ಚಿನ್ನದ ಮಣೆಯಲ್ಲಿ ತಿಗಳಾರಿ ಗ್ರಂಥ ರಚಿಸಿದ ಹೊನ್ನಾವರದ ಮಹಾನ್ ಪಂಡಿತ

Posted by

·

ತಿಗಳಾರಿ ಲಿಪಿಯ ಮುದ್ರಣವು ತಿಗಳಾರಿ ಲಿಪಿಯ ಇತಿಹಾಸದಲ್ಲಿ ನಡೆದ ಅಪೂರ್ವ ಸಾಹಸ ಕಾರ್ಯವಾಗಿದೆ. ಇದನ್ನು ಆಗ ಮಾಡಿದವರು ಉತ್ತರ ಕನ್ನಡಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ವೆಂಕಟರಮಣ ಶಾಸ್ತ್ರೀ ಯವರು. ಕ್ರಿ.ಶ ೧೮೮೦ ರಲ್ಲಿ ಸ್ಥಳೀಯ ಕೈ ಬರಹದ ಮಾದರಿಯಲ್ಲಿಯೇ ತಿಗಳಾರಿ ಲಿಪಿಯ ಮುದ್ರಣ ಗ್ರಂಥಗಳು ಸಿದ್ದವಾದವು. ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದಲ್ಲಿ ಜನಿಸಿದ ಕರ್ಕಿ ವೆಂಕಟರಮಣ ಶಾಸ್ತ್ರೀ ಇವರು ತಿಗಳಾರಿ ಲಿಪಿಯಲ್ಲಿಯೇ ಗ್ರಂಥ ಮುದ್ರಿಸಿ ಕೊಂಡದ್ದು ಒಂದು ಸಾಹಸದ ಕೆಲಸವಷ್ಟೇ ಅಲ್ಲ, ಇವರ ಇನ್ನೊಂದು ಸಾಹಸದ ಕೆಲಸವೆಂದರೆ ದೇಶ ಅಥವಾ ದೇಶದ ಹೊರಗೆ ಎಲ್ಲಿಯೂ ಪ್ರಯತ್ನ ನಡೆಯದ ತಿಗಳಾರಿಯ ಅಚ್ಚಿನ ಮೊಳೆಗಳನ್ನು ಬೆಳ್ಳಿ ಬಂಗಾರ ಕುಟ್ಟುವ ಮಣೆಯ ಮೇಲೆ ಕರ್ಕಿಯ ಸೊನಗಾರದಿಂದ ಕುಟ್ಟಿಸಿಕೊಂಡು ದೂರದ ಮುಂಬೈಯ ಛಾಪಖಾನೆಯಲ್ಲಿ ತಿಗಳಾರಿ ಗ್ರಂಥಗಳನ್ನು ಮುದ್ರಿಸಿಕೊಂಡು ಆಗ ಆರಾಣೆ ಎಂಟಾನೆ ಬೆಲೆಗೆ ಆ ಪುಸ್ತಕವನ್ನು ಒದಗಿಸಿದ ಈ ಮೇಧಾವಿಯ ಸಾಹಸದ ಕೆಲಸ ಜಾಲತಾಣದಲ್ಲಿಯ ತಿಗಳಾರಿಲಿಪಿಯ ಚರಿತ್ರೆಯಲ್ಲಿ ದಾಖಲಾಗದ ಸಂಗತಿ ಕಳವಳ ಕಾರಿಯಾಗಿದೆ.

ಕರ್ಕಿಯಲ್ಲಿರುವ ಸೊನಗಾರದಿಂದ ಈ ಲಿಪಿಯ ಅಚ್ಚಿನ ಮೊಳೆಗಳನ್ನು ಸಿದ್ಧಪಡಿಸಿಕೊಂಡ ಬಳಿಕ ಮುಂದೆ ಅವುಗಳನ್ನು ಜೋಡಿಸುವ ಕೆಲಸ ಸುಲಭ ವಾಗಿರಲಿಲ್ಲ, ತಿಗಳಾರಿ ಬಲ್ಲವರಿಂದಲೇ ಇದು ನಡೆಯ ಬೇಕಷ್ಟೆ. ಆದ್ದರಿಂದ ಕರ್ಕಿಯ ತಿಗಳಾರಿ ಮತ್ತು ಸಂಸ್ಕ್ರತ ಪಂಡಿತರು ತಿಗಳಾರಿ ಪುಸ್ತಕ ಮುದ್ರಣದ ಕೆಲಸದಲ್ಲಿ ಕೈ ಜೋಡಿಸಿರುವ ಸಾಧ್ಯತೆಗಳಿವೆ. ವಾಹನ ಸೌಕರ್ಯವಿಲ್ಲದ ಆ ಕಾಲದಲ್ಲಿ ಮುಂಬೈಯಂತಹ ಊರಿಗೆ ಹೋಗಿ ತಿಗಳಾರಿ ಗ್ರಂಥ ಮುದ್ರಣ ಕೈಗೊಂಡದ್ದು ತಿಗಳಾರಿ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ಅಂಶವಾಗಿದೆ.
ಈ ಲಿಪಿಯ ಮುದ್ರಣ ರೂಪಕ್ಕೆ ಸಿದ್ಧಗೊಂಡು ಮುದ್ರಣವಾಗಿ ಸುಮಾರು ೧೩೬ ವರ್ಷಗಳು ಕಳೆದು ಹೋದರೂ ತಿಗಳಾರಿ ಲಿಪಿಯ ಚರಿತ್ರೆಯಲ್ಲಿ ಈ ಸಂಗತಿ ದಾಖಲಾಗಲಿಲ್ಲ. ಕರ್ಕಿಯಲ್ಲಿ ಕೇವಲ ಹತ್ತಿಪ್ಪತ್ತು ಜನ ಈ ಲಿಪಿಯನ್ನು ನೋಡಿದ್ದಾರೆ, ಓದಿದ್ದಾರೆ, ಬರೆದಿದ್ದಾರೆ. ಮುಂದಿನ ತಲೆಮಾರಿನವರಿಗೆ ಇದು ಇತಿಹಾಸದ ಸಂಗತಿಯಾಗಲು ಹೆಚ್ಚು ಕಾಲ ಬೇಕಿಲ್ಲ.

ಇವರ ಇತರ ಪುಸ್ತಕಗಳ ಬಗ್ಗೆ, ಇವರ ತಿಗಳಾರಿ ಲಿಪಿಯ ಬಗ್ಗೆ ಕರ್ಕಿಯ ಸಾಂಸ್ಕೃತಿಕ ಪರಂಪರೆ ಎಂಬ ಕಿರುಪುಸ್ತಕದಲ್ಲಿ ೨೦೦೧ ಸಪ್ಟೆಂಬರ್ ಉಲ್ಲೇಖವಾಗಿರುತ್ತದೆ.

ಕರ್ಕಿ ವೆಂಕಟರಮಣ ಶಾಸ್ತ್ರೀ ಇವರು ತಿಗಳಾರಿ ಲಿಪಿಯ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಲ್ಲದೆ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ದೇವನಾಗರಿಯಲ್ಲಿ ಕೃತಿರಚನೆ ಮಾಡಿದ್ದಾರೆ, ಪ್ರಕಟಿಸಿದ್ದಾರೆ ಹಾಗು ವೃತ್ತ ಪತ್ರಿಕೆಯನ್ನೂ ನಡೆಸಿದ್ದಾರೆ. ಇವರ ಒಟ್ಟು ೨೮ ಪುಸ್ತಕಗಳ ಮಾಹಿತಿದೊರಕುತ್ತದೆ. ಇವುಗಳಲ್ಲಿ ಸಪ್ತಶತಿದೇವಿ ಮಹಾತ್ಮೆ ಮತ್ತು ನವದುರ್ಗಾಸಹಸ್ರ ನಾಮ ಈ ಪುಸ್ತಕಗಳನ್ನು ಈಗಲೂ ಲಭ್ಯವಿದೆ. ಲಕ್ಷ್ಮೀ ನಾರಾಯಣ ಹೃದಯ ಎಂಬ ಗ್ರಂಥವನ್ನು ತಿಗಳಾರಿ ಲಿಪಿಯಲ್ಲಿ ಛ್ಹಾಪಿಸಲಾಗಿತ್ತೆಂದು ಕರ್ಕಿಯ ಗೋವಿಂದ ಭಟ್ಟರ್ ಅಭಿಪ್ರಾಯವಾಗಿದೆ.

ಸಪ್ತಪದಿ
೧೯೮೫ರಲ್ಲಿ ಕಂಡ ಕಾಗದದ ಮೇಲೆ ಅಚ್ಚಾದ ಸಪ್ತಪದಿ ಪುಸ್ತಕದ ಹಿಂಪುಟದ ಬರಹ ಹೀಗಿದೆ.
ಇತಿ ಸಪ್ತಪದಿ ಸಮಾಪ್ತ.
ಹೇ. ಪುಸ್ತಕ ಕರ್ಕಿ ವ್ಯಂಕಟರಮಣ ಶಾಸ್ತ್ರೀ ಯಾನೀ ಬುದಿ ಮಹಾಬಲೇಶ್ವರ ಬಟ ಯಾಂಚ ಕರಿತಾ ಮುಂಬಯಿ ಯೇಥೇಜಗದೀಶ್ವರ ಛಾಪ ಖಾನ್ಯಾಂತ ಛಾಪವಿಲೇ. ಶಕೆ ೧೮೦೭ (ಪುಟ ೬೯) ಎಂದಿದೆ. ಈ ಪುಟದಲ್ಲಿರುವ ಮೇಲಿನ ಸಂಗತಿಯ ಲಿಪಿಯು ನಾಗರಿಯಾಗಿದ್ದು ಭಾಷೆ ಮರಾಠಿಯಾಗಿದೆ. ಒಳ ಪುಟಗಳಲ್ಲಿ ಲಿಪಿಯು ತಿಗಳಾರಿಯಾಗಿದ್ದು ವಿಷಯ ಸಂಸ್ಕೃತದಲ್ಲಿದೆ.

ದಿನಾಂಕ ೨೩-೭-೨೦೧೬ರಂದು ಕೃಷ್ಣ ಗಣಪತಿ ಭಟ್ ಸೂರಿ ಇವರ ಸಂಗ್ರಹದಲ್ಲಿಯ ಸಪ್ತ ಶತಿ ದೇವಿ ಮಹಾತ್ಮೆ ಎಂಬ ಕಾಗದದ ಮೇಲೆ ತಿಗಳಾರಿ ಲಿಪಿ ಮುದ್ರಿತ ಪುಸ್ತಕವನ್ನು ಅವರ ಮಗ ಮಹಾಬಲೇಶ್ವರ ಕೃಷ್ಣ ಭಟ್ ಸೂರಿ ಅವರು ನೀಡಿರುತ್ತಾರೆ. ಇದರಲ್ಲಿಯ ಮುಖಪುಟದ ಲಿಪಿ ತಿಗಳಾರಿಯಲ್ಲಿದೆ. ಒಳಪುಟಗಳ ಭಾಷೆ ಸಂಸ್ಕೃತ, ವಿಷಯ ದೇವಿ ಮಹಾತ್ಮೆ, ಲಿಪಿ ತಿಗಳಾರಿ. ಕೊನೆಯ ಪುಟ\ ಹಿಂಪುಟದಲ್ಲಿ ಮರಾಠಿ ಭಾಷೆ ಮತ್ತು ನಾಗರಿ\ಮರಾಠಿ ಲಿಪಿಯಲ್ಲಿ ಪುಸ್ತಕದ ವಿವರವಿದೆ. ಇದರ ಬೆಲೆ ಒಂದು ರೂಪಾಯಿ. ಒಂದು, ಇದು ಮರಾಠಿ ಅಂಕಿಯಲ್ಲಿದೆ. ಈಮೇಲಿನ ಎರಡೂ ಪ್ರತಿಗಳ ಹಿಂಪುಟಗಳ ಬರಹದಲ್ಲಿ ವ್ಯತ್ಯಾಸವಿಲ್ಲ.

ನವದುರ್ಗಾಸಹಸ್ರನಾಮ
ತಿಗಳಾರಿ ಲಿಪಿಯಲ್ಲಿ ಮುದ್ರಿತವಾದ ಈ ಕೃತಿಯಲ್ಲಿ “ಕಲ್ಪೋಕ್ತ ಶಾರದಾ ಪೂಜಾ ಸಹಿತವಾದ ನವದುರ್ಗಾ ಸಹಸ್ರ ನಾಮ” ಎಂಬ ಶಿರೋನಾಮೆಯಿದ್ದು ಕೆಳಗೆ ಕ್ರಯ ಆರಾನೆ ಎಂದಿದೆ. ಈ ಪುಸ್ತಕದ ಕೊನೆಯಲ್ಲಿ “ಈ ಪುಸ್ತಕ ಕರ್ಕಿ ಮಹಾಬಲೇಶ್ವರ ಭಟ್, ಸೂರಿ ವೆಂಕಟ್ರಮಣ ಶಾಸ್ರೀ ಗಳ ಅನುಮತಿಯಿಂದ ಬಡೇ ಕುಪ್ಪಾಭಟ್ಟರ ಮಗ ವಿಘ್ನೇಶ್ವರ ಭಟ್ಟಸ್ಯ ಲಿಖಿತಂ ಇದಂ ಪುಸ್ತಕಂ ಸಮಾಪ್ತಿ: ಎಂದು ಸಮಾಪ್ತಿ ವಾಕ್ಯವಿದೆ. ಈ ವಾಕ್ಯದಲ್ಲಿ ಕನ್ನಡ ಭಾಷೆಯ ಶಬ್ದಗಳಿವೆ. ಸಹಿತವಾದ ಈ ಕನ್ನಡ ಶಬ್ದ ತಿಗಳಾರಿ ಲಿಪಿಯಲ್ಲಿದೆ. ಆರಾಣೆ ಆರಾನೆಯಾಗಿದೆ ಇಲ್ಲಿ ಮರಾಠಿ ಪ್ರಭಾವ ಇದೆ.

ತಿಗಳಾರಿಯಲ್ಲಿರುವ ಮೇಲಿನ ಪುಸ್ಕಕಗಳ ಕೆಲವು ಛಾಯಾ ವಿವರವನ್ನು ಇಲ್ಲಿ ಲಗತ್ತಿಸಲಾಗಿರುವುದು.

ಮಾಹಿತಿ: Folk Knowledge


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading