ಸು.ರಂ. ಎಕ್ಕುಂಡಿಯವರು ಮತ್ತು ಬಂಕಿಕೊಡ್ಲ | ನೂರರ ನೆನಪು… ಜನ್ಮ ಶತಮಾನೋತ್ಸವ

Posted by

·

ಶ್ರೀಯುತ ಸು.ರಂ. ಎಕ್ಕುಂಡಿಯವರು ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಕನ್ನಡ ಕಂಡ ಬಹುಮುಖ್ಯ ಕವಿ. ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರಾದ ಇವರು ಜನಿಸಿದ್ದು ೧೯೨೩, ಜನವರಿ ೨೦ ರಂದು. “ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ” ಎಂಬುದು ಇವರ ಮಾತು. ಬಡತನದ ಬದುಕಿನ ನಡುವೆಯು ಇವರು ಓದಿನತ್ತ ಆಕರ್ಷಿತರಾಗಿದ್ದರು. ೧೯೪೪ರಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದ ಎಕ್ಕುಂಡಿಯವರ ಪಯಣ ಸಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲಕ್ಕೆ. ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯನ್ನು ಇಲ್ಲಿಯೇ ಸಲ್ಲಿಸಿದ್ದಾರೆ. ಒಬ್ಬ ಶಿಕ್ಷಕರಾಗಿ, ಕವಿಯಾಗಿ ಇವರ ಸೇವೆ ಅಪಾರವಾದದ್ದು.

ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭಕ್ಕೆ ಹೆಸರಾಂತ ಕವಿ, ಸಾಹಿತಿಗಳನ್ನು ಕರೆಯಿಸಿ ಬಂಕಿಕೊಡ್ಲ ಜನತೆಗೆ ಮತ್ತು ‌ಉತ್ತರ ಕನ್ನಡ ಜಿಲ್ಲೆಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಬೇಂದ್ರೆ, ಮಾಸ್ತಿ, ಗೌರೀಶ್ ಕಾಯ್ಕಿಣಿ ಇನ್ನೂ ಮುಂತಾದ ಸತ್ವಭರಿತ ಸಾಹಿತಿಗಳು ಇಲ್ಲಿ ಭೇಟಿ ನೀಡಿದ್ದರು ಎಂಬುದನ್ನು ನನ್ನ ತಂದೆಯವರು ನನಗೆ ಹೇಳಿದ್ದರು. ಶ್ರೀ ಸು.ರಂ. ಎಕ್ಕುಂಡಿಯವರು ನನ್ನ ತಂದೆ ಶ್ರೀ ಶಿವರಾಮ ಗೌಡರ ಶಿಕ್ಷಕರಾಗಿದ್ದರು. ಮೂಲತಃ ಬಂಕಿಕೊಡ್ಲ ದವರಾದ ನಾವು, ನನ್ನ ತಂದೆಯ ವಿಧ್ಯಾಭ್ಯಾಸ ಇದೇ ಆನಂದಾಶ್ರಮ ಶಾಲೆಯಲ್ಲಿಯೆ ಪೂರ್ಣಗೊಂಡಿತ್ತು. ತಮ್ಮ ಶಿಕ್ಷಕರಾದ ಸು.ರಂ. ಎಕ್ಕುಂಡಿಯವರ ಬಗ್ಗೆ ಹೆಮ್ಮೆಯಿಂದ ‌ಹೇಳುತ್ತಿದ್ದ ನನ್ನ ‌ತಂದೆಯವರು ಅವರ ಕುರಿತು‌ ಅರಿತದ್ದು ನಾನು ನನ್ನ ತಂದೆಯವರಿಂದಲೆ.

ಸಮುದ್ರ ತೀರದ ಊರಿನಲ್ಲಿ ೩೫ ವರ್ಷಗಳ ಕಾಲವಿದ್ದ ಸು.ರಂ. ಎಕ್ಕುಂಡಿಯವರು ಇಲ್ಲಿಯ ನಿಸರ್ಗವನ್ನೇ ತಮ್ಮ ಕವನಗಳ ಕುಸುರಿಕೆಲಸಕ್ಕೆ ಆಯ್ದುಕೊಂಡರು. ಬೆಳ್ಳಕ್ಕಿಗಳು, ಉಪ್ಪುಕಡಲು, ತೆಂಗಿನ ಮರದ ಸಾಲು ಇವೆಲ್ಲ ಇವರ ಕವನಗಳ ಭಾಗಗಳಾಗಿ ಮೆರೆದಿವೆ. ನನ್ನ ಕಾವ್ಯವು ಉಳುವ ಕೈಗಳನ್ನೂ, ಪ್ರಾರ್ಥಿಸುವ ಕೈ ಗಳನ್ನೂ ಕುರಿತು ಹಾಡುತ್ತದೆ, ಎನ್ನುತ್ತಿದ್ದರು ಎಕ್ಕುಂಡಿಯವರು.

ಬಂಕಿಕೊಡ್ಲ ಎಕ್ಕುಂಡಿಯವರ ಮನಸ್ಸನ್ನು ಹಸಿರಾಗಿಸಿದ ಒಂದು ಊರು. ಆ ಊರನ್ನು, ಊರಿನ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದ ಎಕ್ಕುಂಡಿಯವರು, ಪ್ರತಿ ವಿದ್ಯಾರ್ಥಿಯ ಏಳ್ಗೆಗಾಗಿ ಅಷ್ಟೇ ಮುತುವರ್ಜಿವಹಿಸುತ್ತಿದ್ದ ಶಿಕ್ಷಕರಾಗಿದ್ದರು. ಸಹಜತೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದ ವ್ಯಕ್ತಿಯಾಗಿದ್ದರು. ಆ ಕಾರಣದಿಂದಲೇ ಇವರ ಕಾವ್ಯದಲ್ಲಿ ಜನಸಾಮಾನ್ಯರು ಮೂಡಿ ಬಂದರು ಎಂದರೆ ತಪ್ಪಾಗಲಾರದು.

ಸು.ರಂ. ಎಕ್ಕುಂಡಿಯವರಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡ್ ಪ್ರಶಸ್ತಿ, ೧೯೮೩ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೨ ರಲ್ಲಿ ಬಕುಳದ ಹೂಗಳು ಕೃತಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೮೪ ರಲ್ಲಿ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು . ಇಂತಹ ಮಾಹಾನ್ ವ್ಯಕ್ತಿ ೧೯೯೫ ರ ಅಗಸ್ಟ್ ೨೦ ರಂದು ದೈವಾಧೀನರಾದರು.

ಬಹುಭಾಷಾ ಪರಿಣಿತರಾಗಿದ್ದ ಸು.ರಂ. ಎಕ್ಕುಂಡಿಯವರು ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ನನ್ನ ‌ತಂದೆಯವರ ಶಿಕ್ಷಕರಾಗಿದ್ದರು ಎಂಬುದೇ ನನಗೆ ಹೆಮ್ಮೆಯ ‌ಸಂಗತಿ. ನಮ್ಮ ‌ಜಿಲ್ಲೆ, ನಮ್ಮ ಊರಿನ ‌ಬಗ್ಗೆ ಅಪಾರ ಅಭಿಮಾನ ಹೊಂದಿದ ಮಹಾನ್ ಕವಿ. ನನ್ನ ತಂದೆ ಯವರ ನುಡಿಗಳಲ್ಲಿ ಕೇಳಿದ ಸು.ರಂ. ಎಕ್ಕುಂಡಿಯವರ ವ್ಯಕ್ತಿತ್ವ ಎಂದಿಗೂ‌ ನನ್ನ ಮನದಾಳದಲ್ಲಿ ಶಾಶ್ವತ ನೆನಪು.

✍🏻 ಅಕ್ಷತಾ ಜಗದೀಶ್


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading