ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಭೂಭಾಗದ ಅರಣ್ಯ ಹೊಂದಿರುವ ಜಿಲ್ಲೆ ನಮ್ಮ ಉತ್ತರಕನ್ನಡ. ಜಿಲ್ಲೆಯ ಶೇಕಡಾ 70-80 ರಷ್ಟು ಭೂಮಿ ಅರಣ್ಯ ಹಚ್ಚ ಹಸಿರಿನ ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಗಳಿಂದ ಕೂಡಿದೆ. ನಾರ್ಮನ್ ಮಾಯರ್ ಅವರ ಪ್ರಕಾರ ಪ್ರಪಂಚಲ್ಲಿ 25 ಜೀವವೈವಿಧ್ಯ ಹಾಟ್ಸ್ಪಾಟ್ಗಳು ಇವೆ. ಅದರಲ್ಲಿ ಭಾರತದ 5 ಪ್ರದೇಶಗಳು ಸೇರಿದೆ. *ಅವು ಯಾವುವೆಂದರೆ ಪಶ್ಚಿಮ ಘಟ್ಟಗಳು, ಹಿಮಾಲಯ, ಇಂಡೋ- ಬರ್ಮಾದ ಭೂಪ್ರದೇಶ, ಮತ್ತು ಸುಂದರಬನ.*

ಜೀವವೈವಿಧ್ಯ ಹಾಟ್ಸ್ಪಾಟ್ಗಳು ಅಂದರೆ ಜೈವಿಕ ಭೂಗೋಳದ ಪ್ರದೇಶವಾಗಿದ್ದು, ಇದು ಮಹತ್ವದ ಜೀವವೈವಿಧ್ಯದ ಶೇಖರಣೆಯಾಗಿದೆ ಮತ್ತು ವಿನಾಶದ ಅಪಾಯದಲ್ಲಿದೆ. ಜೀವವೈವಿಧ್ಯ ಹಾಟ್‌ಸ್ಪಾಟ್ ಎಂಬ ಪದವು ಪ್ರಪಂಚದಾದ್ಯಂತ 25 ಜೈವಿಕವಾಗಿ ಶ್ರೀಮಂತ ಪ್ರದೇಶಗಳನ್ನು ನಿರ್ದಿಷ್ಟವಾಗಿ ಸೂಚಿಸುತ್ತದೆ, ಅವುಗಳು ತಮ್ಮ ಮೂಲ ಆವಾಸಸ್ಥಾನದಲ್ಲಿ ಕನಿಷ್ಠ 70 ಪ್ರತಿಶತವನ್ನು ಕಳೆದುಕೊಂಡಿರುವುದರಿಂದ ಇವುಗಳನ್ನು ಜೀವವೈವಿಧ್ಯ ಹಾಟ್ಸಾ್ಪಾಟ್ಗಳೆಂದು ಕರೆಯಲ್ವಡುತ್ತವೆ. ಇದು ಹೆಮ್ಮೆಯ ವಿಚಾರವೋ ಅಥವಾ ಖೇದದ ಸಂಗತಿಯೋ ಅವಲೋಕಿಸಿ.

ನಮ್ಮ ಜಿಲ್ಲೆ ಮೊದಲಿನಿಂದಲೂ ಕಾಡು, ಜಲಪಾತ, ನದಿಗಳಾದ ಶರಾವತಿ, ಅಘನಾಶಿನಿ ಮತ್ತು ಕಾಳಿ, ಅಲ್ಲದೇ ನಮ್ಮ ಸಂಸ್ಕೃತಿಯಿಂದ ಹೆಸರಾಗಿದೆ. ಅದಲ್ಲದೆ ಸುಂದರಬನದಂತಹ ಕಾಂಡ್ಲಾ ಅರಣ್ಯ ಭಾಗವು ನಮ್ಮ ಶರಾವತಿಯ ತೀರದ ಹೊನ್ನಾವರ ಮತ್ತು ಅಘನಾಶಿನಿ ಪ್ರದೇಶವಾದ ಕುಮಟಾದಲ್ಲಿ ಇದೆ. ಕಾಂಡ್ಲಾ ಅರಣ್ಯವು ಜಲಚರ ವೈವಿಧ್ಯತೆ, ಮಣ್ಣಿನ ಸವಕಳಿ, ಕರಾವಳಿ ಸ್ಥಿರೀಕರಣ ಮತ್ತು ಭೂ ಸಂಗ್ರಹಣೆ, ಮಣ್ಣಿನ ದಂಡೆಗಳ ಸ್ಥಿರೀಕರಣ, ಗಾಳಿ ಹರಡುವುದು, ಉಬ್ಬರವಿಳಿತ ಮತ್ತು ತರಂಗ ಶಕ್ತಿಯನ್ನು ಉತ್ತೇಜಿಸುವಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ. ಸಾಗರದ ಹಲವು ಬಗೆಯ ಮೀನುಗಳು ಇಲ್ಲಿ ಮೊಟ್ಟೆಯನ್ನಿಟ್ಟು ಪೋಷಿಸಲು ಬರುವುದಲ್ಲದೇ ಕಾಂಡ್ಲಾ ಅರಣ್ಯವು ವಿವಿಧ ರೀತಿಯ ಜಲಚರಗಳ ವಾಸಸ್ಥಾನ ಕೂಡ ಹೌದು. ಕಾಂಡ್ಲಾ ಅರಣ್ಯವೂಕೂಡ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅತಿಕ್ರಮಣ ಮತ್ತು ಮೀನುಗಾರಿಕೆ.

ಪಶ್ಚಿಮ ಘಟ್ಟಗಳು ಭಾರತದ ಪಶ್ಚಿಮದ ರಕ್ಷಾಕವಚ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳು ಪಶ್ಚಿಮ ಘಟ್ಟಗಳಿಂದ ಕೂಡಿದೆ, ಇದು ನಮಗೆ ಹೆಮ್ಮೆಯ ವಿಷಯವೂ ಹೌದು. ದಕ್ಷಿಣದ ಭಟ್ಕಳದಿಂದ ಉತ್ತರದ ಮುಂಡಗೋಡು ಹಳಿಯಾಳ ತಾಲ್ಲೂಕುಗಳೂ ಪಶ್ಚಿಮ ಘಟ್ಟಗಳನ್ನೊಳಗೊಂಡಿದೆ. ಅಷ್ಟೇ ಅಲ್ಲ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಜೊಯಿಡಾ ತಾಲ್ಲೂಕುಗಳಲ್ಲಿ ನಿತ್ಯಹರಿದ್ವರ್ಣದ ಕಾಡಾಗಿಯೂ ಹಾಗು ಮುಂಡಗೋಡು, ದಾಂಡೇಲಿ, ಹಳಿಯಾಳ ತಾಲ್ಲೂಕುಗಳಲ್ಲಿ ಎಲೆಉದುರುವ ಕಾಡಾಗಿಯೂ ಪಶ್ಚಿಮ ಘಟ್ಟಗಳಿವೆ. ಜಿಲ್ಲೆಯ ಇನ್ನೊಂದು ವಿಷೇಶವೆಂದರೆ ಶರಾವತಿ ಕಣಿವೆ ಪ್ರದೇಶದ ಹತ್ತಿರ ಭಾಗಶಃ ಸಿದ್ದಾಪುರ ಹಾಗೂ ಹೊನ್ನಾವರದ ಗಡಿ ಪ್ರದೇಶಗಳಲ್ಲಿ ರಾಮಪತ್ರೆಯ ಜೌಗು ಪ್ರದೇಶಗಳೂ (Myristica swamps) ಇದೆ. ಇವುಗಳು ಭೂಮಿಯ ನೀರಿನ ಮಟ್ಟವನ್ನು ಹೆಚ್ಚಿಸುವುದಲ್ಲದೇ ನೀರನ್ನು ಪರಿಶುದ್ಧವಾಗಿರಿಸಲು ಸಹಕಾರಿ. ಇಂತಹ ಜೌಗು ಪ್ರದೇಶಗಳು ಪ್ರಪಂಚದಾದ್ಯಂತ ಬಹಳ ಕಡಿಮೇ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಭಾರತದಲ್ಲಿ ಕೇರಳ ಹಾಗು ಮಹಾರಾಷ್ಟ್ರ (ಇತ್ತೀಚೆಗೆ ಪತ್ತೆಹಚ್ಚಲಗಿದೆ) ಬಿಟ್ಟರೆ ನಮ್ಮ ಉತ್ತರ ಕನ್ನಡದಲ್ಲಿದೆ.

ಪಶ್ಚಿಮ ಘಟ್ಟಗಳಿಂದ ನಮಗೆ ಸುಗಮ ಮಳೆ, ಭೂಮಿಯ ಉಷ್ಣತೆಯ ಸಮತೋಲನ, ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಪಶ್ಚಿಮ ಘಟ್ಟಗಳಲ್ಲಿನ ಮರಗಿಡಗಳು ನಮಗೆ ಗಾಳಿ ಆಹಾರ ಮತ್ತು ಔಷಧಗಳನ್ನು ದೊರಕಿಸುತ್ತದೆ. ಒಂದು ಸಪ್ರಾಯ ಮರವು ದಿನಕ್ಕೆ ಸರಾಸರಿಯಾಗಿ ವರ್ಷಕ್ಕೆ 260 ಪೌಂಡ್ ಗಳಷ್ಟು ಆಮ್ಲಜನಕ ಉತ್ಪಾದಿಸುತ್ತವೆ ಮತ್ತು ಒಂದು ವರ್ಷಕ್ಕೆ 13 ಪೌಂಡ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಪಶ್ಚಿಮ ಘಟ್ಟಗಳು ನಮ್ಮ ದೇಶಕ್ಕೆ ಮಳೆಯನ್ನು ತರುವ ಮುಂಗಾರಿನ ಮಾರುತಗಳನ್ನು ತಡೆದು ಮೋಡಗಳನ್ನು ಒಗ್ಗೂಡುಸಿ ಮಳೆಸುರಿಸುವಂತೆ ಮಾಡುತ್ತದೆ. ಅಂತೆಯೆ ಹಿಮಾಲಯ ಪರ್ವತ ಶ್ರೇಣಿಗಳು ಮುಂಗಾರು ಮಾರುತಗಳನ್ನು ಉತ್ತರ ಭಾಗದ ದೇಶಗಳು ಎಂದರೆ ಬಹು ಮುಖ್ಯವಾಗಿ ಚೀನಾ ದೇಶಕ್ಕೆ ವೇಗವಾಗಿ ಹೋಗುವುದನ್ನು ತಡೆದು ಭಾರತದಲ್ಲಿ ಮಳೆ ಬೀಳುವಂತೆ ಮಾಡುತ್ತದೆ.

ಇನ್ನು ಪಶ್ಚಿಮ ಘಟ್ಟಗಳ ಬಗ್ಗೆ ಇಷ್ಟು ಹೇಳಿ ಇಲ್ಲಿಯ ಅಪರೂಪದ ಜೀವರಾಶಿಗಳ ಬಗ್ಗೆ ಹೇಳದೆಹೋದರೆ ಅಂದವೆನಿಸಲಾರದು. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಡಲತೀರದಲ್ಲಿ ಬಹುತೇಕ ಬಗೆಯ ಜಲಚರಗಳು ಕಾಣಸಿಗುತ್ತವೆ. ಇಲ್ಲಿ ಹವಳದ ಬಂಡೆಗಳು ಕೆಲವುಕಡೆ ಕಾಣಸಿಗುತ್ತವೆ ಹಾಗೂ ಬಹುಬಗೆಯ ಸಸ್ಯಗಳೂ ಹೇರಳವಾಗಿವೆ ಅದರಲ್ಲೂ ಪಾಚಿಗಳು ಬಹುತೇಕ. ಹಾಗೆಯೆ ಕಾಡುಗಳಲ್ಲಿ ಸಿಂಗಳೀಕ, ಇರುವೆ ಭಕ್ಷಕ, ಮಂಗಟ್ಟೆ, ಭಾರತದ ದೊಡ್ಡ ಅಳಿಲು, ಕಪ್ಪು ಚಿರತೆ, ಹುಲಿ, ಜಿಂಕೆ, ಕಾಡುಕೋಣ ಕಾಡಿಮ್ಮೆಗಳು ಮುಂತಾದ ಪ್ರಾಣಿಗಳನ್ನು ಕಾಣಬಹುದು. ಇಲ್ಲಿ ಬಹಳ ವಿರಳವಾದ (ಪ್ರಪಂಚದ ಬೇರೆಕಡೆಯಲ್ಲಿ ಸಿಗದಂತಹ) ಹೆಡಗಲು, ಕರಿಮತ್ತಿ, ಅಲಂಗಿ, ಗಂಧ, ಸುರಿಗೆ, ಹೀಗೆ ಹಲವು ಬಗೆಯ ಔಷಧಿ ಸಸ್ಯಗಳು ಇವೆ.
ವಿಶ್ವ ವಿಖ್ಯಾತ ಐನ್ಸ್ಟೀನ್ ಅಂತಹ ವಿಜ್ಞಾನಿಯ ಮಾತಿನಂತೆಯೆ “ಯಾವುದೇ ಇಲಿಯು ಅದರ ಬೋನನ್ನು ಅದೇ ತಯಾರಿಸಲಾರದು” ಅರ್ಥಾತ್ ಮಾನವನು ಅಣ್ವಸ್ತ್ರವನ್ನು ಕಂಡುಹಿಡಿದು ಉಪಯೋಗಿಸುವ ಪರಿಯನ್ನು ವಿಪರ್ಯಾಸವೆಂಬತೆ ವಿಡಂಬನೆ ಮಾಡಿದ್ದಾರೆ. ಅದರ ಅರ್ಥದಂತೆ ಇತ್ತೀಚಿನ ದಿನಮಾನಗಳನ್ನು ನೋಡಿದರೆ ನಮ್ಮ ವಿನಾಶವನ್ನು ನಾವೇ ಹೆಣೆದುಕೊಳ್ಳುತ್ತಿದ್ದೆವೇನೋ ಎಂದು ಭಾಸವಾಗುತ್ತದೆ. ಇಂತಹ ಸಂಪತ್ತನ್ನು ನಾವು ತಿಳಿದೋ ತಿಳಿಯದೆಯೋ ಮಾನವನ ಅಭಿವೃದ್ಧಿ ನೆಪದಲ್ಲಿ ಯಾವುದೋ ಯೊಜನೆಗಳಿಗೆ ಅಥವಾ ಇನ್ನಾವುದೋ ಅತಿಕ್ರಮಣಗಳಿಗೆ ಒಳಪಡಿಸಿ ಕಳೆದುಕೊಳ್ಳುತ್ತಿರುವುದು ತುಂಬಾ ಖೇದಕರ ಸಂಗತಿ.
ಪ್ರಪಂಚದ ಹಲವಾರು ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ಹೀಗೇ ಕಾಡಿನ ವಿನಾಶವಾದರೆ ಭೂಮಿಯ ತಾಪಮಾನ ಹೆಚ್ಚಿ, ಧ್ರವಪ್ರದೇಶದಲ್ಲಿನ ಹಿಮಹೊದಿಕೆಗಳು/ ಹಿಮಗಡ್ಡೆಗಳು ಬಹುಬೇಗ ಕರಗಿ ಕೊರೋನಾದಂತಹ ಹಲವು ಬಗೆಯ ವೈರಸ್ಸುಗಳು ಮಾನವನ್ನು ಭೂಮಿಯಿಂದ ಉಛ್ಚಾಟಿಸಬಲ್ಲದು ಅಲ್ಲದೇ ತಾಪಮಾನದ ವೈಪರಿತ್ಯದಿಂದ ಭೂಮಿಯ ಕೆಲವು ಭಾಗಗಳ ಅಂತರ್ಜಲ ಬರಡಾಗಬಹುದೆಂದು ಊಹಿಸಲಾಗಿದೆ. ಅಂತಹ ಬರಡು ಭೂಮಿ ಭಾರತದ ದಕ್ಷಿಣ ಭಾಗವಾಗಿ ಅದೂ ಕೂಡ ಮಾನವನ ವಾಸಕ್ಕೆ ಯೋಗ್ಯವಲ್ಲದ ಬರಡು ಬಂಜರು ಭೂಮಿಯಾಗಬಹುದೆಂಬುದು ಇತ್ತೀಚಿನ ಹವಾಮಾನ ಸಂಶೋಧನೆಯಗಿದೆ.
ಈಗಾಗಲೇ ಮೈರಿಸ್ಟಿಕಾ ಜೌಗು ಪ್ರದೇಶ ಕ್ಷೀಣಿಸುತ್ತಿದೆ, ಅಂತೆಯೆ ಶರಾವತಿ ಕಣಿವೆ ಪ್ರದೇಶದಲ್ಲಿನ ಹಲವು ಯೋಜನೆಗಳು ಅಲ್ಲಿಯ ವಿನಾಶಕ್ಕೆ ಆಗಲೇ ನಾಂದಿಯಾಗಿದೆ. ಈಗ ಇನ್ನೊಂದು ಯೋಜನೆಯು ಮುಂಚೂಣಿಯಲ್ಲಿ ನಿಂತಿದೆ. ಅದೇ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ.
ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಮುಖ್ಯವಾಗಿ ಅದಿರು ಸಾಗಣೆ ಮಾಡಲು ಬಳಕೆಯಾಗುವ ಯೋಜನೆಯಾಗಿದ್ದು, ಈಗಾಗಲೇ ಅದಕ್ಕೆ ಅಂದರೆ ಹೊಸಪೇಟೆ ಅಥವಾ ಬಳ್ಳಾರಿಯ ಅದಿರುಗಳ ಸಾಗಣೆ ಮಾಡಲು ಮೊದಲೇ ಇರುವಂತಹ ಹುಬ್ಬಳ್ಳಿ ಕ್ಯಾಸೆಲ್ ರಾಕ್ ಮಾರ್ಗೊವಾ ಮಾರ್ಗವು ಬಳಕೆಯಾಗುತ್ತಿದ್ದರೂ ಇದನ್ನು ಪ್ರಸ್ತಾಪಿಸಲಾಗಿದೆ. ಸುಪ್ರೀಂಕೋರ್ಟ್ ನ ಆದೇಶದಂತೆ ಈಗಾಗಲೇ ಅಕ್ರಮ ಅದಿರು ಸಾಗಣೆ ಕಡಿಮೆಯಾಗಿ, ಇದರಿಂದ ಅದಿರು ಸಾಗಣೆಗೆ ಒಂದು ಅರ್ಧವಿರಾಮ ಬಿದ್ದರೂ ಸಹ, ಇಗಿರುವ ಮಾರ್ಗದ ಬಳಕೆ ಸಮರ್ಪಕವಾಗಿ ಆಗದಾಗಿಯೂ ಸಹ ಇನ್ನೊಂದು ಯೋಜನೆ ಏಕೆ ಎನ್ನುವುದು ಪರಿಸರವಾದಿಗಳಿಂದ ಹಿಡಿದು ಜಿಲ್ಲೆಯ ಕಳಕಳಿಯ ಪ್ರಜೆಗಳ ಅಂಬೋಣ. ಇನ್ನು ಈ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಬಗ್ಗೆ ಇರುವ ಕೆಲವು ಆಕಾಂಕ್ಷೆಗಳು ಜಿಲ್ಲೆಯ ಕೆಲ ಆಶಾವಾದಿಗಳನ್ನು ಕೆರಳಿಸಿರುವುದು ಅತಿಶಯವೇನಲ್ಲ. ಏಕೆಂದರೆ ಈ ಯೋಜನೆ ಹಲವು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಹಾಗೂ ಪ್ರವಾಸೋದ್ಯಮವನ್ನು ಬೆಳೆಸಿ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಬಲ್ಲದು ಎನ್ನುವುದು. ಅದಕ್ಕೆ ನನ್ನದೊಂದು ಪ್ರಶ್ನೆ ಏನೆಂದರೆ ಈ ಯೋಜನೆಯೊಂದರಿಂದ ಸೃಷ್ಟಿಯಾಗುವ ಉದ್ಯೋಗಗಳೆಷ್ಟು? ಇದು ಪ್ರವಾಸೋದ್ಯಮಕ್ಕೆ ಹೇಗೆ ಪೂರಕ? ಪ್ರವಾಸೋದ್ಯಮ ಜಿಲ್ಲೆಯಲ್ಲಿ ಈಗ ಕಡಿಮೆ ಇದೆಯೆ?
ಮಾರ್ಗ ಶುರುವಾದಂತೆ ಆಚೀಚೆಗಿನ ಕೆಲ ಅಂಗಡಿಗಳು ವ್ಯಾಪಾರ ಮಳಿಗೆಗಳು ಉದ್ಯೋಗ ಒದಗಿಸಬಹುದು, ಆದರೆ ಅವುಗಳೂ ಪರಿಸರಕ್ಕೆ ಮಾರಕವೆ. ಹೆಗೆಂದರೆ, ವ್ಯಾಪಾರಮಳಿಗೆಗಳು ಅಲ್ಲಿನ ಜನದಟ್ಟಣೆಯನ್ನು ಹೆಚ್ಚಿಸಬಲ್ಲವು ಅದರಿಂದ ಸಾಮಾನ್ಯವಾಗಿ ಅಲ್ಲಿನ ಪ್ರದೇಶ ಜನರ ವಾಸ್ಥವಕ್ಕಾಗಿ ಕಾಡಿಗೆ ಕೊಡಲಿಯಿಡಬೇಕು, ಅತಿಕ್ರಮಣದ ನಾಂದಿ. ಇನ್ನು ಪ್ರವಾಸಿಗರು ಸುಮ್ಮನೆ ಬರುವವರಲ್ಲಾ, ಅವರಲ್ಲಿಯೂ ಮೋಜು ಮಸ್ತಿಗೆಂದು ಬರುವವರು ಹಲವು, ಸಿಕ್ಕಲ್ಲಿ ತಿಂದು ಕುಡಿದು ಅಲ್ಲಲ್ಲಿಯೇ ಬಾಟಲಿಗಳು ಪ್ಲಾಸ್ಟಿಕ್ ಗಳನ್ನು ಚೆಲ್ಲಿ ಹೋಗುವ ಜವಾಬ್ದಾರಿಯುತ ಜನರೂ ಇರುತ್ತಾರಲ್ಲವೇ? ಇವುಗಳು ನಮಗೆ, ಅಂದರೆ ಮಾನವನಿಗೆ ಹಾನಿಯಲ್ಲವೇ? ಈ ಒಂದು ಯೋಜನೆಯ ಆರಂಭದಲ್ಲಿಯೇ 2.2 ಲಕ್ಷ ಮರಗಳಿಗೆ ಕೊಡಲಿಬೀಳಲಿದೆ ಎಂದು ಹೇಳಲಾಗಿದೆ, ಇನ್ನು ಯೋಜನೆಯ ಬಳಿಕ ಅತಿಕ್ರಮಣದಿಂದ ಎಷ್ಟು ಮರಗಳ ಮಾರಣಹೋಮವಾಗಬಲ್ಲದು ಎಂದು ಯೋಚಿಸಿ.
ನಾನೇನು ಅಭಿವೃದ್ಧಿಯ ವಿರೋಧಿಯಲ್ಲ, ಆದರೂ ಕೆಲವರು ಪರಿಸರವಾದಿಗಳು ಬಂದರೆಂದು ಹೀಯಾಳಿಸಬಹುದು. ಜನರಲ್ಲಿ ಪರಿಸರವಾದಿಗಳೆಂದರೆ ಹಾಗೆ ಒಂದು ಅಭಿಪ್ರಾಯವಿದೆ ಅವರು ಅಭಿವೃದ್ಧಿಯ ವಿರೋಧಿಗಳೆಂದು. ಇಲ್ಲಿ ವಿರೋಧವಿರುವುದು ದುಂದು ವೆಚ್ಚಕ್ಕೆ, ಕಾಡಿನ ನಾಶಕ್ಕೆ, ಮಾನವ ವಿನಾಶಕ್ಕೆ, ಅಮೂಲ್ಯವಾದ ಕಾಡಿನ ವಿನಾಶಕ್ಕೆ.
ಕಳೆದುಕೊಂಡಮೇಲೆ ಚಿಂತಿಸಿ ಫಲವಿಲ್ಲ ಸ್ನೇಹಿತರೆ, ದಯವಿಟ್ಟು ಈ ಯೋಜನೆಯ ಫಲಾನುಫಲಗಳ ಬಗ್ಗೆ ಕೂಡಲೇ ಯೋಚಿಸಿ ಜಾಗೃತರಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿ ಮುಂದಿನ ಪೀಳಿಗೆಯಾದ ನಿಮ್ಮ ಮಕ್ಕಳು ಮೊಮ್ಮಕ್ಕಳು ಬದುಕಲು ಯೋಗ್ಯವಾಗುವಂತೆ ಕಲ್ಪಿಸಿ ಬಳುವಳಿಯಾಗಿ ಕೊಡಿ ಎನ್ನುವುದು ನಮ್ಮ ಆಶಯ.
ಧನ್ಯವಾದಗಳು
ಲೇಖನ: ಸಚೇತ ಹೆಗಡೆ
ಚಿತ್ರ ಕ್ರಪೆ: ಪ್ರಮೋದ್ ಗೌಡ


Leave a Reply