ
ಪುಸ್ತಕದ ಪ್ರತಿಗಾಗಿ ಸಂಪರ್ಕಿಸಿ:
ಸಾತುಗೌಡ ಬಡಗೇರಿ.
ಅಂಕೋಲಾ.
9008918842





Leave a Reply