ಸಿದ್ದಿ ಜನಾಂಗ – ಇತಿಹಾಸ, ಸಂಪ್ರದಾಯ, ಕಲೆ, ಜೀವನ, ಸಾಧಕರು, ಸಾಮಾಜಿಕ ಸ್ಥಿತಿ

Posted by

·

ಸಿದ್ದಿ ಉತ್ತರ ಕನ್ನಡ:

ಕರ್ನಾಟಕದ ಸಿದ್ದಿಗಳು, ನಮ್ಮ ರಾಜ್ಯದಲ್ಲಿ ವಾಸವಾಗಿರುವ ಸಿದ್ದಿ ಎಂಬ ಬುಡುಕಟ್ಟಿಗೆ ಸೇರಿದವರು. ಇವರು ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ಧೃಢೀಕರಿಸಿದ್ದಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು, ತಮ್ಮ ಕಾರ್ಯಾನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರಾಗಿ ಸಾಗಿಸಿದ್ದರು. ಆ ಕಾರಣದಿಂದಾಗಿ ಭಾರತದಲ್ಲಿ ಇಂದು ಐವತ್ತು ಸಾವಿರ ಸಿದ್ದಿ ಜನರನ್ನು ನಾವು ಕಾಣಬಹುದು. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಈ ಮಂದಿ ಬೀಡು ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲಾ, ಮುಂಡಗೋಡ ಮತ್ತು ಸಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖಾನಪುರದಲ್ಲಿ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸಿದ್ದಿ ಬುಡುಕಟ್ಟವರನ್ನು ಕಾಣಬಹುದು. ಈ ಜನಾಂಗದ ಹಲವಾರು ಮಂದಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಅನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿ, ಸಿಂಧ್‍ನ ಕರಾಚಿಯಲ್ಲಿ ನೆಲೆ ಕಂಡರು.

ಸಿದ್ದಿ ಜನಾಂಗದ ಹೆಸರು:

ಸಿದ್ದಿ ಎಂಬ ಹೆಸರ ಹಿಂದೆ ಅನೇಕ ಕಾಲ್ಪನಿಕ ಕಥೆಗಳಿವೆ. ಒಂದು ವಿಶ್ಲೇಷಣೆಯ ಪ್ರಕಾರ, ಉತ್ತರ ಆಫ್ರಿಕಾದಲ್ಲಿ, ಮರ್ಯಾದೆ ಪ್ರತೀಕವಾಗಿ ಉಪಯೋಗಿಸುವ ಪದ ಸಿದ್ದಿ. ಇದು, ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ವಾಡಿಕೆಯಲ್ಲಿರುವ ‘ಸಾಹೆಬ್’ ಪದಕ್ಕೆ ಸಮಾನವಾಗಿದೆ ಎಂದು ಹೇಳಲಾಗಿದೆ. ಎರಡನೆಯ ವಿಶ್ಲೇಷಣದ ಪ್ರಕಾರ, ಅರಬರು, ಈ ಸಿದ್ದಿ ಬುಡುಕಟ್ಟಿಗೆ ಸೇರಿದ ಜನರನ್ನು ಭಾರತಕ್ಕೆ ಕರೆದೊಯ್ದರು. ಈ ಅರಬರು ‘ಸಯ್ಯಿದ್’ ಎಂಬ ಹೆಸರನ್ನು ಹೊಂದಿದ್ದರು. ಹಾಗಾಗಿ ಈ ಜನಾಂಗಕ್ಕೆ ಸಿದ್ದಿ ಎಂಬ ಹೆಸರು ಬಂತು ಎಂಬುದು ಪ್ರಚಲಿತದಲ್ಲಿದೆ. ಸಿದ್ದಿ ಎಂಬ ಜನಾಂಗಕ್ಕಿರುವ ಮತ್ತೊಂದು ಹೆಸರು ‘ಹಬ್ಷಿ’. ಈ ಶಬ್ದವೂ ಕೂಡ ಅರಬಿಕ್ ಭಾಷೆಯ ಮೂಲವನ್ನು ಹೊಂದಿದೆ ಎಂದು ಹೇಳಲಾಗಿದೆ.

ಇತಿಹಾಸ:

ಹಿಂದೆಯೆ ಹೇಳಿರುವ ಪ್ರಕಾರ, ಈ ಜನಾಂಗದವರನ್ನು ಪೋರ್ಚುಗೀಸರು ಭಾರತಕ್ಕೆ ಹದಿನಾರರಿಂದ ಹತ್ತೊಂಭತ್ತನಯ ಶತಮಾನದಲ್ಲಿ ಗುಲಾಮರಾಗಿ ಕರೆದುಕೊಂಡು ಬಂದರು. ಭಾರತದ ಸರ್ಕಾರ ಪೋರ್ಚುಗೀಸರ ವಿರುದ್ಧ ಗೋವಾ ಪ್ರದೇಶಕ್ಕಾಗಿ ಹೋರಾಡುತ್ತಿರುವಾಗ, ಅನೇಕ ಸಿದ್ದಿಯರು ಪೋರ್ಚುಗೀಸರ ಕಬ್ಬಿಣದ ಮುಷ್ಠಿಯಿಂದ ತಪ್ಪಿಸಿಕೊಂಡು ಕರ್ನಾಟಕಕ್ಕೆ ಬಂದು ಸೇರಿಕೊಂಡರು. ಇವರಲ್ಲಿ ಅನೇಕ ಮಂದಿ ಹೇಳುವ ಪ್ರಕಾರ, ತಾವು ಪೋರ್ಚುಗೀಸರ ಅಡಿಯಲ್ಲಿ ಗುಲಾಮರಾಗಿದ್ದು, ಅವರ ದಬ್ಬಾಳಿಕೆಗೆ ಗುರಿಯಾಗಿದ್ದರು.

ಭಾಷೆ:

ಸಿದ್ದಿ ಬುಡುಕಟ್ಟಿನವರು, ಪ್ರಮುಖವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕೆಲವರು ಕೊಂಕಣಿ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತಾರೆ.

ಉದ್ಯೋಗ:

ಇಂದು ಕಾಣಬಹುದಾದ ಸಿದ್ದಿಯರು ಮುಖ್ಯವಾಗಿ ವ್ಯವಸಾಯವನ್ನೂ, ಕೂಲಿಯನ್ನೂ, ಮತ್ತು ಕೆಲವರು, ಮನೆ ಆಳುಗಳಾಗಿ ಕೆಲಸ ಮಾಡುವುದು ಸರ್ವೇಸಾಮಾನ್ಯವಾಗಿದೆ. ಗೋವಾದಿಂದ ಕರ್ನಾಟಕಕ್ಕೆ ವಲಸೆ ಬಂದ ಮೊದಲ ಸಿದ್ದಿ ಜನಾಂಗವು, ಉತ್ತರ ಕನ್ನಡ ಜಿಲ್ಲೆಯ ಕಾಡುಗಳನ್ನು ತಮ್ಮ ವಾಸಸ್ಥಾನವಾಗಿ ಪರಿವರ್ತಿಸಿಕೊಂಡು, ಅದೇ ಸ್ಥಳದಲ್ಲಿ ವ್ಯವಸಾಯವನ್ನು ಮಾಡತೊಡಗಿದರು. ಯಲ್ಲಾಪುರದ ಸಿದ್ದಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ.

ಧರ್ಮ:

ಕರ್ನಾಟಕದಲ್ಲಿರುವ ಸಿದ್ದಿಯರು ಹಿಂದು ಧರ್ಮಕ್ಕೂ, ಕ್ರೈಸ್ತ ಧರ್ಮಕ್ಕೂ, ಇಸ್ಲಾಮ್ ಧರ್ಮಕ್ಕೂ ಸೇರಿದವರಾಗಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮವನ್ನು ಪಾಲಿಸುವ ಸಿದ್ದಿಯರನ್ನು ಕಂಡರೆ, ಯಲ್ಲಾಪುರ ಮತ್ತು ಅಂಕೋಲದಲ್ಲಿ ಹಿಂದು ಧರ್ಮದವರನ್ನು ಕಾಣಬಹುದು. ಸಿದ್ದಿಯರಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ, ಇವರಲ್ಲಿ ಬೇರೆ ಬೇರೆ ಮತದವರು ಇದ್ದರೂ ಕೂಡ, ಮದುವೆಯನ್ನು ಮಾಡುವಾಗ ಧರ್ಮಗಳನ್ನು ಪರಿಗಣಿಸುವುದಿಲ್ಲ. ಸಿದ್ದಿಯರು ಯಾವ ಮತ ಭೇದವಿಲ್ಲದೆ ಮಾಡುವ ಪೂಜೆ ಹಿರಿಯರ ಪೂಜೆ. ಇದು, ತಾವು ತಮ್ಮ ಪೂರ್ವಜರನ್ನು ನೆನಸಿ ಮಾಡುವ ಪೂಜೆ. ಇಗಾಗಲೇ ಮರಣವನ್ನು ಹೊಂದ್ದಿದ್ದರೂ ಸಹ, ಅವರು ತಮ್ಮ ಬಳಿಯೇ ಇದ್ದಾರೆ ಎಂದು ಭಾವಿಸಿ ಮಾಡುವ ಪೂಜೆ ಇದು. ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಅವರಿಗೆ ತಿಳಿದಿರುತ್ತದೆಯೆಂದು ಭಾವಿಸಿ, ಮದುವೆ, ಹುಟ್ಟು, ಸಾವು ಮತ್ತು ಇತರೆ ಮುಖ್ಯ ಘಟನೆಗಳಲ್ಲಿ ಅವರನ್ನು ನೆನೆಯಲಾಗುತ್ತದೆ. ಇದು ಮರಣ ಹೊಂದಿರುವ ಜೀವಿಗಳಿಗೆ ನಮಸ್ಕಾರವನ್ನು ಅರ್ಪಿಸುವ ರೀತಿ. ಅವರ ತಂದೆ-ತಾಯಂದಿರೇ ಮರಣವನ್ನು ಹೊಂದಿದ್ದಲ್ಲಿ, ಅವರಿಗೂ ಸಹ ಧನ್ಯವಾದಗಳನ್ನು ಅರ್ಪಿಸುವ ಪ್ರತೀಕ, ಹಿರಿಯರ ಪೂಜೆ. ತಮ್ಮನ್ನು ವರ್ಷಾನುಗಟ್ಟಲೆ ಸಾಕಿ ಸಲುಹಿದವರಿಗೆ ಒಂದು ಸಣ್ಣ ಕಾಣಿಕೆಯಿದು. ಈ ಒಂದು ಸಂದರ್ಭದಲ್ಲಿ ಎಲ್ಲಾ ಸಂಬಂಧಿಕರೂ ನೆರೆಯುವುದು ಕಡ್ಡಾಯ. ಇದರಿಂದ ಸಂಬಂಧಗಳು ಬೆಳೆಯುತ್ತವೆ ಎಂಬ ನಂಬಿಕೆ ಈ ಜನಾಂಗದವರಿಗೆ. ಹಿರಿಯರ ಪೂಜೆ ವರ್ಷಕ್ಕೆ ಎರಡು ಬಾರಿ ನಡೆಸುವುದು ವಾಡಿಕೆಯಲ್ಲಿದೆ. ಈ ಪೂಜೆಯನ್ನು ಮನೆಯ ಹಿರಿಯ ಅಥವ ಯಜಮಾನನ ಕೈಗಳಿಂದ ನಡೆಯುತ್ತದೆ. ಸಾಮಾನ್ಯವಾಗಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮತ್ತು ಹೋಲಿ ಹಬ್ಬದ ಸಮಯದಲ್ಲಿ ಹಿರಿಯರ ಪೂಜೆ ಮಾಡಲಾಗುತ್ತದೆ. ಇದು ಅವಷ್ಯಕವಾಗಿ ಪೂರ್ವಜರ ತಿಥಿಯಂದು ನಡೆಯಬೇಕಿಲ್ಲ. ಹಿರಿಯರು ತೀರಿಕೊಂಡ ಮೊದಲ ವರ್ಷವನ್ನು ಮಾತ್ರ ಇವರು ಪರಿಗಣಿಸುತ್ತಾರೆ. ಹಿಂದು ಸಿದ್ದಿಯರಲ್ಲಿ ತಿಥಿಯನ್ನು ಸುದೀರ್ಘವಾದ ಆಚರಣೆಗಳೊಂದಿಗೆ ಮಾಡಲಾಗುತ್ತದೆ. ಅದೇ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮದವರಲ್ಲಿ ಈ ಪದ್ಧತಿಯಿಲ್ಲ.

ಕಲೆ ಸಂಪ್ರದಾಯ:

ಸಿದ್ದಿಯರ ಆಚಾರ ಸಂಪ್ರದಾಯಗಳು ಶ್ರೀಮಂತಿಕೆಯಿಂದ ಕೂಡಿದ್ದು ಇವರ ಪುಗಡಿ ಕುಣಿತ ಮತ್ತು ಡಮಾಮಿ ಕುಣಿತ ಬಹಳ ಪ್ರಸಿದ್ದಿ ಪಡೆದಿದೆ. ಸಿದ್ದಿಯರ ಕಲೆ ಮತ್ತು ಸಂಪ್ರದಾಯದ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಜನಸಂಖ್ಯೆ:

ಭಾರತ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಸಿದ್ದಿಯರನ್ನು ಕಾಣಬಹುದಾದ ರಾಜ್ಯ ಕರ್ನಾಟಕ. ಇತ್ತೀಚಿನ ಗಣನೆಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ೩೭೦೦ ಸಿದ್ದಿ ಕುಟುಂಬಗಳು ವಾಸವಾಗಿವೆ; ಎಂದರೆ, ಸುಮಾರು ೧೮೦೦೦ ಜನರನ್ನು ಕಾಣಬಹುದು. ಗುಜರಾತಿನಲ್ಲಿ ೧೦೦೦೦ ಮತ್ತು ಹೈದರಾಬಾದಿನಲ್ಲಿ ೧೨೦೦೦ ಜನರಿದ್ದಾರೆ. ಕೆಲವರು, ಲಕ್ನವ್, ದೆಹಲಿ ಮತ್ತು ಕಲ್ಕತ್ತಾದಲ್ಲಿ ಕೂಡ ಬೀಡು ಬಿಟ್ಟಿದ್ದಾರೆ. ೧೦೦೦ಕ್ಕಿಂತ ಕಡಿಮೆ ಸಿದ್ದಿಯರು ಶ್ರೀಲಂಕಾದಲ್ಲಿ ಇದ್ದಾರೆ.

ಸಾಮಾಜಿಕ ಸ್ಥಿತಿ ಮತ್ತು ಪುನರ್ವಸತಿ:

ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ ಸಿದ್ದಿ ಜನಾಂಗದ ಸ್ಥಿತಿ ಕರುಣಾಜನಕವಾಗಿದೆ. ಕರ್ನಾಟಕದಲ್ಲೂ ಸಹ ಇವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ನಿರ್ಲಕ್ಷಿಸಲಾಗಿದೆ. ೧೯೮೪ನಲ್ಲಿ, ನಮ್ಮ ರಾಜ್ಯದ ದಾಂಡೇಲಿಯಲ್ಲಿರುವ ಗ್ರಾಮೀಣ ಕಲ್ಯಾಣ ಸಮಿತಿಯವರು, ಕರ್ನಾಟಕ ಸಿದ್ದಿ ಅಭಿವೃದ್ಧಿ ಸಂಘವನ್ನು ಪ್ರಾರಂಭಿಸಿದರು. ಈ ಸಂಘದ ಮೂಲಕ, ಸಿದ್ದಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಉದ್ಯೋಗದ ಸದವಕಾಶ ನೀಡುವ ಮಹತ್ಕಾರ್ಯ ನಡೆಯುತ್ತಿದೆ. ಜನವರಿ ೮ ೨೦೦೩ರಲ್ಲಿ, ಕೇಂದ್ರ ಸರ್ಕಾರ ಸಿದ್ದಿ ಜನಾಂಗವನ್ನು ಶೆಡ್ಯೂಲ್ ಟ್ರೈಬ್ಸ್ ಪಟ್ಟಿಯಲ್ಲಿ ಪರಿಗಣಿಸಿತು. ಇದರಿಂದಾಗಿ ಈ ಜನಾಂಗ ಇಂದು ಸಂವಿಧಾನದ ಪ್ರಕಾರ ಶಕ್ತರಾಗಿರುತ್ತಾರೆ. ನಿರಾಶ್ರಿತ ಸಿದ್ದಿಯರಿಗೆ ವಸತಿ ಯೋಜನೆ, ಉದ್ಯೋಗಾವಕಾಶ, ಶಿಕ್ಷಣ, ವಿದ್ಯುತ್‌ಶಕ್ತಿ, ಆಸ್ಪತ್ರೆಗಳು, ರಸ್ತೆಗಳು, ಮುಂತಾದ ಸೌಲಭ್ಯಗಳನ್ನು ನೀಡುವ ಕಾರ್ಯ ಸರ್ಕಾರ ಕೈಗೊಂಡಿದೆ. ಇದರ ಅಡಿ, ಪ್ರತಿಯೊಂದು ಸಿದ್ದಿ ಕುಟುಂಬಕ್ಕೆ ತಲಾ ಎರಡು ಎಕರೆ ಜಮೀನನ್ನು ಅಥವಾ ಭೂಮಿಯನ್ನು ನೀಡಲಾಗುತ್ತಿದೆ. ಇತ್ತೀಚೆಗೆ, ಯು.ಎನ್.ಓ ಸಂಘದ ಯುನೆಸ್ಕೊ ಸಮಿತಿ ಈ ಬುಡುಕಟ್ಟಿನವರ ಪುನರ್ವಸತಿ ಕಾರ್ಯವನ್ನು ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಣದ ಸಹಾಯವನ್ನೂ ಸಹ ನೀಡುತ್ತಿದೆ.

ಸಾಧಕರು:

ಸಿದ್ದಿ ಜನಾಂಗವು ಸಮಾಜದ ಮುಖ್ಯ ವಾಹಿನಿಯಿಂದ ಎಷ್ಟೇ ಹಿಂದುಳಿದಿದ್ದರು ಇವರಲ್ಲಿ ಸಾಧಕರಿಗೇನು ಕಡಿಮೆ ಇಲ್ಲ. ರಾಜಕೀಯ, ಚಿತ್ರೋದ್ಯಮ, ಕಲೆ, ಸಾಮಾಜಿಯ ಕಾರ್ಯ, ಹೈನುಗಾರಿಕೆ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅದರಲ್ಲಿ ಕೆಲವರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಾಹಿತಿ: ಡೆಕ್ಕನ್ ಹೆರಾಲ್ಡ್, Empowering of Siddi Community (An article), ವಿಕಿಪೀಡಿಯ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading