ಸಿದ್ಧಾಪುರದ ಮಾವಿನಗುಂಡಿಯಲ್ಲೊಂದು ಮಹಿಳಾ ಸತ್ಯಾಗ್ರಹಿಗಳ ಸ್ಮಾರಕ

Posted by

·

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಕೂಕಿನ ಮಾವಿನಗುಂಡಿಯಲ್ಲಿ (ಜೋಗದಿಂದ ಕೇವಲ ೪ ಕಿ.ಮೀ.ದೂರ) ಜೋಗ-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೨೦೬ ಕ್ಕೆ ಹೊಂದಿಕೊಂಡಂತೆ ಮಹಿಳಾ ಸತ್ಯಾಗ್ರಹಿಗಳ ಆಕರ್ಷಕ ಸ್ಮಾರಕ ನಿರ್ಮಾಣವಾಗಿದೆ. ಸಿದ್ಧಾಪರು ಸುತ್ತಮುತ್ತಲಿನ ಭಾಗಗಳಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕರ ನಿರಾಕರಣೆ ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟೀಷರಿಂದ ಸೆರೆವಾಸ ಅನುಭವಿಸಿದ ಗ್ರಾಮೀಣ ಮಹಿಳೆಯರ ದಿಟ್ಟ ಹೋರಾಟದ ಸತ್ಯದ ಚಿತ್ರಣ ಈ ಸ್ಮಾರಕದ ಪ್ರಮುಖ ತಿರುಳಾಗಿದೆ.

೧೯೩೦ ರಿಂದ ೧೯೩೫ ರವರಗೆ ದೇಶದಲ್ಲೆಲ್ಲೆಡೆ ಕರ ನಿರಾಕರಣೆ ಮತ್ತು ಅಸಹಕಾರ ಚಳುವಳಿ ಜೋರಾಗಿತ್ತು. ಬೆಂಗಳೂರು ಸನಿಹದ ಕನಕಪುರದ ವೆಂಕಟರಾಮಯ್ಯ ಮತ್ತು ಅವರ ಪತ್ನಿ ಗೌರಮ್ಮ ೪-೫ ವರ್ಷಗಳ ಕಾಲ ಸಿದ್ದಾಪುರದಲ್ಲಿ ನೆಲೆಸಿ ಸುತ್ತಮುತ್ತ ಗ್ರಾಮೀಣ ಪ್ರದೇಶದಲ್ಲಿ ಚಳುವಳಿ ಚುರುಕುಗೊಳಿಸಿದರು. ಸಿದ್ದಾಪುರ, ತಡಗಳಲೆ, ಕಾನಲೆ, ದೊಡ್ಮನೆ, ತ್ಯಾಗಲಿ, ಹಣಜಿಬೈಲು, ಕುಳಿಬೀಡು, ಗುಂಜಗೋಡು, ಹೊಸಕೊಪ್ಪ, ಹೆಗ್ಗಾರು ಇತ್ಯಾದಿ ಪ್ರದೇಶದಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಧುಮುಕಿದರು.

ಈ ಸಮಯದಲ್ಲಿ ಮಾವಿನಗುಂಡಿಯಲ್ಲಿ ನಡೆದ ಮಹಿಳೆಯರ ಉಪವಾಸ ಸತ್ಯಾಗ್ರಹ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ೧೯೩೨ರ ಮೇ ೧೮ ರಂದು ಆಗಿನ ಆಂಗ್ಲ ಸರ್ಕಾರಕ್ಕೆ ಕರ ನೀಡದ ರೈತರ ಎಮ್ಮೆಗಳನ್ನು ರಸ್ತೆ ಕಾಮಗಾರಿ ಹೊಣೆ ಹೊತ್ತ ಓರ್ವ ಕಾರಕೂನ ಹಾಗೂ ಒಬ್ಬ ಹವಾಲ್ದಾರ್ ವಶಪಡಿಸಿಕೊಂಡು ಸಾಗಿಸಿದರು. ಇದನ್ನು ಪ್ರತಿಭಟಿಸಿ ಬಸುರಿ, ಬಾಣಂತಿ, ವಯೋವೃದ್ಧ ಮಹಿಳೆಯರೂ ಸೇರಿ ಹಲವರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ತ್ಯಾಗಲಿ ಭುವನೇಶ್ವರಮ್ಮ (೩೨ ದಿನ ಉಪವಾಸ), ಕಲ್ಲಾಳ ಲಕ್ಷ್ಮಮ್ಮ (೨೨ ದಿನ ಉಪವಾಸ) ನಡೆಸಿದರು. ಇವರ ಜೊತೆಗೆ ಪ್ರತಿ ದಿನ ಸರತಿಯಂತೆ ದೊಡ್ಮನೆ ಮಹಾದೇವಮ್ಮ , ಕುಳಿಬೀಡು ಗಣಪಮ್ಮ , ಹಣಜಿಬೈಲು ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡು ಮಾದೇವಮ್ಮ, ಹೆಗ್ಗಾರು ದೇವಮ್ಮ ಉಪವಾಸ ಸತ್ಯಾಗ್ರಹ ನಡೆಸಿದ ದಾಖಲೆ ಇದೆ. ಈ ಸ್ಮಾರಕದ ಫಲಕದಲ್ಲಿ ಇವರುಗಳ ಕಾರ್ಯವನ್ನು ಸ್ಮರಿಸಿ ಈಗ ಈ ಸ್ಥಳದಲ್ಲಿ ಶಾಸನ ಬರೆಯಲಾಗಿದೆ.

(ರಂಗನಾಥ ದಿವಾಕರ ಅವರ ಕರನಿರಾಕರಣೆಯ ವೀರ ಕಥೆ ಎಂಬ ಪುಸ್ತಕದಲ್ಲಿ ಇಲ್ಲಿನ ಚಳಿವಳಿಯ ವಿವರ ದಾಖಲಾಗಿದೆ.)

ಶಿರಸಿ ಅರಣ್ಯ ವಿಭಾಗದ ಹಿಂದಿನ ಡಿ.ಎಫ್.ಓ. ಆಗಿದ್ದ ಮನೋಜ್ ಕುಮಾರ್ ತ್ರಿಪಾಠಿ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಇವರ ಸತತ ಪ್ರಯತ್ನದಿಂದ ಈ ಸ್ಮಾರಕ ರೂಪುಗೊಳ್ಳುವಂತಾಗಿದೆ.

ಮೂಲ ಲೇಖಕರು: ಶ್ಯಾಮಸುಂದರ ಗೌಡ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading