ಧರ್ಮಾ ಜಲಾಶಯ, ಮಳಗಿ – ಮುಂಡಗೋಡದ ಆಕರ್ಷಣೀಯ ಸ್ಥಳ

Posted by

·

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ದಟ್ಟ ಕಾನನದ ಮಧ್ಯೆ ವಿಶಾಲವಾಗಿ ವಿಸ್ತರಿಸಿಕೊಂಡಿರುವ, ಧರ್ಮಾ ಜಲಾಶಯ ಮಳೆಗಾಲದಂದು ಮೈದುಂಬಿಕೊಂಡು ಆಕರ್ಷಣೀಯ ಸ್ಥಳವಾಗಿ ಮಾರ್ಪಡುತ್ತದೆ. ಕೋಡಿ ಬಿದ್ದ ನೀರನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಪ್ರವಾಸಿಗರಲ್ಲಿ ಮೂಡುತ್ತದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಕಂದುಬಣ್ಣದ ನೀರು, ಪೂರ್ವಾಭಿಮುಖವಾಗಿ ತಿಳಿ ತಿಳಿಯಾಗಿ ರಭಸದಿಂದ ಧುಮ್ಮಿಕ್ಕುತ್ತಿರುವ ಜಲರಾಶಿ ನೋಡಲು ಎರಡು ಕಣ್ಣುಗಳು ಸಾಲದು. ಮಳೆಗಾಲದಲ್ಲಿ ದಿನದಿಂದ ದಿನಕ್ಕೆ ಕೋಡಿ ನೀರಿನ ಪ್ರಮಾಣ ಹೆಚ್ಚಳವಾಗುತ್ತದೆ.

ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯ ಕೋಡಿ ಬಿದ್ದು (ಒಳನೀರಿನ ಹರಿವಿನಿಂದ ಬರ್ತಿಯಾಗುವುದು) ಕಂಗೊಳಿಸುತ್ತದೆ. ಈ ಜಲಾಶಯವನ್ನು ಫೆಬ್ರುವರಿ 20 – 1965ರಲ್ಲಿ ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ಎಸ್ ನಿಜಲಿಂಗಪ್ಪನವರು ಉದ್ಘಾಟಿಸಿರುತ್ತಾರೆ. ಈ ಜಲಾಶಯ ನಾಲ್ಕು ಗೇಟ್ ಗಳನ್ನು ಒಳಗೊಂಡಿದೆ. ಜಲಾಶಯದ ಸೊಬಗು ಸವಿಯಲು ತಂಡೋಪತಂಡವಾಗಿ ಪ್ರವಾಸಿಗರು ಇಲ್ಲಿ ಪ್ರತಿ ವರ್ಷ ಬರುತ್ತಾರೆ. ನಿರಂತರ ಮಳೆಯಿಂದ ಪ್ರತೀ ವರ್ಷವೂ ಧರ್ಮಾ ಭರ್ತಿಯಾಗುತ್ತದೆ. ಮಳೆಗಾಲದಲ್ಲಿ ಧರ್ಮಾ ಜಲಾಶಯವನ್ನು ನೋಡುವುದೇ ಒಂದು ಸೊಬಗು. ಕಿ.ಮೀ. ದೂರದ ದಡಭಾಗವನ್ನು ಹೊಂದಿರುವ ಜಲಾಶಯವು, ಪ್ರತಿ ವರ್ಷ ಮಳೆಗಾಲ ಆರಂಭವಾಗಿ ಒಂದೆರೆಡು ತಿಂಗಳಲ್ಲಿಯೇ ಭರ್ತಿಯಾಗುತ್ತದೆ. ಕೋಡಿ ಬೀಳುವ ಜಾಗವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಮಳೆಗಾಲದ ನೀರು ಒಂದೆಡೆ ಸಂಗ್ರಹಗೊಂಡು, ಮತ್ತೊಂದೆಡೆ ಹರಿದು ಹೋಗುವ ಮಧ್ಯದಲ್ಲಿಯೇ ಝರಿಯಂತೆ ಹಂತ ಹಂತವಾಗಿ ಕಾಂಕ್ರೀಟ್‌ ನೆಲದ ಮೇಲೆ ಬೀಳುವುದನ್ನು ನೋಡಲು ಜನರು ತಾ ಮುಂದು ನಾ ಮುಂದು ಎನ್ನುವಂತಿರುತ್ತದೆ.

ಯುವ ಸಮೂಹ ಹಾಗೂ ರೈತರು ತಂಡೋಪತಂಡವಾಗಿ ಜಲಾಶಯಕ್ಕೆ ಭೇಟಿ ನೀಡಿ, ತುಂಬಿದ ಗಂಗೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಯುವಸಮೂಹ ಕೋಡಿ ನೀರಿನಲ್ಲಿ ಇಳಿದು ಕುಣಿದು ಕುಪ್ಪಳಿಸಿದರೆ ಇನ್ನೂ ಕೆಲವರು ಹರಿಯುವ ನೀರಿನಲ್ಲಿಯೇ ಮೀನು ಹಿಡಿದು ಸಂಭ್ರಮಿಸುತ್ತಾರೆ. ನೀರು ನೋಡಿ ರೋಮಾಂಚನಗೊಂಡು ಹಲವರು ‘ಸೆಲ್ಫಿʼ ಮೂಲಕ ಬೀಳುವ ನೀರಿನ ಪಟವನ್ನು ಮನದಲ್ಲಿ ಉಳಿಯುವಂತೆ ದಾಖಲಿಸಿಕೊಳ್ಳುತ್ತಾರೆ. ಧರ್ಮಾ ಜಲಾಶಯಕ್ಕೆ ಭೇಟಿ ನೀಡಿದ ಹಲವರು, ‘ಭಾರಿ ನೀರು ಬಂದೈತಿ..ʼ ಎಂದು ಉದ್ಗರಿಸ ಖುಷಿ ಪಡುತ್ತಾರೆ.

ಮೂಲಸೌಕರ್ಯ ಬೇಕಿದೆ: ಪ್ರವಾಸೋದ್ಯಮ ಉತ್ತೇಜನಕ್ಕೆ ಹೇಳಿ ಮಾಡಿಸಿದಂತಿರುವ ಈ ಜಲಾಶಯಕ್ಕೆ ಪ್ರತಿ ವರ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಪ್ರವಾಸೋದ್ಯಮ ದೃಷ್ಟಿಯಿಂದ ಧರ್ಮಾ ಸೊಬಗನ್ನು ಮತ್ತಷ್ಟು ಹೆಚ್ಚಿಸುವಲ್ಲಿ ನೀರಾವರಿ ಇಲಾಖೆಯವರು ವಿಫಲವಾಗಿದ್ದಾರೆ ಎಂಬ ಆರೋಪ ಸಾರ್ವತ್ರಿಕವಾಗಿದೆ.

ಕನಿಷ್ಠ ಮೂರು ತಿಂಗಳು ಕಾಲ ಈ ಜಲಾಶಯಕ್ಕೆ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕೆನ್ನುವ ಯೋಚನೆ ಇನ್ನೂ ಕೂಡ ಸರ್ಕಾರಕ್ಕೆ ಬಂದಿಲ್ಲದಿರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಪ್ರವಾಸಿಗರಿಗೆ ನಿರ್ಭಂದ:

ಪ್ರತಿ ವರ್ಷ ಕೊಡಿ ಬಿದ್ದ ಸಂದರ್ಭದಲ್ಲಿ ಧರ್ಮ ಜಲಾಶಯಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಆದರೆ ಕೆಲವರ ಅತೀ ಪುಂಡಾಟ ಮೋಜು ಮಸ್ತಿ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಾರೆ. ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುತ್ತಾನೆ ಮತ್ತು ಕೆಲವೊಮ್ಮೆ ನೀರಿನ ರಭಸ ಜಾಸ್ತಿ ಇರುವುದರಿಂದ ತಾಲೂಕು ಆಡಳಿತ ಈ ಪ್ರದೇಶವನ್ನು ನಿರ್ಭಂದಿಸಿ ಆದೇಶ ಹೊರಡಿಸಿದ್ದು ಇದೆ.


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading