ನಿಸ್ವಾರ್ಥ ಸೇವಕ ಥಕ್ಕರ ಬಾಪಾ : ಒಂದುವರೆ ಶತಮಾನದ ನೆನಪು.
ಇಪ್ಪತ್ತನೇ ಶತಮಾನದ ಭಾರತದ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆಜೊತೆಯಲ್ಲಿಯೇ ಅಭ್ಯಾಸ ಮಾಡಬೇಕಾದ ಸಮಾಜ ಸೇವಕರ ಒಂದು ದೊಡ್ಡ ಪರಂಪರೆಯೇ ಇದೆ. ಈ ಸೇವಾ ಪರಂಪರೆಯಲ್ಲಿ ತನ್ನದೇ ಆದ ಮಹತ್ವದ ಭೂಮಿಕೆ ನಿಭಾಯಿಸಿದ್ದು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ. ಈ ಸೊಸೈಟಿಯ ಸದಸ್ಯರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎದುರಾದ ಬರಗಾಲ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಲ್ಲದೇ, ದೇಶದಾದ್ಯಂತ ಸಂಚರಿಸಿ ಶೋಷಿತ ಕಾರ್ಮಿಕರ, ರೈತರ, ಕೂಲಿಕಾರರ ಅಸ್ಪೃಶ್ಯರ ಪರವಾಗಿ ಧ್ವನಿಯೆತ್ತಿ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಹೋರಾಡಿದರು. ಇಂಥ ಧೀಮಂತ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಥಕ್ಕರ ಬಾಪಾರವರು ಜನಿಸಿ ಇಂದು ನವೆಂಬರ ೨೯, ೨೦೨೦ಕ್ಕೆ ನೂರೈವತ್ತು ವರ್ಷಗಳು ಪೂರ್ತಿಯಾದವು.
“ಥಕ್ಕರ್ ಬಾಪಾ” ಅವರ ಮೂಲ ಹೆಸರು ಅಮೃತಲಾಲ್ ಥಕ್ಕರ್. ೧೮೬೯ರ ನವೆಂಬರ್ ೨೯ರಂದು ಇಂದಿನ ಗುಜರಾಥಿನ ಸೌರಾಷ್ಟ್ರದ ಭಾವನಗರದಲ್ಲಿ ಜನಿಸಿದರು. ತಂದೆ ಲೋಹಾಣಾ ಎಂಬ ವರ್ತಕ ವರ್ಗಕ್ಕೆ ಸೇರಿದ ವಿಠ್ಠಲದಾಸ್ ಥಕ್ಕರ್. ಥಕ್ಕರ್ ಬಾಪಾ ಅವರು ಭಾವನಗರ ಮತ್ತು ಧೋಲೆರಾದಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ, ಮೆಟ್ರಿಕ್ ಪರೀಕ್ಷೆಯಲ್ಲಿ ಆಗಿನ ಭಾವನಗರ ಸಂಸ್ಥಾನಕ್ಕೇ ಪ್ರಥಮ ಸ್ಥಾನಗಳಿಸಿ ಜಶ್ವಂತ್ ಸಿಂಗ್ಜಿ ವಿದ್ಯಾರ್ಥಿವೇತನ ಪಡೆದರು. ನಂತರ ಪುಣೆಯ ಎಂಜಿನಿಯರಿAಗ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ೧೮೯೦ರಲ್ಲಿ ಎಲ್.ಸಿ.ಇ. ಪದವಿಗಳಿಸಿದರು. ಸಿವಿಲ್ ಎಂಜಿನಿಯರ ಪದವೀಧರರಾಗಿ ಬಾಪಾರವರು ಪೋರಬಂದರ, ಕಾಠಿಯಾವಾಡ, ಉಗಾಂಡ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ದಕ್ಷ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಉಗಾಂಡಾದಲ್ಲಿ (ಪೂರ್ವ ಆಫ್ರಿಕಾ) ಮೊದಲ ರೈಲ್ವೆ ಟ್ರ್ಯಾಕ್ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸ್ವದೇಶಕ್ಕೆ ಮರಳಿದಮೇಲೆ ಸ್ವಲ್ಪ ಸಮಯದವರೆಗೆ ಸಾಂಗ್ಲಿ ರಾಜ್ಯದಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಕೆಲಸದಲ್ಲಿ ಮನಸ್ಸು ನಿಲ್ಲದೆ ನೌಕರಿಯನ್ನು ಹಲವು ಬಾರಿ ಬದಲಾಯಿಸಿದರು. ತದನಂತರ ಬಾಂಬೆ ಪುರಸಭೆಯಲ್ಲಿ ಎಂಜಿನಿಯರ್ ಆಗಿ ಸೇವೆಗೆ ಸೇರಿಕೊಂಡರು. ಬಾಂಬೆ ಪೌರಸಭೆಯಲ್ಲಿ ಕೆಲಸಮಾಡುತ್ತಿದ್ದಾಗ ಇವರಿಗೆ ಝಾಡಮಾಲಿಗಳಾಗಿ ದುಡಿಯುವ ಹಲವು ಅಸ್ಪೃಶ್ಯರ ಜೀವನದ ಪರಿಚಯವಾಯಿತು. ಮುಂಬಯಿ ಪಟ್ಟಣದ ಕೊಳಚೆ ವಿಲೇವಾರಿ ಮಾಡಬೇಕಾದ ಪೌರಕಾರ್ಮಿಕರ ಶೋಚನೀಯ ಪರಿಸ್ಥಿತಿಗಳನ್ನು, ಅವರು ವಾಸಿಸುವ ಹೊಲಸು ವಸಾಹತುಗಳನ್ನು ನೋಡಿ ಆಘಾತಕ್ಕೊಳಗಾದರು. ಖಿನ್ನತೆಗೆ ಒಳಗಾದ ವರ್ಗಗಳ ಮಿಷನ್ ಸದಸ್ಯ ರಾಮಾಜಿ ಶಿಂಧೆ ಅವರ ಸಹಾಯದಿಂದ ಬಾಪಾ ಕುರ್ಲಾದ ಸ್ವೀಪರ್ ಮಕ್ಕಳಿಗಾಗಿ ಶಾಲೆಯನ್ನು ಸ್ಥಾಪಿಸಿದರು. ಮುಂದೆ ಈ ಜನರ ಜೀವನಮಟ್ಟ ಸುಧಾರಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡು ತಮ್ಮ ಉಳಿದ ಜೀವನವನ್ನು ವಿನಿಯೋಗಿಸಲು ಸಂಕಲ್ಪ ಮಾಡಿದರು.
ಈನಡುವೆ ಬಾಪಾ ತಮ್ಮ ೧೧-೧೨ನೆಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಅನಾರೋಗ್ಯದ ನಿಮಿತ್ತ ಅವರ ಪತ್ನಿ ತೀರಿಕೊಂಡಾಗ ಬಾಪಾ ಮರುಮದುವೆಯಾದರು. ಆದರೆ ದುರದೃಷ್ಟವಶಾತ್ ಎರಡನೆಯ ಹೆಂಡತಿಯೂ ತೀರಿಕೊಂಡರು. ಇದರಿಂದ ಇವರಿಗೆ ಸಂಸಾರದ ಹೊಣೆ ಕಡಿಮೆಯಾಗಿ ಸಮಾಜಸೇವೆಯ ಕಡೆಗೆ ಹೆಚ್ಚಿನ ಗಮನವೀಯಲು ಅವಕಾಶವಾಯಿತು. ಸಮಾಜ ಸೇವೆಯ ಕಡೆಗೆ ಮೊದಲಿನಿಂದಲೂ ಒಲಿದಿದ್ದ ಬಾಪಾ ಅವರು ನೌಕರಿಯನ್ನು ತ್ಯಜಿಸಿ ೧೯೧೪ ರಲ್ಲಿ ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾದರು. ಬಾಂಬೆ ಪೌರಸಭೆಯಲ್ಲಿದ್ದಾಗಲೇ ಥಕ್ಕರ್ ಅವರಿಗೆ ಗೋಖಲೆಯವರ ಪರಿಚಯವಾಗಿತ್ತು. ಇವರು ಗಾಂಧೀಜಿಯವರ ಪ್ರಭಾವಕ್ಕೂ ಒಳಗಾಗಿದ್ದರು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಗೋಖಲೆಯವರ ಭಾರತ ಸೇವಕ ಸಮಾಜವನ್ನು ಸೇರಿದ ನಂತರ ಉತ್ತರ ಪ್ರದೇಶದ ಕ್ಷಾಮಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ನೆರವಾಗಲು ಹೋದರು. ತಮ್ಮ ಮುಂದಾಲೋಚನೆ, ಶಿಸ್ತು ಮತ್ತು ಸೇವಾ ಮನೋಭಾವದಿಂದಾಗಿ ಇವರು ಬಲು ಬೇಗ ಜನಪ್ರಿಯರಾದರು. ಮುಂದೆ ಅಸ್ಸಾಮ್, ಗುಜರಾತ್, ಒರಿಸ್ಸ, ಬಂಗಾಲ ಮುಂತಾದ ಪ್ರದೇಶಗಳಲ್ಲಿ ಕ್ಷಾಮಪರಿಹಾರ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದರು.
೧೯೧೯ರಲ್ಲಿ ಜೆಮಷೆಡ್ಪುರದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ನೆರವಾದರು. ಅದೇ ವರ್ಷ ಗುಜರಾತಿನ ಪಂಚಮಹಾಲ್ ಜಿಲ್ಲೆಯ ಭಿಲ್ಲರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಅವರ ಶೋಚನೀಯ ಸ್ಥಿತಿಯನ್ನು ಅರಿತರು. ಅವರ ಪುರೋಭಿವೃದ್ಧಿಗಾಗಿ ಭಿಲ್ಲ ಸೇವಾ ಮಂಡಲಿಯೊಂದನ್ನು ಸ್ಥಾಪಿಸಿದರು. ಅವರ ಮಧ್ಯದಲ್ಲಿಯೇ ತಾವೂ ಇದ್ದು ಅವರಲ್ಲಿದ್ದ ದುರ್ವ್ಯಸನಗಳನ್ನು ಹೋಗಲಾಡಿಸಲು ಶ್ರಮಿಸಿದರು. ೧೯೨೧ರಲ್ಲಿ ಕಾಠಿಯಾವಾಡದಲ್ಲಿ ಖಾದಿ ಗ್ರಾಮೋದ್ಯೋಗದ ಏರ್ಪಾಟು ಮಾಡಿದರು. ೧೯೨೨ ರಲ್ಲಿ ಅವರು ಭಿಲ್ ಸೇವಾ ಮಂಡಲವನ್ನು ಸ್ಥಾಪಿಸಿದರು. ೧೯೨೬ರಲ್ಲಿ ಭಾವನಗರ, ೧೯೨೮ರಲ್ಲಿ ಪೋರ್ಬಂದರ್ಗಳಲ್ಲಿ ನಡೆದ ಪ್ರಜಾಸಮ್ಮೇಳನಗಳಿಗೆ ಇವರು ಅಧ್ಯಕ್ಷರಾಗಿದ್ದರು. ೧೯೩೦ ರ ಕಾನೂನು ಅಸಹಕಾರ ಚಳವಳಿಯ ಸಂದರ್ಭದಲ್ಲಿ, ಬಾಪಾರನ್ನು ಬಂಧಿಸಿ ೬ ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ೪೦ ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
೧೯೩೨ರಲ್ಲಿ ಮಹಾತ್ಮ ಗಾಂಧಿ ಸ್ಥಾಪಿಸಿದ ಹರಿಜನ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾದರು. ಹರಿಜನ ಸೇವಕ ಸಂಘದ ಕಾರ್ಯದರ್ಶಿಯಾದ ವರ್ಷದಲ್ಲೇ ಇವರಿಂದ ಸಂಘದ ೨೨ ಪ್ರಾಂತೀಯ ಹಾಗೂ ೧೭೦ ಜಿಲ್ಲಾ ಕೇಂದ್ರಗಳು ಸ್ಥಾಪಿತವಾದವು. ಹರಿಜನರ ಏಳಿಗೆಗಾಗಿ ೧೯೩೩-೩೪ರಲ್ಲಿ ಗಾಂಧೀಜಿಯವರ ಜೊತೆ ಪ್ರವಾಸ ಕೈಗೊಂಡರು. ೧೯೩೭ರಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ಅಧಿಕಾರಕ್ಕೆ ಬಂದಾಗ ಇವರು ಹರಿಜನ ಹಾಗೂ ಆದಿವಾಸಿ ಜನರ ಏಳಿಗೆಯ ಹೊಣೆ ಹೊತ್ತರು. ೧೯೪೪ರಲ್ಲಿ ಗೊಂಡ್ ಸೇವಕ ಸಂಘವನ್ನು ಸ್ಥಾಪಿಸಿದರು. ಈ ಸಂಸ್ಥೆಯನ್ನು ನಂತರ ವನವಾಸಿ ಸೇವಾ ಮಂಡಲ್ ಎಂದು ಮರುನಾಮಕರಣ ಮಾಡಲಾಯಿತು. ಭಾರತಿಯ ಅದಿಮಜಾತಿ ಸೇವಾ ಸಂಘವನ್ನು ಅಕ್ಟೋಬರ್ ೨೪, ೧೯೪೮ ರಂದು ಸ್ಥಾಪಿಸಲಾಯಿತು. ಈ ಸಂಘದ ವತಿಯಿಂದ ಅಖಿಲ ಭಾರತ ಮಟ್ಟದಲ್ಲಿ ಬುಡಕಟ್ಟು ಮತ್ತು ಹರಿಜನರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದರು. ಅವರು ಸಂವಿಧಾನ ಸಭೆಗೆ ಆಯ್ಕೆಯಾದರು. ಭಾರತದ ಸಂವಿಧಾನದ ರಚನಾ ಪ್ರಕ್ರಿಯೆಯಲ್ಲಿ ಅಮೂಲ್ಯವಾದ ಒಳಹರಿವುಗಳನ್ನು ಸೇರಿಸಿದರು. ಅವರು ಸಂವಿಧಾನ ಸಭೆಯ ಹೊರಗಿಟ್ಟ ಮತ್ತು ಭಾಗಶಃ ಹೊರಗಿಟ್ಟ ಪ್ರದೇಶಗಳ (ಅಸ್ಸಾಂ ಹೊರತುಪಡಿಸಿ) ಉಪಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಅಸ್ಸಾಂನ ಉಪಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಬಾಪಾ ನಡೆಸಿದ ಅಖಿಲ ಭಾರತ ಸಮೀಕ್ಷೆಯನ್ನು ಆಧರಿಸಿಯೇ ಭಾರತದ ಸರ್ಕಾರ ೧೯೫೦ರಲ್ಲಿ ಹರಿಜನ, ಆದಿವಾಸಿ ಮುಂತಾದ ಹಿಂದುಳಿದ ಜನಾಂಗಗಳ ರಕ್ಷಣೆ ಹಾಗೂ ಕಲ್ಯಾಣ ಕಾರ್ಯಗಳಿಗೆ ಕಾನೂನಿನ ಕ್ರಮಗಳನ್ನು ಕೈಗೊಂಡಿತು.
ಬಾಪಾ ಅನೇಕ ಸ್ಮಾರಕ ನಿಧಿಗಳ ಸಂಗ್ರಹಣೆಗಾಗಿಯೂ ದುಡಿದರು. ಭಿಲ್ಲರಿಗಾಗಿ ರಚಿಸಿದಂತೆ ಗೋಂಡ ಮುಂತಾದ ಅದಿಮ ಜಾತಿಗಳಿಗೂ ಇವರು ಮಂಡಲಿಗಳನ್ನು ಸ್ಥಾಪಿಸಿ ಹಿಂದುಳಿದ ಜನಾಂಗಗಳ ಅಭಿವೃದ್ಧಿಗಾಗಿ ದುಡಿದರು. ಇವರ ಹಿರಿತನ ಹಾಗೂ ಸೇವಾಮನೋಭಾವನ್ನು ಮೆಚ್ಚಿ ಜನ ಇವರನ್ನು ಥಕ್ಕರ್ ಬಾಪಾ(ತಂದೆ) ಎಂದು ಕರೆದರು. ಅದೇ ಹೆಸರು ಇವರಿಗೆ ಸ್ಥಿರವಾಯಿತು. ಥಕ್ಕರ ಬಾಪಾ ಅಸ್ಸಾಂ, ಗ್ರಾಮೀಣ ಬಂಗಾಳದ ಅರಣ್ಯ, ಒರಿಸ್ಸಾದ ಬರ ಪೀಡಿತ ಪ್ರದೇಶಗಳು, ಗುಜರಾತನ ಭಿಲ್ ಬೆಟ್ಟಗಳು ಮತ್ತು ಸೌರಾಷ್ಟ್ರದ ಹರಿಜನ್ ಪ್ರದೇಶಗಳು, ಮಹಾರಾಷ್ಟ್ರದ ಮಹರ್ ಪ್ರದೇಶಗಳು, ಮದ್ರಾಸನ ಅಸ್ಪೃಶ್ಯರು, ಛೋಟಾನಾಗ್ಪುರದ ಗುಡ್ಡಗಾಡು ಪ್ರದೇಶಗಳು, ಥಾರ ಮರುಭೂಮಿ, ಹಿಮಾಲಯದ ತೀರಗಳು ಹೀಗೆ ಇಡೀಯ ಭಾರತವನ್ನು ಬುಡಕಟ್ಟು ಮತ್ತು ಹರಿಜನರ ಉನ್ನತಿಗಾಗಿ ತಿರುಗಾಡಿದರು. ಥಕ್ಕರಬಾಪಾ ಅವರು ತಮ್ಮ ಜೀವನದ ೩೫ ವರ್ಷಗಳನ್ನು ಬುಡಕಟ್ಟು ಮತ್ತು ಹರಿಜನರ ಸೇವೆಯಲ್ಲಿ ಕಳೆದರು. ಅವರು ಯಾವಾಗಲೂ ರೈಲ್ವೆಯ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು.
೧೯೪೯ರ ನವೆಂಬರ್ ೨೯ರಂದು ಬಾಪಾರವರ ೬೦ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸವಿನೆನಪಿನ ಗ್ರಂಥವೊಂದನ್ನು ಇವರಿಗೆ ಅರ್ಪಿಸಲಾಯಿತು. ಥಕ್ಕರ್ ಬಾಪಾ ಅವರು ೧೯೫೧ರ ಜನವರಿ ೧೯ರಂದು ತೀರಿಕೊಂಡರು. ಭಾರತ ಸರ್ಕಾರವು ೧೯೬೯ ರಲ್ಲಿ ಅವರ ಗೌರವಾರ್ಥವಾಗಿ ಒಂದು ಅಂಚೆಚೀಟಿ ಬಿಡುಗಡೆ ಮಾಡಿತು. ಪ್ರಸಿದ್ಧ ಪ್ರದೇಶವಾದ ಮುಂಬೈನ ಕಾಲೋನಿಗೆ ಅವರ ಹೆಸರನ್ನು ಇಡಲಾಗಿದೆ. ಅದಿಂದು ಬಪ್ಪಾ ಕಾಲೋನಿಯೆಂದು ಪ್ರಸಿದ್ಧವಾಗಿದೆ. ಬಡ ಮತ್ತು ಸಂಪೂರ್ಣವಾಗಿ ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಸಮರ್ಪಿತ ಸೇವೆಗಳಿಗಾಗಿ ಮಧ್ಯಪ್ರದೇಶ ರಾಜ್ಯ ಸರ್ಕಾರವು ಅವರ ಗೌರವಾರ್ಥವಾಗಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿದೆ. ಮಹಾರಾಷ್ಟ್ರ ಸರ್ಕಾರವು ೨೦೦೭ ರಲ್ಲಿ‘ಥಕ್ಕರ್ ಬಪ್ಪಾ ಆದಿವಾಸಿ ವಸ್ತಿ ಸುಧಾರಣ’ ಎಂಬ ಆದಿವಾಸಿ ಗ್ರಾಮಗಳು ಮತ್ತು ವಸಾಹತುಗಳನ್ನು ಸುಧಾರಿಸುವ ಯೋಜನೆಯನ್ನು ರೂಪಿಸಿದೆ.
ಬಾಪಾರವರು ಬರೆದದ್ದು ತೀರ ಕಡಿಮೆ. ಸರ್ವೆಂಟ್ಸ್ ಆಫ್ ಇಂಡಿಯ, ಹರಿಜನ್, ಹಿಂದುಸ್ಥಾನ್ ಟೈಮ್ಸ್ ಮುಂತಾದ ಪತ್ರಿಕೆಗಳಿಗೆ ಕ್ವಚಿತ್ತಾಗಿ ಬರೆದ ಲೇಖನಗಳಿಂದಲೂ ಅವರ ದಿನಚರಿಯ ಪುಟಗಳಿಂದಲೂ ೧೯೪೧ರಲ್ಲಿ ಅವರು ಕೊಟ್ಟ ಕಾಳೆ ಸ್ಮಾರಕ ಉಪನ್ಯಾಸದಿಂದಲೂ ಅವರ ಟ್ರೈಬ್ಸ್ ಆಫ್ ಇಂಡಿಯ ಎಂಬ ಗ್ರಂಥದಿಂದಲೂ ಬಾಪಾರವರಿಗೆ ಭಾರತದ ಹಿಂದುಳಿದ ಆದಿವಾಸಿ ಜನರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ವ್ಯಕ್ತವಾಗುತ್ತವೆ. ಅವರ ಈ ನಿಃಸ್ವಾರ್ಥ ಗುಣಗಳಿಂದಾಗಿಯೇ `ನಿರ್ಗತಿಕರ ಪಿತ’ ಎಂಬ ಬಿರುದು ಅವರಿಗೆ ದೊರಕಿತು. ಥಕ್ಕರ್ ಬಾಪಾ ತಮ್ಮ ಗುರುಗಳೆಂದು ನಾಲ್ಕು ಜನರನ್ನು ಹೆಸರಿಸಿದ್ದಾರೆ. ತಂದೆ ವಿಠ್ಠಲದಾಸ್ ಇವರ ಪ್ರಥಮ ಗುರು. ಅವರಿಂದ ಪರೋಪಕಾರ ಹಾಗೂ ಸೇವಾವೃತ್ತಿಯನ್ನು ಇವರು ಪಡೆದರು. ವಿಠ್ಠಲ ರಾಂಜಿ ಶಿಂಧೆ ಇವರ ಎರಡನೆಯ ಗುರು. ದಲಿತರ ಸೇವೆ ಮಾಡುವುದನ್ನೂ ಶಿಕ್ಷಣಕ್ಕಾಗಿ ಕೆಲಸ ಮಾಡುವುದನ್ನೂ ಅವರ ಹಕ್ಕುಗಳಿಗಾಗಿ ಹೊಡೆದಾಡುವುದನ್ನೂ ಶಿಂಧೆಯವರಿಂದ ಕಲಿತರು. ಗೋಪಾಲಕೃಷ್ಣ ದೇವಧರ್ ಇವರ ಮೂರನೆಯ ಗುರು. ಅವರಿಂದ ಹರಿಜನರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಉಪಾಯಗಳನ್ನು ಕಲಿತರು. ಮಹರ್ಷಿ ಕರ್ವೆ ಇವರ ನಾಲ್ಕನೆಯ ಗುರು. ಸ್ತ್ರೀಶಿಕ್ಷಣದ ಕೆಲಸವನ್ನು ಇವರು ಕಲಿತದ್ದು ಕರ್ವೆಯವರಿಂದ. ಸಾರ್ವತ್ರಿಕ ಕಡ್ಡಾಯ ಶಿಕ್ಷಣದಲ್ಲಿ ಥಕ್ಕರ್ ಧೃಡವಾದ ನಂಬಿಕೆಯನ್ನು ಹೊಂದಿದ್ದರು ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವಂತೆ ಪ್ರತಿಪಾದಿಸಿದರು. ಅವರು ತಮ್ಮ ಧ್ಯೇಯವನ್ನು ಹೊತ್ತು ಭಾರತದ ಅನೇಕ ಭಾಗಗಳಿಗೆ ಪ್ರಯಾಣಿಸಿದರು. ಅವರು ದೀನರ ಶ್ರದ್ಧಾಭಕ್ತಿಯ ಸೇವಕರಾಗಿದ್ದರು.
ಉತ್ತರ ಕನ್ನಡ ಅಕ್ಷರ ಸೂರ್ಯ ದಿನಕರ ದೇಸಾಯಿವರು ಥಕ್ಕರ್ ಬಾಪಾರ ಸೇವೆಯ ಗೌರವಾರ್ಥವಾಗಿ ಕೆನರಾ ವೆಲ್ಫೆರ್ ಟ್ರಸ್ಟಿನ ಅಂಗ ಸಂಸ್ಥೆಗಳಾಗಿ ‘ಥಕ್ಕರ ಬಾಪಾ ಸೇವಾ ಕೇಂದ್ರ’ ಬಡ ಹೆಣ್ಣುಮಕ್ಕಳಿಗಾಗಿ ‘ಥಕ್ಕರ ಬಾಪಾ ವಸತಿಗೃಹ’, ಥಕ್ಕರ್ ಬಾಪಾ ಹೊಲಿಗೆ ಶಾಲೆ’ ಗಳನ್ನು ಆರಂಭಿಸಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಹರಿಜನರಿಗಾಗಿ ಕರಕುಶಲ ತರಬೇತಿ ಕೇಂದ್ರ, ಹರಿಜನರಿಗೆ ಸಂಸ್ಕಾರ ಕೇಂದ್ರ ಮೊದಲಾದವುಗಳನ್ನು ತೆರೆದು ಬಾಪಾರ ಧೇಯ್ಯಾದರ್ಶಗಳನ್ನು ಪಾಲಿಸಿದರು. ಇಂದೂ ಅಂಕೋಲೆಯಲ್ಲಿ ಥಕ್ಕರಬಾಪಾರ ಹೆಸರಿನಲ್ಲಿ ಪೂರ್ವಪ್ರಾಥಮಿಕ ಶಾಲೆಯೊಂದು ಕಾರ್ಯನಿರ್ವಹಿಸುತ್ತಿದೆ. ಬಾಪಾರ ನೆನಪು ನಿರಂತರವಾಗಿಟ್ಟಿದೆ.
ಮಾಹಿತಿ: ಶ್ಯಾಮಸುಂದರ ಗೌಡ


Leave a Reply