ಹಳೆಪೈಕರು : ಒಂದು ಅಧ್ಯಯನ (ನಾಮಧಾರಿಗಳ ಕುಲಮೂಲ)

Posted by

·

ಗೆಳೆಯ ಉಮೇಶ ನಾಯ್ಕ ಅವರು ತಮ್ಮ “ಹಳೆಪೈಕರು: ಒಂದು ಅಧ್ಯಯನ” ಸಂಶೋಧನಾ ಗ್ರಂಥದ ಮೂಲಕ ನಾಮಧಾರಿಗಳ ಕುಲಮೂಲ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಹಳೆಪೈಕ-ನಾಮಧಾರಿ ಸಮಾಜ (ಜಾತಿ)ಯಲ್ಲಿರುವ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳನ್ನು ವಿವರವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕುಟುಂಬ ವ್ಯವಸ್ಥೆ, ಮದುವೆ, ಆಹಾರ ಪದ್ಧತಿ, ಉಡುಗೆ ತೊಡುಗೆ, ಭಾಷಾ ವೈಶಿಷ್ಟ್ಯ, ಧರ್ಮ, ದೇವರು ಎಲ್ಲವನ್ನೂ ಉಮೇಶ ಇಲ್ಲಿ ಚರ್ಚಿಸಿದ್ದಾರೆ. ನನಗೆ ತಿಳಿದ ಹಾಗೆ ಜಿಲ್ಲೆಯ ಹಳೆಪೈಕ- ನಾಮಧಾರಿ ಸಮುದಾಯದ ಸಂಸ್ಕ್ರತಿಯ ಕುರಿತು ಹೊರಬಂದ ಮೊಟ್ಟ ಮೊದಲ ಪುಸ್ತಕ. ಅದಕ್ಕಾಗಿ ಮತ್ತು ಇನ್ನೂ ಹಲವಾರು ಸಂಗತಿಗಳ ಕಾರಣವಾಗಿ ನಾನು ಉಮೇಶರನ್ನು ಅಭಿನಂದಿಸುವೆ.

ನಾಮಧಾರಿ ಸಮಾಜ (ಜಾತಿ)ದ ಕುಲಮೂಲ ಹುಡುಕುತ್ತ ಹೋದಂತೆ ಉಮೇಶರ ಈ ಪಯಣ ಅಚ್ಚರಿ ಮೂಡಿಸುತ್ತದೆ. ತುಂಡು ತುಂಡು ಸಮಾಜ (ಜಾತಿ)ಗಳು ಅಂದುಕೊಂಡ ಹಳೆಪೈಕದ ಈಡಿಗ, ಬಿಲ್ಲವ, ನಾಡಾರ ಮುಂತಾದ 26 ಪಂಗಡಗಳೊಂದಿಗೆ, ಕುಮಾರಪಂತ, ವಾಲ್ಮೀಕಿ ಸಮಾಜ, ಮೀನುಗಾರ ಸಮಾಜಗಳು ಒಳಗೊಳ್ಳುತ್ತ ಹೋಗುತ್ತವೆ! ಜಾತಿಯ ಹೆಸರಿನಲ್ಲಿ ಒಡೆದು ಚೂರು ಚೂರಾಗಿ ಹೋಗಿರುವ ಹಳೆಪೈಕ ಸಮುದಾಯದ ಪಂಗಡಗಳನ್ನು ಮತ್ತೆ ಒಂದುಗೂಡಿಸುವುದು ಸಮಾಜದ ಒಳಿತಿನ ದೃಷ್ಟಿಯಿಂದ ಅವಶ್ಯವಾಗಿದೆ.

ಹಳೆಪೈಕ ಸಮುದಾಯದ ಒಂದು ಗುಂಪು ಒಡೆದು ನಾಮಧಾರಿ ಜಾತಿಯಾದ ಸಂಗತಿಯನ್ನು, ಕಾಲಘಟ್ಟವನ್ನು ಆಧಾರ ಸಮೇತ ಉಮೇಶ ವಿವರಿಸುತ್ತಾರೆ. ಹಳೆಪೈಕ ಎಂಬ ಬಹುದೊಡ್ಡ ದ್ರಾವಿಡ ಪಂಗಡ ಒಡೆದು ಹಲವು ಜಾತಿಗಳಾಗಿ ಮಾಡಿರುವ ಬಗ್ಗೆ ಇಲ್ಲಿ ಸಾಕಷ್ಟು ಕ್ಲೂ ಸಿಗುತ್ತದೆ. ಜಿಲ್ಲೆಯ ಜಾತಿ ಸಮುದಾಯದ ಅಧ್ಯಯನದ ಪರಂಪರೆಯಂತೆ ಉಮೇಶ ಅವರೂ, ಜಾತಿಯು ಬ್ರಾಹ್ಮಣ್ಯದ ಹೇರಿಕೆ ಎಂಬುದನ್ನು ಗ್ರಹಿಸದೆ, ಅದು ಸಮುದಾಯದ ಆಯಾ ಪಂಗಡದ ಒಪ್ಪಿತ ವ್ಯವಸ್ಥೆ ಎಂದೇ ಗ್ರಹಿಸುತ್ತಾರೆ. ಸಮಾಜದ ಅನೇಕ ಸ್ವಾತಂತ್ರ್ಯ, ಕೃಷಿ ಹೋರಾಟಗಾರರ ದುರಂತ ಜೀವನವನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಆದರೆ ಹಲವರ ಹೋರಾಟದಲ್ಲಿ ಮನುವಾದಿಗಳ ಕರಿನೆರಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. (ಉದಾ: ಚೌಡಾ ನಾಯ್ಕ ಅವರ ಹೋರಾಟ.) ಈ ಕುರಿತು ಮತ್ತೊಮ್ಮೆ ವಿವರವಾಗಿ ಚರ್ಚಿಸಬಹುದು ಅನ್ನಿಸುತ್ತದೆ.

ಮುಂದುವರಿದು ಸಮುದಾಯದ ಕಳೆದುಹೋದ ಇತಿಹಾಸ ಹೊರತೆಗೆಯುವುದು ಎಷ್ಟು ಮುಖ್ಯವೋ, ಭಾವಿ ಇತಿಹಾಸವನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ನಂಬಿರುವ ಉಮೇಶ ಸಮಾಜದ ಎಲ್ಲ ಪ್ರತಿಭೆಗಳ (ಸಂಘಟನೆ, ಯಕ್ಷಗಾನ, ಸಾಹಿತ್ಯ ಇತ್ಯಾದಿ) ಪರಿಚಯಕ್ಕೂ ಸಾಕಷ್ಟು ಪುಟಗಳನ್ನು ಮೀಸಲಿಟ್ಟಿದ್ದಾರೆ. ಅಕಾಡೆಮಿಕ್ ಅಲ್ಲದ ಸಂಶೋಧನೆಯ ಮಿತಿಯ ನಡುವೆಯೂ ಉಮೇಶ ಉತ್ತಮವಾದುದನ್ನು ಸಾಧಿಸಿದ್ದಾರೆ. ಅಕಾಡೆಮಿಕ್ ಶುಷ್ಕತೆ ಇಲ್ಲದಿರುವುದರಿಂದ ಓದಲೂ ಖುಷಿ ಕೊಡುತ್ತದೆ. ಅವರ ಸುಲಲಿತ ನಿರೂಪಣೆಯೂ ಅದಕ್ಕೆ ಸಾಥ್ ನೀಡುತ್ತದೆ. ಮುಂದೆ ಈ ಸಮುದಾಯದ ಸಂಶೋಧನೆಗೆ ಬರುವವರಿಗೆ ಹಲವಾರು ಸಂಶೋಧನಾ ವಿಷಯಗಳನ್ನು ಈ ಪುಸ್ತಕ ಒದಗಿಸುತ್ತದೆ. ಉದಾ: ಒಂದು ಕಾಲದಲ್ಲಿ ಈ ಸಮುದಾಯದ ಬಹು ಸಂಖ್ಯೆ ಜೈನ ಹಾಗೂ ಬೌದ್ಧ ಧರ್ಮಾಚರಣೆಯಲ್ಲಿತ್ತೇ? ಹೀಗೆ ಹಲವಾರು ವಿಷಯಗಳಿವೆ.

ಸಮುದಾಯ, ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತಿಯಿರುವ, ಹಳೆಪೈಕ, ನಾಮಧಾರಿ ಮುಂತಾದ ಸಮುದಾಯದ 26 ಸಮಾಜ(ಜಾತಿ)ದ ಎಲ್ಲರೂ ಓದಲೇಬೇಕಾದ ಪುಸ್ತಕ.

(ಪುಸ್ತಕ ಬೇಕಾದವರು ಸಂಪರ್ಕಿಸಿ:
ಉಮೇಶ ನಾಯ್ಕ: 9448906589
ರಾಘವೇಂದ್ರ ಪ್ರಕಾಶನ: 9448145370)

✍️ ಗಣೇಶ ಪಿ. ನಾದರ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading