ದಾಂಡೇಲಿ ಪೇಪರ್ ಮಿಲ್ – ಇತಿಹಾಸ, ಯಶೋಗಾಥೆ

Posted by

·

ದಾಂಡೇಲಿ ಎಂದೊಡನೆ ತಕ್ಷಣ ನೆನಪಾಗುವುದು ಅಲ್ಲಿನ ದಟ್ಟ ಅರಣ್ಯ, ಪ್ರಕೃತಿ ಸೌಂದರ್ಯ, ರುದ್ರ ರಮಣೀಯ ಕಾಳಿ ನದಿ ಹಾಗೆಯೇ ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿರುವ ನಮ್ಮ ಹೆಮ್ಮೆಯ ‘ದಾಂಡೇಲಿ ಪೇಪರ್ ಮಿಲ್’. ದೇಶದ ಕಾನೂನು ಸುವ್ಯವಸ್ಥೆ, ಶೈಕ್ಷಣಿಕ ಕಾಂತ್ರಿ, ತಂತ್ರಜ್ಞಾನ ಕ್ರಾಂತಿ ಮತ್ತು ಪ್ಯಾಕೇಜಿಂಗ್ ಉದ್ಯಮದ ಅಭೂತಪೂರ್ವ ಅಭಿವೃದ್ಧಿಗೆ ದಾಂಡೇಲಿಯಲ್ಲಿ ತಯಾರುಗುವ ಕಾಗದ ಮತ್ತು ಇತರೆ ಉತ್ಪನ್ನಗಳು ನೇರ ಹೊಣೆಯಾಗಿರುವುದು ಸತ್ಯಕ್ಕೆ ಬಲು ಹತ್ತಿರದ ಮಾತು.

ದಾಂಡೇಲಿ ಎನ್ನುವ ದಟ್ಟ ಅಭಯಾರಣ್ಯ ಸುತ್ತುವರೆದ ಪ್ರದೇಶವನ್ನು ದೇಶ ವಿದೇಶದ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ದಾಂಡೇಲಿಯನ್ನು ಒಂದು ಸುಂದರ ನಗರವನ್ನಾಗಿ ಪರಿವರ್ತಿಸಿದ ಕೀರ್ತಿ ‘ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್’ಗೆ ಸಲ್ಲುತ್ತದೆ. ಈ ಬ್ರಹತ್ ಕೈಗಾರಿಕೆಯ ಹಿಂದಿನ ಶಕ್ತಿಗಳು ಮತ್ತು ನಡೆದುಬಂದ ದಾರಿಯ ಬಗ್ಗೆ ತಿಳಿದುಕೊಳ್ಳುವುದು ನಮ್ಮೆಲರ ಕರ್ತವ್ಯವಾಗಿದೆ.

ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್ ನ ಆರಂಭ ಹಾಗು ಯಶಸ್ಸಿಗೆ ಕಾರಣವಾದ ಎಸ್. ಕೆ. ಬಂಗೂರ್ ಗ್ರೂಪ್ ನ ಇತಿಹಾಸ ರೋಚಕವಾದದ್ದು.

ಬಂಗೂರ್ ಗ್ರೂಪ್‌ನ ಚರಿತ್ರೆ ಶತಮಾನದ ಹಳೆಯ ಅಲಂಕೃತ ಪರಂಪರೆಯ ಕಥೆಯಾಗಿದೆ. ರಾಜಸ್ಥಾನದ ದಿಡ್ವಾನಾದಲ್ಲಿ ಕುಟುಂಬ ಮಾಲೀಕತ್ವದ ವ್ಯಾಪಾರವು ಸಾಧಾರಣ ಆರಂಭದಿಂದ ಶುರುವಾಗಿ ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಿ ಪ್ರಸ್ತುತ ಹಲವಾರು ಉನ್ನತ ಬೆಳವಣಿಗೆಯ ಕಂಪನಿಗಳ ಜಾಲವನ್ನು ಹೊಂದಿದೆ. ಕಾಗದ ಮತ್ತು ತಿರುಳು ತಯಾರಿಕೆಯಿಂದ ಚಹಾ ಉತ್ಪಾದನೆಯವರೆಗೆ ಮತ್ತು ಫೈಬರ್ ಕೇಬಲ್ ತಯಾರಿಕೆಯಿಂದ ಶಕ್ತಿ ಸಂಪನ್ಮೂಲದವರೆಗೆ ಬಂಗೂರ್ ಗ್ರೂಪ್ ವೈವಿಧ್ಯಮಯ ಉದ್ಯಮದ ಸದೃಢ ಅಸ್ತಿತ್ವವನ್ನು ಹೊಂದಿದೆ. ಪ್ರಸ್ತುತ ಎಸ್.ಕೆ. ಬಂಗೂರ್ ಗ್ರೂಪ್ ಭಾರತದ ಪ್ರಮುಖ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.

ರಾಜಸ್ಥಾನದ ದಿಡ್ವಾ

ಒಂದು ಶತಮಾನಕ್ಕೂ ಹಿಂದೆ, ಮುಗ್ನೀರಾಮ್ ಬಂಗೂರ್ ಮತ್ತು ರಾಮ್ ಕೂವರ್ ಬಂಗೂರ್ ಅವರ ಸಮರ್ಥ ಕೈಗಳು ಬಂಗೂರ್ ಗ್ರೂಪ್ನನ ಅಡಿಪಾಯವನ್ನು ಹಾಕಿದವು. ರಾಜಸ್ಥಾನದ ದಿಡ್ವಾನಾದ ಉಪ್ಪುನೀರಿನ ಸರೋವರಗಳ ಪ್ರದೇಶದಿಂದ ಈ ಕುಟುಂಬವು ತಮ್ಮ ನೆಲೆಯನ್ನು ಹಳೆಯ ಕಲ್ಕತ್ತಾದ ಜನನಿಬಿಡ ಪ್ರದೇಶವಾದ ಕಲಾಕರ್ ಸ್ಟ್ರೀಟ್‌ಗೆ ಬದಲಾಯಿಸಿತು. ದಶಕಗಳ ಅವಧಿಯಲ್ಲಿ ಈ ಕುಟುಂಬವು ಅವರ ಪ್ರಮುಖ ಮೌಲ್ಯಗಳನ್ನು ಹಿಡಿದಿಟ್ಟುಕೊಂಡಿದೆ ಮತ್ತು ತಮ್ಮ ವ್ಯವಹಾರಿಕ ಸಾಮರ್ಥ್ಯದಿಂದ ‘ಸಿಟಿ ಆಫ್ ಜಾಯ್’ ಎಂದೇ ಪ್ರಸಿದ್ಧವಾಗಿದ್ದ ಕೋಲ್ಕತ್ತ ನಗರದಲ್ಲಿ ತಮ್ಮ ಪ್ರಾಭಲ್ಯತೆಯನ್ನು ಹೊಂದಿದೆ.

19 ನೇ ಶತಮಾನದಿಂದ ಬಂಗೂರ್ ಕುಟುಂಬವು ವ್ಯಾಪಾರದ ಶ್ರೇಷ್ಠತೆಗಾಗಿ ನಿರಂತರವಾಗಿ ಶ್ರಮಿಸಿ ಉದ್ಯಮ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಬಂಗೂರ್ ಕುಟುಂಬದ ಪ್ರತಿ ಪೀಳಿಗೆಯು ತನ್ನ ಮೂಲ ತತ್ವ ಮತ್ತು ಸಿಧಾಂತಗಳನ್ನು ಮುಂದುವರೆಸಿಕೊಂಡು ಬಂದಿದ್ದು ಈ ಸಂಸ್ಥೆಯು ಪ್ರಕಾಶಮಾನವಾಗಿ ಬೆಳೆಯಲು ಕಾರಣವಾಗಿದೆ.

ಬಂಗೂರ್ ಕುಟುಂಬದ ಆರಂಭಿಕ ವ್ಯಾಪಾರ ಪ್ರಯತ್ನಗಳು:

ಕೊಲ್ಕೊತ್ತದ ಬಾರಾ ಬಜಾರ್‌ನ ಕಲಾಕರ್ ಸ್ಟ್ರೀಟ್‌ನಲ್ಲಿ ಬಂಗೂರ್‌ ಕುಟುಂಬದ ಪೂರ್ವಜರ ಮನೆಯೂ ಇದೆ. ಒಮ್ಮೆ ಇಲ್ಲಿ ನೆಲೆಗೊಂಡ ನಂತರ, ಕುಟುಂಬವು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿತು. ಸಕ್ಕರೆ ಮತ್ತು ಧಾನ್ಯದ ವ್ಯಾಪಾರವು ಆರಂಭಿಕ ವ್ಯವಹಾರಗಳಾಗಿದ್ದವು. ಒಳ್ಳೆಯ ಫಲಿತಾಂಶಗಳಿಂದ ಉತ್ತೇಜಿತರಾದ ಬಂಗೂರ್ ಕುಟುಂಬವು ತನ್ನ ಪರಿಧಿಯನ್ನು ವಿಸ್ತರಿಸಲು ಪ್ರಾರಂಭಿಸಿತು ಮತ್ತು ಶೀಘ್ರದಲ್ಲೇ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟು ಹೆಚ್ಚಿನ ಯಶಸ್ಸುನ್ನು ಪಡೆಯಿತು.

ಕಲಾಕಾರ್ ಸ್ಟ್ರೀಟ್, ಕೋಲ್ಕತ್ತಾ

ಉದ್ಯಮ ವಿಸ್ತರಣೆ:

ದಿವಂಗತ ಮುಗ್ನೀರಾಮ್ ಬಂಗೂರ್ ಎಂದಿಗೂ ತಮ್ಮ ಪ್ರಶಸ್ತಿ ಮತ್ತು ಶ್ರೀಮಂತಿಕೆಯ ಮೇಲೆ ವಿಶ್ರಾಂತಿ ಪಡೆದವರಲ್ಲ. ಅವಕಾಶಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ, ಅವರು ಶೀಘ್ರದಲ್ಲೇ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದರು. ವ್ಯಾಪಾರದ ಬಗ್ಗೆ ತೀಕ್ಷ್ಣವಾದ ಪ್ರಜ್ಞೆ, ಸಂಪೂರ್ಣ ತಂತ್ರದ ಕುಶಾಗ್ರಮತಿ ಮತ್ತು ಬಲವಾದ ಕುಟುಂಬ ಪರಂಪರೆಯನ್ನು ನಿರ್ಮಿಸುವ ಇಚ್ಛೆಯು ಅವರನ್ನು ಕಾಲಿಟ್ಟ ಎಲ್ಲಾ ಕ್ಷೇತ್ರದಲ್ಲಿಯೂ ಉತ್ತಮಗೊಳಿಸಿತು.

ಕೈಗಾರಿಕೀಕರಣದ ಕ್ಷಿಪ್ರ ದಾಪುಗಾಲುಗಳು:

ಭಾರತದ ಸ್ವಾತಂತ್ರ್ಯದ ನಂತರ, ಆರ್ಥಿಕತೆಯು ಹೆಚ್ಚು ಹೆಚ್ಚು ಕೈಗಾರಿಕೀಕರಣಗೊಳ್ಳಲು ಪ್ರಾರಂಭಿಸಿತು. ಜವಳಿ, ಸಿಂಥೆಟಿಕ್ಸ್, ಎಲೆಕ್ಟ್ರಿಕ್ ಮತ್ತು ಪವರ್ ಕೇಬಲ್‌ಗಳು, ಸಿಮೆಂಟ್ ಮತ್ತು ಗ್ರ್ಯಾಫೈಟ್‌, ರಬ್ಬರ್, ಟೀ ಮತ್ತು ಕಾಫಿ, ಪೆಟ್ರೋಕೆಮಿಕಲ್ಸ್, ಸೆಣಬು, ಬ್ಯಾಂಕಿಂಗ್, ಶಿಪ್ಪಿಂಗ್ ಮತ್ತು ಬಹು ಕೈಗಾರಿಕಾ ವಲಯಗಳು ತ್ವರಿತವಾಗಿ ಬೆಳೆಯಲು ಪ್ರಾರಂಭಿಸಿದವು. 1960-65ರ ಅವಧಿಯಲ್ಲಿ ಭಾರತದಲ್ಲಿನ ಅಗ್ರ ಮೂರು ಉದ್ಯಮ ಸಂಸ್ಥೆಗಳ ಪೈಕಿ ಮೇಲಿನ ಎಲ್ಲಾ ಕ್ಷೇತ್ರಗಳಿಗೆ ಕೈಗಾರಿಕಾ ವಿಕಾಸದ ಈ ಅವಧಿಯಲ್ಲಿ ಬಂಗೂರ್ ಸಮೂಹವು ಸ್ಥಿರವಾಗಿ ಎದ್ದು ಕಾಣುತ್ತದೆ.

S.K ಬಂಗೂರ್ ಗ್ರೂಪ್ ನ ಆರಂಭ:

ಸಂಸ್ಥೆಯು ಸ್ಥಿರವಾಗಿ ಬೆಳೆಯುತ್ತಿರುವಾಗ, ಉತ್ತಮ ವ್ಯಾಪಾರ ನಿಯಂತ್ರಣ ಮತ್ತು ವೈವಿಧ್ಯತೆಯ ನಿರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಕುಟುಂಬವು ಸೌಹಾರ್ದಯುತ ಆಂತರಿಕ ವಿಭಜನೆಯನ್ನು ಹೊಂದಲು ನಿರ್ಧರಿಸಿತು. ಇದರ ಬೆನ್ನಲ್ಲೇ ‘ಎಸ್.ಕೆ. ಬಂಗೂರ್ ಗ್ರೂಪ್’ ಭಾರತದ ಅತಿದೊಡ್ಡ ವೈವಿಧ್ಯಮಯ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿತು. ವೆಸ್ಟ್ ಕೋಸ್ಟ್ ಪೇಪರ್, ಜಯಶ್ರೀ ಕೆಮಿಕಲ್ಸ್ ಮತ್ತು ಆಂಧ್ರ ಪೇಪರ್‌ನಿಂದ ಹಿಡಿದು ಕಿಲ್ಕೋಟಗಿರಿ ಮತ್ತು ತಿರುಂಬಾಡಿ ಪ್ಲಾಂಟೇಶನ್ಸ್, ಗ್ಲೋಸ್ಟರ್ ಕೇಬಲ್ಸ್ ಲಿಮಿಟೆಡ್ ಮತ್ತು ವೆಸ್ಟ್ ಕೋಸ್ಟ್ ಆಪ್ಟಿಲಿಂಕ್ಸ್ ಕಂಪನಿಗಳನ್ನು ಒಳಗೊಂಡ ಪಟ್ಟಿಯು ಇಂದು ಎಸ್.ಕೆ. ಬಂಗೂರ್ ಗ್ರೂಪ್ ನ ಸ್ವತ್ತಾಗಿದೆ.

ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್

ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್ (WCPM) ಭಾರತದಲ್ಲಿ ಮುದ್ರಣ, ಬರವಣಿಗೆ ಮತ್ತು ಪ್ಯಾಕೇಜಿಂಗ್‌ ಕಾಗದದ ಅತ್ಯಂತ ಹಳೆಯ ಮತ್ತು ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. 1955 ರಲ್ಲಿ ಸ್ಥಾಪನೆಯಾದ ಮಿಲ್ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿದೆ. ಕಂಪನಿಯು ಉತ್ಪಾದಿಸುವ ಜಾಗತಿಕ ಗುಣಮಟ್ಟದ ಕಾಗದವು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಕ್ರಿಯೆಯಲ್ಲಿ ಒಂದಾಗಿದೆ. ಭಾರತದಲ್ಲಿ ಮುದ್ರಣ, ಬರವಣಿಗೆ, ಪ್ರಕಾಶನ, ಸ್ಟೇಷನರಿ, ನೋಟ್‌ಬುಕ್‌ಗಳು ಮತ್ತು ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ಅಸಂಖ್ಯಾತ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುತ್ತಿದೆ.

WCPM ಭಾರತ ಮತ್ತು ವಿದೇಶಗಳಲ್ಲಿನ ಮಾರುಕಟ್ಟೆಯ ಬದಲಾಗುತ್ತಿರುವ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನಿರಂತರ ಆವಿಷ್ಕಾರವನ್ನು ಕೈಗಾರಿಕೆಯಲ್ಲಿ ಅಳವಡಿಸಿಕೊಳ್ಳುತ್ತಾ ಬಂದಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ WCPM ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಕಾಗದದ ಉತ್ಪಾದನಾ ತಂತ್ರಜ್ಞಾನಗಳು ಕಂಪನಿಯ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿವೆ.

WCPM ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅತ್ಯುತ್ತಮ ಬೆಲೆಯಲ್ಲಿ ಒದಗಿಸಲು ಸಂಪೂರ್ಣ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು (TQMS) ಅನುಸರಿಸುತ್ತಿದೆ. ರಾಷ್ಟ್ರೀಯ ಉತ್ಪಾದಕತೆ ಮಂಡಳಿ, ಭಾರತ ಸರ್ಕಾರದಿಂದ ಪ್ರಶಸ್ತಿಗಳನ್ನು ಒಳಗೊಂಡಂತೆ ಪ್ರತಿಷ್ಠಿತ ಏಜೆನ್ಸಿಗಳಿಂದ ಕಂಪನಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.

ಸಂಸ್ಥೆಯಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಮರದಿಂದ ಕಾಗದದ ತಯಾರಿಕೆಯಲ್ಲಿ ನಾವೀನ್ಯತೆಗಳನ್ನು ತರಲು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಸುಧಾರಿಸಲು ಪಣತೊಟ್ಟು ಶ್ರಮಿಸುತ್ತಿದೆ. ಇದಲ್ಲದೆ, WCPM ನಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಕೈಗಾರಿಕಾ ಸುರಕ್ಷತೆಗಾಗಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡು ಎಲ್ಲಾ ಉದ್ಯೋಗಿಗಳಿಗೆ ಸುರಕ್ಷಿತ ಕೆಲಸದ ವಾತಾವರಣ ನಿರ್ಮಿಸಿದೆ.

ತಿರುಳು ಮತ್ತು ಕಾಗದದ ಉತ್ಪಾದನೆಯಲ್ಲಿ ಸುಧಾರಿತ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ WCPM ಭಾರತದಲ್ಲಿ ಮತ್ತು ಇಡೀ ಏಷ್ಯಾದಲ್ಲಿನ ಪ್ರವರ್ತಕರಲ್ಲಿ ಒಂದಾಗಿದೆ. WCPM ಭಾರತದಲ್ಲಿ ಕಾಗದದ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು ಕಂಪನಿಯ ಕೆಲವು ಗಮನಾರ್ಹ ಮೈಲಿಗಲ್ಲುಗಳು ಈ ಕೆಳಗಿನಂತಿವೆ:

1. ಟ್ವಿನ್-ವೈರ್ ಪ್ಯಾಪ್ರಿಫಾರ್ಮರ್ ಪೇಪರ್ ಯಂತ್ರವನ್ನು ಸ್ಥಾಪಿಸಿದ ಏಷ್ಯಾದಲ್ಲಿನ ಮೊದಲ ಕಂಪನಿಯಾಗಿದೆ.

2. ಪ್ರಪ್ರಥಮವಾಗಿ ಭಾರತದಲ್ಲಿ ಕಾಗದದ ಯಂತ್ರದಲ್ಲಿ ಸಿಂಥೆಟಿಕ್ ತಂತಿಯ ಬಳಕೆ.

3. ಭಾರತದಲ್ಲಿ, WCPM ಡ್ರಮ್ ಚಿಪ್ಪರ್ ಅನ್ನು ಸ್ಥಾಪಿಸಿದ ಮೊದಲ ಕಂಪನಿಯಾಗಿದೆ (ಜರ್ಮನಿಯ ಪಾಲ್‌ಮನ್‌ನಿಂದ ಸರಬರಾಜು ಮಾಡಲಾಗಿದೆ), ಡಿಸ್ಕ್ ರಿಫೈನರ್‌ಗಳು, ಲೈಮ್‌ಸ್ಲಡ್ಜ್ ಅನ್ನು ಮರು ಸುಡಲು ರೋಟರಿ ಲೈಮೆಕಿಲ್ನ್, 330 TPD ಸಾಲಿಡ್ ಫೈರಿಂಗ್ ಕೆಮಿಕಲ್ ರಿಕವರಿ ಬಾಯ್ಲರ್, ಮತ್ತು FBC ಕಲ್ಲಿದ್ದಲು ಬಾಯ್ಲರ್ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

4. ಸಾಂಪ್ರದಾಯಿಕ ಬ್ಲೀಚಿಂಗ್‌ನಲ್ಲಿ ರಕ್ಷಣಾತ್ಮಕ ಏಜೆಂಟ್ ಆಗಿ ಸಲ್ಫ್ಯೂರಿಕ್ ಆಮ್ಲದ ಬಳಕೆಯಲ್ಲಿ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

5. ಭಾರತದಲ್ಲಿ, ಬಿದಿರಿನ ಬದಲಿಗೆ 100% ಗಟ್ಟಿಮರವನ್ನು ಬಳಸಿದ ಮೊದಲ ಕಂಪನಿಯಾಗಿದೆ.

6. ಪೇಪರ್ ಮಿಲ್‌ನೊಂದಿಗೆ ಸುಸಜ್ಜಿತವಾದ ಸಂಶೋಧನಾ ಕೇಂದ್ರವನ್ನು ಯಶಸ್ವಿಯಾಗಿ ಸ್ಥಾಪಿಸಿದ ಭಾರತದ ಮೊದಲ ಕಂಪನಿ.

7. ಭಾರತದಲ್ಲಿ ಕ್ಯಾಪ್ಟಿವ್ ಪ್ಲಾಂಟೇಶನ್ ಮೊದಲ ಪರಿಚಯ.

8. ಭಾರತದಲ್ಲಿ, WCPM ದಿನಕ್ಕೆ 500 TPD ಘನ ಫೈರಿಂಗ್ ಸಾಮರ್ಥ್ಯದ ರಾಸಾಯನಿಕ ಚೇತರಿಕೆ ಬಾಯ್ಲರ್ ಅನ್ನು ಪರಿಚಯಿಸಿ ಮೊದಲ ಸ್ಥಾನದಲ್ಲಿದೆ.

9. 725 TPD ಸಾಮರ್ಥ್ಯದ ಸಾಲಿಡ್ ಫೈರಿಂಗ್ BD ಬ್ಲೀಚ್ಡ್ ಪಲ್ಪ್ ಹೊಸ ಫೈಬರ್ ಲೈನ್ ಅನ್ನು M/s ಮೆಟ್ಸೊ ಫಿನ್‌ಲ್ಯಾಂಡ್‌ನಿಂದ ತರಿಸಿ ಹೆಚ್ಚಿನ ಸಾಮರ್ಥ್ಯದ ECF ಪಲ್ಪ್ ಅನ್ನು ಹೆಚ್ಚಿನ ಹೊಳಪಿನೊಂದಿಗೆ ತಯಾರಿಸಲು ಕಂಪನಿಯು ಅತ್ಯಾಧುನಿಕ ಸಿಂಗಲ್ ಲಾರ್ಜೆಸ್ಟ್ ಸ್ಟ್ರೀಟ್ ಅನ್ನು ಸ್ಥಾಪಿಸಿ ನಿಯೋಜಿಸಿದೆ.

10. ಅಂತರರಾಷ್ಟ್ರೀಯ ಮಾನದಂಡಗಳ ಬರವಣಿಗೆ, ಮುದ್ರಣ ಮತ್ತು ಕಾಪಿಯರ್ ಕಾಗದದ ತಯಾರಿಕೆಗಾಗಿ 2010 ರಲ್ಲಿ M/s Voith ಜರ್ಮನಿಯಿಂದ 500 TPD ಸಾಲಿಡ್ ಫೈರಿಂಗ್‌ನ ಸಾಮರ್ಥ್ಯದ ಹೊಸ ಸ್ಟೇಟ್ ಆಫ್ ಆರ್ಟ್ ಪೇಪರ್ ಮೆಷಿನ್ ನಂ. 6 ಅನ್ನು ಕಂಪನಿಯು ಯಶಸ್ವಿಯಾಗಿ ಸ್ಥಾಪಿಸಿ ನಿಯೋಜಿಸಲ್ಪಟ್ಟಿದೆ.

11. ಕಂಪನಿಯು 2010 ರಲ್ಲಿ M/s BHEL ನಿಂದ 34.5 MW TG ಸೆಟ್ ಅನ್ನು ಸ್ಥಾಪಿಸಿದೆ ಮತ್ತು ಈಗ ಒಟ್ಟು ಕ್ಯಾಪ್ಟಿವ್ ಪವರ್ ಪ್ಲಾಂಟ್ ಸಾಮರ್ಥ್ಯವು 74.5MW ಆಗಿದೆ.

12. ದಕ್ಷಿಣ ಆಫ್ರಿಕಾದಿಂದ ಸುಮಾರು 50% ಆಮದು ಮಾಡಿದ ಗಟ್ಟಿಮರದ ಚಿಪ್‌ಗಳನ್ನು ತಿರುಳು ತಯಾರಿಕೆಗೆ ಬಳಸಿ ದೇಶದ ಅರಣ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ WCPM ಪಾಲು ಬಹುಮುಖ್ಯವಾಗಿದೆ.

ದೇಶಮಟ್ಟದಲ್ಲೇ ಅತ್ಯಂತ ಪ್ರಭಲ ಕೈಗಾರಿಕಾ ಸಮೂಹ ಸಂಸ್ಥೆಗಳಲ್ಲಿ ಬಂಗೂರ್ ಗ್ರೂಪ್ ಒಂದಾದರೂ ತನ್ನನ್ನು ನಂಬಿದ ಜನರಿಗೆ ಸದಾ ಚಿರಋಣಿಯಾಗಿದ್ದು, ಹಲವಾರು ಸಾಮಾಜಿಕ ಕಳಕಳಿ ಹೊಂದಿರುವ ಯೋಜನೆಗಳನ್ನು ಸಾಕರಗೊಳಿಸಿ ಮನೆಮಾತಾಗಿದೆ.

WCPM ಕಾರ್ಮಿಕರು

ಎಸ್. ಕೆ. ಬಂಗೂರ್ ಗ್ರೂಪ್ ನ ಪರಂಪರೆಯಂತೆ ಒಳ್ಳೆಯತನದ ಮೇಲಿರುವ ನಂಬಿಕೆ, ಕೊಡುವ ಸಂಸ್ಕೃತಿ, ಸಮುದಾಯಕ್ಕೆ ಸರಿಯಾದದ್ದನ್ನು ಮಾಡುವ ಇಚ್ಛೆ ಮತ್ತು ಜವಾಬ್ದಾರಿಗಳನ್ನು ಪ್ರತಿಬಿಂಬಿಸುವ ಅಸಂಖ್ಯಾತ ಕಾರ್ಯಗಳನ್ನು ಬಂಗೂರ್ ಕುಟುಂಬವು ಕಾಲಕಾಲದಿಂದಲೂ ಮಾಡುತ್ತ ಬಂದಿದೆ. ಅವುಗಳಲ್ಲಿ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲಿ ಧರ್ಮಶಾಲೆಗಳು, ಸಾರ್ವಜನಿಕ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಹಣಕಾಸು ನೆರವು ಸಂಸ್ಥೆಗಳು, ‘ಅನ್ನದಾನ’ ಹೆಸರಿನ ಇವರು ನಡೆಸುತ್ತಿರುವ ಹಸಿದವರಿಗೆ ಊಟ ನೀಡುವ ಕಾಯಕ ದೇವರು ಮೆಚ್ಚುವಂತದ್ದು. ಹೀಗೆ ಪ್ರತಿ ಹಂತದ್ಲಲೂ ಜನರ ಜೀವನವನ್ನು ಸ್ಪರ್ಶಿಸಿ ಅವರ ಪಾಲಿಗೆ ಎಸ್. ಕೆ. ಬಂಗೂರ್ ಗ್ರೂಪ್ ಆಶಾಕಿರಣವಾಗಿದೆ.

ಕಾರ್ಖಾನೆ ಆವರಣ

ಶಿಕ್ಷಣಕ್ಕೆ ಬಹಳ ಮಹತ್ವ ನೀಡುವ ಎಸ್. ಕೆ. ಬಂಗೂರ್ ಗ್ರೂಪ್ ದಾಂಡೇಲಿ ನಗರದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ‘ಬಂಗೂರ್ ನಗರ್ ಪದವಿ ಕಾಲೇಜು’ ಇಂದು ಶೈಕ್ಷಣಿಕ ಸಾಧನೆಯಲ್ಲಿ ಉತ್ತುಂಗದಲ್ಲಿರುವುದು ಶ್ಲಾಘನೀಯವಾಗಿದೆ. ಬಂಗೂರ್ ನಗರ್ ಶಿಕ್ಷಣ ಸಂಸ್ಥೆಗಳ ಸಮೂಹ, ದಾಂಡೇಲಿ ಈಗ ಕಾರ್ಮಿಕರ ಮಕ್ಕಳು ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಇತರೆ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕಲಿತು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಬಂಗೂರ್ ನಗರ್ ಡಿಗ್ರಿ ಕಾಲೇಜು, ದಾಂಡೇಲಿ

ವರ್ಷಕೊಮ್ಮೆ ಕನ್ನಡ ನಾಡೇ ಸಂಭ್ರಮದಿಂದ ಆಚರಿಸುವ ದಸರಾ ದಿನದ ಆಯುಧ ಪೂಜೆಯನ್ನು ದಾಂಡೇಲಿ ಪೇಪರ್ ಮಿಲ್ ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಆ ದಿನ ತನ್ನ ಎಲ್ಲಾ ಕಾರ್ಮಿಕರ ಕುಟುಂಬಕ್ಕೆ ಕಾರ್ಖಾನೆಯ ಒಳಗೆ ಪ್ರವೇಶ ನೀಡಿ ಕಾರ್ಖಾನೆ ಮತ್ತು ಕಾರ್ಮಿಕರ ಸಂಭದವನ್ನು ಎತ್ತಿ ಹಿಡಿಯುತ್ತಿದೆ.

ಕಾರ್ಖಾನೆ ಆವರಣದಲ್ಲಿ ರಾಮಲೀಲ ಮಹೋತ್ಸವ

ಹೀಗೆ ಹತ್ತು ಹಲವು ಯಶಸ್ಸನ್ನು ಪಡೆದು ಇಂದಿಗೂ ಹೊಸ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿರುವ ‘ದಾಂಡೇಲಿ ಪೇಪರ್ ಮಿಲ್’ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿರುವುದರ ಜೊತೆಗೆ ದಾಂಡೇಲಿಯನ್ನು ಸುಸಜ್ಜಿತ ನಗರಸಭೆ ಪ್ರದೇಶವನ್ನಾಗಿ ನಿರ್ಮಿಸಿ, ಸಾವಿರಾರು ಜನರ ಬದುಕನ್ನು ಉತ್ತಮಗೊಳಿಸಿ, ಇಂದು ದಾಂಡೇಲಿ ಪೇಪರ್ ಮಿಲ್ ಒಂದು ಕೈಗಾರಿಕೆಯಾಗಿ ಮಾತ್ರ ಉಳಿಯದೇ ಜನರ ಜೀವನಾಡಿಯಾಗಿದೆ. ಇಂತಹ ಅದ್ಭುತ ಮತ್ತು ಸಾಮಾಜಿಕ ಕಳೆಕಳೆಯಿರುವ ಬ್ರಹತ್ ಕೈಗಾರಿಕೆಯು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ನಮ್ಮೆಲರಿಗೂ ಹೆಮ್ಮೆಯ ಸಂಗತಿಯಾಗಿದೆ.

Source:

1) https://skbangurgroup.com/

2) https://www.westcoastpaper.com/


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading