
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಶಾಸನದಲ್ಲಿ ಹೈವೆ ಐನೂರು ಎಂಬ ಪ್ರದೇಶದ ಉಲ್ಲೇಖವು ನಮಗೆ ಮತ್ತೆ ಮತ್ತೆ ಸಿಗುತ್ತಲೇ ಇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನ ರಾಜಕೀಯ ವಿಭಾಗಗಳಲ್ಲಿ ಒಂದು. ಬಹುತೇಕ ಸಂದರ್ಭದಲ್ಲಿ ಬನವಸೆ ಪನ್ನಿರ್ಚ್ಛಾಸಿರದಲ್ಲಿ ಸೇರಿರುತಿದ್ದ ಈ ಪ್ರದೇಶ ಕೆಲವೊಮ್ಮೆ “ಆಳುವಖೇಡ-೬೦೦೦’ ದ ಉಪವಿಭಾಗವಾಗಿಯೂ ಇರುತ್ತಿತ್ತು. ಈ ಪ್ರಾಚೀನ ರಾಜಕೀಯ ವಿಭಾಗಗಳನ್ನು ಪತ್ತೆಹಚ್ಚುವುದು ತುಂಬ ತೊಡಕಿನ ಕೆಲಸ. ಕಾರಣ ಹಿಂದಿನ ಚಕ್ರವರ್ತಿ ರಾಜರುಗಳು ವಿಸ್ತಾರವಾದ ತಮ್ಮ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವು ವಿಭಾಗಗಳಲ್ಲಿ ವಿಂಗಡಿಸಿದ್ದರಷ್ಟೆ. ಆದರೆ ಚಕ್ರಾಧಿಪತ್ಯಗಳು ಬದಲಾದಂತೆ ರಾಜ್ಯದ ಗಡಿರೇಖೆಗಳೂ, ಊರುಗಳ ಆಡಳಿತದ ವ್ಯಾಪ್ತಿಗಳೂ ಬದಲಾಗಿವೆ. ಇಂಥ ಸಂದರ್ಭಗಳಲ್ಲಿ ರಾಜಕೀಯ ಆಡಳಿತ ವಿಭಾಗಗಳ ಸೀಮಾರೇಖೆಗಳಲ್ಲಿಯೂ ಹೆಸರುಗಳಲ್ಲಿಯೂ ವ್ಯತ್ಯಾಸಗಳಾಗಿವೆ. ನಗರಗಳ ಬೆಳವಣಿಗೆ, ಆಡಳಿತ ಕೇಂದ್ರದ ಸ್ಥಳಾಂತರಗಳೂ ಈ ವ್ಯತ್ಯಾಸಗಳಿಗೆ ಕಾರಣವಾಗಿದ್ದಿದೆ. ಈ ಎಲ್ಲ ಗೊಂದಲಗಳ ನಡುವೆಯೂ ವಿದ್ವಾಂಸರುಗಳು ಪ್ರಾಚೀನ ಕಾಲದ ಹಲವು ರಾಜಕೀಯ ವಿಭಾಗಗಳನ್ನು ನಿಖರ ಆಧಾರಗಳೊಡನೆ ಗುರುತಿಸಿದ್ದಾರೆ ಮತ್ತು ಗುರುತಿಸುತ್ತಲೂ ಇದ್ದಾರೆ.
ಬನವಸೆ ಪನ್ನಿರ್ಚ್ಛಾಸಿರ, ಪಲಸಿಗೆ ಪನ್ನಿರ್ಚ್ಛಾಸಿರ, ಕೊಂಕಣ ಒಂಭೈನೂರು, ಪಾನುಂಗಲ್ಲೈನೂರು, ಹಯ್ವೆಯಯ್ನೂಱು ಮುಂತಾದವು ಉತ್ತರ ಕನ್ನಡ ಜಿಲ್ಲೆಯ ಚರಿತ್ರಕಾಲದ ಪ್ರಮುಖ ರಾಜಕೀಯ ವಿಭಾಗಗಳು. ಇವುಗಳಲ್ಲಿ ಸುಮಾರು ಏಳನೇ ಶತಮಾನದಿಂದಲೇ ಶಾಸನಗಳಲ್ಲಿ ಹಯ್ವೆಯಯ್ನೂಱರ ಪ್ರಸ್ತಾಪ ಕಂಡುಬರುತ್ತದೆ. ಬಾದಾಮಿ ಚಾಲುಕ್ಯ ಎರಡನೇ ವಿಕ್ರಮಾದಿತ್ಯನ ಸಾಮಂತನಾದ ಪಲ್ಲವ ಗೋಪಾಲದೇವನನ್ನು ಪಯ್ವೆಗುಂದ ಪುರವರಾಧೀಶ್ವರ’ನೆಂದು ಹಳದಿಪುರ ಶಾಸನ ಕರೆದಿದೆ. ಕ್ರಿ.ಶ.ಸು. ೮೦೦ರ ಕೆಕ್ಕಾರ ಶಾಸನವು ಅಣ್ಣೆಯರಸನನ್ನು ಪಯ್ವೆಗುಂದ ಪರಮೇಶ್ವರ’ನೆಂದು ಉಲ್ಲೇಖಿಸಿ, ಕಡತೋಕೆಯಿಂದ ಶಿವಳ್ಳಿಯವರೆಗಿನ ನಾಡನ್ನು ಆಳುತ್ತಿದ್ದನೆಂದು ಹೇಳಿದೆ. ಕೆಕ್ಕಾರ ಕಡತೋಕಗಳು ಇಂದಿನ ಹೊನ್ನಾವರ ತಾಲೂಕಿನಲ್ಲಿದ್ದರೆ, ಶಿವಳ್ಳಿ ಉಡುಪಿಯ ಹತ್ತಿರವಿದೆ. ಕುಂಭಾಪುರದ ಶಾಸನವೂ ಪೈಯ್ವೆಯಯ್ನೂಱು’ ಪ್ರದೇಶವನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೯೯೧ರ ಶಾಸನದಲ್ಲಿ “ಪಯ್ವೆಗುಂದದಬ್ಬೆ” ಎಂಬ ಉಲ್ಲೇಖವಿದೆ. ಕ್ರಿ.ಶ. ೧೧೧೨ರ ಶಿಕಾರಿಪುರ ಶಾಸನವು “ಕೊಂಕಣ ಧಾತ್ರೀವನಿತೆಯ ಕಂಕಣದಂತೆಸೆವ ಹೈವೆ” ಎಂದು ವರ್ಣಿಸಿದೆ. ಎರಡನೇ ಜಗದೇಕಮಲ್ಲನ ಸಾಮಂತ ಕಾದಂಬ ಮಲ್ಲಿದೇವನು ಹೈವೆಯಯ್ನೂರು ಮಹಾಳಿಗೆಯುಮ ತೊಂಡರಟೆ ಕಬ್ಬುನಾಳಿಗೆ ನಾಲ್ಕಱುಂಬಾಡ ಮೊಗಲವಾಡಿ’ ವಿಭಾಗಗಳನ್ನು ಆಳುತ್ತಿದ್ದನೆಂದು ಕ್ರ್ರಿಕ.ಶ. ೧೧೪೨ರ ಸೊರಬ ತಾಲೂಕಿನ ಮಳಲಿ ಶಾಸನ ಉಲ್ಲೇಖಿಸುತ್ತದೆ. ನಂತರದ ದಿನಗಳಲ್ಲಿ ಚಂದಾವರ ಕಾದಂಬರ, ಗೇರುಸೊಪ್ಪೆ ಸಾಳುವರ ಮತ್ತು ವಿಜಯನಗರದ ರಾಜ್ಯಪಾಲರ ನೂರಾರು ಶಾಸನಗಳು ಹೈವೆ-೫೦೦ರನ್ನು ಮೇಲಿಂದ ಮೇಲೆ ಉಲ್ಲೇಖಿಸುತ್ತವೆ.
‘ಸಹ್ಯಾದ್ರಿ ಕಾಂಡ’ ಎನ್ನುವ ಸಂಸ್ಕೃತ ಗ್ರಂಥದಲ್ಲಿ ಪರಶುರಾಮನು ಸಮುದ್ರವನ್ನು ಹಿಂದೆಸರಿಸಿ ಸೃಷ್ಠಿಸಿದ ಭೂ ಪ್ರದೇಶಕ್ಕೆ ಸಪ್ತಕೊಂಕಣ ಎಂದು ಕರೆಯುವರು. ಅವು ಕ್ರಮವಾಗಿ ಕೇರಳ, ತುಲಂಗ, ಹೈವ, ಸೌರಾಷ್ಟ್ರ, ಕೊಂಕಣ, ಕರಹಾಟ ಮತ್ತು ಕರ್ನಾಟಕ ಎಂದು ವಿವರಿಸಲಾಗಿದೆ. ಆದರೆ ಶಾಸನಗಳಲ್ಲಿ ಸಪ್ತ ಕೊಂಕಣಗಳ ಉಲ್ಲೇಖವು ಬೇರೆಯದೇ ಆಗಿದೆ. ಕರ್ನಾಟಕದ ಶಾಸನಗಳಲ್ಲಿ ಅವು ಕಿರಾತ, ವಿರಾಟ, ಕೊಂಕಣ, ಹೈಗ, ತುಳುವ ಮತ್ತು ಕೇರಳ ಎಂದು ಉಲ್ಲೇಖವಾಗಿರುವವು. “ಪ್ರಪಂಚಹೃದಯ” ಗ್ರಂಥದಲ್ಲಿ ಮತ್ತೆ ಬೇರೆ ವಿಧವಾಗಿ “ಸಾ ಪ್ರಸಿದ್ಧ ತರಾ ಸಹ್ಯಾಪಾದೇ ಪರಶುರಾಮ ಭೂಮಿಃ| ಸಾ ಸಪ್ತ ಕೊಂಕಣಾಖ್ಯಾ ಕೂಪಕ-ಕೇರಲ-ಮೂಷಿಕ-ಆಲುಪ-ಪಶು-ಕೊಂಕಣ ಪರಕೊಂಕಣಭೇದನ ದಕ್ಷಿಣೋತ್ತರಾಯಾಮೇನ ಚ ವ್ಯವಸ್ಥಿತಾ||” ಎಂದು ಕೂಪಕ, ಕೇರಲ, ಮೂಷಿಕ, ಅಲುಪ, ಪಶು, ಕೊಂಕಣ ಮತ್ತು ಪರಕೊಂಕಣ ಈ ಬಗೆಯಾಗಿ ಸಪ್ತ ಕೊಂಕಣದ ವರ್ಣನೆಯಿದೆ. ಇದರಲ್ಲಿ ಪಶು ಎಂಬುದೇ ಪಶುಕ-ಪಯಿಕ-ಪಯಿಗ-ಹೈಗ(ಹೈವೆ) ಎಂದಾಗಿರುವುದೆಂದು ಶ್ರೀ ಗೋವಿಂದ ಪೈಯವರು ವಿವರಿಸಿರುವರು. ಸಪ್ತ ಕೊಂಕಣ ಪ್ರದೇಶಗಳ ನಾಮ ನಿರ್ದೇಶನದಲ್ಲಿ ಭಿನ್ನತೆಯಿರುವುದಾದರೂ, ಹೈವೆಯು ಸಪ್ತ ಕೊಂಕಣಗಳೊಳಗಿನ ಭಾಗವಾಗಿತ್ತೆಂಬುವುದರಲ್ಲಿ ಸಂದೇಹವಿಲ್ಲ.
ದಿವಂಗತ ಪಂಜೆ ಮಂಗೇಶರಾಯರು “ಬೀಳಗಿಯ ಕೆಲವು ಶಾಸನಗಳು” ಎನ್ನುವ ತಮ್ಮ ಲೇಖನದಲ್ಲಿ ಹೈವೆಯ ಭೂಪ್ರದೇಶದ ಪರಿಚಯ ಮಾಡಿರುವರು. ಇದನ್ನು ಅವರ ಮಾತಿನಲ್ಲಿಯೇ ಹೇಳಬೇಕೆಂದರೆ, “ಬೀಳಗಿಯು ಮುಂಬಯಿ ಸಂಸ್ಥಾನದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ, ಸಮುದ್ರ ತೀರದಿಂದ ಸುಮಾರು ಮೂವತೈದು ಮೈಲಿ ದೂರದಲ್ಲಿ ಕುಮಟಾ ಸಿದ್ಧಾಪುರ ರಸ್ತೆಯ ಮೇಲಿದೆ. ಬೀಳಗಿಯಿಂದ ೫ ಮೈಲು ಪೂರ್ವಕ್ಕೆ ಸಿದ್ಧಾಪುರ, ಸಿದ್ಧಾಪುರದಿಂದ ೨೫ ಮೈಲು ಪೂರ್ವಕ್ಕೆ ಹೋದರೆ ಮೈಸೂರು ಸಂಸ್ಥಾನದಲ್ಲಿ ಹಿಂದಿನ ಇಕ್ಕೇರಿ ಅಥವಾ ಕೆಳದಿ ಅರಸರ ಮುಖ್ಯ ಪಟ್ಟಣವಾಗಿದ್ದ ವಂಶಪುರವನ್ನು ಮುಟ್ಟಬಹುದು. ಬೀಳಗಿಯಿಂದ ಸುಮಾರು ೨೫ ಮೈಲು ನೈಋತ್ಯಕ್ಕೆ ಗೇರಸಪ್ಪೆ(ಭಲ್ಲಾತಕೀಪುರ); ಗೇರಸಪ್ಪೆಯಿಂದ ತೆಂಕಲು ಸುಮಾರು ಹತ್ತು ಮೈಲುಗಳೊಳಗೆ ಹಾಡುವಳ್ಳಿ(ಸಂಗೀತಪುರ); ಹಾಡುವಳ್ಳಿಯಿಂದ ೮ ಮೈಲು ಪಶ್ಚಿಮಕ್ಕೆ ಕಡಲುಕೆರೆಯಲ್ಲಿ ಭಟ್ಟಕಳ; ಭಟ್ಟಕಳದಿಂದ ಉತ್ತರಕ್ಕೆ ಹೊನ್ನಾವರ ಬಂದರು; ಈ ಸ್ಥಳಗಳನ್ನು ಗುರುತಿಸಿ ನೆನಪಿಟ್ಟುಕೊಂಡರೆ ಮುಂಚಿನ ಹೈಗನಾಡಿನ ಬಹುಭಾಗ ತಿಳಿದಂತಾಗುತ್ತದೆ. ಈ ಪ್ರಾಂತ್ಯದಲ್ಲಿ ಎಲ್ಲಿ ಹೋದರೆ ಅಲ್ಲಿ ಎಂಬಂತೆ ಹಳೆ ಕೋಟೆಗಳೊ, ಶಿಲಾ ಶಾಸನಗಳೊ, ವೀರಗಲ್ಲುಗಳೊ, ಗುಡಿ ಗೋಪುರಗಳೋ ಕಣ್ಣಿಗೆ ಬೀಳುವುದುಂಟು….
ಬನವಸೆ, ಸ್ವಾದಿ, ಗೇರಸಪ್ಪೆ, ಹಾಡುವಳ್ಳಿ, ಬೀಳಗಿ ಇವು ಒಂದೊಂದು ಕಾಲದಲ್ಲಿ ಅಲ್ಲಲ್ಲಿ ರಾಜ್ಯವಾಳಿದ ತುಂಡರಸರ ರಾಜಧಾನಿಗಳಾಗಿಯೂ, ಕನ್ನಡ ವಾಙ್ಮಯದ ಆಶ್ರಯಸ್ಥಾನಗಳಾಗಿಯೂ ಇದ್ದುದರಿಂದ ಅವು ಇತಿಹಾಸದ ದೊಡ್ಡ ನಿಕ್ಷೇಪ ಸ್ಥಳಗಳಂತೆ ಕಾಣುತ್ತವೆ.”
ಇಂದಿನ ಉತ್ತರ ಕನ್ನಡ ಜಿಲ್ಲೆಯ ಮಧ್ಯಭಾಗ ಹಿಂದಿನ ಹೈಗನಾಡಾಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಪರಿಸೀಮಿತವಾದ ಪ್ರದೇಶದ ದಕ್ಷಿಣೋತ್ತರ ಸೀಮೆಗಳು ಶರಾವತಿ ಹಾಗೂ ಗಂಗಾವಳಿ ನದಿಗಳಾಗಿರುವಂತೆ ತೋರುತ್ತದೆ. ಪೂರ್ವಕ್ಕೆ ಅದು ಎಲ್ಲಿಯವರೆಗೆ ಹಬ್ಬಿತ್ತೆಂದು ನಿಶ್ಚಯವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ ಬಹುಶಃ ಶಿಕಾರಿಪುರ, ಸಾಗರ, ಶಿವಮೊಗ್ಗೆಯವರೆಗೂ ಅದು ಹಬ್ಬಿತ್ತೆಂದು ಊಹಿಸಲು ಅವಕಾಶಗಳಿವೆ. ಬೇರೆ ಬೇರೆ ಕಾಲಗಳಲ್ಲಿ ಈ ನಾಡಿಗೆ ಅಪರಾಂತಕವೆಂತಲೂ, ಗೋರಾಷ್ಟ್ರವೆಂತಲೂ, ನಾಗರಖಂಡವೆಂತಲೂ (ನಾಗರಖಂಡ-೭೦ ಎಂಬ ವಿಭಾಗವನ್ನು ಪ್ರತ್ಯೇಕವಾಗಿ ಉತ್ತರ ಕನ್ನಡದ ಹೊರಗೆ ಗುರುತಿಸಲಾಗಿದೆ.) ಕರೆಯುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಂಕೋಲಾ ತಾಲೂಕಿನ ಗಂಗಾವಳಿ ನದಿಯ ದಕ್ಷಿಣ ದಂಡೆಯಿಂದ ಹೊನ್ನಾವರ ತಾಲೂಕಿನ ಶರಾವತಿ ನದಿಯ ಉತ್ತರದಂಡೆ; ಪಶ್ಚಿಮದ ಸಮುದ್ರದಿಂದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಗಳವರೆಗೆ ಹರಡಿಕೊಂಡಿರುವ ಭೂ ಪ್ರದೇಶವನ್ನು ಶಾಸನೋಕ್ತ ಹಯ್ವೆಯಯ್ನೂಱರ ಪ್ರಾಂತ್ಯವೆಂದು ತಿಳಿಯಬಹುದು.
ಹಯ್ವೆಯಯ್ನೂಱರಲ್ಲಿ ಬಟಕಳನಾಡು, ಪಾಡುವಳಿಯನಾಡು, ನೂರುಂಬಾಡ ಎನ್ನುವ ಉಪವಿಭಾಗಗಳಿರುವುದರ ಕುರಿತೂ ಮಾಹಿತಿಗಳು ಸಿಗುತ್ತವೆ. ಅದರೆ ಇವುಗಳಲ್ಲಿರುವ ಹಳ್ಳಿಗಳ ನಿರ್ದಿಷ್ಟ ಸಂಖ್ಯೆಯ ಮಾಹಿತಿಯಿಲ್ಲ. ಕ್ರಿ.ಶ. ೧೨೭೮ರ ಶಿರಾಲಿ ಶಾಸನವು ಹೊಯ್ಸಳ ಮೂರನೇ ಬಲ್ಲಾಳನು ಕುಮಾರ ವೃತ್ತಿಯಲ್ಲಿ ಬಟಕಳನಾಡನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ೧೨೯೨ ರಿಂದ ಈತ ಸಮಸ್ತ ಹೊಯ್ಸಳ ನಾಡಿನ ಚಕ್ರವರ್ತಿಯಾಗುತ್ತಾನೆ. ಕ್ರಿ.ಶ. ೬೫೦-೬೮೦ರ ಒಂದನೇ ಆಳುವರಸನ ವಡ್ಡರಸೆ ಶಾಸನದಲ್ಲಿ ಪಡುವಳಿಯನಾಡು’ ಮತ್ತುಪಡುವಳಿನಾಟ್ಟು ಮದಿಮೆ’ ಎನ್ನುವ ಉಲ್ಲೇಖಗಳಿವೆ. ೧೨೯೬ರ ಶಾಸನ ಇದನ್ನು ವಡ್ಡರಸೆರಾಜ್ಯ’ ಎಂದು ಉಲ್ಲೇಖಿಸಿ ವಡ್ಡಮರಾಯ ಎನ್ನುವವನು ಆಳುತ್ತಿದ್ದುದಾಗಿ ತಿಳಿಸುತ್ತದೆ. ಬನ್ನೆ’ ಎನ್ನುವುದು ಪಾಡುವಳಿಯ ನಾಡಿನ ಉಪವಿಭಾಗವಾಗಿದ್ದು ಗುಂಡಣ್ಣರಸನ ಕೆಳಗೆ ಸತ್ತಿಗಾರಿ ಎನ್ನುವವನು ಇದನ್ನು ನೋಡಿಕೊಳ್ಳುತ್ತಿದ್ದ ಮಾಹಿತಿಗಳು ಲಭ್ಯವಿವೆ. ಕ್ರಿ.ಶ. ೧೧-೧೨ನೇ ಶತಮಾನದ ಅವಧಿಯ ಹೊನ್ನಾವರ ತಾಲೂಕಿನ ಶಾಸನವು ನೂಱುಂಬಾಡವನ್ನು ಬೆಂಕಿಯಣ್ಣನು ಆಳುತ್ತಿದ್ದನೆಂದು ಹೇಳುತ್ತದೆ. ಕ್ರಿ.ಶ. ೧೩೪೮ರ ಇಡಗುಂದಿ ಶಾಸನವೂ ಅಳುಪ ಅರಸನ ಆಳ್ವಿಕೆಯನ್ನು ಹೇಳಿದೆ. ಆದ್ದರಿಂದ ನೂಱುಂಬಾಡವೂ ಹಯ್ವೆಯಯ್ನೂಱರ ಉಪವಿಭಾಗವಾಗಿತ್ತೆಂದು ವಿದ್ವಾಂಸರು ಭಾವಿಸಿದ್ದಾರೆ.
‘ಹಯ್ವೆಯಯ್ನೂಱು’ ಅನ್ನುವಲ್ಲಿನ ಐನೂರು ಸಂಖ್ಯಾವಾಚಕವಾಗಿದ್ದು, ಆ ಪ್ರಾಂತ್ಯದಲ್ಲಿ ಒಟ್ಟೂ ೫೦೦ ಹಳ್ಳಿಗಳಿವೆ ಎಂದು ಅರ್ಥ. ಹಯ್ವೆಯಯ್ನಱರ ಗಡಿಯಲ್ಲಿ ಗಂಗಾವಳಿ ನದಿಯ ದಕ್ಷಿಣಕ್ಕೆ ಇದ್ದ ಅಂಕೋಲಾ ತಾಲೂಕಿನ ಸುಮಾರು ೪೦ ಹಳ್ಳಿಗಳು, ಕುಮಟಾ ತಾಲೂಕಿನ ೧೨೬ ಹಳ್ಳಿಗಳು, ಹೊನ್ನಾವರ ತಾಲೂಕಿನ ೯೪ ಹಳ್ಳಿಗಳು, ಭಟಕಳ ತಾಲೂಕಿನ ೬೩ ಹಳ್ಳಿಗಳು, ಶಿರಸಿ ತಾಲೂಕಿನ ಪಶ್ಚಿಮ ಭಾಗದ ಸುಮಾರು ೨೫ ಹಳ್ಳಿಗಳು ಮತ್ತು ಸಿದ್ದಾಪುರ ತಾಲೂಕಿನ ಪಶ್ಚಿಮ ಭಾಗದ ಸುಮಾರು ೩೮ ಹಳ್ಳಿಗಳು. ಹೀಗೆ ಇಂದಿನ ಉತ್ತರ ಕನ್ನಡ ಜಿಲ್ಲೆಯ ಸುಮಾರು ೩೮೬ ಹಳ್ಳಿಗಳು ಹೈವೆಯ್ಯನೂರಿನಲ್ಲಿ ಸಮಾವೇಶವಾಗುತ್ತಿದ್ದುವು ಎನ್ನುವುದು ಇಂದಿನ ಅಂದಾಜು. ಇಲ್ಲಿ ಐನೂರರ ಭರ್ತಿಗೆ ಇನ್ನೂ ೧೧೪ ಹಳ್ಳಿಗಳ ಕೊರತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕು ಕಂಡಿರುವ ಎಲ್ಲ ಶಾಸನಗಳು ಪ್ರಕಟವಾಗಬೇಕಿವೆ. ಹಿಂದೆ ಹಯ್ವೆಯಯ್ನೂಱರ ಭಾಗವಾಗಿದ್ದ ಇಂದಿನ ಸಾಗರ, ಸೊರಬ, ಶಿಕಾರಿಪುರಗಳ ಮತ್ತು ಬೈಂದೂರು, ಕುಂದಾಪುರ ಭಾಗಗಳಲ್ಲಿ ದೊರೆತ ಶಾಸನಗಳಲ್ಲಿ ಅಲ್ಲಿಯ ವಿಭಾಗಗಳ ಪೂರ್ಣ ಮಾಹಿತಿ ಪ್ರಕಟವಾಗಿಲ್ಲ. ಈ ಕೊರತೆಗಳು ನೀಗಿದಾಗ ಹಯ್ವೆಯಯ್ನೂಱರ ಎಲ್ಲ ೫೦೦ ಹಳ್ಳಿಗಳ ಮಾಹಿತಿ ದೊರೆಯುತ್ತದೆ.
ಮಾಹಿತಿ: ಶ್ಯಾಮಸುಂದರ ಗೌಡ


Leave a Reply