ಮುಂಜಾವಿನ ಮೆಲುತಂಗಾಳಿಯಲ್ಲಿ ಭಟ್ಕಳ ರೇಲ್ವೆ ನಿಲ್ಡಾಣದಲ್ಲಿಳಿದಾಗ ಸ್ನೇಹಿತ ಸುರೇಶ ಮೊಗೇರ್ ಸ್ವಾಗತಿಸಲು ಬಂದಿದ್ದ. ಭಟ್ಕಳ ಪಟ್ಟಣಕ್ಕೆ ಮದುವೆಯೊಂದನ್ನು ಸಾಕ್ಷೀಕರಿಸಲು ನಾನು ಬಂದಿದ್ದೆ. ಇಬ್ಬರೂ ಬಳಸು ದಾರಿಯೊಂದನ್ನು ಹಿಡಿದು ಸಾಗಿ ಹಕ್ಕಿಗಳ ಕೂಜನದ ಹಾಡುಗಳನ್ನು ಕೇಳುತ್ತ, ಚಿಕ್ಕಪುಟ್ಟ ಗೂಡುಗಳಲ್ಲಿರುವ ಮರಿಗಳಿಗೆ ಕುಟುಕುಗಳನ್ನು ಉಣಿಸುತ್ತಿರುವ ಹಕ್ಕಿಗಳನ್ನು ವೀಕ್ಷಿಸುತ್ತಾ ಮದುವೆ ಮಂಟಪದ ಮುಂದೆ ನಿಂತೆವು. ಅಲ್ಲಿ, ಆಗತಾನೆ ಮದುಮಕ್ಕಳಿಬ್ಬರ ಅರಿಶಿನದ ಶಾಸ್ತ್ರ ಮುಗಿದಿತ್ತು, ಮಂಗಳ ನುಡಿಸಲು ಬಂದವರು ವಾದ್ಯಗಳನ್ನು ವಾಹನಗಳಿಂದಿಳಿಸಿ ಜೋಡಿಸಿಕೊಳ್ಳುತ್ತಿದ್ದರು. ವಧುವರರು ಹಸೆಮಣೆ ಏರುವ ಸಮಯ ಇನ್ನೂ ಸಾಕಷ್ಟಿದ್ದರಿಂದ ಗೆಳೆಯನತ್ತ ನೋಡಿದೆ, ಆತ ಏನೂ? ಅಂತ ಕಣ್ಣುಗಳಲ್ಲೇ ಪ್ರಶ್ನಿಸಿದ. ಮುಹೂರ್ತದವರೆಗೆ ಭಟ್ಕಳದ ಬಸದಿಗಳ ಸುತ್ತು ಹಾಕೋಣವೇ ಅಂತ ಕೇಳಿದೆ, ಆತ ತಾನು ಇನ್ನೂವರೆಗೂ ಅವುಗಳನ್ನು ನೋಡಿಲ್ಲ ಹೋಗೋಣ ಬನ್ನಿ ಅಂದಾಕ್ಷಣ ಇಬ್ಬರೂ ಬಸದಿಗಳತ್ತ ಸಾಗಿದೆವು.

ಎಲೆಗಳು ಕಾಣಿಸದಷ್ಟು ಹೂಗಳನ್ನು ಬಿಟ್ಟ ಮಾವು, ಗೊಂಚಲುಗೊಂಚಲು ಕಾಯಿಗಳನ್ನು ತುಂಬಿಕೊಂಡಿರುವ ಹಲಸು, ಎತ್ತರದಲ್ಲಿ ತೂಗುತ್ತಿರುವ ತೆಂಗಿನ ಮರಗಳ ಗರಿಗಳನ್ನು ನೋಡುತ್ತಾ, ಪಾರಂಪರಿಕ ಶೈಲಿಯ ಹಳೆಯ ಮನೆಗಳ ಓಣಿಗಳನ್ನು ದಾಟಿ ಭಟ್ಕಳ ಪಟ್ಟಣದ ಪ್ರಮುಖ ದೇವರು ಹನಮಪ್ಪನ ಗುಡಿಗೆ ತಲುಪಿದೆವು. ಹನಮಪ್ಪನಿಗೆ ನಮಸ್ಕರಿಸಿ, ಹೋಟೆಲೊಂದರಲ್ಲಿ ಸ್ಥಳೀಯ ಖಾದ್ಯವಾಗಿರುವ ಬಾಳೆಹಣ್ಣಿನ ಬನ್ಸ್ ಬಾಜಿಯ ಎರೆಡೆರೆಡು ಪ್ಲೇಟ್ ಗಳನ್ನು ತರಿಸಿ ಹೊಟ್ಟೆ ತುಂಬಿಸಿಕೊಂಡೆವು. ಬಸದಿಗಳತ್ತ ಮುಖ ಮಾಡಿ, ಆಟೊ ನಿಲ್ದಾಣಕ್ಕೆ ಹೋದೆವು. ಚಾಲಕನು ನಾವು ಸಮೀಪಿಸುತ್ತಿದ್ದಂತೆ ತಾನು ನೋಡುತ್ತಿದ್ದ ವಿಡಿಯೋವನ್ನು ಲಗುಬಗೆಯಿಂದ ಬಂದ್ ಮಾಡಿ ಕಿವಿಗಳಲ್ಲಿದ್ದ ಧ್ವನಿಸಾದನವನ್ನು(ಇಯರ್ ಪೋನ್) ಹೊರತೆಗೆದ. ಬಸದಿಗೆ ನಡಿ ಎಂದು ಆಟೋ ಹತ್ತಿದಾಗ ಆತ “ಹ್ಞಾಂ…ಬಸದಿ ?” ಅಂದ. “ಜೈನರ ಬಸ್ತಿ… ಬಸ್ತಿ” ನಾನಂದೆ. ಅವನು “ಗೊತ್ತಿಲ್ಲ ….ಒಡೆಯಾ ನೀವು ಕಾಣಿಸ್ತಿರಾ” ಅಂದಾಗ ಸುರೇಶ್ “ನಾ..ಕಾಣಿಸ್ತಿ..ನಡಿ” ಅಂದ. ಆಟೋ ಬಸದಿಗಳತ್ತ ಹೊರಟಿತು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅರಮನೆಗಳ ನಗರ ಹಾಗೂ ಪ್ರಮುಖ ಬಂದರು ಎಂದು ಇಂದಿನ ಭಟ್ಕಳ ಪ್ರಸಿದ್ಧವಾಗಿತ್ತು. ವಿದೇಶಗಳಿಂದ ಬರುತ್ತಿದ್ದ ವರ್ತಕರು ತಾವು ತರುತ್ತಿದ್ದ ಕುದುರೆಗಳನ್ನು ಮಾರಿ ವಿಶಿಷ್ಟ ರುಚಿಯ ಸಕ್ಕರೆ ಹಾಗು ಬಿಳಿ ಸಣ್ಣಕ್ಕಿಯನ್ನು ಇಲ್ಲಿಂದ ಖರೀದಿಸುತ್ತಿದ್ದರು. ಐತಿಹಾಸಿಕ ಪ್ರಸಿದ್ಧವಾದ ಪಟ್ಟಣದ ಅತಿ ದೊಡ್ಡ ಹಾಗೂ ಸ್ಥಳೀಯರು ಹೆಸರಿಸುವ “ಜಟ್ಟಪ್ಪ ನಾಯಕನ ಚಂದ್ರನಾಥೇಶ್ವರ ಬಸದಿ” ಇಲ್ಲಿದೆ. ಅದನ್ನು ನೋಡಲು ಹೊರಟಿದ್ದ ನಾವು ಬಸದಿಯ ಮುಂದೆ ನಿಂತಾಗ ಗೇಟು ತೆರೆದಿರಲಿಲ್ಲ. ಆದರೆ ಅದೃಷ್ಟಕ್ಕೆ ಬೀಗ ಹಾಕಿರಲಿಲ್ಲ. ಗೇಟು ತೆರೆದು ಒಳಹೊಕ್ಕೆವು. ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ವಿಶಾಲವಾದ ಎರಡಂತಸ್ತಿನ “ಚಂದ್ರನಾಥ” ಬಸದಿಯು, ಇಲ್ಲಿ ಪೂರ್ವಾಭಿಮುಖವಾಗಿ ನಿಂತಿದೆ. ಪ್ರಾಂಗಣದಲ್ಲಿರುವ ಶಿಲಾಶಾಸನದ ಪಾಠಾಂತರವು ಬಸದಿಯನ್ನು ಕ್ರಿ.ಶ 1556 ರಲ್ಲಿ ನಾರಣ ನಾಯಕನೆಂಬವನಿಂದ ಕಟ್ಟಿಸಲ್ಪಟ್ಟದ್ದು ಎಂದು ತಿಳಿಸುತ್ತದೆ. ಈತ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಸೇನಾಧಿಪತಿಯೊಬ್ಬನ ಮಗ. ಮಳೆ ಬಿಸಿಲು ಚಳಿಗೆ ಸವಕಲುಗೊಂಡಿರುವ ವಿವರಣೆಯ ಫಲಕವನ್ನು ಓದಿದಾಗ ಅದು ಮಾಸಿದ್ದರಿಂದ ಸಂಪೂರ್ಣ ಮಾಹಿತಿ ದೊರೆಯಲಿಲ್ಲ. ಎತ್ತರವಾದ ಮಾನಸ್ತಂಭವಿರುವ ಬಸದಿಯ ಹಜಾರದೊಳಗೆ ಇಣುಕಿದಾಗ ಕಿಟಕಿಗಳಿಂದ ಒಳತೂರಿದ್ದ ಬೆಳಕಿನಲ್ಲಿ ಕಂಬಗಳು ಹಾಗೂ ಯಕ್ಷ ಯಕ್ಷಿಯರ ಕಲ್ಲಿನ ಮೂರ್ತಿಗಳಿರುವುದು ಕಂಡಿತು. ಬಾಗಿಲಿಗೆ ಬೀಗ ಹಾಕಿರುವುದರಿಂದ ಇಲ್ಲಿ ಎಲ್ಲವೂ ಪಾಳು ಬಿದ್ದಿವೆ. ಒಳಗಡೆ ಹೋಗಲಾಗದೆ ಬಸದಿಯಲ್ಲಿ ಇವೆ ಎನ್ನಲಾದ ಪುರಾತನ ತೀರ್ಥಂಕರುಗಳಾದ ಅರನಾಥ, ಮಲ್ಲಿನಾಥ, ಮುನಿಸುವ್ರತ, ನಾಮನಾಥ ಹಾಗೂ ನೇಮಿನಾಥರ ಶಿಲ್ಪಗಳನ್ನು ನೋಡಲಾಗಲಿಲ್ಲ. ಒಳಹೋಗಿ ಸರಿಯಾಗಿ ವೀಕ್ಷಸಲಾಗದಿರುವ ಬೇಸರದಿಂದ ಬಸದಿಯ ಭವ್ಯತೆಯನ್ನು ಹೊರಗಿನಿಂದಲೇ ನೋಡುತ್ತಾ, ಒಂದು ಸುತ್ತು ಹಾಕಿ, ಪ್ರಾಂಗಣದಲ್ಲಿರುವ ಕಲ್ಲಿನ ಮಂಟಪದಂತೆ ವಿಶಿಷ್ಟಾಕೃತಿಯಲ್ಲಿ ನಿರ್ಮಿಸಿರುವ ಮತ್ತೊಂದು ಮಾನಸ್ತಂಭದ ಕಟ್ಟೆಯ ಮೇಲೆ ತುಸು ಹೊತ್ತು ಕುಳಿತು ವಿಶ್ರಮಿಸಿಕೊಂಡೆವು. ಅಲ್ಲಿಂದ ಹೊರಬಂದು ಪಟ್ಟಣದ ಮತ್ತೊಂದು ಪಾರ್ಶ್ವದಲ್ಲಿರುವ ಪಾರ್ಶ್ವನಾಥ ಬಸದಿಯತ್ತ ನಮ್ಮ ಪಯಣ ಸಾಗಿತು.
ಮಳಿಗೆಗಳಿಂದ ಸುತ್ತುವರಿದಿರುವ ಪಾರ್ಶ್ವನಾಥ ಬಸದಿಯ ಎದುರಿಗೆ ಎತ್ತರವಾದ ಗಮನಸೆಳೆಯುವ ಮಾನಸ್ತಂಭವೊಂದಿದೆ. ಅದನ್ನು ಬಳಸಿ ಬಸದಿಪ್ರಾಂಗಣದ ಪ್ರವೇಶ ದ್ವಾರ ದಾಟಿ ಒಳಹೋದಾಗ ಪೂಜೆ ಮುಗಿಸಿದ್ದ ಪಂಡಿತ ಬಸದಿಯ ಬಾಗಿಲಿಗೆ ಬೀಗ ಜಡಿಯುತ್ತಿದ್ದ. ಒಳಹೋಗಿ ನಮಸ್ಕರಿಸಬಹುದೆ ಅಂತ ವಿನಂತಿಸಿದಾಗ ಆತ ಸಮಯ ಮುಗಿದಿದೆ ನಾಳೆ ಬನ್ನಿ ಅಂತ ಹೇಳಿ ನಿರ್ಗಮಿಸಿದ. ನಾವು, ಆಗಲಿ ಅಂತ ನಮ್ಮನ್ನೆ ಸಂತೈಸಿಕೊಂಡು ಶಿಥಿಲಗೊಂಡ ಬಸದಿಯೊಳಗಿರುವ ಪಾರ್ಶ್ವನಾಥನಿಗೆ ನಮಸ್ಕರಿಸಲು ಕಣ್ಣೋಟವನ್ನು ಬಾಗಿಲಿನಿಂದ ಒಳತೂರಲು ಹೋದಾಗ ಅಲ್ಲಿ ಕಿಂಡಿಗಳೇ ಇರಲಿಲ್ಲ. ಆದರೂ ಹೊರಗಿನಿಂದಲೇ ನಮಿಸಿ ಅಕ್ಕಿಕಾಳಿನ ಸಮಯ ಆಗಿದ್ದರಿಂದ ಕಲ್ಯಾಣಮಂಟಪದತ್ತ ತಿರುಗಿ ಹೋಗಲು ಕಾಯುತ್ತಿದ್ದ ಆಟೋ ಏರಿ ಕುಳಿತೆವು.
✍️ ಮಹಾಂತೇಶ ಗಂಗಯ್ಯ ಓಶಿಮಠ ಕೈಗಾ


Leave a Reply