ಉತ್ತರ ಕನ್ನಡದ ನೈಸರ್ಗಿಕ ಸಂಪತ್ತುಗಳಲ್ಲಿ ಒಂದಾದ ಮೈರಿಸ್ಟಿಕಾ ಜೌಗು ಪ್ರದೇಶ

Posted by

·

ಮುಗಿಲ ಚುಂಬಿಸುವಂತೆ ನೇರ ದೈತ್ಯಾಕಾರವಾಗಿ ನಿಂತ ಮರಗಳು, ಅವುಗಳ ಎತ್ತರದ ತುದಿಗಳಲ್ಲಿ ಸುತ್ತಲೂ ಹರಡಿ ಹೆಣೆದು ತುತ್ತ ತುದಿಯಲ್ಲಿ ಏರ್ಪಟ್ಟ ಛತ್ರಿಯಂತಹ ಕಾಡಿನ ಮೇಲ್ಛಾವಣಿಗಳು. ಅವುಗಳ ಬುಡಗಳಲ್ಲಿ ಹರಡಿ ಅವುಗಳನ್ನು ಅಪ್ಪಿದಂತೆ ತೋರುವ ಅಗಲ ಎಲೆಯ ಲತೆಗಳು. ಮರಗಳ ನೇರ ಬಡ್ಡೆಗಳನ್ನು ಬಿಗಿದಪ್ಪಿ ಹಿಡಿದುಕೊಂಡಿರುವ ಸಾವಿರಾರು ಅಧಿಸಸ್ಯಗಳಾದ (epiphytes) ಸೀತಾಳ ಗಡ್ಡೆ (Orchids) ಗಿಡಗಳು ಹಾಗೂ ಅಲ್ಲಲ್ಲಿ ಒಂದು ಮರದಿಂದ ಇನ್ನೊಂದು ಮರದ ಕಾಂಡಗಳಿಗೆ ಗಟ್ಟಿಯಾಗಿ ಅಪ್ಪಿಕೊಂಡು ಬೆಳೆದ ದೈತ್ಯಾಕಾರದ ಬಳ್ಳಿಗಳು. ಇವುಗಳ ಜೊತೆಯಲ್ಲಿ ಗುಂಪುಗುಂಪಾಗಿ ಗಂಟಾಗಿ ಬೆಳೆದ ಉಣ್ಣೆಯಂತೆ ಜೋತುಬಿದ್ದ ಸಣ್ಣ ಸಸ್ಯಗಳು, ಜೊತೆಯಲ್ಲಿ ಬೆಳೆದಿರುವ ಗಿಡಗಂಟಿಗಳು. ಎಲ್ಲವೂ ಆಗಸವ ಪಡೆಯಲು ಹವಣಿಸುವಂತೆ ಅನಿಸುವಂತಿರುವ ಸಸ್ಯರಾಶಿಯ ಮದ್ಯೆ ಅಲ್ಲಿನ ನಿಶ್ಯಬ್ದವನ್ನು ಮುರಿವಂತೆ ಮರಗಳಲ್ಲಿ ಅವಿತು ಮಧುರವಾಗಿ ಹಾಡುವ ಹಕ್ಕಿಗಳು, ಅಲ್ಲಲ್ಲಿ ರೆಕ್ಕೆ ಬಡಿತದ ಸದ್ದುಗಳು, ಎಲ್ಲೋ ಹರಿವ ತೊರೆಯ ಸುಮಧುರ ನಾದ ಅದರೊಂದಿಗೆ ಹೊಂದಿಕೊಂಡಿರುವ ಕಾಡಿನ ಇತರ ಕೀಟ ಖಗಮೃಗಗಳ ಇಂಚರ, ಹಾಗೆ ಬೀಸುವ ತಂಗಾಳಿಯು ನಮಗೆ ಮುದನೀಡುವುದರೊಂದಿಗೆ ನೈಸರ್ಗಿಕವಾಗಿ ಸ್ವಚ್ಚ ಮತ್ತು ಶುದ್ಧವಾದ ಆಮ್ಲಜನಕವನ್ನೊದಗಿಸುತ್ತವೆ. ಇವುಗಳು ನಮಗೆ ನಿತ್ಯಹರಿದ್ವರ್ಣದ ಗೊಂಡಾರಣ್ಯದ ಸೊಬಗನ್ನು ತೋರಿಸುತ್ತದೆ.

ಮೈರಿಸ್ಟಿಕಾದ ಜೌಗು ಪ್ರದೇಶ, ಸಸ್ಯದ ಬೇರುಗಳು ಭೂಮಿಯಿಂದ ಮೇಲಕ್ಕೆ ವಿಸ್ತರಿಸಿರುವುದು

ಇವುಗಳನ್ನು ಸರಿಸಿ ಒಳಹೊಕ್ಕಲು ನಮಗೆ ಉದ್ಗಾರವೆಂಬಂತೆ ಬೇರೊಂದು ಲೋಕವೆ ಕಣ್ಣಿಗೆ ಅವತರಿಸುತ್ತದೆ, ಅದು ನಮಗೆ ದೈತ್ಯಾಕಾರದ ಡೈನೋಸಾರ್ ಕಾಲದ ಜುರಾಸಿಕ್ ಯುಗದ ಕಾಡುಗಳಂತಿರುವ ದೃಶ್ಯಗಳು. ಹೌದು!!! ಅದು ನಿಜವೆ… ನಾವು ಒಳಹೊಕ್ಕಂತೆ ಪೂರ್ತಿಯಾಗಿ ಬೇರೆಯದೆ ಪರಿಸರದಿಂದ ಸುತ್ತುವರಿದ ವಿವಿಧ ಬಗೆಯ ಪರಿಚಯವಿಲ್ಲದ, ಅಸಾಮಾನ್ಯ ಸಂಗತಿಗಳು ಗೋಚರಿಸುತ್ತವೆ. ಅಲ್ಲಿ ಕಾಣುವ ನೀರು ಹೀರಿದಂತಿರುವ, ನೀರು ನಿಧಾನವಾಗಿ ಹರಿವ, ವಿಭಿನ್ನ ಬಗೆಯ ಸಸ್ಯವರ್ಗ, ಜೌಗು ಮಣ್ಣಿಂದ ಕೂಡಿದ, ಅಲ್ಲಲ್ಲಿ ರಾಡಿಯ ಗುಂಡಿಗಳಲ್ಲಿ ತೇಲುತ್ತಿರುವ ಕಿತ್ತಳೆ ಬಣ್ಣದ ಉಂಡೆಗಳು, ಅಲ್ಲಲ್ಲಿ ಕೊಳೆತ ಎಲೆಗಳು, ಸಣ್ಣ ಸಣ್ಣ ಬಿಲಗಳು, ನಡುವೆ ಹಲವೆಡೆ ಕಾಣುವ ಇರುವೆಯ ಗೂಡುಗಳು, ಹಾಗೆಯೆ ನೆಲದ ತುಂಬಾ ಹರಡಿರುವ ಉಸಿರಾಡುವ ಬೇರುಗಳು, *ಅವುಗಳೇ ಪ್ರಾಚೀನವಾದಂತಹ ಮೈರಿಸ್ಟಿಕಾ ಜೌಗು ಪ್ರದೇಶಗಳು.*

ಕಾಡು ಜಾಪತ್ರೆ (Myristica fetua var. magnus)

ಇತ್ತೀಚಿಗಿನ ವೈಜ್ಞಾನಿಕ ಅಧ್ಯಯನದ ಪ್ರಕಾರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 48 ಶೇಕಡಾವಾರು ಅರಣ್ಯ ನಾಶವಾಗಿದೆ (1873 ರಲ್ಲಿ 74% ರಿಂದ 2018 ರಲ್ಲಿ 48%- ಐಐಎಸ್ ಸಿ ಯ ಅಧ್ಯಯನ ಆಧಾರಿತ). ಹೀಗೆ ಕ್ಷೀಣಿಸುತ್ತಿರುವ ಅರಣ್ಯದ ಒಂದು ಪ್ರಾಚೀನ ಭಾಗವೇ ರಾಮಪತ್ರೆಯ ಜೌಗುಪ್ರದೇಶಗಳು ಅಥವಾ ಮೈರಿಸ್ಟಿಕಾ ಜೌಗು ಪ್ರದೇಶಗಳು. ಒಂದು ಕಾಲದಲ್ಲಿ ಇವುಗಳು ಕೊಂಕಣ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದವು ಆದರೆ ಈಗ ಬಹುಬೇಗ ಕ್ಷೀಣಿಸುತ್ತಿರುವ ಹಾಗೂ ಅಲ್ಲಲ್ಲಿ ಛಿದ್ರಗೊಂಡು ದಕ್ಷಿಣ ಭಾಗದ ಕೇರಳದಲ್ಲಿ, ಗೋವಾ ರಾಜ್ಯದಲ್ಲಿ ಹಾಗು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುತ್ತವೆ.

ಪಿಂಡಿ (Gymnacranthera canarica)

ಈ ಮೈರಿಸ್ಟಿಕಾ ಜೌಗು ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಹಾಗು ಕತ್ತಲೆಕಾನುಗಳಲ್ಲಿ, ಸಿರಸಿಯ ಕ್ಯಾದಗಿ ಹಾಗು ಇಟಗಿಯಲ್ಲಿ ಮತ್ತು ಕಾರವಾರದ ರಾಮನಗುಳಿ ಜಾಗಗಳಲ್ಲಿ ಕಾಣಸಿಗುತ್ತವೆ. ಇತ್ತೀಚಿನ ವೈಜ್ಞಾನಿಕ ಅಧ್ಯಯನದ ಪ್ರಕಾರ 100ಕ್ಕೂ ಹೆಚ್ಚು ಇಂತಹ ಜೌಗು ಪ್ರದೇಶಗಳನ್ನು ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ, ಶರಾವತಿ, ಬೇಡ್ತಿ, ಬೀಳಗಿ, ಮತ್ತು ಮುಕ್ತಿಹೊಳೆ ಜಾಗಗಳಲ್ಲಿ ಪತ್ತೆಹಚ್ಚಲಾಗಿದೆ.

ಈ ಸಿಹಿನೀರಿನ ಜೌಗು ಪ್ರದೇಶಗಳಿಗೆ ಮೈರಿಸ್ಟಿಕಾ ಜೌಗು ಪ್ರದೇಶವೆಂದು ಹೆಸರು ಬರಲು ಕಾರಣವೆಂದರೆ ಅಲ್ಲಿಯ ರಾಮಪತ್ರೆ ಜಾತಿಗೆ ಸೇರಿದ ಸಸ್ಯ ಪ್ರಬೇಧಗಳು. ಇಲ್ಲಿ ಬಹಳ ವಿರಳವಾದ ಸಸ್ಯಗಳು ಹಾಗೂ ಕಪ್ಪೆಗಳು, ಮೀನುಗಳಂತಹ ಜಲಚರಗಳನ್ನು ತನ್ನಲ್ಲಿ ಅಡಕವಾಗಿಸಿದೆ. ಇಲ್ಲಿನ ಪ್ರಮುಖ ಹಾಗು ಸ್ಥಳೀಯ ಸಸ್ಯಗಳೆಂದರೆ ಕಾಡು ಜಾಪತ್ರೆ (Myristica fetua var. magnus), ಪಿಂಡಿ (Gymnacranthera canarica), ಜಾತಿ ಫಲ (Myristica dactyloides), ದೊಡ್ಡ ರಾಮಪತ್ರೆ (Myristica malabarica), ರಕ್ತಮರ (Knema attenuata), Semecarpus kathalekanensis, Syzygium travancoricum, ಕಾಡು ಅಡಿಕೆ (Pinanga dicksonii), ಬೆತ್ತ (Calamus sp.), ಕೇದಿಗೆ (Pandanus sp.) ಮುಂತಾದ ಹೂಬಿಡುವ ಸಸ್ಯ ಪ್ರ ಭೇದದ ಮರಗಳು, ಹಳ್ಳೆಕಾಯಿ ಬಳ್ಳಿ (Entada rheedii), Chilocarpus atrovirens ಅಂತಹ ದಪ್ಪ ಕಾಂಡದ ಆರೋಹಿ ಬಳ್ಳಿಗಳು, ಅರಕಡೆ ಬೇರು (Pothos scandens), ಗುಲಗಂಜಿ (Abrus sp.) Smilax zeylanica ಅಂತಹ ಸಣ್ಣ ಬಳ್ಳಿಗಳು, ಕಲ್ಲು ಶುಂಠಿ (Zingiber zerumbet), ಜೊಂಡು (sedges/Cyperus sp.) ಮುಂತಾದ ಗಿಡಮೂಲಿಕೆಗಳು ಕಾಣಸಿಗುತ್ತವೆ. ಹಾಗೆಯೇ ಹಲವು ಬಗೆಯ ಪಾಚಿಗಳು ಶಿಲೀಂಧ್ರಗಳು ಕೆಲವು ಋತುಗಳಲ್ಲಿ ಕಾಣಿಸುತ್ತವೆ ಮತ್ತು ಇಲ್ಲಿ ವಿವಿಧ ಬಗೆಯ ಮೀನುಗಳು, ಕಪ್ಪೆಗಳೂ ಮತ್ತು ಸರಿಸ್ರಪಗಳನ್ನೂ ಕಾಣಬಹುದು. ಇಲ್ಲಿನ ಕೆಲವು ಸಸ್ಯ ಮತ್ತು ಪ್ರಾಣಿ ಸಂಕುಲಗಳು ಪ್ರಪಂಚದಲ್ಲೆಲ್ಲೂ ಕಾಣದಿರುವಂತವುಗಳು (Endemic).

ಮೈರಿಸ್ಟಿಕಾ ಜೌಗು ಪ್ರದೇಶ ಅಥವಾ ಸಿಹಿನೀರಿನ ಜೌಗು ಪ್ರದೇಶಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಮುಖ್ಯವಾಗಿ ಮಿಸ್ಸಿಸ್ಸಿಪ್ಪಿ ಮತ್ತು ಅದರ ಉಪನದಿಗಳ ಕಣಿವೆಗಳು, ಸ್ವೀಡನ್, ಒಡ್ಜಲಾ ರಾಷ್ಟ್ರೀಯ ಉದ್ಯಾನ, ಕಾಂಗೋ, ಮಲೇಷಿಯಾದ ಪ್ರದೇಶ, ಪಪುವಾ ನ್ಯೂಗಿನಿಯಾ,ಅಮೆಜಾನ್ ಮತ್ತು ಅದರ ಉಪನದಿಗಳನ್ನು ಸುತ್ತುವರೆದಿವೆ. ಭಾರತದಲ್ಲಿ ಇಂತಹ ಜೌಗು ಪ್ರದೇಶಗಳು ಬ್ರಹ್ಮಪುತ್ರ ನದಿ ಕಣಿವೆಗಳು, ಶಿವಾಲಿಕ್ ಹಾಗೂ ಡೂಮ್ ಕಣಿವೆಗಳಲ್ಲಿ ಕಾಣಸಿಗುತ್ತವೆ. ಹಾಗೇ ಜೀವವೈವಿಧ್ಯತೆ ಮತ್ತು ಸ್ಥಳೀಯತೆಯ ಪ್ರಸಿದ್ಧ ಜಾಗತಿಕ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳು ವಿಶೇಷ ರೀತಿಯ ಮೈರಿಸ್ಟಿಕಾ ಜೌಗು ಪ್ರದೇಶಗಳಿಗೆ ನೆಲೆಯಾಗಿದೆ. ಅಂತಹ ಜೌಗು ಪ್ರದೇಶಗಳು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ಹೆಮ್ಮೆಯೂ ಹೌದು ಹಾಗೂ ಅವುಗಳನ್ನು ರಕ್ಷಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಹಲವು ವರ್ಷಗಳ ಹಿಂದೆ ಮೈರಿಸ್ಟಿಕಾ ಜೌಗು ಪ್ರದೇಶಗಳು ಪಶ್ಚಿಮ ಘಟ್ಟಗಳ ಪ್ರಾಚೀನ ಕಾಡುಗಳಲ್ಲಿನ ನೀರಿನ ಹರಿವುಗಳ ಮೂಲಕ ತಮ್ಮ ಜಾಲಗಳನ್ನು ಸೃಷ್ಟಿಸಿಕೊಂಡಿದ್ದವು. ತದನಂತರ ಇಂತಹ ಜೌಗು ಪ್ರದೇಶಗಳು ಭತ್ತದ ಗದ್ದೆಗಳೋ, ಅಡಿಕೆ ತೋಟಗಳೋ, ಕಾಫಿ ತೋಟಗಳೋ ಅಥವಾ ರಬ್ಬರ್ ತೋಪುಗಳಾಗಿ ಮಾರ್ಪಟ್ಟವು ಹಾಗು ಶರಾವತಿ ಕಣಿವೆಯಲ್ಲಿ ನಡೆದ ಅಭಿವೃದ್ಧಿ ಹೊಂದುತ್ತಿರುವ ಜಲವಿದ್ಯುತ್ ಯೋಜನೆಯಿಂದಾಗಿಯೊ, ನೀರಾವರಿ ಯೋಜನೆಯಿಂದಾಗಿಯೋ ಮುಳುಗಿದವು ಅಥವಾ ಕೃಷಿಗಾಗಿ ಸುಡಲ್ಪಟ್ಟವು. ಮೃದುವಾದ ನಿತ್ಯಹರಿದ್ವರ್ಣದ ಮರಗಳನ್ನು ಮಾತ್ರ ಹೊಂದಿರುವ ಜೌಗು ಪ್ರದೇಶಗಳು ವಿವಿಧ ರೀತಿಯ ಅರಣ್ಯ ನಾಶದಿಂದ ವಿನಾಶದಂಚಿಗೆ ಸಾಗುತ್ತಿದೆ. ಇವುಗಳು ಜೀವಶಾಸ್ತ್ರಜ್ಞರಿಗೆ ಕಡಿಮೆ ತಿಳಿದಿರುವ ಜೀವಸಮೂಹಗಳ, ಆಸಕ್ತಿಯನ್ನು ಕೆರಳಿಸುವ ಜೀವಂತ ಪ್ರಾಚೀನ ವಸ್ತುಸಂಗ್ರಹಾಲಯವಾಗುತ್ತದೆ. ಇವುಗಳು ಹೆಚ್ಚಿನ ಜಲಾನಯನ ಮೌಲ್ಯಗಳನ್ನು ಹೊಂದಿರುವುದರಿಂದ ಅತ್ಯಮೂಲ್ಯವಾದ ಸಸ್ಯವರ್ಗಗಳನ್ನು ಹೊಂದಿದೆ.

*ಜೌಗು ಪ್ರದೇಶದ ಮಹತ್ವಗಳು*
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಇಲ್ಲಿನ ಮೈರಿಸ್ಟಿಕಾ ಜೌಗು ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಶಿಸಿದೆ. ಇವುಗಳ ಪ್ರಮುಖ ಮಹತ್ವವೆಂದರೆ-
೧. ಇಂತಹ ಜೌಗುಪ್ರದೇಶಗಳು ದೀರ್ಘಕಾಲಿಕ ನೀರಿನ ಹರಿವನ್ನು ಕಾಪಾಡಿಕೊಳ್ಳುವುದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಹತ್ತಿರದ ಪಶ್ಚಿಮ ಘಟ್ಟಗಳ ಕಾಡುಗಳಿಗಿಂತ ಹೆಚ್ಚಿನ ಇಂಗಾಲವನ್ನು ಹೀರಿಕೊಂಡು ಸಂಗ್ರಹಿಸುವ ಸಾಮಥ್ರ್ಯವನ್ನು ಹೊಂದಿದೆ.
೨. ಅವುಗಳು ಪ್ರಾಚೀನ ಸಸ್ಯಕುಟುಂಬವಾದಂತಹ ಮೈರಿಸ್ಟಿಕೇಸಿಯ ಅಳಿನಂಚಿನಲ್ಲಿರುವ ಎರಡು ಮರಗಳನ್ನು ಹೊಂದಿದೆ, ಅವುಗಳೆಂದರೆ- ಪಿಂಡಿ (gymnocranthera canarica) ಮತ್ತು ಕಾಡು ಜಾಪತ್ರೆ (Myristica fetua var. magnus).
೩. ಇಂತಹ ಪ್ರದೇಶವನ್ನು ಸಂರಕ್ಷಿಸುವುದು ಬಹುಮುಖ್ಯ ಕೆಲಸ ಮತ್ತು ಇಂತಹ ಪ್ರಾಚೀನ ಪರಿಸರಗಳನ್ನು ರಕ್ಷಿಸಲು ತಜ್ಞರು, ರೈತರು ಮತ್ತು ಅರಣ್ಯವಾಸಿಗಳ ಸಂಯೋಜಿತ ಪ್ರಯತ್ನ ಪ್ರಮುಖವಾದುದಾಗಿದೆ.

ಇಂತಹ ಪ್ರಾಚೀನ ಪರಿಸರದ ರಕ್ಷಣೆ ಹಾಗೂ ಆಧುನಿಕ ಅರಣ್ಯದ ರಕ್ಷಣೆಯೂ ನಮ್ಮೆಲ್ಲರ ಹೊಣೆ ಮತ್ತು ಆಧ್ಯಕರ್ತವ್ಯವಾಗಿದೆ.

ಮಾಹಿತಿ: ಸಚೇತ ಹೆಗಡೆ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading