ಉಪ್ಪಿನ ಸತ್ಯಾಗ್ರಹದ ಮೂಲಸ್ಥಾನ ಉತ್ತರ ಕನ್ನಡ – ಕರ್ನಾಟಕದ ಬಾರ್ಡೊಲಿ ಎಂದು ಕರೆಸಿಕೊಂಡ ಅಂಕೋಲಾ

Posted by

·

ಉಪ್ಪಿನ ಸತ್ಯಾಗ್ರಹ: ಗಾಂಧೀಜಿಯವರು ದೇಶದ ವಿಮೋಚನೆಯ ದೀಕ್ಷೆ ತೊಟ್ಟು ಬರುವ ವೇಳೆಗೆ ಹಿಂದಿನ ಪ್ರಮುಖ ರಾಷ್ಟ್ರೀಯ ನಾಯಕರು ನಿರ್ಗಮಿಸಿದ್ದರು. ಸ್ವಾತಂತ್ರ್ಯ ಚಳವಳಿಯು ಕೇವಲ ಮಹಾನಗರಗಳನ್ನು ಕೇಂದ್ರೀಕರಿಸಿ ನಡೆಯದೇ ಹಳ್ಳಿ ಹಳ್ಳಿಗಳಿಂದ ಸ್ವಾತಂತ್ರ್ಯದ ಬೇಡಿಕೆ ಅನುರಣಿಸಬೇಕು ಎಂದು ಘೋಷಿಸಿದ ಗಾಂಧೀಜಿಯವರ ಕರೆಗೆ ಓಗೊಟ್ಟವರಲ್ಲಿ ಅಂಕೋಲೆಯ ಜನರು ಪ್ರಮುಖರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸೇರಿದ ಸಾವಿರಾರು ತೊರೆಗಳಲ್ಲಿ ಇಲ್ಲಿನ ಚಳವಳಿಗಾರರು ನಡೆಸಿದ ಅಪೂರ್ವ ಸಾಹಸದ ಕತೆಗಳು ಚಿರಸ್ಮರಣೀಯವಾಗಿವೆ.

1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ ಕಾಂಗ್ರೆಸ್ ಸಮಿತಿಯು ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲು ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡದ ದಿನವಾದ ಏಪ್ರಿಲ್ 13ನೇ ತಾರೀಖಿನಂದೇ ನಡೆಸಲು ನಡೆಸಲು ನಿರ್ಣಯಿಸಲಾಗಿತ್ತು ಮತ್ತು ಅಂಕೋಲೆಯೇ ಇದಕ್ಕೆ ಸೂಕ್ತ ಸ್ಥಳ ಎಂದು ನಿರ್ಧರಿಸಿದ್ದರಿಂದ ಹನುಮಂತರಾವ್ ಕೌಜಲಗಿ, ಕಾಕಾ ಕಾರ್ಖಾನೀಸ, ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಜಯರಾಮಾಚಾರ್ಯ ಮುಂತಾದವರು ಈ ಭಾಗದಲ್ಲಿ ಸಂಚರಿಸಿ ಹೋರಾಟದ ಬಗ್ಗೆ ಪ್ರಚಾರಮಾಡಿದರು. ಮಾನ್ಯ ಗುಲವಾಡಿಯವರು ಇದರ ಸ್ಥಾನಿಕ ಮುಂದಾಳುಗಳಾದರು. ತಿಮ್ಮಪ್ಪ ನಾಯಕ ಮಾಸ್ತರ, ಎಂ.ಪಿ. ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ರಾಮ ನಾಯಕ, ಬೊಮ್ಮಯ್ಯ ನಾಯಕ ಮುಂತಾದವರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಜನರನ್ನು ಹುರಿದುಂಬಿಸಿದರು. ಅಂಕೋಲೆಯ ಪೇಟೆ ಮಧ್ಯದಲ್ಲಿ ಪ್ರಶಸ್ತ ಇಮಾರತಿನಲ್ಲಿ (ಇಂದಿನ ಬಂಡಿ ಬಜಾರದಲ್ಲಿ ಪಿ.ಎಲ್.ಡಿ. ಬ್ಯಾಂಕ ಇರುವ ‘ಹಳೆಕೋರ್ಟು’ ಎಂದು ಕರೆಯುವ ಕಟ್ಟಡ) ಸ್ವಯಂ ಸೇವಕರ ಶಿಬಿರ ತೆರೆಯಲಾಯಿತು ಎಪ್ರಿಲ್ 13ಕ್ಕೆ ಸತ್ಯಾಗ್ರಹಿಗಳ ಪ್ರಥಮ ಪಥಕವು ಉಪ್ಪಿನ ಸತ್ಯಾಗ್ರಹ ಮಾಡಿತು.

೧೯೩೦ರ ಏಪ್ರಿಲ್ ೧೩, ಅಂಕೋಲ ಕರ್ನಾಟಕದ ಬಾರ್ಡೋಲಿಯಾದ ದಿನ. ಮುಂದಿನ ಅನೇಕ ಸತ್ಯಾಗ್ರಹಗಳಿಗೆ ನಾಂದಿ ಹಾಡಿದ ದಿನ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಗೊಂದು ಸ್ಥಾನ ದಕ್ಕಿದ್ದಾದರೆ, ಅದಕ್ಕೆ ಅಡಿಪಾಯ ಹಾಕಿದ ದಿನ. ಆನಂದಿಬಾಯಿ ದತ್ತು ನಾರ್ವೇಕರ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಪೊಲೀಸರನ್ನು ಲೆಕ್ಕಿಸದೇ ಪೂಜಗೇರಿ ಹೊಳೆಯತ್ತ ಜಯಘೋಷಗಳೊಂದಿಗೆ ಹೊರಟಿತು. ಈ ಹೋರಾಟದ ನಾಯಕತ್ವ ವಹಿಸಬೇಕಾಗಿದ್ದ ನಾ.ಸು. ಹರ್ಡೀಕರ ಅವರಿಗೆ ಅಂಕೋಲೆ ತಲುಪಲು ಸಾಧ್ಯವಾಗದ್ದರಿಂದ ಹೊನ್ನಾವರದ ಎಂ.ಪಿ. ನಾಡಕರ್ಣಿ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಅಂದು ಉಪ್ಪಿನ ಕಾಯದೆಗಳನ್ನು ಮುರಿಯುವ ಉದ್ದೇಶದಿಂದ ಹೊರಟ ಮೆರವಣಿಗೆಯಲ್ಲಿ ಅನೇಕ ಹಳ್ಳಿಗಳಿಂದ ಬಂದು ಸೇರಿದ ಸಹಸ್ರಾರು ಸ್ತ್ರೀ ಪುರುಷರನ್ನು ಕಾಣಬಹುದಾಗಿತ್ತು. ಅದರಲ್ಲಿ ಅನೇಕ ಹೆಂಗಸರಂತೂ ಎಳೆಮಕ್ಕಳನ್ನು ಎತ್ತಿಕೊಂಡು ಬಿಸಿಲಿನಲ್ಲಿ ನಡೆದು ಬಂದಿದ್ದರು. ಶ್ಯಾಮರಾವ ಶೆಣೈರವರ ತಂಗಿ ಸೀತಾಬಾಯಿ ಸರಾಫರು “ಕರಕೊಟ್ಟ ಉಪ್ಪನ್ನು ಯಾರೂ ತಿನ್ನಕೂಡದು. ಉಪ್ಪಿನ ಕಾಯದೆ ಭಂಗವು ನಮ್ಮ ಮೇಲೆ ಹೇರಿದ ಅಪ್ರತ್ಯಕ್ಷ ಕರದ ನಿರಾಕರಣೆ, ಕರಕೊಡದ ಸ್ವತಂತ್ರ ಉಪ್ಪು ತಿಂದು ನಾವು ಸ್ವಾತಂತ್ರ್ಯ ಪಡೆಯುವಾ” ಎಂದು ಆವೇಶ ಪೂರ್ಣವಾಗಿ ಭಾಷಣ ಮಾಡಿದರು. ಶ್ರೀಮತಿ ಆನಂದಿಬಾಯಿ ಹನಮಟ್ಟಿಕರರೂ ಕೂಡ ಅಷ್ಟೇ ಆವೇಶದಿಂದ ಸಭೆಯಲ್ಲಿ ಭಾಷಣ ಮಾಡಿ ಕಾಯದೆ ಭಂಗ ಮಾಡುವುದಕ್ಕೆ ಕರೆ ಇತ್ತರು. ಹಿನ್ನಿರೀನ ಉಪ್ಪು ನೀರನ್ನು ಮಣ್ಣನ್ನೂ ಸಂಗ್ರಹಿಸಿಕೊಂಡು ಬಂದು ಅಂದಿನ ಮಾಮಮಲೇದಾರನ ಸಮ್ಮುಖದಲ್ಲೇ ಉಪ್ಪು ನೀರನ್ನು ಕುದಿಸಿ ಉಪ್ಪನ್ನು ತಯಾರಿಸಿ ಲಿಲಾವು ಮಾಡಿದರು. ಸುಮಾರು 40000 ಸಾವಿರಕ್ಕೂ ಮಿಕ್ಕಿ ಸೇರಿದ ಜನರಲ್ಲಿ ಅಂಕೋಲೆಯ ನಾಮಧಾರಿ ಸಮಾಜದ ‘ದೇವು ಹೊನ್ನಪ್ಪ ನಾಯ್ಕ’ ಎನ್ನುವವರು 30 ರೂಪಾಯಿಗಳನ್ನು ಕೊಟ್ಟು ಆ ಮೊದಲ ಪೊಟ್ಟಣ ಉಪ್ಪನ್ನು ಖರೀದಿಸಿದರು. ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಸ್ವಾಮಿ ವಿದ್ಯಾನಂದರು ಬ್ರಿಟಿಷರು ಭಾರತೀಯರ ಮೇಲೆ ಹೇರಿರುವ ಅನ್ಯಾಯದ ಕಾನೂನುಗಳನ್ನು ಶಾಂತಿಯಿಂದ ಉಲ್ಲಂಘಿಸಿ ಸ್ವರಾಜ್ಯವನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದ್ದರು.

ಪೋಲಿಸರು ಚಳುವಳಿಯ ಮುಖಂಡರನ್ನು ಬಂಧಿಸಿರರೂ ಸತತ 45 ದಿನಗಳ ಕಾಲ ಉಪ್ಪಿನ ಸತ್ಯಾಗ್ರಹ ಮುಂದುವರಿಯಿತು. ಕುಂದಾಪುರ, ಉಡುಪಿ, ಮಂಗಳೂರು, ಪುತ್ತೂರು, ಪಡುಬಿದಿರೆ ಸೇರಿದಂತೆ ಸುಮಾರು 40 ಕೇಂದ್ರಗಳಿಗೆ ಈ ಚಳುವಳಿ ವ್ಯಾಪಿಸಿತು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಚಳುವಳಿಗೆ ಧುಮುಕಿ ಉಪ್ಪಿನ ತಯಾರಿಕೆಯಲ್ಲೂ, ಮಾರಾಟದಲ್ಲೂ ತೊಡಗಿಕೊಂಡರು. ಗಾಂಧಿಜಿ ಉಪ್ಪಿನ ದಾಸ್ತಾನುಗಳ ಮೇಲೆ ದಾಳಿ ಮಾಡಲು ಕರೆನೀಡಿದಾಗ ಇಲ್ಲಿನ ಸ್ವಯಂ ಸೇವಕರು ಶ್ರೀಧರ ಪಾಂಡುರಂಗ ಬಾಳ್ಗಿಯವರ ನೇತ್ರತ್ವದಲ್ಲಿ ಸಾಣಿಕಟ್ಟೆಯ ಉಪ್ಪಿನ ದಾಸ್ತಾನನ್ನು ಕುಮಟೆಗೆ ಸಾಗಿಸಿದರು. ಅಲ್ಲಿನ ಪೇಟೆಯಲ್ಲಿ ಸಾವಿರಾರು ಮಣ ಉಪ್ಪು ಕೇವಲ 15 ನಿಮಿಷದಲ್ಲೇ ಮಾರಾಟವಾಯಿತು. ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತ ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಅಂಕೋಲೆಯ ಕೀರ್ತಿ ದೇಶಾದ್ಯಂತ ಹರಡಿತು.

ಮಾಹಿತಿ: ಶ್ಯಾಮಸುಂದರ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading