ಯುಗಾದಿ – ಕವನ

Posted by

·

ಕಮರಿದ ಕಾಂಡದೊಳು ನವಪುಳಕ
ಮತ್ತೆ ಚಿಗುರುವ ತವಕ
ಹೊಸಗಾಳಿ ಜೋರು ಒಳಹೊರಗು
ನೋಡು ಬಾ ಈ ನವಬೆರಗು ||೧||

ತಮ ಕಳೆಯೆ ರವಿ ಮತ್ತೆ ಬಂದಿಹನು
ಹೊಸತು ಹೊತ್ತು ತಂದಿಹನು
ಕೋಟಿ ಸುಮಗಳು ಅರಳಿಹವು
ನೋಡು ಬಾ ಈ ನವಬೆಳಗು ||೨||

ಜಿಡ್ಡುಗಟ್ಟಿದ ಜಾಡ್ಯ ಕಳೆಯಲು
ಎಣ್ಣೆ ಸೀಗೆಕಾಯಿ ಬೇವು
ತಿಕ್ಕಿ ತೊಳೆದರೆ ಹಸನು
ಬೆಳಗು ಬಾ ನಮ್ಮ ಬಾಳು ||೩||

ಹೊಸ ಬಟ್ಟೆಯ ತೊಟ್ಟು
ಎದೆಯಂಗಳದಿ ರಂಗವಲ್ಲಿ ಇಟ್ಟು
ನಭಕೆ ಗುಡಿಯ ಕಟ್ಟಿ
ಸಿಂಗರಿಸು ಬಾ ನವತೋರಣದಿ ||೪||

ಬೇವು ನಿನಗೆ ಹೊಸದಲ್ಲ
ಇಂದು ತಂದಿಹೆನು ಬೆಲ್ಲ
ಬಲ್ಲಿದಾಕೆ ಮುನಿಸು ತರವಲ್ಲ
ಸ್ವೀಕರಿಸು ಬಾ ಪಚ್ಚಡಿ ||೫||

ಬಾಡದಿರಲಿ ನಿನ್ನ ಶಶಿವದನ
ನಿತ್ಯ ಹಸಿರಾಗಿರಲಿ ಜೀವನ
ಖಣಿ ಇಟ್ಟು ಮಾಡುವೆ ನಮನ
ಹೊಸದಾಗಿಸು ಬಾ ಮನವನ ||೬||

ಅನುದಿನವೂ ಆಗಿರಲಿ ಚಿರನೂತನ
ಚೈತ್ರ ಶುದ್ಧ ಪಾಡ್ಯಮಿ
ನವಸುಖ ತಂದಿಹುದು ಬೈಸಾಖಿ
ನಲಿಯೋಣ ಬಾ ಮಹಾನಂದದಿ ||೭||

✍️ ಡಾ. ಗುರುಸಿದ್ಧಯ್ಯಾ ಶಿವರಾಚಯ್ಯಾ ಸ್ವಾಮಿ
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸಿ.ಬಿ. ಖೇಡಗಿ ಮಹಾವಿದ್ಯಾಲಯ
ಅಕ್ಕಲಕೋಟ, ಮಹಾರಾಷ್ಟ್ರ 413216
ಮೊಬೈಲ್ 9175547259
e mail- gurusiddayya.s@gmail.com


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading