ಇಷ್ಟು ವರ್ಷಗಳ ಕಾಲ ಮರಗಳ ಅಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಆದರೆ ಈಗ ಮರಗಳ ಮೇಲೆ, ಅಲ್ಲ ಮರದಿಂದ ಮರಕ್ಕೆ ನಡೆದಾಡುತ್ತ, ಓಡಾಡುತ್ತ ವಿಹಂಗಮ ನೋಟವನ್ನು ಆಸ್ವಾದಿಸುವುದು ನಮ್ಮ ದೇಶದ ಮಟ್ಟಿಗೆ ಹೊಸ ಕಲ್ಪನೆಯೇ ಸರಿ. ಆದರೆ ಈಗಾಗಲೆ ಇದು ಸಾಕಾರಗೊಂಡಿದೆ.

ಮಲೇಷ್ಯಾದಲ್ಲಿ ಕೆನೋಪಿ ವಾಕ್ ಜನಪ್ರಿಯಗೊಂಡಿದೆ. ಬೇರೆ ಬೇರೆ ದೇಶಗಳ ಜನತೆ ಮರಗಳ ಮೇಲೆನಡಿಗೆಗಾಗಿ ಮಲೇಷ್ಯಾದತ್ತ ಮುಖ ಮಾಡುತ್ತಿದ್ದಾರೆ. ಈಗ ದೇಶದ ಪ್ರಥಮ ಕೆನೋಪಿ ವಾಕ್ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಜೋಯಿಡಾದಲ್ಲಿ ನಿರ್ಮಾಣಗೊಂಡು, ಸಾರ್ವಜನಿಕರಿಗೆ ಮರಗಳ ಮೇಲೆ ಹೆಜ್ಜೆ ಹಾಕುವ ಅವಕಾಶ ಲಭಿಸಿದೆ.
ಏನಿದು ಕೆನೋಪಿ ವಾಕ್?
ಗಟ್ಟುಮುಟ್ಟಾಗಿರುವ ಒಂದೇ ರೀತಿಯ ಎತ್ತರದ ಮರಗಳನ್ನು ಗುರುತಿಸಿ 30-40 ಅಡಿ ಎತ್ತರದಲ್ಲಿ ಅಲ್ಯೂಮಿನಿಯಂ ಚೌಕಟ್ಟು ಮಾಡಲಾಗುತ್ತದೆ. ನಂತರ ಮರದಿಂದ ಮರಕ್ಕೆ ತೂಗು ಸೇತುವೆ ಮಾದರಿಯಲ್ಲಿ ನಡೆಯುವ ದಾರಿ ನಿರ್ಮಿಸಲಾಗುತ್ತದೆ. ಎತ್ತರದ ಪ್ರದೇಶದಲ್ಲಿ ಮರಗಳ ಮೇಲೆ ನಡಿಗೆ ಮಾಡುತ್ತ ಅರಣ್ಯವನ್ನು ವೀಕ್ಷಿಸುವ ವಿನೂತನ ವಿಧಾನ ಇದಾಗಿದೆ.

ಜೋಯಿಡಾ ಸಮೀಪದ ಕ್ಯಾಸೆಲ್‌ರಾಕ್ ವನ್ಯಜೀವಿ ವಲಯದ ಕುವೇಶಿ ಎಂಬಲ್ಲಿ ಕೆನೋಪಿ ವಾಕ್ ಪಥ ನಿರ್ಮಿಸಲಾಗಿದೆ. 30-40 ಅಡಿ ಎತ್ತರದಲ್ಲಿ ನಿರ್ಮಿಸಲಾದ ತೂಗು ಸೇತುವೆ 250 ಮೀಟರ್ ಉದ್ದ ಇದೆ. ಅರಣ್ಯದಲ್ಲಿಇಷ್ಟೊಂದು ಎತ್ತರದ ಮೇಲೆ ನಡೆಯುವುದೆ ಒಂದು ವಿಶಿಷ್ಟ ಅನುಭವ. ಕಣ್ಣಳತೆಯುದ್ದಕ್ಕೂ ದಟ್ಟ ಅರಣ್ಯ, ಪಕ್ಷಿಗಳ ಕಲರವ, ಗಿಡ-ಬಳ್ಳಿಗಳು, ಮರಗಳ ಮೇಲಿರುವ ಸರೀಸೃಪಗಳನ್ನು ವೀಕ್ಷಿಸಬಹುದು. ದಟ್ಟವಾದ ಅರಣ್ಯದಲ್ಲಿ ತಂಗಾಳಿಯ ನಡುವೆ ಎತ್ತರದಲ್ಲಿ ಹೆಜ್ಜೆ ಹಾಕಬಹುದು. ಕೆನೋಪಿ ವಾಕ್ ತಾಣದಿಂದ ಕೂಗಳತೆ ದೂರದಲ್ಲಿ ದೂದ್‌ಸಾಗರ್ ಜಲಪಾತವನ್ನು ಸ್ರಷ್ಟಿಸುವ ಹಳ್ಳ ಇದೆ.
ಕರ್ನಾಟಕ ಅರಣ್ಯ ಇಲಾಖೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕೆನೋಪಿ ವಾಕ್ ಪಥ ನಿರ್ಮಾಣಗೊಂಡಿದೆ. ಜಂಗಲ್ ಲಾಜಸ್‌ಗೆ ಇದನ್ನು ಹಸ್ತಾಂತರಿಸಲಾಗಿದ್ದು, ನಿರ್ವಹಣೆಯನ್ನು ಜಂಗಲ್ ಲಾಜಸ್ ನೋಡಿಕೊಳ್ಳಲಿದೆ.

ಕಾಳಿ ಹುಲಿ ರಕ್ಷಿತ ಪ್ರದೇಶದ ಹೊರಗಡೆ ದಾಂಡೇಲಿ ಅಭಯಾರಣ್ಯಕ್ಕೆ ಸೇರಿದ ಸ್ಥಳದಲ್ಲಿ ಇದು ನಿರ್ಮಾಣಗೊಂಡಿದೆ. ಮೈಸೂರಿನ ಅಲಿಂ ಹಾಗೂ ಭರತ್ ಎನ್ನುವವರು ಮಲೇಷ್ಯಾಕ್ಕೆ ಹೋಗಿ ಅಧ್ಯಯನ ನಡೆಸಿ ಅಲ್ಲಿನ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿದ್ದಾರೆ. ಇದನ್ನು ₹ 84 ಲಕ್ಷ ವೆಚ್ಚದಲ್ಲಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನೆ ಬಳಸಿ ನಿರ್ಮಿಸಲಾಗಿದೆ.
ಎಲ್ಲಿದೆ ಕುವೇಶಿ?
ಕಾರವಾರದಿಂದ 170 ಕಿ.ಮೀ. ದೂರದಲ್ಲಿದೆ. ದಾಂಡೇಲಿಯಿಂದ 60 ಕಿ.ಮೀ. ದೂರದಲ್ಲಿದೆ. ಜೋಯಿಡಾದಿಂದ ಕ್ಯಾಸೆಲ್‌ರಾಕ್‌ಗೆ ಹೋಗುವ ಮಾರ್ಗದಲ್ಲಿ ಕುಣಗಿನಿ ಎಂಬ ಚೆಕ್‌ಪೋಸ್ಟ್ ಇದೆ. ಆ ಚೆಕ್‌ಪೋಸ್ಟ್ ಬಳಿ ನಿಮ್ಮ ವಾಹನವನ್ನು ಪಾರ್ಕ್ ಮಾಡಬೆಕು. ಅಲ್ಲಿಂದ ಕುವೇಶಿ ತನಕ ಇಕೋ ಡೆವಲಪ್‌ಮೆಂಟ್ ಕಮಿಟಿಯ ವಾಹನದಲ್ಲಿ ಕರೆದೊಯ್ಯಲಾಗುತ್ತದೆ. ಅದಕ್ಕೆ ಶುಲ್ಕನೀಡಬೇಕು.
ಕಾರವಾರದಿಂದ 170 ಕಿ.ಮೀ. ದೂರದಲ್ಲಿದೆ. ದಾಂಡೇಲಿಯಿಂದ 60 ಕಿ.ಮೀ. ದೂರದಲ್ಲಿದೆ. ಜೋಯಿಡಾದಿಂದ ಕ್ಯಾಸೆಲ್‌ರಾಕ್‌ಗೆ ಹೋಗುವ ಮಾರ್ಗದಲ್ಲಿ ಕುಣಗಿನಿ ಎಂಬ ಚೆಕ್‌ಪೋಸ್ಟ್ ಇದೆ. ಆ ಚೆಕ್‌ಪೋಸ್ಟ್ ಬಳಿ ನಿಮ್ಮ ವಾಹನವನ್ನು ಪಾರ್ಕ್ ಮಾಡಬೆಕು. ಅಲ್ಲಿಂದ ಕುವೇಶಿ ತನಕ ಇಕೋ ಡೆವಲಪ್‌ಮೆಂಟ್ ಕಮಿಟಿಯ ವಾಹನದಲ್ಲಿ ಕರೆದೊಯ್ಯಲಾಗುತ್ತದೆ. ಅದಕ್ಕೆ ಶುಲ್ಕನೀಡಬೇಕು. ಕೆನೋಪಿ ವಾಕ್ ದೇಶದಲ್ಲೇ ಪ್ರಥಮ ಹಾಗೂ ಮಹತ್ವದ ಯೋಜನೆಯಾಗಿದೆ. ದೇಶ, ವಿದೇಶಿ ಪ್ರವಾಸಿಗರಿಗೆ ಇದು ಆಕರ್ಷಣೆ ಉಂಟು ಮಾಡಿದೆ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಹುಲಿ ರಕ್ಷಿತ ಪ್ರದೇಶದ ಹೊರಗಡೆ ನಿರ್ಮಿಸಲಾಗಿದೆ.


Leave a Reply