
ನನ್ನ ಬಾಲ್ಯದ ಸವಿನೆನಪಿನ ಒಂದು ಭಾಗವೇ ನನ್ನ ಅಜ್ಜಿ ಮನೆಯಾದ ಬಡಗೇರಿ. ಅದಕ್ಕೆ ಏಕೆ ‘ ಬಡಗೇರಿ’ ಎಂದು ಹೆಸರು ಬಂತೋ ನಾ ಕಾಣೆ. ಸ್ವಾಭಾವಿಕವಾಗಿಯೇ ಆ ಊರಲ್ಲಿ ಅಲ್ಲಲ್ಲಿ ಬಡತನ ಕಂಡುಬಂದರೂ ನನ್ನ ಭಾವನೆಗಳಿಗೆ ಎಂದೂ ಅಲ್ಲಿ ಬಡತನವಿರಲಿಲ್ಲ. ಬಾಲ್ಯದ ದಿನಗಳಲಿ ನನ್ನೂರು ಕಡಮೆಯಿಂದ ಮತ್ತೊಂದೂರಿಗೆ ನನ್ನ ಪಯಣವೆಂದರೆ ನನ್ನಪ್ಪನ ಅಜ್ಜಿ ಮನೆಯಾದ ಹಿರೇಗುತ್ತಿಗೆ ಹಾಗೂ ನನ್ನ ಅಜ್ಜಿ ಮನೆಯಾದ ಬಡಗೇರಿಗೆ.
ಬಡಗೇರಿಯ ನನ್ನಜ್ಜಿಯೊಂದಿಗೆ ನನ್ನೂರಿನಿಂದ ಪಯಣಿಸುವದೆಂದರೆ , ಗಂಗಾವಳಿಯ ಗದ್ದೆ ಬೈಲಿನಲಿ ಶೇಂಗಾ ಓಳಿಯ ಗುಂಟ ನಡೆದು ನದಿಯ ದೋಣಿಯಲಿ ಭಯಮಿಶ್ರಿತ ಬೆರಗಿನಲಿ ತಾರಿ ದಾಟಿ , ಕೇಣಿ ಸಂಕದ ಮೇಲಿಂದ ಪೂರ್ತಿಯಾಗಿ ಬರಿಗಾಲಿನ ಕಾಲ್ನಡಿಗೆಯಲೇ ; ನಮ್ಮ ಪಯಣ ! ನನ್ನಮ್ಮನೊಡನೆ ಹೋದರೆ ಅಂಕೋಲೆಯ ತನಕ ಬಂಕೀಕೋಡ್ಲ ಹುಬ್ಬಳ್ಳಿ ಬಸ್ಸಿಗೆ ಅದೊಂದುಥರ ಹೊಸ ಅನುಭವದ ಬುತ್ತಿ . ಎಲ್ಲಕಿಂತ ಮಿಗಿಲಾಗಿ ನನ್ನ ಸೋದರ ಮಾವನೊಡನೆ ಸೈಕಲ್ ಏರುವದೆಂದರೆ ಇದಕಿಂತ ಖುಷಿ ನನಗೆ ಮತ್ತೊಂದಿರಲಿಲ್ಲ . ಆ ದಿನಗಳಲ್ಲಿ ಅಂದು ಮುಂಜಾನೆ ನಮ್ಮ ಪಯಣ ಸುರುವಾಯಿತೆಂದರೆ ನನ್ನಷ್ಟು ಸುಖಿ ಇನ್ನಾರೂ ಇಲ್ಲ ಎನಿಸುತಿತ್ತು . ಅಲ್ಲೇ ನನ್ನ ಪಾಠಶಾಲೆಯೂ ಪ್ರಾರಂಭವಾದಂತಿರುತಿತ್ತು . ಎರಡೊಂದ್ಲೆಯಿಂದ ಪ್ರಾರಂಭವಾಗಿ , ಜನವರಿ ಫೆಬ್ರುಯಿಂದ ಮತ್ತೆ ಚೈತ್ರ ವೈಶಾಖಗಳೂ…. ಹೊಸದಾಗಿ ಎ ಬಿ ಸಿ ಡಿ ಯೂ ಸಹ ಹೀಗೇ …… . ಈ ಮೂರೂ ತೆರನಾಗಿ ಅಂದು ಬಡಗೇರಿಗೆ ಪಯಣಿಸುವಾಗ ವಿಧವಿಧವಾಗಿ ನನ್ನ
ಬದುಕಿನ ಭಾವನೆಗಳಿಗೆ ಬಣ್ಣ ತುಂಬಿಸಿಕೊಳ್ಳುತ್ತಿದ್ದೆ.
ನನ್ನ ಬಡಗೇರಿಯ ಅಜ್ಜಿ ಬದುಕು ಕಟ್ಟಿ ಕೊಳ್ಳಲು ತುಂಬಾ ಹೆಣಗಾಡಿ ಯಶಸ್ಸು ಸಾಧಿಸಿದ್ದೂ ಒಂದು ಯಶೋಗಾಥೆಯೆ. ನನ್ನ ಸೋದರ ಮಾವ ‘ಕೆ.ಜಿ ‘ ಕೈಗೆ ಬಂದಮೇಲೆ ಎಲ್ಲವೂ ಸಾಂಗವಾಗಿ ನಡೆದು ತುಂಬು ಸಂಸಾರಕೆ ಮಾವನೇ ದಾರಿದೀಪವಾಗಿ ಅವರವರ ಪಾಲಿಗೆ ಬೆಳಕಾದ. ಅದಕೇ ನನಗೆ ಎಂದಿಗೂ ನನ್ನ ಸೋದರ ಮಾವನೆಂದರೆ ಗೌರವ, ಪ್ರೀತಿ ಮತ್ತು ಆತ್ಮೀಯತೆ ಹಾಗೂ ಒಂದು ತರದ ಗೆಳೆತನ ; ಚಿಕ್ಕಂದಿನಿಂದಲೂ ; ಇಂದಿಗೂ ಸಹ !
ಮಾವ ಎಂದ ಕೂಡಲೇ ನನಗೆ ನೆನಪಾಗುವದು ಸೈಕಲ್ಲು . ಆ ದಿನಗಳಲ್ಲಿ ನಮ್ಮಂತವರಿಗೆ ಸೈಕಲ್ ಎಂದರೆ ಒಂದು ಬೆರಗಿನ ವಸ್ತುವೇ. ಸಮಾನ ವಯಸ್ಕರಾದ ನಾವೆಲ್ಲರೂ ಸೈಕಲ್ ಕಲಿತರೆ ಅದು ನಮಗೊಂದು ಪ್ರಶಸ್ತಿ ಬಂದಂತೆಯೆ. ಮನೆಯಲಿ ಸೈಕಲ್ ಇದ್ದರೆ ಹಿರಿಯರನ್ನು ಕಾಡಿ – ಬೇಡಿ – ನಾ ಉಣ್ಣಲಾರೆ ಎಂದು ಬೆದರಿಸಿ ಒಳಪೆಡ್ಲ ಹೊಡೆದು ನಂತರ ಸರಾಗವಾಗಿ ಸೀಟಿನಮೇಲೆ ಕುಳಿತು ಸೈಕಲ್ ಹೊಡೆಯುವತನಕ ಅದೆಷ್ಟು ಸಲ ಮಂಡಿ ಒಡೆಯುವದೋ ದೇವನೇ ಬಲ್ಲ. ಆದರೆ ಮನೆಯಲ್ಲಿ ಸೈಕಲ್ ಇಲ್ಲದ ನನ್ನಂತವನ ಪಾಡು ? ಅದಕಾಗಿಯೇ ನನ್ನ ಸೋದರಮಾವನೆಂದರೆ ನನಗೆ ಬಲು ಇಷ್ಟ ; ಮಾವ ಮನೆಗೆ ಬರುವ ಸುದ್ದಿ ಎಂದರೂ , ಮನಕೆ ಕಡಲ ಅಲೆಗಳ ನೊರೆಗಳಂತೇ. ಮಾವ ಎಂದಿಗೂ ಬಸ್ಸಿಗೆ ಬಂದದ್ದೇ ಇಲ್ಲ ; ಅಂಕೋಲೆಯ ಫಕೀರ ಸಾಬನ ಅಂಗಡಿಯ ಹೊಸ ಬಾಡಗೀ ಸೈಕಲೆಂದರೆ ಮಾವನಿಗೂ ಅಚ್ಚು ಮೆಚ್ಚೇ. ಬೇಲೇಕೇರಿಯ ಮ್ಯಾಂಗನೀಸ್ ಕಂಪನಿ ಯಲ್ಲಿ ನೌಕರಿ ಮಾಡುವ ಮಾವ ರವಿವಾರದ ರಜೆಯಲಿ
ಆಗಾಗ ಬಂದಾಗಲೇ ಅವನಿರುತ್ತಿರುವ ಆ ಚಿಕ್ಕ ಸಮಯದಲ್ಲೇ ನಮ್ಮ ಸೈಕಲ್ ‘ಕಸರತ್ತು ‘ ನಡದೇ ಇರುತಿತ್ತು. ಒಮ್ಮೊಮ್ಮೆ ಕಲಿಯುವಿಕೆಯಲ್ಲಿ ಬಿದ್ದ ರಭಸಕೆ ಮಡ್ಗಾರ್ಡ , ಹ್ಯಾಂಡಲ್ , ಬ್ರೆಕ್ ಗಳೆಲ್ಲಾ ಹರಿದು- ಹಣ್ಣಾದರೂ ಮಾವ ಒಮ್ಮೆಯೂ ನಮಗೆ ಗದರಿಸಿದ್ದೇ ಇಲ್ಲ. ಅದಕೇ ನನಗೆ ಮೊದಲಿನಿಂದಲೂ ನನ್ನ ಭಾವನೆಗಳಿಗೆ ಬಣ್ಣ ತುಂಬಿದ ಮಾವನೆಂದರೆ ಆಗಸದಲ್ಲಿನ ಕಾಮನ ಬಿಲ್ಲಿನ ಪ್ರೀತಿಯಂತೆಯೆ.
ಮೊದಮೊದಲು ಅವರ ಮನೆಯಲಿ ಬಾವಿ ಇಲ್ಲದಿದ್ದರಿಂದ ನಡು ಕೊಪ್ಪದ ಒಕ್ಕಲಮನೆಯ ಬಾವಿಯಿಂದ ನೀರುತಂದರೂ ತಮ್ಮ ಕೈ ತೋಟಕೆ ನೀರುಣಿಸಿ ಹಚ್ಚ ಹಸಿರಾಗಿಸಿದ್ದರು . ‘ ನಿತ್ಯ ಪುಷ್ಪ ‘ ಹೂ ಗಳಿಂದ ಮನೆ ನಳನಳಿಸುತಿದ್ದವು. ಒಕ್ಕಲಮನೆಗೆ ನೀರು ತರಲು ಹೋಗುವಾಗ ಅಲ್ಲಿ ಸುಂದರ ಪ್ರಕೃತಿಯ ನೋಟ ಮನಮೋಹಕವಿತ್ತು. ಮುಂದಿನ ದಿನಗಳಲಿ ತಾವೂ ಬಾವಿ ತೋಡಿಸಿ ಪಕ್ಕದ ಮನೆಯವರ ತೋಟಕೆ ಅವರು ನೀರು ಕೊಡುತ್ತಿದ್ದುದ ಕಂಡು ನನಗೆ ಅಂದೇ ಸಹಕಾರ – ಸಮಾನತೆ – ಸಹಾಯದ ಅರಿವಾದದ್ದು ; ಮುಂದೆ ನಾನೂ ಅಳವಡಿಸಿಕೊಳ್ಳಲು ನಿಶ್ಚಯಿಸಿದ್ದು .
ಹೈಸ್ಕೂಲ್ ದಿನಗಳಿಂದಲೂ ನನ್ನ ಸೋದರಮಾವ ಸದಾ ಲವಲವಿಕೆಯ ಮನಸ್ಸುಳ್ಳವನೂ ಮತ್ತು ಸ್ವಲ್ಪ ಕಿಡಿಗೇಡಿಯೂ ಆಗಿದ್ದನಂತೆ. ಇವನ ಕಿಡಿಗೇಡಿ ತನಕ್ಕೆ ಬೇಸತ್ತ ಹೈಸ್ಕೂಲ್ ಮುಖ್ಯಾಧ್ಯಾಪಕರು ಒಮ್ಮೆ ” ಅಪ್ಪನ್ನ ಕರೆದುಕೊಂಡು ಬಾ ” ಅಂದುದಕೆ ಆ ಮಾಸ್ತರರ ಅಪ್ಪನನ್ನೆ ಶಾಲೆಗೆ ತಂದ ಭೂಪನಂತೆ ಇವನು. ಎಲ್ಲರಿಂದಲೂ ‘ ಕೆ.ಜಿ ‘ ಎಂದೇ ಕರೆಸಿಕೊಳ್ಳುತ್ತಿದ್ದ ಇವರಲ್ಲಿ ಪ್ರೀತಿ – ವಿಶ್ವಾಸ – ನಂಬಿಕೆ – ನಿಷ್ಟೆ ತುಂಬಿರುತ್ತಿದ್ದರಿಂದಲೇ ಮಾವನ ಗೆಳೆಯರ ಬಳಗ ಅಂದಿನಿಂದ ಇಂದಿನ ತನಕ ದೊಡ್ಡದೇ. ಮಾತಿನಲ್ಲಿ ಒಮ್ಮೊಮ್ಮೆ ಏನಾದರೂ ಅಂದರೂ ಎಂದಿಗೂ ಯಾರ ಕೆಡಕನ್ನೂ ಬಯಸುವ ವ್ಯಕ್ತಿ ಇವರಾಗಿರಲಿಲ್ಲ. ಅದಕಾಗಿಯೇ ಬಡಗೇರಿಯಲ್ಲದೇ ಸುತ್ತಲಿನ ಜನರೆಲ್ಲಾ ವಯಸ್ಸನ್ನೂ ಮೀರಿ ‘ ಕೆ.ಜಿ ‘ ಯನ್ನು ಪ್ರೀತಿಸುತ್ತಿದ್ದರು.
ಯಕ್ಷಗಾನ, ನಾಟಕ,ಕಲೆ, ಸಂಸ್ಕೃತಿಗಳೆಂದರೆ ಮಾವನಿಗೆ ಪಂಚ ಪ್ರಾಣ. ತಾಲೂಕಿನ ಯಕ್ಷಗಾನದ ‘ ಹೆಕ್ಮೇಳ ‘ ದಲ್ಲಿ ಅಂದು ಇವರ ಹೆಸರು ಮೇಲ್ಪಂಕ್ತಿಯಲ್ಲಿತ್ತು . ನನ್ನ ಗುರುಗಳಾದ ರಾಮಕೃಷ್ಣ ಗುಂದಿ ಯವರೊಡನೆ ಇವರು ಪಾತ್ರ ನಿರ್ವಹಿಸುತಿರುವದೆಂದರೆ ನನಗೂ ಅಭಿಮಾನವೆ. ಕಂತ್ರಿಯ ಬಿಂಧುಮಾಧವ ಮೇಳದಲ್ಲಿ ಮಾವನದು ವಜ್ರಕಂಠನ ಪಾತ್ರ ; ಚಂದ್ರಮುಖಿ ಸಂಯೋವರದಲ್ಲಿ. ಆ ರಕ್ಕಸ ಅಭಿನಯವೇ ಹಾಗಿತ್ತು , ಜನರೆಲ್ಲಾ ಬೆಕ್ಕಸ ಬೆರಗಾಗುತಿದ್ದರು . ಇಂತಹ ಶಾಂತ ಸ್ವರೂಪಿಯಾದ ಮಾವ , ವಜ್ರಕಂಠನಂತರ ಕಠೋರ ಪಾತ್ರ ಹೇಗೆ ನಿರ್ವಹಿಸುತ್ತಿದ್ದನೆಂಬುದೇ ನನಗಿಂದೂ ಯಕ್ಷಪ್ರಶ್ನೆಯೇ ! ಆಗ ನಾನು ಪದವಿಯ ಒಂದುವರ್ಷವಿಡೀ ಬಡಗೇರಿಯಲ್ಲೇ ವಸತಿಮಾಡಿದ್ದರಿಂದ ಮಾವನ ‘ ನಾಟಕ -ಯಕ್ಷಗಾನ ‘ ವನ್ನು ಸಂಪೂರ್ಣ ಬಲ್ಲವನಾಗಿದ್ದೆ.ಅವನ ಪಾತ್ರವಿದ್ದರಿಂದ ಆ ದಿನವಿಡೀ ಬೆಂಗಾವಲಾಗಿ ಇರುವದೆಂದರೆ ನನಗೂ ಖುಷಿಯೆ. ನಾಟಕದಲ್ಲಿ ಹಾಸ್ಯ ಪಾತ್ರ ಅಭಿನಯಿಸುವದರಲ್ಲಿ ಮಾವ ಸಿದ್ಧಹಸ್ತನು. ಒಮ್ಮೆ ಆ ಹಾಸ್ಯ ಪಾತ್ರಧಾರಿ ನನ್ನ ಮಾವನಿಗೆ , ನಾಟಕದಲ್ಲಿ ಹೊಡೆಯುತ್ತಿರುವ ದ್ರಶ್ಯ ನೋಡಿ ನಾಟಕ ನೋಡುತ್ತಾ ಎದುರಿನಲಿ ಕುಳಿತ ನನ್ನಜ್ಜಿ ಎದ್ದು ಹೋಗಿ ಹೊಡೆಯುತ್ತಿರುವವನನ್ನು ಸರಿಯಾಗಿ ಜಾಡಿಸಿದ್ದೂ ಇದೆ , ಈ ರೀತಿಯಾಗಿತ್ತು ಅವನ ನಾಟಕದ ತನ್ಮಯತೆ. ಈ ಮಾವನ ಸುಮಧುರ ಒಡನಾಟವೇ ನನಗೆ ಮುಂದೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾನಸಿಕ ಅಡಿಪಾಯ ವಾಗಿರಬಹುದೇ ಎಂದು ಒಮ್ಮೊಮ್ಮೆ ನಾನು ಆಲೋಚಿಸುವದಂತೂ ಹೌದೇ ಹೌದು . ಅದಕೇ ನನ್ನ ಬದುಕಲಿ ಬಣ್ಣದ ಭಾವನೆಗಳ ಬೆಸುಗೆಯ ಬಡಗೇರಿ ಮತ್ತು ನನ್ನ ಸೋದರ ಮಾವನೆಂದರೆ ನನಗಿಷ್ಟವೇ .
ಸೈಕಲ್ಲಿನಂತೇ ನನಗೆ ಮತ್ತೊಂದು ಬೆರಗಿನ ವಸ್ತುವೆಂದರೆ ಕೈ ಗಡಿಯಾರ . ಅಪ್ಪನ ಹಳೆಯ ವಾಚಿಗೆ ಹೊಸ ‘ ಕೇಸ್ ‘ ಹಾಕಿಸಿ ಕಾಲೇಜಿನ ಕೆಲ ಗೆಳೆಯರಿಂದ ಹಿಯಾಳಿಸಿಕೊಂಡ ದಿನಗಳೂ ಅಂದಿದ್ದವು. ಆದರೆ ಯಾರೇ ಏನೇ ಅಂದರೂ ನನಗೇನೂ ಅನಿಸುತ್ತಿರಲಿಲ್ಲ. ಅಪ್ಪನ ಆ ಹಳೇ ವಾಚಿನ ಪ್ರೀತಿಯೇ ಹಾಗಿತ್ತು . ಆದರೆ ಆ ಒಂದು ಸುಂದರ ಬೆಳಗಿನಲಿ ಇದೇ ಬಡಗೇರಿಯಲ್ಲಿ ನನ್ನ ಸೋದರಮಾವ ನನಗೆ ಯಾವುದೇ ಸುಳಿಯ ಕೊಡದೇ ಹೊಸ ರಿಕೋ ವಾಚ್ ನನ್ನ ಕೈಗೆ ಕಟ್ಟಿದ್ದನ್ನು ನಾ ಹೇಗೆ ಮರೆಯಲಿ ?
ಅದರ ಡೈಲಿನಲಿ ಬಡಗೇರಿಯ ಬಣ್ಣದ ಬೆರಗೇ ಇತ್ತು. ಕೇಳುವವರಿದ್ದರೆ ಮಾವ ಏನಾದರೂ ಹೇಳುತ್ತಲೇ ಇರುತ್ತಿದ್ದ . ಈ ಎಲ್ಲವುಗಳ ನಡುವೆಯೂ ನನ್ನ ಬದುಕಿಗೆ ಬಣ್ಣ ತುಂಬಿದ ” ಬಡಗೇರಿ ” ಯನ್ನು ಮತ್ತು ಮನುಷ್ಯ ಪ್ರೀತಿಯ , ಕಳಕಳಿಯ , ಮಾನವೀಯ ಧರ್ಮದ ” ಯಕ್ಷಗಾನದ ರಾಜ ” ನನ್ನೂ ನಾನೆಂದಿಗೂ ಮರೆಯಲಾರೆ .
ಲೇಖಕರು: ಪ್ರಕಾಶ ಕಡಮೆ
ಮಾಹಿತಿ ಸಂಗ್ರಹಣೆ: ರಾಮನಾಥ ಡಿ. ಹೊಸಮನೆ ಅಂಕೋಲಾ, ANKOLA-CULTURE HISTORY AND ECOLOGY

Leave a Reply