
ಗಡಿಮಳೆ ಪ್ರಾರಂಭವಾದೊಡನೆ ಹಳ್ಳಿಗಳಲ್ಲಿ, ಊರುಗಳಲ್ಲಿ, ಗ್ರಾಮಗಳಲ್ಲಿನ ಜನರಲ್ಲಿ ಪ್ರಾರಂಭವಾಗುವುದು ಈ ಗಡಿಪೂಜೆ. ಹಸಿರುಪೂಜೆ, ಆವಾರಿ, ಕೋಳಿಮಾಯ್ಸ, ತುಗ್ಟಿ, ನೆಂಟರೂಟ ಇತ್ಯಾದಿ ಹೆಸರಿನಲ್ಲಿ ಗ್ರಾಮದೇವತೆಗಳ ಪೂಜೆಗಳು ವ್ಯಾಪಕವಾಗಿ ತಲಾಂತರದಿಂದ ನಡೆದುಕೊಂಡು ಬಂದಿರುತ್ತದೆ. ಈ ಗ್ರಾಮದೇವತೆ ಇಲ್ಲದ ಊರು, ಹಳ್ಳಿ, ಗ್ರಾಮ ಇಲ್ಲವೇ ಇಲ್ಲ. ಒಂದು ಗ್ರಾಮದಲ್ಲಿ ಕನಿಷ್ಟ ಪಕ್ಷ ಒಂದಾದರೂ ಗ್ರಾಮದೇವತೆ ಇದ್ದೇ ಇದೆ. ಕೆಲವಡೆ ಒಂದಕ್ಕಿಂತ ಹೆಚ್ಚು ದೇವತೆಗಳು ಇವೆ. ನಮ್ಮ ಪೂರ್ವಜರು ತಮ್ಮ ಹಳ್ಳಿಗೆ ಅಪಾಯ ಬಂದಾಗ, ರೋಗರುಜಿನಿ ಬಂದಾಗ, ತಮ್ಮ ರಕ್ಷಣೆಗಾಗಿ, ನಂಬಿಕೆಗಾಗಿ ಅಂದು ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ, ಕೇರಿಗಳಲ್ಲಿ ಕಾಯುವವಳಾಗಿ ಕಂಡುಕೊಂಡಿದ್ದರು. ಗ್ರಾಮದೇವತೆ ತಮ್ಮನ್ನು ಒಲಿದರೆ ನಮ್ಮ ಜನಾಂಗದ ಉಳಿವು, ಸಂತತಿ ಬೆಳೆವಣಿಗೆ, ರಕ್ಷಣೆ. ಮುನಿಸಿದರೆ ನಮ್ಮ ನಾಶ ಎಂಬುವ ನಂಬಿಕೆಯಾಗಿ ಇಂದಿಗೂ ಪರಿಪಾಲಕರಾಗಿ ನಾವು ಬೆಳೆಸಿಕೊಂಡು
ಬಂದಿದ್ದೇವೆ. ಪ್ರಾಚೀನ ಮಾನವರು ತಮ್ಮ ಕಾಡಿನೊಂದಿಗಿನ ಬದುಕಿನ ನಡುವೆ ಆಹಾರಕ್ಕಾಗಿ ಸಾಕಷ್ಟು ಅಲೆಮಾರಿಯಾಗಿ ಓಡಾಡುತ್ತಿದ್ದ ಸಮಯದಲ್ಲಿಯ ನಡೆಯೊ ಅನೇಕ ಪ್ರಕೃತಿಯ ಘಟನೆಗಳು, ವಸ್ತುಗಳು ಅವರಿಗೆ ಕುತೂಹಲವನ್ನು ಕೆರಳಿಸಿದ್ದವು. ಪ್ರಕೃತಿಯ ಬಿಸಿಲು, ಬಿರುಗಾಳಿ, ಚಳಿ, ಗುಡುಗು, ಮಿಂಚು, ಮಳೆ, ಭೂಕಂಪ, ಪ್ರಾಣಿಗಳ ಭಯ, ಅನೇಕ ವಿಸ್ಮಯಗಳು ಆತನ ಬದುಕಿಗೆ ಗಂಡಾಂತರವನ್ನು ತಂದಿದ್ದವು. ಇವೆಲ್ಲವನ್ನು ಆತ ತನ್ನೆಡೆಗೆ ಒಲಿಸಿಕೊಳ್ಳಲು ಪ್ರಯತ್ನವನ್ನು ನಾಗರಿಕತೆಯಲ್ಲಿ ಮಾಡಿಕೊಂಡಿದ್ದರು. ಅದಕ್ಕಾಗಿ ಅವರು ಸೂರ್ಯ, ಚಂದ್ರ, ಗಾಳಿ, ಮಳೆ, ಬೆಂಕಿ, ಪ್ರಾಣಿ ಮುಂತಾದವುಗಳನ್ನು ಪೂಜಿಸಲು ಪ್ರಾರಂಭಿಸಿದರು. ಮುಂದೆ ಇದೇ ಆಕಾರ, ರೂಪ ನೆಲೆ ಕಲ್ಪಿತವಾಗಿ ಇಂದು ಆಚಾರ ವಿಚಾರಗಳಾಗಿ ಗ್ರಾಮದೇವತೆಯಾಗಿ ಹುಟ್ಟಿಕೊಂಡು ಪೂಜಿತವಾಗಿದೆ.
ಅಲೆಮಾರಿ ಬಿಟ್ಟು ಒಂದಡೆ ನೆಲೆಯಾದ ಮಾನವರು ತಮ್ಮ
ಜೀವರಕ್ಷಣೆಗಾಗಿ, ಆಸ್ತಿರಕ್ಷಣೆಗಾಗಿ, ಬೆಳೆರಕ್ಷಣೆಗಾಗಿ ದೇವರಲ್ಲಿ ಮೊರೆ ಹೋದರು. ಇದರಿಂದ ಕಲ್ಪಿತನಾದ ಮಾನವರು ದೇವರಿಗೆ ಗುಡಿಗೋಪರ ನಿರ್ಮಿಸಿ ಅಪಾರ ನಂಬಿಕೆಯಿಂದ ಪೂಜಾಪದ್ಧತಿಯು ಉಂಟಾಗಿ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಗ್ರಾಮದೇವತೆಯು ಬಂದು ಶಾಶ್ವತವಾದ ನೆಲೆಯನ್ನು ಕಂಡುಕೊಂಡಿತು. ಮಾನವನಿಗೆ ಉಂಟಾಗುವ ಒಂದು ಸಣ್ಣ ಪುಟ್ಟ ಸಂಕಷ್ಟ ತೊಂದರೆಗಳಿಗೂ, ನೋವುಗಳಿಗೂ ದೇವತೆಗಳು ಹುಟ್ಟಿಕೊಂಡವು. ಕಿವಿ-ಮೂಗು ಸೋರುವುದಕ್ಕೆ, ಕಾಲು ಉಳಿಕಿದರೆ, ಹಾವು ಕಚ್ಚಿದರೆ, ಮೂಲವ್ಯಾದಿಗೆ, ಮಕ್ಕಳಾಗದೆ ಇದ್ದರೆ, ಎಮ್ಮೆ ಹಾಲು ನೀಡದಿದ್ದರೆ, ಸಂಸಾರದಲ್ಲಿ ಜಗಳ ನಿವಾರಣೆಗೆ ಹೀಗೆ ಹತ್ತು ಹಲವಾರು ರೀತಿಯ ತೊಂದರೆಗಳ ನಿವಾರಣೆಗೆ ಇಂದು ಸಹ: ದೇವರ ಮೊರೆ ಹೋಗುವ ರೂಢಿ ಜಾಲ್ತಿಯಲ್ಲಿ ಇದೆ.
ಗ್ರಾಮದೇವತೆ ಬಗ್ಗೆ, ಪರಶುರಾಮ ತನ್ನ ತಂದೆ ಜಮದಗ್ನಿಯ ಆಜ್ಞೆಯನ್ನು ಮೀರಲಾರದೇ ತಾಯಿ ರೇಣುಕೆಯ ರುಂಡಜ್ಛೇದನ ಮಾಡಿದ ಪ್ರಸಂಗ ನೆನೆಯಬಹುದು. ತಾಯಿಯ ತಲೆಯನ್ನು ಕಡಿದು ಹಾಕಿದ, ರೇಣುಕೆಯ ರುಂಡ ಬಿದ್ದ ಕಡೆ ಒಂದಕ್ಕೆರಡರಂತೆ ಹೊಸ ತಲೆಗಳು ಹುಟ್ಟಿದವು. ಅವುಗಳನ್ನೂ ಕಡಿದು ಹಾಕಿದಾಗ ಅವು ಬಿದ್ದ ಕಡೆ ಎರಡಕ್ಕೆ ನಾಲ್ಕು ತಲೆಗಳಾಗಿ ಹುಟ್ಟಿ ಅಸಂಖ್ಯಾತ ತಲೆಗಳು ಹುಟ್ಟಿದವು. ಕೊನೆಗೆ ಜಮದಗ್ನಿಯ ಅನುಗ್ರಹದಿಂದ ರೇಣುಕೆಗೆ ಜೀವದಾನವಾಯಿತು. ಉಳಿದ ಅಸಂಖ್ಯಾತ ತಲೆಗಳು ಗ್ರಾಮದೇವತೆಗಳಾಗಲಿ ಎಂದು ಪರಶುರಾಮ ವರ ನೀಡಿದನಂತೆ, ಇದರಿಂದ ಮುಂದೆ ಇವು ಗ್ರಾಮದೇವತೆಗಳಾದವು ಎಂಬ ಜನಪದ ನಂಬಿಕೆಯು ಇದೆ. ಇನ್ನೂ ಗ್ರಾಮದೇವತೆಯ ಕಲ್ಪನೆಯು ಪುರಾತನದಾಗಿದ್ದುಸಿಂಧೂ, ಹರಪ್ಪಾ ಸಂಸ್ಕೃತಿಯಲ್ಲಿಯೂ ಕಂಡುಬರುತ್ತದೆ.
ಗ್ರಾಮದೇವತೆಗಳು ಜನಪದರ ಇಷ್ಟಾರ್ಥಗಳನ್ನು ಪೂರೈಸುವುದಕ್ಕಾಗಿ ಹುಟ್ಟಿಕೊಂಡವು ಎನ್ನುವುದರಲ್ಲಿ ಸಂಶಯವಿಲ್ಲ. ಜನರ ಜನಜೀವನದ ಬದುಕಿಗೂ ಇವುಗಳಿಗೂ ಅನನ್ಯವಾದ ಸಂಬಂಧವಿರುವುದು ಸತ್ಯವಾಗಿದೆ. ಇವುಗಳಲ್ಲಿ ಹೆಣ್ಣು ದೇವತೆ, ಗಂಡುದೇವತೆಗಳೂ ಇವೆ. ತಾಯಿಯ ಸ್ವರೂಪಿ, ಆದಿಶಕ್ತಿಯ ಸ್ವರೂಪಿಯಾಗಿ ಪ್ರಕೃತಿಯನ್ನು ಹೆಣ್ಣಾಗಿ, ಪೋಷಣೆಯ ಮೂಲವಾಗಿ, ದುಷ್ಟರ ಶಿಕ್ಷತಳಾಗಿ, ಶಿಷ್ಟರ ರಕ್ಷಿಪಳಾಗಿ ಇಂದು ಪೂಜಿತವಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಇವುಗಳನ್ನು ಮಣ್ಣು, ಮರ, ಕಲ್ಲುಗಳಿಂದ ವಿಗ್ರಹಗಳಾಗಿ ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ನಿರ್ಮಿಸಿ ಪೂಜಾ ಅಲಂಕೃತಳಾಗಿ ಜಾತ್ರೆಯಲ್ಲಿ, ಹಬ್ಬಗಳಲ್ಲಿ ವಿಜೃಂಭಣೆಯಿಂದ ಇಂದು ಆಚರಿಸುತ್ತಿದ್ದಾರೆ. ನಮ್ಮ ತಪ್ಪಿಂದ ಕಾಪಾಡುವ ದೇವತೆಗೆ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದು, ಅದಕ್ಕಾಗಿ ನಾನಾ ರೀತಿಯ ಹರಕೆ, ಸೇವೆಗಳನ್ನು ಕಾಣಿಕೆಗಳನ್ನು. ಪೂಜೆಗಳನ್ನು ಸಲ್ಲಿಸುತ್ತಾ ಬಂದಿರುತ್ತಾರೆ.
ಇದರಲ್ಲಿ ಬಲಿಅರ್ಪಣೆ, ಕುರಿ-ಕೋಳಿ ಹರಿಕೆಯು ಒಂದಾಗಿದೆ.
ಗ್ರಾಮದೇವತೆಯ ಹಬ್ಬದ ದಿನ ನೆರೆಹೊರೆ, ಬಂದುಬಾಂಧವರು ಸೇರಿ ಬಾಂಧವ್ಯ ವೃದ್ಧಿಯಾಗಲು, ಉತ್ತಮ ಹವ್ಯಾಸ ಬೆಳೆಯಲು. ಧಾರ್ಮಿಕ ಭಾವನೆ ಬೆಳೆಯಲು, ನಂಬಿಕೆ-ವಿಶ್ವಾಸ ಬೆಳೆಯಲು, ಸಾಂಸಾರಿಕ ಸಂಬಂಧಗಳು ಬಲಗೊಳ್ಳಲು, ಪರಸ್ಪರ ಪ್ರೀತಿ-ಸ್ನೇಹಗಳು ಸಂಪನ್ನಗೊಳ್ಳಲು, ಮಾನವರ ಕ್ರೌರ್ಯ-ಅಟ್ಟಹಾಸ ದೂರವಾಗಲು, ಮಾನವೀಯತೆಯ ಮೌಲ್ಯಗಳು ನೆಲೆಸಲು,
ಸಾಂಘಿಕ ಜೀವನದ ಬದುಕು, ಸಹಕಾರತ್ವ ಬೆಳೆದು ಬದುಕು ರೂಪಿಸಲು ಇಂದು ಹಬ್ಬ ಕಾರಣವಾಗಿದೆ.
ಲೇಖಕರು: ಚಂದ್ರಶೇಖರ ಪಡುವಣಿ, ತೆಂಗಿನಗುಂಡಿ, ಭಟ್ಕಳ.

Leave a Reply