ಉಪನಾಡವರಿಗೂ ನಾಡವರಿಗೂ ಇರುವ ವ್ಯತ್ಯಾಸ | ಉಪನಾಡವರ ಕುಲಛರಿತ್ರೆ, ಆಚಾರ ವಿಚಾರ

Posted by

·

ಈ ಸಮಾಜದ ಮೂಲ, ಯಾವುದು ಎಂಬ ಬಗ್ಗೆ ನಿಖರವಾಗಿ ಹೇಳುವುದಕ್ಕೆ ಸರಿಯಾದ ಆಧಾರ ಸಿಗುತ್ತಿಲ್ಲ. ಆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ನಾಡವರಂತೆ ಇವರು ಸಹ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ವಲಸೆ ಬಂದವರು ಎಂಬುದು ಸಾಮಾನ್ಯ ತಿಳಿವಳಿಕೆ. ಅವರ ಜೊತೆಯಲ್ಲಿ ಕೆಲ್ಸಿ, ಕುಂಬಾರರು, ಆಚಾರಿ, ಮಡಿವಳ, ಸೂಳೆ, ಹಳೇ ಪೈಕ ಇವರೂ ಬಂದರು. ಇವರೆಲ್ಲ ಕನ್ನಡಿಗರೇ. ಅವರೆಲ್ಲರ ಮೂಲಸ್ಥಾನ ಬಾರ್ಕೂರು ಅಥವಾ ಮಲ್ಪೆ ಹಾಗೂ ಉಪನಾಡವರ ಕುಲದೇವರು ‘ಶಂಕರನಾರಾಯಣ’, ಆ ದೇವರನ್ನು ಅವರು ತಮ್ಮ ಜೊತೆಯಲ್ಲಿ ತಂದು ಅಂಕೋಲಾ ತಾಲ್ಲೂಕಿನ ತೆಂಕಣಕೇರಿಯಲ್ಲಿ ಸ್ಥಾಪಿಸಿದರು. ತೆಂಕಣದಿಂದ ಬಂದು ನೆಲಸಿದ ಇವರ ಕೇರಿಗೆ ತೆಂಕಣಕೇರಿ ಎಂದು ಕರೆದರೆನ್ನಲಾಗಿದೆ.

ಇನ್ನೊಂದು ಹೇಳಿಕೆಯ ಪ್ರಕಾರ ಉಪನಾಡವರು ಜೈನರಾಗಿದ್ದು ಮುಂದೆ ಮಾಂಸಹಾರಿಯಾದವರು. ಈ ಮಾತನ್ನು ಇಲ್ಲಿಯ ನಾಡವರಲ್ಲಿ ಕೆಲವರು ಹೇಳುವುದುಂಟು. ಈಗ ನಾಡವರ ವಸತಿಗಳಿದ್ದ ಎಲ್ಲಾ ಊರುಗಳಲ್ಲಿಯೂ ಸಾಮನ್ಯವಾಗಿ ಜೈನರ
ಬಾವಿಗಳು, ಅಳಿಸಿ ಹೋದ ಶಿಲಾಲೇಖಗಳೂ ನೆಲದಲ್ಲಿ ಮಣ್ಣಿನ ಗಡಿಗೆಗಳೂ ದೊರೆಯುತ್ತವೆ ಹಾಗೂ ಅನೇಕ ಬಾವಿಗಳು ಜೈನರ ಬಾವಿಗಳೆಂದು ಹೇಳಲ್ಪಡುತ್ತವೆ ಮತ್ತು ನಾಡವರು ನಡೆದುಕೊಳ್ಳುವ ಗ್ರಾಮದೆವರು, ದೇವತೆಗಳ ಅಷ್ಟ ಬಂಧಾದಿ ಕಾರ್ಯಕ್ಕೆ ಈಗಲೂ ಜೈನ ಪುರೋಹಿತರನ್ನೇ ತರುತ್ತಾರೆ. ಇವೆಲ್ಲವೂ ಈ ಮೇಲಿನ ಊಹೆಗೆ ಕಾರಣವಾಗಿರಬಹುದು. ಈಗ ಆ ಸ್ಥಳಗಳಲ್ಲಿ ಜೈನರ ಒಂದೂ ಮನೆ ಇರುವುದಿಲ್ಲ. ಈ ಮೇಲಿನ ಯಾವ ಮಾತುಗಳನ್ನೂ ದೃಢೀಕರಿಸುವಂಥ ಲಿಖಿತ ಆಧಾರಗಳಾವುವೂ ಲಭ್ಯವಾಗಿಲ್ಲ.

ಸುಮಾರು ಆರುನೂರು ವರ್ಷಗಳಷ್ಟು ಹಿಂದಿನ ಕಾಲದ ಲಿಖಿತ ಆಧಾರ ಒಂದರಂತೆ, ಉಪನಾಡವರು, “ಬಾಚಣ್ಣ ವಡೇರು” ಎಂಬ ಸಂಸ್ಥಾನಿಕರಿಂದ ತೆಂಣಕೇರಿಯನ್ನು. ಉಂಬಳಿಯಾಗಿ ಪಡೆದರು ಅದರೆ ಅದರಲ್ಲಿ ಈ ಉಪನಾಡವರನ್ನು “ಅರವತ್ತು ಬಾಗಿನ ನಾಡವ”ರೆಂದು ಹೆಸರಿಸಲಾಗಿದೆ.

ಲಭ್ಯವಾದ ಇನ್ನೊಂದು ಲಿಖಿತದ ಆಧಾರದ ಪ್ರಕಾರ, ಹಿಂದಿನಕಾಲದ ಉಪನಾಡವರು ಶೃಂಗೇರಿ ಮಠಕ್ಕೆ ನಡೆದುಕೊಳ್ಳುತ್ತಿದ್ದರೆಂದು ತಿಳಿದುಬರುತ್ತದೆ. ಆ ಕುರಿತು ಮಠದಿಂದ ತಾ|| 5-3-1923ಕ್ಕೆ ಬಂದ ಪತ್ರವೊಂದು ಲಭ್ಯವಾಗಿದೆ.

ಈ ಎರಡು ಲಿಖಿತ ಆಧಾರಗಳಿಂದ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಅವುಗಳೆಂದರೆ, ಉಪನಾಡವರು ಸುಮಾರು ಆರುನೂರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲಸಿದವರು. ಆರಂಭದ ಕಾಲದಲ್ಲಿ ಅವರನ್ನು “60 ಬಾಗಿನ ನಾಡವರು” ಎಂದು ಕರೆಯುತ್ತಿದ್ದರು ಮತ್ತು ಆ ಸಮಾಜವು ಶೃಂಗೇರಿ ಮಠಕ್ಕೆ ನಡಕೊಳ್ಳುತ್ತಿತ್ತು. ಆದರೆ ಶೃಂಗೇರಿ ಮಠದವರು
ಅವರನ್ನು *ಉಪ್ಪನಾಡವರು’ ಎಂದು ಕರೆದಿದ್ದಾರೆ. ಈ “ಉಪ್ಪ ನಾಡವರು” ಅಥವಾ “ಉಪನಾಡವರು” ಎಂಬ ಹೆಸರು ಎಂದಿನಿಂದ ಬಂತು ಎಂಬುದು ತಿಳಿದು ಬಂದಿಲ್ಲ.

ಇನ್ನೊಂದು ಮಾತೆಂದರೆ, ಈ ಉಪನಾಡವರು ನೆಲೆಸಿದ ಹಳ್ಳಿಗಳಲ್ಲಿ ವಾಸಿಸುವ ಬೇರೆ ಬೇರೆ ಸಮಾಜಗಳ ಜನರೆಲ್ಲರೂ, ಅವರನ್ನು ಇಂದಿಗೂ ನಾಡವರೆಂದೇ ಕರೆಯುತ್ತಾರೆ. ಆದರೆ ಇಲ್ಲಿ ವಾಸಿಸುವ ನಾಡವರು ಮಾತ್ರ ಅವರನ್ನು ಉಪನಾಡವರೆಂದು ಪರಿಚಯಿಸುತ್ತಾರೆ ಮತ್ತು ಉಪನಾಡವರು ಶಾಲೆ-ಕಾಲೇಜುಗಳಲ್ಲಿ ತಮ್ಮ ಮಕ್ಕಳ ಜಾತಿ ಉಪನಾಡವರೆಂದೇ ಬರೆಯಿಸುತ್ತಾರೆ.

ಆದರೂ ನಾಡವರು ಮತ್ತು ಉಪನಾಡವರು ಪರಸ್ಪರ ಭೆಟ್ಟಿಯಾಗಿ ಮಾತುಕತೆ ನಡೆಸುವಾಗ ಸ್ವಜಾತಿಯವರೊಡನೆ ಮಾತಾಡುವಂತೆಯೇ ಆತ್ಮೀಯವಾಗಿ, ಅಣ್ಣಾ, ತಮ್ಮಾ, ತಂಗೀ, ಅಕ್ಕಾ, ಎಂದು ಆರಂಭಿಸಿ, ಏಕವಚನದಲ್ಲಿಯೇ ಮಾತುಕತೆ ನಡೆಸುತ್ತಾರೆ. ಆದರೆ ಮಿಕ್ಕುಳಿದ ನಾಮಧಾರಿಗಳು, ಹಾಲಕ್ಕಿ ಒಕ್ಕಲು ಕೋಮಾರಪಂತರು ಮುಂತಾದ ಜನರು ನಾಡವರನ್ನಾಗಲಿ, ಉಪನಾಡವರನ್ನಾಗಲಿ ಬಹುವಚನದಿಂದಲೇ ಮಾತಾಡಿಸುತ್ತಾರೆ. ಅದೂ ಅಲ್ಲದೆ 1883ರಲ್ಲಿ ಪ್ರಕಟವಾದ ಕೆನರಾ ಗೆಝೆಟೆಯರ್‌ದಲ್ಲಿ ನಾಡವರನ್ನು ಕುರಿತು ಬರೆಯುವಾಗ ನಾಡೋರ, ತೊರ್ಕೆ ನಾಡೋರ, ಉಪನಾಡೋರ ಎಂದು ನಾಡವರ ಸಮಾಜವನ್ನು ಉಸ್ಲೇಖಿಸಿದ್ದಾರೆ ಆದ್ದರಿಂದ ಈ ಉಪನಾಡವರು ಮತ್ತು ನಾಡವರು ಮೂಲತಃ ಒಂದೇ ಬುಡಕಟ್ಟಿನವರೆಂದು ಹೇಳಬಹುದಾಗಿದೆ. ಹಾಗೂ ಆ ಕಾಲದ ಬಲವಾದ ಸಾಮಾಜಿಕ ಕಟ್ಟುಪಾಡಿನಂತೆ ನಡೆದು ಕೊಳ್ಳುವುದರಲ್ಲಿ ಹೆಚ್ಚು ಕಡಿಮೆ ಆಗಿ ಬೇರ್ಪಟ್ಟಿರಬಹುದೆಂದು ಊಹಿಸಬಹುದಾಗಿದೆ. ಆಮೇಲೆ ನಾಡವರು ಹಾಗೂ ಉಪನಾಡವರಲ್ಲಿ ಊಟ ವಿನಿಮಯವಾಗಲಿ, ಶರೀರ ಸಂಬಂಧವಾಗಲಿ ನಿಂತುಹೊಗಿರಬಹುದಾಗಿದೆ.

ನಾಡವರು ಮತ್ತು ಉಪನಾಡವರು ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಬಂದವರಾಗಿದ್ದರೂ ಬೇರೆ ಬೇರೆ ಅವಧಿ ಯಲ್ಲಿ ಬೇರೆ ಬೇರೆ ಪರಿಸ್ಥಿತಿಯಲ್ಲಿ ಬೇರೆ ಬೆರೆ ಗುಂಪು ಕಟ್ಟಿಕೊಂಡು ಬಂದು ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದವರೆಂದು ಊಹಿಸಬೇಕಾಗುತ್ತದೆ. ಯಾಕಂದರೆ, ಆರ್ಥಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ, ರಾಜಕೀಯವಾಗಿಯಾಗಲಿ, ನಾಡವರಿಗಿಂತ ಉಪನಾಡವರು ತೀರ ಹಿಂದುಳಿದಿರುವುದು ಸ್ಪಪ್ಟವಾಗಿ ಕಾಣುತ್ತದೆ, ಅದರಲ್ಲಿಯೂ ಕುಮಟಾ ತಾಲ್ಲೂಕಿನಲ್ಲಿ ತೀರ ಹಿಂದುಳಿದಿರುವರು, ಇಲ್ಲಿಯ ನಾಡವರ ಕುಲದೇವರು ‘ವೆಂಕಟರಮಣ’ನಾದರೆ, ಉಪನಾಡವರ ಕುಲದೇವರು ‘ಶಂಕರನಾರಾಯಣ’, ಉಪನಾಡವರು ಆ ದೇವ ದಕ್ಷಿಣದಿಂದಲೇ ತಂದದ್ದೆಂದು ಹೇಳಲಾಗುತ್ತಿದೆ.

ಉಪನಾಡವರ ಸಮಾಜ ಅಂಕೋಲಾ ಮತ್ತು ಕುಮಟಾ ತಾಲ್ಲೂಕುಗಳ ಕೆಲವೇ ಹಳ್ಳಿಗಳಲ್ಲಿ ನೆಲೆಸಿ ಆಲ್ಬ ಸಂಖ್ಯಾತ ಸಮಾಜವಾಗಿರುತ್ತದೆ. ಈ ಸಮಾಜ ಅಂಕೋಲಾ ತಾಲ್ಲೂಕಿನ ತೆಂಕಣಕೇರಿ, ಬೊಬ್ರುವಾಡ, ಹೊಸಕೇರಿ ಮತ್ತು ಕುಮಟಾ ತಾಲ್ಲೂಕಿನ ವನ್ನಳಿ, ಚಿತ್ರಗಿ, ದೀವಗಿ, ಮಾದನಗೆರರಿ ಇಷ್ಟು ಹಳ್ಳಿಗಳಲ್ಲಿ ನೆಲಸಿದ್ದು ಆ ಎಲ್ಲಾ ಹಳ್ಳಿಗಳಲ್ಲಿ ಸೇರಿ ಇದ್ದ ಕುಟುಂಬ ಇಂದಿನ ಲೆಕ್ಕದಂತೆ ಕೇವಲ ಮುನ್ನೂರರಷ್ಟು ಮಂದಿ ಹಾಗು ಆ ಇಡೀ ಸಮಾಜದ ಜನಸಂಖ್ಯೆ 2500ಕ್ಕಿಂತ ಜಾಸ್ತಿ ಇರುವುದಿಲ್ಲ

ಸಾಮಾಜಿಕ. ವ್ಯವಸ್ಥೆಗಾಗಿ, ನಾಡವರಂತೆಂಯೇ ಉಪನಾಡವರು ಸಹ ಚಂದಾವರ ಸೀಮೆ, ಮಿರ್ಜಾನ್ ಸೀಮೆ, ಅಂಕೋಲಾ ಸೀಮೆ ಎಂದು ಮೂರು ಭಾಗ ಮಾಡಿಕೊಂಡಿರುವರು (ಸಾಮಾಜಿಕ ವ್ಯವಸ್ಥೆಗಾಗಿ ಇಲ್ಲಿ ಕೆಲ ಸಮಾಜದವರೂ ಈ ಸೀಮಾ ವಿಭಾಗಣೆಯನ್ನು ಅನುಸರಿಸಿದಂತೆ ತೋರುತ್ತದೆ.) ಉಪನಾಡವರ ಮುರೂ ಸೀಮೆಯ ಯಜಮಾನಿಕ್ಕೆ ತೆಂಕಣಕೇರಿಯ ಮುರೂ ಸೀಮೆ ಯಜಮಾನನಿಗಿರುತ್ತದೆ. ಅಂಕೋಲಾ ಸೀಮೆಯಲ್ಲಿ ಯಜಮಾನರೂ ಚಂದಾವರ ಸೀಮೆಗೆ 4 ಯಜಮಾನರೂ, ಮಿರ್ಜಾನ ಸೀಮೆಗೆ ಒಬ್ಬ ಯಜಮಾನ ಇರುತ್ತಾರೆ. ಇವರೆಲ್ಲ ಸೇರಿ ಸಮಾಜಕ್ಕೊಂದು ಕಟ್ಟುಪಾಡು ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿ ನಡೆಯುವ ತಂಟೆ-ತಕರಾರು, ಧಾರ್ಮಿಕ ಅಪರಾಧ, ಸಮಾಜ ರೂಢಿಯ ಉಲ್ಲಂಘನೆ ಮುಂತಾದವು ನಡೆದಾಗ ಯಜಮಾನರೇ ತೀರ್ಮಾನ ಮಾಡುತ್ತಿದ್ದರು, ಸಣ್ಣಪುಟ್ಟ ತಕರಾರುಗಳಿದ್ದಲ್ಲಿ ಆಯಾ ಸೀಮೆಯ ಯಜಮಾನರೇ ತೀರಿಸುತ್ತಿದ್ದರು. ದೊಡ್ಡ ದೊಡ್ಡ ಅಪರಾದಗಳಿದ್ದರೆ ಮೂರೂ ಸೀಮೆಯ ಯಜಮಾನರು ತೆಂಕೇರಿಯಲ್ಲಿರುವ ಆ ಸಮಾಜದ ಕುಲದೇವರಾದ ಶಂಕರನಾರಾಯಣ ದೇವಸ್ಥಾನದಲ್ಲಿ ಸಭೆ ಸೇರಿ ನ್ಯಾಯ ಬಗೆ ಹರಿಸುತ್ತಿದ್ದರು. ತಪ್ಪಿತಸ್ಥರನ್ನು ನ್ಯಾಯ ತೀರ್ಮಾನ ವಾಗುವವರೆಗೆ ಬಹಿಸ್ಕಾರದಲ್ಲಿಡುತ್ತಿದ್ದರು. ಆ ರೀತಿ ಬಹಿಷ್ಕಾರದಲ್ಲಿ ಇದ್ದವರು ಜಾತಿ ಬುದವಂತರಲ್ಲಿ ಅರ್ಜಿ ಬರಕೊಂಡು, ವಿಚುರಣೆಯಲ್ಲಿ ಬುನವಂತರು ವಿಧಿಸುವ ತಪ್ಪುಕಾಣಿಕೆಯನ್ನಾಗಲೀ, ತೀರ್ಥ ಸ್ನಾನಾದಿ ಪ್ರಾಯಶ್ಚಿತ್ತ ವನ್ನಾಗಲಿ ಒಪ್ಪಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದರು. ಮಡಿ ಮೈಲಿಗೆಯನ್ನು ಪಾಲಿಸದಿರುವುದು, ವಿಧವಾ ವಿವಾಹದಲ್ಲಿ ಕ್ರಮ ತಪ್ಪಿ ನಡೆಯುವುದು. ವ್ಯಭಿಚಾರ, ಚಪ್ಪಲಿಯಿಂದ ಹೊಡೆದಾಡುವುದು, ಹೆಂಗಸರು ಸಭೆಗಳಲ್ಲಿ ತುರುಬು ಕಟ್ಟದೆ ಮುಡಿಕಟ್ಟುವುದು, ಗಂಡಸರು ಮಾತಾಡುತ್ತ ಕುಳಿತಾಗ ಹೆಂಗಸರು ನಡುವೆ ಹಾದು ಹೊಗುವದು ಇಂಥವುಗಳೆಲ್ಲ ಧಾರ್ಮಿಕ ಅಪರಾಧಗಳುಗುತ್ತಿದ್ದುವು. ಇದರ ಹೊರ್ತು ವ್ಯಾವಹಾರಿಕ ತಂಟೆ ತಕರಾರುಗಳನ್ನೂ ಈ ಬುದವಂತರೇ ತೀರಿಸುತ್ತಿದ್ದರು. ಮದುವೆಮುಂಜಿಗಳಲ್ಲಿಯೂ ಹಬ್ಬ-ಹರಿದಿನಗಳಲ್ಲಿಯೂ ಜಾತಿ ಯಜಮಾನರ ಮಾರ್ಗದರ್ಶನಗಳಂತೆಯೇ ಕಾರ್ಯ ನಡೆಯುತ್ತಿದ್ದುವು. ಅಂಥ ಎಲ್ಲ ಕಾರ್ಯಗಳಲ್ಲಿಯೂ ಯಜಮಾನರಿಗೆ ಗೌರವ ಕಾಣಿಕೆ ಸಲ್ಲುತ್ತದೆ

ನಾಡವರು ವಾಸವಾಗಿದ್ದ ಹಳ್ಳಿಗಳಲ್ಲಿ ನಾಡವರೇ, ಗೌರವ ಸ್ಥಾನಗಳಲ್ಲಿ ಇದ್ದಂತೆ ಆ ಕಾಲಕ್ಕೆ ಉಪನುಡವರು ವಾಸವಾಗಿದ್ದ ಹಳ್ಳಿಗಳಲ್ಲಿ ಅವರೇ ಆ ಹಳ್ಳಿಗಳ ಪ್ರಮುಖರಾಗಿದ್ದರು. ಸಮಾನ ಕಾಲೀನ ಇತರ ಸಮಾಜದವರ ಕೆಳಮಟ್ಟದವರಾಗಿದ್ದರು. ಆದ್ದರಿಂದ ಆ ಹಳ್ಳಿಗಳ ತಂಟೆ ತಕರಾರು, ಪಾಲು-ಪಟ್ಟೆಗಳನ್ನು ಉಪನಾಡವರೇ ತೀರಿಸುತ್ತಿದ್ದರು. ಆಯಾ ಊರಿನ ಪ್ರಮುಖ ದೇವಸ್ತಾನಗಳ ಆಡಳಿತವು ಅವರ ಕೈಯ್ಯಲ್ಲೇ ಇದ್ದಿತ್ತು. ಈ ದೇವರುಗಳ ಪೂಜಾದಿಕಾರ್ಯಗಳನ್ನು ನಡೆಸಲಿಕ್ಕೆ ‘ಜೋಶಿ’ ಗಳನ್ನು ‘ಐಗಳ’ರನ್ನೂ ಇವರು ನೆಮಿಸಿಕೊಳ್ಳುತ್ತಿದ್ದರು. ಕೇರಿಯ “ಶಂಕರನಾರಾಯಣ” ದೇವರ ಪೂಜೆ, ನೈವೇದ್ಯ, ನಂದಾದೀಪ, ಉತ್ಸವ, ಅಮೃತಪಡಿ, ಮುಂತಾದ ಕಾರ್ಯಗಳನ್ನು ನಡೆಸಿಕೊಂಡು ಬರುತ್ತೇನೆಂದು ತೆಂಕಣಕೇರಿಯ ಲಕ್ಷ್ಮಣ ಜೋಶಿ ಮಗ ನಾರಾಯಣ ಜೋಶಿ ಎಂಬವರು ಉಪನಾಡವರಿಗೆ ಶಾಲಿವಾಹನ ಶಕ 1774ರಲ್ಲಿ ಬರಕೊಟ್ಟ ಕರಾರು ಪತ್ರ ನೋಡಲಿಕ್ಕೆ ಸಿಗುತ್ತದೆ. ಅದೇ ಪ್ರಕಾರ 1883ರಲ್ಲಿ ಹೊನ್ನಾವರ ಕೆಕ್ಕಾರ ಗ್ರಾಮದ ಹೊದ್ಕೆ ಶಿರೂರು ಐಗಳರು ಹನುಮಂತ ದೇವರ ಸವಾರಿ ಮುಂತಾದ ವ್ಯವಸ್ಥೆಯನ್ನು ವಂಶಪಾರಂಪಪರ್ಯವಾಗಿ ಸರಿಯಾಗಿ ನೋಡಿಕೊಂಡು ಬರುತ್ತೇವೆ ಎಂದು ನಾಡೋರ ಹವಾಲ್ದಾರ ತಿಮ್ಮಣ್ಣ ನಾಯ್ಕನ ಮಗ ಬೀರಪ್ಪ ನಾಯ್ಕಗೆ ದಸ್ತೇವಜು ಬರಕೊಟ್ಟ ದಾಖಲೆ ಉಂಟು.

ಇನ್ನೊಂದು ದಾಖಲೆ 27 ಡಿಶಂಬರ 1899ರ ದಸ್ತೇವಜು ತಿಮ್ಮಣ್ಣ ನಾಯ್ಕರ ಮಗ ಬೀರಪ್ಪ ನಾಯ್ಕನಿಗೆ ಐಗಳರು ಬರಕೊಟ್ಟಿದ್ದು ಅದರಲ್ಲಿ ಐಗಳರು ಹನುಮಂತ ದೇವರ ಸವಾರಿಯ ಜೊತೆಗೆ ಹೋಗಿಬಂದ ಮೇಲೆ ಸವಾರಿಯಲ್ಲಿ ಬಂದ ಹಣದ ಲೆಕ್ಕವನ್ನು ಉಪನಾಡವರಿಗೆ ಒಪ್ಪಿಸುವ ತಕರಾರು ಉಳ್ಳದ್ದಿದೆ. ‘ವರ್ಗದಾರ’ರಾದ ಉಪನುಡವರ ಪರವಾನಗಿ ಇಲ್ಲದೆ ಹನುಮಂತದೇವರ ಸವಾರಿ ಹೊರಡಿಸುವಂತಿರಲಿಲ್ಲ. ಈ ಮೇಲೆ ಹೇಳಿದ ಕೆಲಸಗಳ ಬಗ್ಗೆ ಜೊಶಿ ಮತ್ತು ಐಗಳರಿಗೆ ಇಂತಿಷ್ಟು ಭೂಮಿ ಉಂಬಳ್ಳಿ ಇಂತಿಷ್ಟು ಮೂಡೆ ಅಕ್ಕಿ ಕೊಡುವ ಮಾತು, ಆ ಕಾಗದಗಳಲ್ಲಿ ಉಂಟು. ಹನುಮಂತದೇವರ ಸವಾರಿ ತಿರುಪತಿಯವರೆಗೂ ಹೋಗಿಬರುತ್ತಿತ್ತು. ಈ ರೀತಿ ಅವರಿದ್ದ ಊರುಗಳ ಪ್ರಸಿದ್ಧ ದೇವಸ್ಥಾ ನಗಳ ಹಕ್ಕು ಉಪನಾಡವರದೇ ಇದ್ದು ಆ ದೇವಸ್ಥುನಗಳ ಮುಖ್ಯಸ್ತರೂ ಅವರೇ ಆಗಿದ್ದರು ಹಾಗು ಬಗ್ಗೆ ಚಾಚಾದಿ ಮರ್ಯಾದೆಗಳು ಅವರಿಗೆ ದೊರೆಯುತ್ತಿದ್ದವು.

ಉಪನುಡವರು ಬೊಬ್ರುದೇವರು, ಗೋಳಿಬೀರ, ಹೊನ್ನಪ್ಪದೇವರು, ಬೊಮ್ಮಯ್ಯದೇವರು, ವೆಂಕಟರಮಣ ದೇವರು ಮುಂತಾದ ದೇವರಗಳ ಭಕ್ತರೂ ಆಗಿದ್ದರು. ಆರಂಭ ಕಾಲದಲ್ಲಿ ಕೇವಲ ಉಪನಾಡವರ 60 ಕುಟುಂಬಗಳು ಬಂದಿದ್ದವೆಂದು ಪ್ರತೀತಿ ಇದೆ. ಇಲ್ಲಿ ಬಂದ ಕಾಲದಲ್ಲಿ ಅವರೆಲ್ಲರೂ ಸಾಕಷ್ಟು ಭೂಮಿಯನ್ನು ಹೊಂದಿದ್ದರು, ಅ ಕಾಲವ ನೆರೆಹೊರೆಯ ಸಮಾಜಗಳಿಗಿಂತ ಇವರೇ ಹೆಚ್ಚು ಆಸ್ತಿ ಹೊಂದಿದವರಾಗಿದ್ದರೆನ್ನಲಾಗಿದೆ. ಆ ಕಾಲಕ್ಕೆ” ಮಣ್ಣಿನ ಪಾತ್ರೆಗಳೇ ಹೆಚ್ಚಾಗಿ ಬಳಸಲ್ಪಡುತ್ತಿದ್ದುವು, ಊಟಕ್ಕೆ ಕಂಚಿನ ಬಟ್ಟಲು ಬಳಸುತ್ತಿದ್ದರು. ಹಿತ್ತಾಳೆ ಚಂಬು, ತಾಮ್ರದ ಚಂಬು ಮುಂತಾದುವು ಇರುತ್ತಿದ್ದವು. ಅನುಕೂಲಕ್ಕೆ ಅನುಸರಿಸಿ ತಾಮ್ರದ ಹಂಡೆ, ಕೊಡಪನ ಇರುತ್ತಿದ್ದುವು, ಕಟ್ಟಿಗೆಯ ಸಂದೂಕು (ಪೆಟ್ಟಿಗೆ) ಬುಗರಿಕಾಲಿನ ಮಂಚ ಅಷ್ಟಿಷ್ಟು ಬೆಳ್ಳಿ-ಚಿನ್ನುಭರಣ ಇವು ಅವರ ಆ ಕಾಲದ ಆಸ್ತಿಯಾಗಿದ್ದುವು. ಇದು ಸಮೃದ್ಧ ಆಸ್ತಿ ಎಂತಲೇ ಪರಿಗಣಿಸಲ್ಪಡುತ್ತಿತ್ತು. ಸಾಮಾನ್ಯವಾಗಿ ಅವರು ಹುಲ್ಲಿನ ಮನೆಯಲ್ಲಿ ವಾಸಿಸುತ್ತಾರೆ. ಈಗೀಗ ಹಲವರು ಹಂಚಿನ ಮನೆಗಳನ್ನು ಕಟ್ಟಿರುವರು. ಸ್ವಚ್ಛತೆಯಲ್ಲು ಹಿಂದಿದ್ದಂತೆ ಕಾಣುತ್ತದೆ.

ಈಗ ಜನಸಂಖ್ಯೆ ಹೆಚ್ಚಿದಂತೆ ಹಿಂದೆ ಇದ್ದ ಭೂಮಿ ತುಂಡು ತುಂಡಾಗಿ ಈಗ ಆ ಜನರ ಸ್ಥಿತಿ ತೀರ ಕೆಳಮಟ್ಟಕ್ಕೆ ಬಂದು ತಲಪಿದಂತೆ ತೋರುತ್ತದೆ. ಈಗ ತಿಳಿದು ಬಂದಂತೆ ಉಪನಾಡವರ ಸಮಾಜದಲ್ಲಿ ಭೂಮಿಯೇ ಇಲ್ಲದವರು ನೂರಕ್ಕೆ 2 ರಷ್ಟು, ಒಂದು ಎಕರೆಗಿಂತ ಕಡಿಮೆ ಭೂಮಿ ಉಳ್ಳವರು ನೂರಕ್ಕೆ 40 ಮಂದಿ, 1 ಎಕರೆ ಯಿಂದ 2 ಎಕರೆ ಭೂಮಿ ಉಳ್ಳವರು ನೂರಕ್ಕೆ 50 ಮಂದಿ, 2 ಎಕರೆಯಿಂದ 5-6 ಎಕರೆ ಭೂಮಿ ಇದ್ದವರು ನೂರಕ್ಕೆ 5 ಮಂದಿ ಮಾತ್ರ ಇರುವರು.

ಉಪನಾಡವರ ಗಂಡಸರು ಬಾಲಗಚ್ಚೆ ಉಡುವರು, ಮೈಮೇಲೊಂದು ಧೋತರ, ತಲೆಗೆ ಒಂದು ವಸ್ತ್ರ. ಇಷ್ಟೇ ಅವರ ಪೋಷಾಕು. ಮಲಗಲು ಒಂದು ಚಾಪೆ ಅಥವಾ ಕಂಬಳಿ ಹೊದೆಯಲು ಒಂದು ಧೋತಿ ಇಲ್ಲವೆ ಚಾದರು, ಮಳೆಗಾಲದಲ್ಲಿ ಸೂಡಿದ ಕಂಬಳಿ, ರಾತ್ರಿ ಬೆಂಕಿಯ ಶಾಕದಿಂದ ಒಣಗಿಸಿ ಅದನ್ನೆ ಅರ್ಧ ಅರ್ಧ ಹೊದೆದು, ಮಗ್ಗಲಲ್ಲಿ ೭ ಒಬ್ಬಿಬ್ಬರು ಮಕ್ಕಳ ಮಲಗಿಸಿಕೊಂಡು ಸುಖನಿದ್ರೆ ಮಾಡುವರು ಉಂಟು, ಹೆಂಗಸರು ಉಡುವುದು ಮೊಣಕಾಲ ಕೆಳಗೆ ಇಳಿಬಿಟ್ಟ ದಾಬಣ ಕಟ್ಟೆ ಸೀರೆ, ಕುಪ್ಪಸ ತೊಡುತ್ತಿದ್ದು ಸೆರಗಿನಿಂದಲೇ ಎದೆ ಮುಚ್ಚಿಕೊಳ್ಳುತ್ತಿದ್ದರು.

ಅನುಕೂಲಸ್ಥರು ಸೊಂಟಕ್ಕೆ ಬೆಳ್ಳಿಯ ಗೋಪು ಮುಂಗೈ ಬಳೆ, (ಬೆಳ್ಳಿ) ಜೋಡು ನೇವಳ ಹಾಕಿಕೊಳ್ಳುತ್ತಿದ್ದರು, ಮೀಸೆ ಚೆಂಡಿಕೆ ಬೆಳೆಸುತ್ತಿದ್ದರು. ಹೆಂಗಸರು ತುರುಬು ಕಟ್ಟುತ್ತಿದ್ದರು, ಮೂಗಿಗೆ ಚಿನ್ನದ ಮೂಗುತಿ, ಕಿವಿಗಳಿಗೆ, ಅನುಕೂಲಸ್ಥರಿದ್ದರೆ ಚಿನ್ನದ್ದು ಬಡವರಿದ್ದರೆ ಹಿತ್ತಾಳೆಯದು ವಾಲಿ, ಬುಗಡಿ, ಕರಾಪಲಿ ಸರಪಳಿ, ಬಾಬಲಿ (ಹವಳ ಪೋಣಿಸಿದ್ದು) ತೊಡುತ್ತಿದ್ದರು. ಕೈಗಳಿಗೆ ಕಾಜಿನ ಕರಿಬಳೆ, ಬೆಳ್ಳಿಯ ಹಿಂಬಳೆ, ತೋಳಬಂದಿ, ಕುತ್ತಿಗೆಗೆ ಕರಿಮಣ್ಮಿ, ಬಂಗಾರದ ಕಟ್ಟಾಣಿ, ಏಕದಾನ, ಟಕ್ಕಿಗೆಜ್ಜೆ, ಮಣಿಸರ, ಅನುಕೂಲಸ್ಥರಿದ್ದರೆ, ಪವನದ ಸರ, ಸೊಂಟಕ್ಕೆ ಬೆಳ್ಳಿಯ ಸೊಂಟ ಪೆಟ್ಟಿ (ಸಾದಾ) ಕಟ್ಟಿನ ಪಟ್ಟಿ ಹಾಕಿಕೊಳ್ಳುತ್ತಿದ್ದರು. ತುರುಬುಗಳಿಗೆ ಬಂಗಾರದ ರಾಗಟೆ, ಕೇದಿಗೆ ತಿರುಪಿನ ಹೂ ಹಾಕಿಕೊಳ್ಳುತ್ತಿದ್ದರು.

ಈ ಜನರ ಆಹಾರ ಸಾಮಾನ್ಯವಾಗಿ ಕುಚ್ಚಿಗೆ ಅಕ್ಕಿ ಮತ್ತು ಮೀನಿನ ಪಳದಿ. ವ್ರತ-ಉಪವಾಸಾದಿ ದಿನಗಳಲ್ಲಿ ಬೆಣ್ತಿಗೆ ಅಕ್ಕಿ ಅನ್ನ ಬೇಳೆ ಸಾರು ಕಾಯಿಪಲ್ಲೆ ಉಪಯೋಗಿಸುವರು. ಈ ಜನರಲ್ಲಿ ಕವಳ ತಿನ್ನುವ ಚಟ ಬಹಳ. ಬೀಡಿ ಸೇದುವವರೂ ಉಂಟು. ಜಾತಿ ಪದ್ಧತಿಯ ಪ್ರಕಾರ ಮದ್ಯ ಸೇವನೆ ನಿಷಿದ್ಧ.

ಒಟ್ಟಿನಲ್ಲಿ ಉಪನಾಡವರು ತಮ್ಮ ಪೂರ್ವಜರ ಭೂಮಿಯನ್ನೇ ಅವಲಂಬಿಸಿಕೊಂಡುಬಂದರು, ಬೇರೆ ಉದ್ಯೋಗಗಳನ್ನು ಮಾಡಲು ಮುಂದಾಗಲಿಲ್ಲ. ಜನ ಸಂಖ್ಯೆ ಬೆಳೆಯುತ್ತ ಹೋದಂತೆ ಆ ಇದ್ದ ಭೂಮಿಯನ್ನೇ ತುಂಡು ತುಂಡು ಮಾಡಿ ಹಂಚಿಕೊಳ್ಳುತ್ತ ಹೋಗಿ ಆ ತುಂಡು ಭೂವಿಗಳಿಂದ ಬಂದಷ್ಟು ಉತ್ಪನದಲ್ಲಿ ಜೀವಿಸಹತ್ತಿದರು. ಇದರಿಂದ ಬಡತನವು ತಾನಾಗಿ ಬರಹತ್ತಿತು ಅದರಿಂದಾಗಿ ಆರ್ಥಿಕವುಗಿಯೂ ಸಾಮಾಜಿಕವಾಗಿಯೂ ಬೀಳುತ್ತ ನಡೆದರು. ಈಗೀಗ ಹಲ ಕೆಲವು ತರುಣರು ಚಿಕ್ಕಪುಟ್ಟ ಬೇರೆ ಬೇರೆ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ. ಹೆಚ್ಚು ಜನ ಒಕ್ಕಲತನ ಮತ್ತು ಒಕ್ಕಲತನದ ಕೂಲಿಯನ್ನೇ ಅವಲಂಬಿಸಿರುವರು. ಈ ಜನರಲ್ಲಿ ಶಿಕ್ಷಣದ ವಿಷಯದಲ್ಲಿ ಆಸಕ್ತಿ ಇಲ್ಲ. ಆದರೆ ಅಂಕೋಲಾ ತಾಲ್ಲೂಕಿನ ಜನರು ಸುಧಾರಣೆಯಲ್ಲಿ ಮುಂದುವರಿಯುತ್ತಿರುವರು. ಇದು ಪ್ರಗತಿಪರವಾದ ಒಳ್ಳೆಯ ಹೆಜ್ಜೆ.

ಮಾಹಿತಿಯ ಮೂಲ: ವೈಜಯಂತಿ ತೃತೀಯ ಸಂಪುಟ 1986, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ (ರಿ)


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading