ಮಾರಿಹೊರೆ ಅರ್ಥಾತ್ ಉಡುಗಲಜ್ಜಿ
ನೀವು ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಕರಾವಳಿಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ರಸ್ತೆಯ ಪಕ್ಕದಲ್ಲಿರುವ ವಿಚಿತ್ರವಾದ ವಿಲೇವಾರಿ ರಾಶಿಯನ್ನು ನೀವು ಇದ್ದಕ್ಕಿದ್ದಂತೆ ಗಮನಿಸಬಹುದು. ಇವು ಸಾಮಾನ್ಯ ಕಸ ವಿಲೇವಾರಿಗಳಲ್ಲ. ಇದು ಸಾಂಸ್ಕೃತಿಕ ಇತಿಹಾಸಉಳ್ಳಂತ ಆಸಕ್ತಿದಾಯಕ ಆಚರಣೆ ಹಾಗೂ ಸ್ಥಳೀಯರ ನಂಬಿಕೆ.
ಕರ್ನಾಟಕದ ಅನೇಕ ರಾಜಮಾರ್ಗದ ಬದಿಯಲ್ಲಿ ಹರಕು ಮುರುಕಾದ ಒಂದಿಷ್ಟು ಹಳೆಯ ಸಾಮಾನು ಕಸದ ರಾಶಿಯ ದೊಡ್ಡದೊಡ್ಡ ಗಂಟು ಮೂಟೆಗಳು, ಅಲ್ಲೊಂದು ಮರದ ಹೆಣ್ಣುಗೊಂಬೆ, ಇವುಗಳ ಬಳಿ ಬಳೆ, ಕುಂಕುಮ, ಕೆಲವು ನಾಣ್ಯಗಳು ಕಾಣಿಸಿಕೊಳ್ಳುತ್ತವೆ. ಇದು ಮಾರಿಹೊರೆ.
ಅಲ್ಲಿಯ ಗೊಂಬೆ ಮಾರಿಯಮ್ಮನಲ್ಲ. ಇದು ಊರು ಕೇರಿಯವರು ಗುಡಿಸಿ ಹಾಕಿದ ಕಸದ ರಾಶಿಗೆ ಸಂಬಂಧಪಟ್ಟ ದೇವರಾಗಿದ್ದು ಇವಳ ಹೆಸರು ಉಡುಗಲಜ್ಜಿ. ಇವಳು ಮಾತೃಪ್ರಧಾನ ಸಂಸ್ಕೃತಿಯ ದೇವರು. ಈ ಸಂಸ್ಕೃತಿಯಲ್ಲಿ ಅಜ್ಜಿಶಬ್ದದಿಂದ ಕೊನೆಯಾಗುವ ಹೊಳೆಯಜ್ಜಿ, ಹೇನಜ್ಜಿ ಇತ್ಯಾದ್ದಿ ಹೆಸರುಳ್ಳ ಹಲವು ಹೆಣ್ಣು ದೇವರುಗಳಿವೆ. ಆದ್ದರಿಂದ ಅಜ್ಜಿ ಎಂದರೆ ದೇವರು ಎಂಬ ಅರ್ಥ ಹೊಮ್ಮುತ್ತದೆ. (ಅಜ್ಜಿ ಎಂಬ ಪದ ದೇವರು ಎಂದೂ ಅರ್ಥವಿಸ್ತಾರ ಪಡೆಯುತ್ತದೆ, ಅಮ್ಮ ಪದಕ್ಕಾದಂತೆ) ಸಂಬಂಧ ವಾಚಕಗಳಲ್ಲಿಯೂ ಈ ಶಬ್ದವಿದೆ. ಇಲ್ಲಿ ತಾಯಿಯ ತಾಯಿಯನ್ನು ತಂದೆಯ ತಾಯಿಯನ್ನು ಅಜ್ಜಿ ಎನ್ನಲಾಗುತ್ತದೆ. ಉಡುಗು ಅಂದರೆ ಗುಡಿಸು, ಕಸವನ್ನು ಒಟ್ಟುಮಾಡು, ಒಟ್ಟುಮಾಡಿ ಹೊರಹಾಕು, ನಾಶ ಮಾಡು ಎಂಬ ಅರ್ಥಗಳಿವೆ.
ಗುಡಿಸಿ ತಂದಿರುವ ಉಡುಗಲಜ್ಜಿಯ ಈ ವಸ್ತುಗಳು ಮತ್ತು ಅಲ್ಲಿಯ ಗೊಂಬೆ ದೇವರು ತಿಂಗಳುಗಟ್ಟಲೆ ಆಯಾ ಊರಿನ ದಾರಿಯಲ್ಲಿ ಬಿದ್ದಿರುತ್ತವೆ. ಸುಮಾರು ಅಯ್ವತ್ತು ವರ್ಷಗಳ ಹಿಂದೆ ಮಾರಿಹೊರೆಯ ಬಳಿ ಈಗ ದಾರಿಯಲ್ಲಿ ಕಾಣುವ ದೊಡ್ಡ ಮೂರ್ತಿಗಳಿರಲಿಲ್ಲ. ಚಿಕ್ಕ ಮಕ್ಕಳ ಆಟಿಕೆಯಾದ ಸುಬ್ಬಕ್ಕ ಎಂದು ಗುರುತಿಸಲಾಗುವ ಗೊಂಬೆಯನ್ನು ಅದು ಹಳೆಯದಾದಾಗ ಮಾರಿಯ ಹಳೆಯ ಸಾಮಾನುಗಳ ಜೊತೆ ಇಡಲಾಗುತ್ತಿತ್ತು. ಇತ್ತಿತ್ತಲಾಗಿ ಉಡುಗಲಜ್ಜಿಯ ಸುಮಾರು ಎರಡು ಅಡಿ ಎತ್ತರದ ಕುಳಿತ ಇಲ್ಲವೇ ನಿಂತ ಗೊಂಬೆಗಳನ್ನು ಎರಡು ಅಥವಾ ನಾಲ್ಕು ಚಕ್ರದ ಚಿಕ್ಕ ಕೈಗಾಡಿಯ ಮೇಲೆ ಇರಿಸಲಾಗುತ್ತದೆ, ಉಡುಗಲಜ್ಜಿ ಹೆಣ್ಣು. ಅಲ್ಲೊಂದು ಗಂಡು ಬೇಕು ಎಂದುಕೊಂಡ ಪುರುಷಪ್ರಧಾನ ಸಮಾಜದ ಭಕ್ತರು ಕಾಲಕ್ರಮದಲ್ಲಿ ಅಲ್ಲೊಂದು ಗಂಡು ಗೊಂಬೆಯನ್ನು ನಿಲ್ಲಿಸಿದರು. ಆದರೆ ಆ ಗೊಂಬೆಯ ಹೆಸರು ಉಡುಗಲಜ್ಜ ಆಗಲಿಲ್ಲ. ಹೀಗೆ ಕಸದ ರಾಶಿಯೇ ಉಡುಗಲಜ್ಜಿ ಎಂಬ ದೇವರಾಗಿ ಉಡುಗಲಜ್ಜಿಎರಡಾಗಿ ಒಂದು ಗಂಡು ಇನ್ನೊಂದು ಹೆಣ್ಣಾಗಿ ಜೊತೆಯಲ್ಲಿ ಕುಳಿತುಕೊಂಡಿರುವ ದೃಶ್ಯವನ್ನು ಹಾದಿಬದಿಯಲ್ಲಿ ಬಿದ್ದಿರುವ ಮಾರಿಹೊರೆಯ ತಾಣದಲ್ಲಿ ಕೈಗಾಡಿಯ ಮೇಲೆ ಕಾಣಬಹುದು. ಕಾಲಕ್ರಮದಲ್ಲಿ ಈ ದ್ರೃಶ್ಯ ಸಿರಿವಂತ ಭಕ್ತರ ಕಣ್ಣಿಗೆ ಬಿದ್ದರೆ (ಅಥವಾ ಕಾಕತಾಳೀಯವಾಗಿ ಏನಾದರೂ ಒಳಿತಾದರೆ) ಈ ಮೂರ್ತಿಗಳನ್ನು ಪಾರ್ವತಿ ಪರಮೇಶ್ವರರೆಂದು ತಿಳಿದು ಈ ಚರ ಮೂರ್ತಿಗಳಿಗೆ ಸ್ಥಿರವಾದ ಬೃಹತ್ ಕಟ್ಟಡ ಕಟ್ಟಲು ಅಣಿಯಾಗಬಹುದು. ಮಾರಿಹೊರೆ ಅರ್ಥಾತ್ ಉಡುಗಲಜ್ಜಿ ಕೆಲವು ಕಡೆ ಒಂದು ಮಾರಿಹೊರೆಯ ಬಳಿ ಎರಡೆರಡು ಉಡುಗಲಜ್ಜಿ ಕೈಗಾಡಿಗಳಿರುವದು ಕಂಡುಬಂದಿದೆ. ಇವು ಸಾಮಾನ್ಯವಾಗಿ ದಂಪತಿ ಉಡುಗಲಜ್ಜಿಯನ್ನು ಹೊಂದಿವೆ. ಒಂಟಿ ಉಡುಗಲಜ್ಜಿಯುಳ್ಳ ಕೈಗಾಡಿಗಳೂ ಇವೆ. ಕೈಗಾಡಿಯಿಲ್ಲದ ಉಡುಗಲಜ್ಜಿಗಳೂ ಇವೆ. ಕೈಗಾಡಿಯನ್ನು ಎಳೆದುಕೊಂಡು ಹೋಗಲು ಅನುಕೂಲವಾಗಲೆಂದು ತೋಳು ಗಡುತರದ ಸುಮಾರು ಮಾರುದ್ದದ ಕಂಬಗಳನ್ನು ಈ ಗಾಡಿಗೆ ಜೋಡಿಸಲಾಗುತ್ತದೆ. ಉಡುಗಲಜ್ಜಿಯನ್ನು ಸಿಮೆಂಟ್ ರಸ್ತೆಯಲ್ಲಿ ಎಳೆದುಕೊಂಡು ಹೋಗಲು ಇದರಿಂದ ಅನುಕೂಲವಾಗುತ್ತದೆ. ಉಳಿದ ಗಂಟುಗಳನ್ನು ತಲೆಹೊರೆಯಲ್ಲಿ ಒಯ್ಯುತ್ತಾರೆ. ಒಂದು ಊರಿನ ಗಡಿಯೊಳಗೆ ಉಡುಗಲಜ್ಜಿಯ ಪ್ರವೇಶವಾಗಿ ಸುಮಾರು ಒಂದು ತಿಂಗಳ ಬಳಿಕ ಒಂದುದಿನ ಈ ಉಡಗಲಜ್ಜಿಯ ಸಹಿತ ಆ ಮಾರಿಹೊರೆಯ ವಸ್ತುಗಳ ಯಾವ ಕುರುಹೂ ಅಲ್ಲಿ ಕಾಣುವದಿಲ್ಲ. ಯಾರೋ ಇದನ್ನು ದೂರ ಒಯ್ದಿದ್ದಾರೆ. ಯಾರು ಈ ಕೆಲಸ ಮಾಡಿದವರು? ಯಾವಾಗ ಈ ಕೆಲಸ ನಡೆಯುತ್ತದೆ? ಎಂಬ ಕುತೂಹಲ ದಾರಿಹೋಕರಿಗಿರುತ್ತದೆ. ಈ ಬಗೆಗಿನ ಕುತೂಹಲದಿಂದ ಮಾಹಿತಿ ಸಂಗ್ರಹಿಸಿದಾಗ ದೊರೆತ ವಿಷಯಗಳನ್ನು ನಿಮಗಾಗಿ ಇಲ್ಲಿಟ್ಟಿದ್ದೇನೆ.
ಕರ್ನಾಟಕದ ಹಲವಾರು ಹಳ್ಳಿ ಪಟ್ಟಣಗಳಲ್ಲಿ ಊರಿಂದೂರಿಗೆ ಈ ಬಗೆಯ ಮಾರಿ ಹೊರೆಯನ್ನು ಒಯ್ದಿಡುವ ಮತ್ತು ಅಲ್ಲಿಂದ ಮುಂದೆ ಸಾಗಿಸುವ ಆಚರಣೆ ಹಲವು ಕಾಲದಿಂದ ಜಾರಿಯಲ್ಲಿದೆ. ಪ್ರತಿವರ್ಷ ಹಿಂದಿನ ಊರಿನಿಂದ ಬಂದು ಮುಂದಿನ ಊರಿಗೆ ಅದು ಪ್ರವೇಶಗೊಂಡಾಗ ಮಾರಿಹೊರೆಯು ಪ್ರವೇಶಗೊಂಡಿರುವ ಊರಿನ ನಿಗದಿತ ಜನರು ಅದನ್ನು ತಮ್ಮ ಊರಿನ ಗಡಿ ದಾಟಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಈ ಜನ ಪ್ರತಿವರ್ಷ ಅದನ್ನು ಮುಂದಿನ ಊರಿನ ನಿಗದಿತ ಜಾಗಕ್ಕೆ ಒಯ್ದಿಡುತ್ತಾರೆ. ಆದರೆ ಈ ಬಗ್ಗೆ ಎಲ್ಲಿಯೂ ಲಿಖಿತ ದಾಖಲೆಯಿಲ್ಲ. ಪುರಾಣ ಕತೆಗಳ ಅವಾಂತರವೂ ಇಲ್ಲಿಲ್ಲ. ಈ ಕಾರ್ಯವನ್ನು ಇವರು ತಮ್ಮ ಊರಿಗೆ ಸಲ್ಲಿಸುವ ಸೇವಾಕಾರ್ಯವೆಂದು ಭಾವಿಸುತ್ತಾರೆ. ಈ ಕಾರ್ಯಕ್ಕಾಗಿ ಇವರು ಸರಕಾರವನ್ನು, ಸಾರ್ವಜನಿಕರನ್ನು ಅನುದಾನಕ್ಕಾಗಲೀ ಕೂಲಿಗಾಗಲೀ ಪೀಡಿಸುವದಿಲ್ಲ. ಅದೆಷ್ಟು ಕಾಲದಿಂದ ಇವರು ಹೀಗೆ ಈ ಹೊರೆಯನ್ನು ತಮ್ಮ ಊರ ಗಡಿ ದಾಟಿಸುವ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೋ ದಾಖಲೆಯಿಲ್ಲ. ಇದು ಬಹುಕಾಲದಿಂದ ನಡೆದುಬಂದ ಪದ್ಧತಿ ಎಂಬುದು ಹಲವರಿಗೆ ಗೊತ್ತಿದೆ. ಇಲ್ಲಿ ಮಾರಿಹೊರೆ ದಾಟಿಸಲು, ಸ್ಥಾಪಿಸಲು ಯಾವ ತಕರಾರು ತಗಾದೆ ಇಲ್ಲ. ಹಾಗೇನಾದರು ಸಂಭವಿಸಿದರೆ ಮಾರಿ ಮುನಿಯುವಳು. ರೋಗ ರುಜಿನವನ್ನು ಹರಡುವಳು ಎಂಬ ಎಚ್ಚರ ಆಯಾ ಊರಿನವರಿಗಿದೆ.
ಇದು ಮೂಲತಃ ತಮ್ಮ ತಮ್ಮ ಊರಿಗೆ ಮಾರಿ ರೋಗ ಬರದಂತೆ ತಡೆಯುವ ಮತ್ತು ಪರಿಸರಸ್ನೇಹಿಯಾದ ಆಚರಣೆ. ಇದರ ಮೂಲ ಆಶಯ ಅರ್ಥಪೂರ್ಣವಾದದ್ದು. ಹೊಲಸು ಕಸಕಡ್ಡಿ ಮಾರಿಬೇನೆಗಳಿಗೆ ಕಾರಣವೆಂಬ ಸತ್ಯ ಅರಿವಾದ ಜನ ಈ ಆಚರಣೆ ಹುಟ್ಟು ಹಾಕಿರಬೇಕು. ಮಾರಿಹೊರೆ ಸಾಗಿಸುವ ಆಚರಣೆಯಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ಆಚರಣೆ ತಮ್ಮ ಮನೆಮನೆಯ ಊರು ಕೇರಿಯ ಕಸ ಗುಡಿಸಿ ಹೊರಹಾಕುವ ಕ್ರಿಯೆಗೆ ಸಂಬಂಧ ಪಟ್ಟದ್ದಾಗಿದೆ. ಈ ಪದ್ಧತಿಯ ಅಂಗವಾಗಿ ಮಾರಿಹೊರೆ ಆಯಾ ಊರಿನಲ್ಲಿದ್ದಷ್ಟು ದಿನ ಆಯಾ ಊರಿನ ಜನರು ತಮ್ಮ ಮನೆ ಊರು ಕೇರಿಯ ಕಸ ಗುಡಿಸಿ ಮೊರ ಹಿಡಿ ತೊಟ್ಟಿಲು ಮುಂತಾದ ಹಳೆ ವಸ್ತುಗಳನ್ನು ಮಾರಿಹೊರೆಗೆ ಸೇರಿಸಬೇಕು. ಇದು ನಡೆದುಬಂದ ಪದ್ಧತಿ. ಈ ಪದ್ಧತಿಗೆ ಅನುಗುಣವಾಗಿ ಭಕ್ತರು ತಮ್ಮ ಮನೆ ವಠಾರ ಗುಡಿಸಿ ಅದನ್ನು ಹಳೆಯ ಮೊರದಲ್ಲಿ ತುಂಬಿ ಗುಡಿಸಿದ ಹಿಡಿಸಹಿತ ಅದನ್ನೊಯ್ದು ಉಡುಗಲಜ್ಜಿಯ ಮುಂದೆ ಇಟ್ಟು ಕೈಮುಗಿಯುತ್ತಾರೆ. ಮುತ್ತಯ್ದೆಯರು ಹೂ ಕುಂಕುಮ ಬಳೆ ತಮ್ಮ ಶಕ್ತ್ಯಾನುಸಾರ ಕೆಲವು ನಾಣ್ಯ ಚಿಕ್ಕ ನೋಟುಗಳನ್ನು ಅರ್ಪಿಸಿ ಊರಿಗೆ ಬಂದ ಮಾರಿರೋಗವನ್ನು ದೂರ ಮಾಡಲು ತಮ್ಮ ಮಾತಿನಲ್ಲಿ ಹೇಳಿಕೆ ಮಾಡಿಕೊಳ್ಳುತ್ತಾರೆ. ಹೀಗೆ ಉಡುಗಲಜ್ಜಿಯ ಮುಂದೆ ನಾಣ್ಯಗಳಲ್ಲದೆ ನೋಟುಗಳು ಬಿದ್ದಿರುತ್ತವೆ. ಈ ಬಿದ್ದ ನಾಣ್ಯ ನೋಟುಗಳೇನಾದವು? ಇಲ್ಲಿದೆ ಉತ್ತರ. ಉಡುಗಲಜ್ಜಿಯ ಮುಂದೆ ಕಾಣುವ ನಾಣ್ಯ ನೋಟುಗಳ ಮೇಲೆ ಕಣ್ಣಿಟ್ಟ ಹೆಣ್ಣುಮಕ್ಕಳು ಆ ನೋಟು ನಾಣ್ಯಗಳನ್ನು ಎತ್ತಿಕೊಳ್ಳುತ್ತಾರೆ. ಕೆಲವು ನಾಣ್ಯದಿಂದ ಕುಂಕುಮ ಕೊಂಡು ಉಡುಗಲಜ್ಜಿಯ ಬಳಿ ಚಲ್ಲುತ್ತಾರೆ, ಉಳಿದ ಹಣದಿಂದ ಅಯ್ಸ್‌ಕ್ರೀಮ್ ಕೊಂಡು ತಿನ್ನುತ್ತಾರೆ. ಹೀಗೆ ಉಡುಗಲಜ್ಜಿಯ ದುಡ್ಡನ್ನು ಬಳಸುವ ಹಕ್ಕು ಈ ಹೆಣ್ಣುಮಕ್ಕಳಿಗಿದೆ. ಇಲ್ಲಿ ದೇವರು ಭಕ್ತರು ಬೇರೆ ಬೇರೆಯಲ್ಲ. ಗಮನಿಸಿ, ಬೇಸಾಯದ ದೇವರಾದ ಬಲಿಯ ಬುತ್ತಿಯನ್ನು ಸಾಮಾನ್ಯವಾಗಿ ಕೇರಿಯ ಗಂಡುಮಕ್ಕಳು ಎತ್ತೊಯ್ದು ತಿನ್ನುತ್ತಾರೆ, ಬೋರಜ್ಜಿಯ ಎಡೆಯನ್ನು ಮನೆಯ ಮಕ್ಕಳು ಉಣ್ಣುತ್ತಾರೆ, ದೇವರಿಗಿಟ್ಟ ಚರುವನ್ನು ಗುನಗ ಮನೆಗೊಯ್ಯುತ್ತಾನೆ, ನೈವೇದ್ಯವನ್ನು ಪೂಜಾರಿ ಮನೆಗೊಯ್ಯುತ್ತಾನೆ, ಉಣ್ಣದ ಲಿಂಗಕ್ಕೆ ಬೋನವ ಹಿಡಿವರಯ್ಯಾ ಎನ್ನದಿರಿ. ಬೋನವನ್ನು ಉಣ್ಣುವವರು ಕಾದಿರುತ್ತಾರೆ ಇಲ್ಲಿ. ಉಣ್ಣುವ ಹಕ್ಕಲ್ಲದೆ ತೊಡುವ ಹಕ್ಕೂ ಭಕ್ತರಿಗಿದೆ. ಉಡುಗಲಜ್ಜಿಗೆ ಅರ್ಪಿಸಿದ ಹೊಸ ಬಳೆಯನ್ನು ಎತ್ತಿ ತೊಡುವ ಹಕ್ಕು ಭಕ್ತ ಮುತ್ತಯ್ದೆಯರಿಗಿದೆ.
ಆಚರಣೆಗಳು ಬದಲಾಗುತ್ತಿವೆ, ಸಾಮಾಜಿಕ ನೆಲೆಯುಳ್ಳ ಜನಾರೋಗ್ಯದ ಆಶಯವುಳ್ಳ ಈ ಆಚರಣೆ ಧಾರ್ಮಿಕ ಆಚರಣೆಯಾಗಿದೆ. ಕೊಳೆ ಕಸವನ್ನು ಹೊರಹಾಕುವ ಕಾರ್ಯ ಸಾಂಕೇತಿಕವಾಗಿ ನಡೆಯುತ್ತದೆ. ಕಸ ಕಡ್ಡಿಯನ್ನು ಹೊತ್ತುಕೊಂಡು ಹೋಗಲು ಹಿಂದೆ ಹಳೆಯ ಬಟ್ಟೆ ಬುಟ್ಟಿ ತೊಟ್ಟಿಲುಗಳಿದ್ದವು. ಇದು ಪ್ಲೆಸ್ಟಿಕ್ ಯುಗ ಮಾರುದ್ದಗಲದ ಪೊಲಿಥೀನ್ ಚೀಲಗಳಲ್ಲಿ ಕಸವನ್ನು ತುಂಬಿ ಒಯ್ಯಲಾಗುತ್ತದೆ. ಅದರಲ್ಲಿ ಪೊಲಿಥೀನ್‌ಕಸಗಳೂ ಸೇರಿಕೊಂಡಿರುವದು ಕಾಲಮಹಿಮೆ. ಕಸಗಳ ರಾಶಿಗೆ ಇ-ಕಸವೂ ಸೇರತೊಡಗಿದೆ. ಕುಮಟಾದಲ್ಲಿ ಕಂಡ ಮಾರಿಹೊರೆಯಲ್ಲಿ ಹಳೆಯ ಟಿ.ವಿ. ಪೆಟ್ಟಿಗೆಯೂ ಸೇರಿಕೊಂಡಿದೆ. ಈಗ ಈ ಮಾರಿಹೊರೆ ಹೊರುವವರ ಪಾಡೇನಾಗಬೇಕು? ಮಾರಿಗೇ ಗೊತ್ತು!
ಮಾರಿ ಹೊರೆ ಕುರಿತ ನಂಬಿಕೆಗಳೂ ಲಭ್ಯ. ಮಾರಿ ಹೊರೆಯನ್ನು ದೀಪ ಹಚ್ಚಿದ ಬಳಿಕ ಹೊರಸಾಗಿಸಬೇಕು. ಮಾರಿ ಹೊರೆ ಹೋಗುವಾಗ ದಾರಿಯಲ್ಲಿ ಜನವಿರಬಾರದು. ಮಾರಿ ಹೊರೆ ಹೋಗುವಾಗ ಕೂಗುತ್ತ ಹೋಗಬೇಕು. ಇಂಥ ನಂಬಿಕೆಗಳು ಜನಾರೋಗ್ಯದೃಷ್ಟಿ ಹೊಂದಿವೆ. ಮಾರಿಹೊರೆಯಲ್ಲಿ ರೋಗಕಾರಕಗಳಿರುವ ಸಾಧ್ಯತೆಯಿರುವ ಕಾರಣ ಕೂಗುತ್ತ ಸಾಗುವಾಗ ಎದುರಿಗೆ ಬರುವ ಜನ ದೂರಸರಿದು ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ ಎಂಬ ಉದ್ದೇಶವಿದೆ.
ಮಾರಿಹೊರೆ ಆಚರಣೆಯಿಂದ ಮಾರಿ ಭೀತಿ ದೂರವಾಗುತ್ತದೆ ಎಂಬ ನಂಬಿಕೆಯಲ್ಲಿ ಸತ್ಯವಿಲ್ಲದಿಲ್ಲ. ಆದರೆ ಮಾರಿಹೊರೆ ಆಚರಣೆಯಲ್ಲಿ ಸ್ವಚ್ಛತೆಯನ್ನು ಪಾಲಿಸುವದು ಪ್ರಮುಖವಾಗಬೇಕು. ಮಾರಿಹೊರೆಗೆ ಕುಂಕುಮ ಹೂ ಇಟ್ಟು ಕೈಮುಗಿದು ಕಳಿಸಬೇಕು, ಮಾರಿಹೊರೆಯನ್ನು ಹೊರುವದಕ್ಕೆ ಬಂದವರು ಅದಕ್ಕೆ ತೆಂಗಿನಕಾಯಿಯನ್ನು ಒಡೆದು ಪೂಜೆಮಾಡಿ ಹೊರಬೇಕು ಎಂಬುದು ಅವರವರ ಭಕ್ತಿ ಭಾವಕ್ಕೆ ಸಂಬಂಧಿಸಿದ ಸಂಗತಿಯಾಗಿದೆ.
ಮಾರಿ ಹೊರೆಯನ್ನು ಹೊರ ಸಾಗಿಸುವ ದಿನ ಸಮೀಪಿಸಿದಾಗ ಹೂವು ಗಂಧ ಹಾಕಿ ಅದಕ್ಕೊಂದು ಕಾಯಿ ಒಡೆದು ಬರುವದು ಕೆಲವು ಕಡೆ ರೂಢಿಯಲ್ಲಿದೆ. ಅಲ್ಲೆಲ್ಲಾದರೂ ಬ್ರಾಹ್ಮಣರ ಮನೆಯಿದ್ದರೆ ಅವರನ್ನು ಕರೆತಂದು ಆ ಮಾರಿಯ ಮೂರ್ತಿಗಳಿಗೆ ಪೂಜೆಮಾಡಿಸಿ ಅಲ್ಲಿಂದ ನಿತ್ಯ ತಿರುಗಾಡುವ ತಮ್ಮ ಟೆಂಪೋಕ್ಕೆ ಪ್ರಸಾದ ಹಾಕಿಸುವ ಕಾರ್ಯಕ್ರಮವನ್ನು ಕೈಗೊಳ್ಳುವ ಭಕ್ತರು ಹುಟ್ಟಿಕೊಂಡಿದ್ದಾರೆ. ಅರ್ಥಪೂರ್ಣ ಆಚರಣೆಗಳು ಅರ್ಥ ಕಳೆದುಕೊಳ್ಳುವುದರ ಜೊತೆಗೆ ಈ ಮಾರಿ ಹೊರೆ ಹಾಕುವಲ್ಲೆಲ್ಲ ಅಲ್ಲೊಂದು ಪೂಜೆಗೊಳ್ಳುವ ದೇವರು ಕಾಣಿಸಿಕೊಳ್ಳುತ್ತದೆ. ಮಾರಿಮಸಣಿಗಳು ಕ್ಷುದ್ರ ದೇವತೆಗಳೆಂಬ ಅಭಿಪ್ರಾಯಗಳಿದ್ದರೂ ಕೂಡಾ ಪೂಜೆ ಮಾಡಿಸುವವರಿಂದ ಹಣ ದೊರೆಯುತ್ತದೆಯೆಂಬ ಕಾರಣದಿಂದ ಈ ಮಾರಿಗಳನ್ನು ಆಗಮೋಕ್ತ್ತ ಕ್ರಮದಂತೆ ಸಂಸ್ಕೃತ ಭಾಷೆಯಲ್ಲಿ ಪೂಜಿಸಲು ಪೂಜಾರಿಗಳು ಮುಂದೆ ಬರುತ್ತಾರೆ. ಇದು ಯಾವ ದೇವರು? ಈ ಹಾದಿಯಲ್ಲಿ ತಿರುಗಾಡುವ ವಾಹನಗಳಿಗೂ ಇದಕ್ಕೂ ಸಂಬಂಧವೇನು ಎಂದು ಅರಿಯದ ಜನ ತಮ್ಮ ವಾಹನಗಳಿಗೆ ಮುಂದೆ ಯಾವುದೇ ಧಕ್ಕೆಯಾಗದಿರಲಿ ಎಂಬ ಕೋರಿಕೆಯೊಂದಿಗೆ ಪೂಜೆ ಸಲ್ಲಿಸುತ್ತಾರೆ. ಮುಂದೊಂದು ದಿನ ಈ ಮಾರಿ ಹೊರೆಯ ಸ್ಥಾದಲ್ಲಿ ದೇವಸ್ಥಾನವೊಂದು ಹುಟ್ಟಿಕೊಂಡು ಅದಕ್ಕೆ ಉಡುಗಲಜ್ಜಿ ಎಂಬ ಹೆಸರು ಉಡುಗಿಹೋಗಿ ದುರ್ಗೆ, ಪಾರ್ವತಿ, ಮಹಾದೇವಿ ಎಂಬ ಹೆಸರುಗಳು ಸೇರಿಕೊಂಡರೆ ಆಶ್ಚರ್ಯವಿಲ್ಲ. ಇದರ ಜೊತೆ ಇನ್ನೊಂದು ಭಯಂಕರವಾದ ಅಪಾಯವನ್ನು ಈ ಆಚರಣೆ ಹುಟ್ಟು ಹಾಕಿದೆ. ಅದೇನೆಂದರೆ ಮಾರಿಹೊರೆಯನ್ನು ಊರಿಂದೂರಿಗೆ ಸಾಗಿಸುತ್ತ ಮುಂದೆ ಸಮುದ್ರ ಮುಟ್ಟಿಸುವ ಪದ್ಧತಿಯಿದೆ. ಆದ್ದರಿಂದ ಮಾರಿಹೊರೆಯ ಹೆಸರಿನಲ್ಲಿ ಸಿಂಥೆಟಿಕ್ ಸೀರೆ ಬಟ್ಟೆಗಳ ರಾಶಿ, ಪ್ಲೆಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯಗಳ ರಾಶಿಯು ಸಮುದ್ರ ಸೇರುತ್ತಿದೆ. ಮೀನು ಮೊಸಳೆಗಳು ಈ ಸಿಂಥೆಟಿಕ್ ಸೀರೆ ಮತ್ತು ಬಟ್ಟೆಗಳನ್ನು ನುಂಗಬಹುದು. ಈ ಮಾರಿಹೊರೆ ಪದ್ಧತಿಯನ್ನು ಉಳಿಯಗೊಟ್ಟರೆ ಬಹುಬೇಗ ಸಮುದ್ರಕ್ಕೆ ಮಾರಿಬೇನೆ ಹರಡುವದರಲ್ಲಿ ಸಂದೇಹವಿಲ್ಲ.
ಮಾಹಿತಿ: BuDa Folklore










Leave a Reply