ಹಲಸಿನ ಹಣ್ಣು ಸಿಗುವ ಕಾಲವೆಂದರೆ ಅದು ಮೇ ಇಂದ ಜುಲೈ ತಿಂಗಳು. ಇಷ್ಟವಿದ್ದರೂ ಹಲಸಿನ ಹಣ್ಣಿನ ತೊಳೆಗಳನ್ನು ಹಾಗೆಯೇ ಬಹಳಷ್ಟು ತಿನ್ನಲಾಗದು.ಹೊಟ್ಟೆಯುಬ್ಬರ ಅದೂ ಇದೂ ಶುರುವಾಗ್ತದೆ.. ಹಾಗಾಗಿ ಹೆಚ್ಚಾದ ತೊಳೆಗಳು ಹಾಳಾಗಿಹೋಗುತ್ತವೆ.. ನಮ್ಮ ಹಿಂದಿನವರು ಮಳೆಗಾಲದಲ್ಲಿ ಹತ್ತಾರು ಬಾರಿಯಾದರೂ ಹಲಸಿನ ಸೋಳೆಯಿಂದ ರೊಟ್ಟಿ ಮಾಡಿ ಎರಡು ಮೂರು ದಿನ ಬಿಸಿಮಾಡಿ ಇಟ್ಟು ತಿನ್ನುತ್ತಿದ್ದರು.. ಮೊಗ್ಗೆಕಾಯಿ ಕೊಚ್ಚಲಕಾಯಿ ರೊಟ್ಟಿ,ಕೊಟ್ಟೆರೊಟ್ಟಿ,ಬೆಲ್ಲದ ತಪ್ಪಲಿ ರೊಟ್ಟಿ ಇವೆಲ್ಲ ಈಗ ಮಾಯವಾಗುತ್ತಿವೆ.. ಒಲೆ ಬೆಂಕಿ ಇಲ್ಲ,ಹಲಸಿನೆಲೆ,ಅರಶಿನೆಲೆ,ಬಾಳೆಎಲೆ ಇಲ್ಲ ಅನ್ನೋ ಹಲವಾರು ಸುಳ್ಳು ನೆಪಗಳು ನಮಗಾಗಿ ಕಾದು ಕುಳಿತಿವೆ..
ಇಂದು ಹಲಸಿನಹಣ್ಣಿನ ರೊಟ್ಟಿ ಅಥವಾ ಕಡಬು ಮಾಡುವುದನ್ನು ನಿಮಗೆ ಹೇಳಿಕೊಡುತ್ತೇನೆ.ಕೆಲವರು ಪೇಟೆಯಿಂದ ಅಕ್ಕಿತರಿಯ ಪ್ಯಾಕೆಟ್ ತಂದು ಮಾಡುತ್ತಾರೆ.ಇದು ಅಷ್ಟಾಗಿ ರುಚಿಯಾಗದು.. ಹಾಗಾಗಿ ಅಕ್ಕಿ ನೆನೆಸಿ ಇದನ್ನು ಹೇಗೆ ಮಾಡುವುದು ಅಂತ ನೋಡುವಾ
ಸಾಮಗ್ರಿಗಳು
ದೋಸೆ ಅಕ್ಕಿ ಮೂರು ಲೋಟ(ಮೂರು ಅಳ್ಳ)
ಹಲಸಿನ ಸೋಳೆ ಮೂರುವರೆ ಲೋಟ
ಒಂದೂವರೆ ಲೋಟ ತೆಳುಬೆಲ್ಲ
ಅರ್ಧ ಇಂಚು ಗಾತ್ರದ ಹಸಿ ಶುಂಠಿ
ನಾಲ್ಕು ಏಲಕ್ಕಿ
ಉಪ್ಪು
ಒಂದು ಮೀಡಿಯಂಗಾತ್ರದ ತೆಂಗಿನಕಾಯಿ ತುರಿ




ಅಕ್ಕಿಯನ್ನು ತೊಳೆದು ಐದು ತಾಸು ನೆನೆಸಿ ನಂತರ ಮತ್ತೊಮ್ಮೆ ತೊಳೆದು ನೀರು ಪೂರ್ತಿ ಬಸಿಯಿರಿ.. ಮಿಕ್ಸಿ ಜಾರಿಗೆ ಹಾಕಿ.
ನಂತರ ಇದಕ್ಕೆ ತೆಳುಬೆಲ್ಲ,ಶುಂಠಿ,ಏಲಕ್ಕಿ ಹಾಕಿ ನೀರು ಹಾಕದೇ ರುಬ್ಬಿ..ಬಹಳ ಗಂದ(ನೈಸ್)ಪೇಸ್ಟ್ ಆಗಬಾರದು.. ಜಾಸ್ತಿ ತರಿತರಿ ಕೂಡ ಇರಬಾರದು..ನಂತರ ಇದನ್ನು ತೆಗೆದು ಒಂದು ಪಾತ್ರೆಗೆ ಹಾಕಿ..ಈಗ ಹಲಸಿನಹಣ್ಣು ಮತ್ತು ಉಪ್ಪು ಎರಡನ್ನೂ ನೀರು ಸೇರಿಸದೇ ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ಮಾಡಿ.. ಈ ಪೇಸ್ಟನ್ನೂ ತೆಗೆದು ಅದೇ ಪಾತ್ರೆಗೆ ಹಾಕಿ..ನಂತರ ಇದಕ್ಕೆ ತೆಂಗಿನತುರಿ ಹಾಕಿ..ಎಲ್ಲವನ್ನೂ ಚನ್ನಾಗಿ ಮಿಶ್ರಮಾಡಿ.. ದಪ್ಪ ಹಿಟ್ಟು ದೊರೆಯುತ್ತದೆ
ಈಗ ಮುಂದಿನ ಸ್ಟೆಪ್..
(ಬಾಳೆಲೆಗಳನ್ನು ಮೊದಲೇ ತೊಳೆದು ಒರೆಸಿ ಗ್ಯಾಸ್ ಉರಿಯಲ್ಲಿ ಸ್ವಲ್ಪ ಬಾಡಿಸಿ ಇಟ್ಟುಕೊಂಡಿರಬೇಕು.ಹೀಗೆ ಬಾಡಿಸಿಕೊಂಡರೆ ಹೇಗೆ ಮಡಚಿದರೂ ಅದು ಮುರಿಯದು.)
ಒಂದೊಂದೇ ಬಾಳೆಲೆ ಹಾಸಿ ಅದಕ್ಕೆ ಈ ಹಿಟ್ಟನ್ನು ಸೌಟಿನಿಂದ ಜಾಸ್ತಿ ದಪ್ಪವೂ ಆಗದಂತೆ ಜಾಸ್ತಿ ತೆಳುವೂ ಆಗದಂತೆ ಹರಡಿ ಬಾಳೆಲೆಯನ್ನು ನಾಲ್ಕೂ ದಿಕ್ಕಿನಿಂದ ಮಡಚಿ ಇಡ್ಲಿ ಭಾಂಡೆಯೊಳಗೆ ಇಡುತ್ತ ಹೋಗಬೇಕು
(ಇಡ್ಲಿಪಾತ್ರೆಯ ತಳಕ್ಕೆ ಒಂದೂವರೆ ತಂಬಿಗೆ ನೀರು ಹಾಕಿ ಮೊದಲೇ ಸಣ್ಣ ಉರಿಯಲ್ಲಿ ಅದನ್ನು ಬಿಸಿ ಮಾಡಲು ಇಟ್ಟಿರಬೇಕು)
ಅರ್ಧ ತಾಸು ದೊಡ್ಡ ಉರಿಯಲ್ಲಿ ಬೇಯಿಸಿದರೆ ನಿಮಗೆ ರುಚಿಯಾದ ಹಲಸ್ನಣ್ಣಿನ ರೊಟ್ಟಿ ಸಿಗುತ್ತದೆ..😄
ಬೆಂದಿದೆಯೋ ಅಂತ ನೋಡಲು ಮೇಲಿನ ಒಂದು ರೊಟ್ಟಿ ಬಿಡಿಸಿ ನೋಡಬಹುದು.. ಗ್ಯಾಸ್ ಆಫ್ ಮಾಡಿದ ಮೇಲೆ ಇಡ್ಲಿಭಾಂಡೆಯ ಮುಚ್ಚಳ ತೆಗೆದುಬಿಡಬೇಕು..ಇಲ್ಲದಿದ್ದರೆ ಆವಿ ನೀರು ಬಸಿದು ರೊಟ್ಟಿ ಮೇಲೆ ಬಿದ್ದು ರೊಟ್ಟಿ ಮೆತ್ತಗಾಗಿ ತಿನ್ನಲಾಗದು..
ಬಾಳೆಲೆ ಸಿಗದವರು ಸಾಗವಾನಿ ಎಳೆ ಎಲೆಯಲ್ಲೂ ಮಾಡಬಹುದು.
ಸಿಹಿ ಜಾಸ್ತಿ ಬೇಕಿದ್ದವರು ಬೆಲ್ಲ ಹೆಚ್ಚು ಹಾಕಬಹುದು
ಮಾಹಿತಿ ಮತ್ತು ಲೇಖನ: ರೇಣುಕಾ ರಮಾನಂದ ಶೆಟಗೇರಿ


Leave a Reply