ಹಾಲಕ್ಕಿ ಗೌಡರ ನೆನೆದರೆ ಮನದಿ
ನಂಬಿಕೆ ಪ್ರೀತಿ ನೆನಪಾಗುವುದು.
ಸಂಸ್ಕೃತಿ ಬೆಳೆಸಿ ಉಳಿಸುವ ಪರಿಗೆ
ನಾಡೇ ಜೈ ಜೈ ಎನುತಿಹುದು.
ಕೂಲಿಯ ನಂಬಿ ಮುಂಜಾನೆ ಎದ್ದು
ಹಗಲು ರಾತ್ರಿ ದುಡಿವವರು..
ರಾಗಿ ಅಂಬಲಿಯೇ ತೀರ್ಥ ಎನ್ನುತಲಿ
ಕುಡಿದು ನೆಮ್ಮದಿ ಕಂಡವರು.
ಬಡತನ ಬವಣೆಯಲಿ ಬೆಂದು ನೊಂದರು
ಕಪಟದಿ ದೂರ ಉಳಿದವರು..
ಸಬಲರ ಬಣ್ಣದ ಮಾತಿಗೆ ನಂಬಿ
ತಾವೇ ಹಳ್ಳಕೆ ಬಿದ್ದವರು.
ತುಂಡು ಭೂಮಿಲಿ ಬೆವರು ಸುರಿಸುತ
ದುಡಿತದಿ ಕಷ್ಟ ಉಂಡವರು..
ಗುಡ್ಡದಿ ದೊರೆತ ಗಡ್ಡೆ ಗೆಣಸನು
ಹಬ್ಬದ ಅಡುಗೆ ಎಂದವರು.
ಮದುವೆ ಮುಂಜಿ ಜಾತ್ರೆ ಸಿದ್ಧತೆಯ
ಯಶದಲಿ ಗೌಡರೆ ಮುಂದಿಹರು..
ದುಡಿತದಿ ಕಲಿಕೆ ಘಮವನು ಮರೆತು
ಜೀವನ ಪಥದಲಿ ನೊಂದವರು.
ಮಾತಿಗೆ ತಪ್ಪದ ಸ್ವಾಮಿ ನಿಷ್ಠೆಯು
ಹಿರಿಯರು ನೀಡಿದ ಬಳುವಳಿಯು..
ನಂಬಿಕೆ ಹೆಸರಲಿ ಗೌಡರು ಮುಂದೆ
ನಾಡಜನ ಕೊಟ್ಟ ಉಡುಗೊರೆಯು.
ಜನಪದ ಸೊಗಡಿನ ಉಡುಗೆ ಚೆಲುವಿಗೆ
ನಾಡಿನ ಪ್ರೀತಿಯ ಗೆದ್ದವರು..
ತಮ್ಮದೆ ಹಾಡಿನ ತಮ್ಮದೆ ರಾಗಕೆ
ರಾಷ್ಟ್ರದ ಗಮನ ಸೆಳೆದವರು.
✍️ ಸಾತು ಗೌಡ, ಬಡಗೇರಿ, ಅಂಕೋಲಾ
Leave a Reply