ಮಳೆ ಬಂತು ಮಳೆ… ಅಂತೂ ಈ ವರ್ಷದ ಮಳೆಗಾಲ ಪ್ರಾರಂಭವಾಯಿತು. ಮಳೆಗಾಲದಲ್ಲಿ ನಮ್ಮ ಕರಾವಳಿ ಭಾಗದಲ್ಲಿ ಎಷ್ಟೋ ದಿನಗಳಿಂದ ಕಾಣಸಿಗದ ಆದೆಷ್ಟೋ ಜೀವಿಗಳು (ಹುಳ – ಹುಪ್ಪಟೆಗಳು) ಮಳೆಗಾಲದಲ್ಲಿ ಕಣ್ಣಿಗೆ ಕಾಣಸಿಗುತ್ತದೆ. ಧೋ ಎಂದು ಒಂದೇ ಸಮನೆ ಸುರಿವ ಮುಂಗಾರು ಮಳೆ ಕರಾವಳಿಯವರಾದ ನಮಗೆ ಹೊಸತಲ್ಲ. ಕಪ್ಪೆಗಳ ವಟ ವಟ ಧ್ವನಿ ಒಂದೆಡೆ ಆದರೆ ಅಡಿಕೆ ಮರಕ್ಕೆ ಅಂಟಿಕೊಂಡು ರೇಜಿಗೆ ಹುಟ್ಟಿಸುವ ಬಸವನ ಹುಳು ಇನ್ನೊಂದೆಡೆ. ಅದಲ್ಲದೆ ಅಂಗಳದಲ್ಲಿ ನಡೆದಾಡುವ ಸಹಸ್ರಪದಿ. ನಮ್ಮ ಕಡೆ ಅದನ್ನು ಚೇರಟೆ ಅಥವಾ ಚಕ್ಕಲಿ ಹುಳು ಎಂದು ಕರೆಯುವುದುಂಟು. ಇನ್ನೂ ಕೆಲವೆಡೆ ಇಂಬಳದ ಹಾವಳಿ…
ಸಹಸ್ರಪದಿ (ಚೇರಟೆ ಅಥವಾ ಚಕ್ಕಲಿ ಹುಳು):

ಮಳೆಗಾಲದಲ್ಲಿ ಕಂಡುಬರುವ ಜೀವಿಗಳಲ್ಲಿ ಒಂದು ಈ ಸಹಸ್ರಪದಿ. ರಸ್ತೆ, ತೋಟ, ಅಂಗಳ, ಮನೆ ಎಲ್ಲೆಡೆಯು ತನ್ನ ನೂರಾರು ಕಾಲುಗಳಿಂದ ನಡೆದಾಡುತ್ತ ಇರುತ್ತದೆ.

ಆರ್ತೋಪೋಡ ಕುಟುಂಬಕ್ಕೆ ಸೇರಿದ ಇವುಗಳ ದೇಹದ ಮೇಲ್ಮಯಿ ವಿಭಾಗಗಳಾಗಿ ಕಾಣಸಿಗುತ್ತದೆ. ಪ್ರತಿಯೊಂದು ವಿಭಾಗದಲ್ಲೂ (ತಲೆ, ಕಾಲು ಹೊರತುಪಡಿಸಿ) ನಾಲ್ಕು ಕಾಲುಗಳಿವೆ. ಹೆಸರಿಗೆ ತಕ್ಕಂತೆ ಸಾವಿರಾರು ಕಾಲುಗಳು ಇಲ್ಲವಾದರೂ ಕೆಲವು ಜಾತಿಗಳಲ್ಲಿ ನಾನೂರಕ್ಕಿಂತ ಹೆಚ್ಚು ಕಾಲುಗಳಿವೆ. ಕಾಲಿನ ಸಂಖ್ಯೆ ಹೆಚ್ಚಿರುವುದರಿಂದ ಇವುಗಳ ನಡಿಗೆ ನಿಧಾನ. ದೇಹದ ನೀರಿನಂಶ ಕಾಪಾಡಲು ಇವುಗಳಿಗೆ ತೆವಾಂಶಯುತ ವಾತಾವರಣ ಬೇಕು. ಆದ್ದರಿಂದಲೇ ಮಳೆಗಾಲದಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತದೆ. ಕೊಳೆತ ಸಸ್ಯಶೇಷ ಇವುಗಳ ಆಹಾರ.

ತೇವಾಂಶವಿರುವ ಮಣ್ಣಿನಲ್ಲಿ ಹೆಣ್ಣು ಸಹಸ್ರಪದಿ ಚಿಕ್ಕ ಗೂಡು ನಿರ್ಮಿಸಿ ಮೊಟ್ಟೆ ಇಡುತ್ತದೆ. ಸುಮಾರು 10 ರಿಂದ 300 ಮೊಟ್ಟೆ ಇಡುತ್ತದೆ (ಜಾತಿಗೆ ಅನುಗುಣವಾಗಿ). ಹುಟ್ಟಿದಾಗ ಮರಿಗಳ ಕಾಲಿನ ಸಂಖ್ಯೆ ಕಡಿಮೆ ಇರುತ್ತದೆ. ತದನಂತರ ಎರಡು ಮೂರು ಬಾರಿ ಹೊರ ಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
ವೈರಿಗಳಿಂದ ರಕ್ಷಣೆ ಪಡೆಯಲು ತಮ್ಮ ದೇಹವನ್ನು ಅವು ಸುತ್ತಿಕೊಳ್ಳುತ್ತವೆ. ಕೆಲವು ಚಕ್ಕುಲಿ ಆಕಾರದಲ್ಲಿ ಸುತ್ತಿಕೊಳ್ಳುವುದರಿಂದ ಇದಕ್ಕೆ ಚಕ್ಕುಲಿ ಹುಳು ಎಂದು ಕರೆಯುವುದುಂಟು. ಅಲ್ಲದೆ ಕೆಲ ಸಹಸ್ರಪದಿಗಳು ವೈರಿಗಳ ದೇಹವನ್ನು ಸುಡಬಲ್ಲ ರಾಸಾಯನಿಕಗಳನ್ನು ಸ್ರವಿಸುತ್ತದೆ.
ಬಸವನ ಹುಳು:

ಮಳೆಗಾಲದ ಅತಿಥಿಗಳಲ್ಲಿ ಈ ಬಸವನ ಹುಳು ಸಹ ಒಂದು. ವರ್ಷವಿಡಿ ಕಾಣಸಿಗದ ಈ ಹುಳು ಮಳೆಯ ತೇವಾಂಶ ಹೆಚ್ಚಾದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತದೆ. ಬಸವನ ಹುಳುವಿನ ದೇಹದ ಆಕರವೇ ಭಿನ್ನಾವಾಗಿದೆ. ಇವು ತಮ್ಮ ಬೆನ್ನಿನ ಮೇಲೆ ಚಿಪ್ಪಿನ ಹೊದಿಕೆಯನ್ನು ಅಂಟಿಸಿಕೊಂಡೆ ಹುಟ್ಟುತ್ತದೆ. ಈ ಬಗೆಯ ಬಸವನ ಹುಳು ತುಂಬಾ ಮೃದುವಾಗಿರುತ್ತದೆ. ಬಸವನ ಹುಳು ತಮ್ಮ ದೇಹವನ್ನು ಕಾಪಾಡಿಕೊಳ್ಳಲು ಚಿಪ್ಪನ್ನು ಹೊಂದಿರುವುದರಿಂದ ಮೃಧ್ವಂಗಿಗಳೆಂದು ಕರೆಯುವರು.

ಮಳೆಗಾಲದ ದಿನಗಳಲ್ಲಿ ಮನೆಯ ಸುತ್ತ ಮುತ್ತಾ ತೇವವಿರುವ ಜಾಗದಲ್ಲಿ ತೆವಳುತ್ತ ಇರುತ್ತದೆ. ಎಲೆಗಳು, ಕಸ ಕಡ್ಡಿ, ಹಣ್ಣಿನ ಚೂರು ಇವುಗಳ ಆಹಾರ. ಇವುಗಳು ಒಂದೇ ಬಾರಿ 100 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಮೊಟ್ಟೆ ಇಡುತ್ತವೆ ಆದರೂ ಕೆಲವೇ ಮೊಟ್ಟೆಗಳು ಮಾತ್ರ ಹುಳುಗಳಾಗಿ ಹೊರಬರುತ್ತವೆ. ಉಳಿದ ಮೊಟ್ಟೆಗಳು ಮಳೆಯ ರಬ್ಬಸಕ್ಕೆ ಕೊಚ್ಚಿ ಹೊಗುವ ಸಂಭವವೇ ಹೆಚ್ಚು. ಶೀತ ಪ್ರದೇಶದ ತಂಪಾದ ವಾತಾವರಣದಲ್ಲಿ ಹಾಯಾಗಿ ಈ ಹುಳುಗಳು ಬದುಕುತ್ತವೆ.
ಇಂಬಳ (ಉಂಬಳ):

ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಜಲಧಾರೆ ಹಾಗೂ ಪರ್ವತ ಶ್ರೇಣಿಯಲ್ಲಿ ನಡೆದವರಿಗೆ ಈ ಇಂಬಳದ (Leech) ಪರಿಚಯ ಇರಲೇಬೇಕು. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ನಡೆದಾಡುವವರಿಗೆ ಈ ಇಂಬಳ ಅಥವಾ ಉಂಬಳ ರಕ್ತಸಂಬಂದಿ ಇದ್ದಂತೆ. ಜೌಗು ಮಣ್ಣಿನ ಮೇಲ್ಪದರವನ್ನು ಆಶ್ರಯಿಸಿಕೊಂಡು ಬದುಕುವ ಇವು ಬೇಸಿಗೆ ಕಾಲದ ಮೂರು ತಿಂಗಳು ಮಾತ್ರ ಕಾಣಸಿಗುವುದಿಲ್ಲ. ಮಣ್ಣು ಒದ್ದೆ ಯಾದ ತಕ್ಷಣ ಅದೇಲ್ಲಿಂದಲೋ ಪ್ರತ್ಯಕ್ಷವಾಗುವ ಇವು ಮಳೆ ಮುಗಿದ ತಕ್ಷಣ ಕಾಡಿನಲ್ಲಿ ಮರೆಯಾಗುತ್ತವೆ. ಮಳೆ ಚೆನ್ನಾಗಿ ಸುರಿಯುವ ಪಶ್ಚಿಮ ಘಟ್ಟದಲ್ಲಿ ಇವುಗಳ ಹಾವಳಿ ಹೆಚ್ಚು.

ಇಂಬಳದ ಪ್ರಧಾನ ಆಹಾರವೆಂದರೆ ಅದು ರಕ್ತ. ಪ್ರಾಣಿಗಳ ರಕ್ತವಲ್ಲದೆ ಮಾನವರ ರಕ್ತವನ್ನು ಕ್ಷಣದಲ್ಲಿ ಹೀರುತ್ತವೆ. ರಕ್ತ ಹೀರಿದ ತಕ್ಷಣ ಹೀಗ್ಗುವ ಇಂಬಳ ಕೆಳಕ್ಕೆ ಬೀಳದೆ ಚರ್ಮದಲ್ಲಿ ನೇತಾಡಲು ಪ್ರಾರಂಭಿಸುತ್ತದೆ. ಅವು ಕಾಲಿಗೆ ಕಚ್ಚಿ ರಕ್ತ ಹೀರುವ ವರೆಗೂ ಅವು ಕಚ್ಚಿದ್ದು ತಿಳಿಯುವುದಿಲ್ಲ. ರಕ್ತ ತುಂಬಿದ ಇಂಬಳವನ್ನು ಕಾಲಿನಿಂದ ಒತ್ತಿ ಹಿಡಿದು ತುಳಿದರು ಅವು ಸಾಯುವುದಿಲ್ಲ. ಕೆಲವೇ ಕ್ಷಣದಲ್ಲಿ ಮತ್ತೆ ಬಿದ್ದ ರಕ್ತ ಹೀರಿ ಮೊದಲಿನಂತೆ ಆಗುವುದು ಇದರ ವಿಷೇಶ. ಅವು ಕಚ್ಚಿದ ಜಾಗದಲ್ಲಿ ಆಳವಾದ ಗಾಯ ಹಾಗೆ ಇರುವುದು. ಕೆಲವರಿಗೆ ಅಲರ್ಜಿ ಸಂಬಂದಿತ ಲಕ್ಷಣ, ತುರಿಕೆ ಮುಂತಾದ ಸಾಮಾನ್ಯ ರೋಗ ಕಂಡುಬರುವುದು.
ಹಳ್ಳಿಗಳಲ್ಲಿ ಈ ಉಂಬಳವಿರುವ ಪ್ರದೇಶಕ್ಕೆ ತೆರಳುವ ಪೂರ್ವದಲ್ಲಿ ತೆಂಗಿನ ಎಣ್ಣೆ, ಸುಣ್ಣ, ಹೊಗೆಸೊಪ್ಪಿನ ನೀರು, ನಶ್ಯದ ಪುಡಿ ದಪ್ಪವಾಗಿ ಕಲಸಿ ಕಾಟನ್ ಬಟ್ಟೆ ಸುತ್ತಿದ ಕೋಲನ್ನು ಅದ್ದಿ ಕಾಲಿಗೆ ಸವರಿಸಿಕೊಂಡು ಹೋಗುವರು. ಕಾಲಿಗೆ ಮುತ್ತಿಕೊಳ್ಳುವ ಮುನ್ನವೇ ಎಚ್ಚರಿಕೆ ವಹಿಸುವ ಜಾಣ್ಮೆ ನಮ್ಮ ಹಳ್ಳಿಗರಲ್ಲಿದೆ.
ದೇವರ ಹುಳು:

ಮಳೆಗಾಲದಲ್ಲಿ ಕಾಣಸಿಗುವ ಈ ದೇವರ ಹುಳುವಿಗೆ ಇಂಗ್ಲೀಷ್ ನಲ್ಲಿ ‘Rain Bug’ ಅಥವಾ ‘Red Velvet Mites’ ಎಂದು ಕರೆಯುವರು. ಆಡು ಭಾಷೆಯಲ್ಲಿ ಇದು ದೇವರ ಹುಳುವಾಗಿ ಪ್ರಖ್ಯಾತಿ ಪಡೆದಿದೆ. ಗಾಢ ಕೆಂಪು ಬಣ್ಣದ ಈ ಹುಳುವಿನದು ವೇಲ್ವೆಟ್ ಬಟ್ಟೆಯಂತಹ ದೇಹಸಿರಿ. ಎಂಟು ಕಾಲುಗಳನ್ನು ಹೊಂದಿರುವ ಈ ಪುಟ್ಟ ಜೀವಿ ಯಾರಾದರೂ ಸ್ಪರ್ಶಿಸಿದರೆ ಚುರುಕಾಗಿ ತನ್ನ ಕಾಲನ್ನು ದೇಹದೊಳಗೆ ಮಡಚಿಕೊಂಡು ಬಿಡುವುದು.

ದೇವರ ಹುಳುವಿನ ವೈಜ್ಞಾನಿಕ ಹೆಸರು ಟ್ರೊಬಿಡಿಯಂ ಹೋಲೊಸೆರಿಸಂ. ಬಾಲ್ಯವಸ್ಥೆಯಲ್ಲಿ ಮಾತ್ರ ಪರವಲಂಭಿಯಾದ ಈ ಜೀವಿ ಬೆಳೆದ ಮೇಲೆ ಗೆದ್ದಲು ಗುಳುವಿನಂತ ಚಿಕ್ಕ ಕೀಟಗಳನ್ನು ಬೇಟೆಯಾಡಿ ತಿನ್ನುತದೆ.
ಮಳೆಗಾಲ ಪ್ರಾರಂಭ ವಾಗುತ್ತಿದ್ದಂತೆ ಕಾಣಸಿಗುವ ಈ ಜೀವಿ ನಂತರ ಮಣ್ಣಿನಲ್ಲಿ ಅಡಗಿ ಬಿಡುತ್ತದೆ. ಹೀಗೆ ಮಣ್ಣಿನಿಂದ ಹೊರಬಂದಾಗ ಸಂಗಾತಿ ಹುಡುಕಿ ವಂಶಾಭಿವೃದ್ಧಿ ಕಾರ್ಯ ನಡೆಸುತ್ತದೆ. ಪ್ರಕೃತಿಯಲ್ಲಿ ಸಿಗುವ ಅನೇಕ ಇಂತಹ ಪುಟ್ಟ ಜೀವಿಗಳ ಬದುಕು ನಿಜಕ್ಕೂ ವಿಸ್ಮಯ ಲೋಕವೇ ಸರಿ….!!
ಹೀಗೆ ಇನ್ನೂ ಹಲವು ಬಗೆಯ ಹುಳುಗಳು ಮಳೆಗಾಲದಲ್ಲಿ ಜೀವತಳೆದು ಮಳೆಯೊಡನೆಯೇ ಕಾಣಸಿಗದಂತೆ ಮಾಯವಾಗುತ್ತದೆ. ಮಳೆಗಾಲದಲ್ಲಿ ನಾವು ಅವುಗಳನ್ನು ನೋಡಿಯೂ ನೋಡದವತರಂತೆ ಇರುವುದರಿಂದ ಈ ಪುಟ್ಟ ಪುಟ್ಟ ಹುಳುಗಳ ಅದ್ಭುತ ಲೋಕದ ವಿಸ್ಮಯವನ್ನು ಅರಿತುಕೊಳ್ಳಲು ಸಾಧ್ಯವಾಗದೆ ಇರುವುದು ಬೇಸರದ ಸಂಗತಿ ಆಗಿದೆ.
ಮುಂಗಾರು ಮಳೆಯ ಹನಿಗಳ ನಡುವೆ ಹಸಿರು ರಾಶಿಯ ವನಸಿರಿಯ ಒಳಗೆ ಹರಿದಾಡುವ ಈ ಪುಟ್ಟ ಜೀವಿಗಳನ್ನು, ಮಳೆಗಾಲದಲ್ಲಿ ಕಾಣಸಿಗುವ ಈ ಅಪರೂಪದ ಅತಿಥಿಗಳನ್ನು ಒಮ್ಮೆ ನೋಡಿ ಅವುಗಳ ಲೋಕದ ವಿಸ್ಮಯ ಅರಿಯೋಣ ಜೊತೆಗೆ ಅವುಗಳಿಗೂ ಬದುಕಲು ಬಿಡೋಣ…..
✍️ ಅಕ್ಷತಾ ಜಗದೀಶ್


Leave a Reply