ಕೆಸುವಿನೆಲೆಯಲ್ಲಿ ಗೌರಿ
ಶ್ರೀಕೃಷ್ಣನ ಹಬ್ಬ ಮುಗಿಯುತ್ತಲೇ ಗೌರಿ ಗಣಪರ ಹಬ್ಬ ತೊಡಗುತ್ತದೆ. ಗೌರಿ ಮೂಲತಃ ಬೆಳೆ ದೇವತೆ. ಕರ್ನಾಟದ ಕರಾವಳಿಯಲ್ಲಿ ಬೆಳೆ ಕೊಯ್ಲಾಗುವ ಮುನ್ನ ಚವತಿಯ ಸಂದರ್ಭದಲ್ಲಿ ಈ ಬೆಳೆ ದೇವರ ಆರಾಧನೆ ನಡೆಯುತ್ತದೆ.. ಕೃಷಿಕರ ಮನೆಯಲ್ಲಿ ಕೆಸುವಿನೆಲೆಯು ಹಬ್ಬದಈ ದಿನ ಅಟ್ಟುಉಣ್ಣುವ ಆಡುಗೆಯ ಪರಿಕರ ವಷ್ಟೇ ಅಲ್ಲ. ಇದು ಸಾಕ್ಷಾತ್ ಗೌರಿಯಾಗಿ ಪೂಜೆಗೊಳ್ಳುತ್ತದೆ. ಗೌರಿ ಮಣ್ಣಿನ ಗೊಂಬೆಯಲ್ಲ, ತಾಮ್ರದ ಬೆಳ್ಳಿಯ, ಕಂಚಿನ ಕಳಸವೂ ಅಲ್ಲ. ಮೂಲತಃ ಇವಳೊಬ್ಬ ಸಸ್ಯ ದೇವತೆ. ಕೆಸುವಿನೆಲೆಯಲ್ಲಿ ಗೌರಿ ರೂಪು ಗೊಳ್ಳುತ್ತಾಳೆ. ಗಣೇಶ ಚವತಿಯ ಮುನ್ನಾ ದಿನ ಗೌರಿಚವತಿ [ತದಿಗೆ]ಯ ದಿನ ಕರಾವಳಿಯ ಅನೇಕ ಕಡೆ ಮರಸಣಿಗೆಯ ಎಲೆಯೊಳಗೆ ಗೌರಿ ಕಾಣಿಸಿಕೊಳ್ಳುತ್ತಾಳೆ. ಅಂದರೆ ಗೌರಿಯು ಈ ದಿನ ಅನೇಕ ಕಡೆ ತನ್ನ ಮೂಲ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಮುಂದಿನ ಹಂತದಲ್ಲಿ ಅವಳ ಮೂಲರೂಪ ಬದಲಾಗಿ ಮಣ್ಣು ತಾಮ್ರ ಬೆಳ್ಳಿ ಕಂಚಿನ ಕಳಸ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಇದು ಬಹುಜನರಿಗೆ ಗೊತ್ತು.
ಜನಪದ ರೀತಿಯ ಗೌರಿಯನ್ನು ತಯಾರಿಸುವ ಕ್ರಮ ಪರಿಸರ ಸ್ನೇಹಿಯಾದದ್ದು ಪರಿಸರ ಜನ್ಯವಾದದ್ದು. ವಾಸ್ತವವಾದದ್ದು. ಗೌರಿ ತದಿಗೆಯ ದಿನ ಭಕ್ತರ ಮನೆಗೆಬರುವ ಗೌರಿಯನ್ನು ತಯಾರಿಸುವಲ್ಲಿ ಮರಸಣಿಗೆ ಎಂಬ ಹೆಸರುಳ್ಳ ಕೆಸುವನ್ನು ಬಳಸಲಾಗುತ್ತದೆ. ಮರಸಣಿಗೆಯನ್ನು ಕನ್ನಡದಲ್ಲಿ ಮುಂಡಿಗಿಡ, ಕೊಂಕಣಿಯಲ್ಲಿ ಕಾಸಾಳಿ ತುಳುವಿನಲ್ಲಿ ರೆಚ್ಚೇವು ಎನ್ನುತ್ತಾರೆ. [ಕೊಲೊಕೇಶಿಯಾ ಎಸ್ಕುಲೆಂಟಾ] ಕೆಸುಗಳ ಕುಟುಂಬದಲ್ಲಿ ಇದು ಅತ್ಯಂತ ದೈತ್ಯ ಎಲೆಯ ಕೆಸುವಾಗಿದೆ. ಇಂಗ್ಲಿಷಿನಲ್ಲಿ ಕೆಸುವಿಗೆ ಆನೆಕಿವಿಯೆನ್ಮ್ನತ್ತಾರೆಯಷ್ಟೆ ಈ ಮಾತು ಮರಸಣಿಗೆ ಎಂದು ಗುರುತಿಸಲಾಗುವ ಕೆಸುವಿಗೆ ಚೆನ್ನಾಗಿ ಹೊಂದುತ್ತದೆ. ಮಳೆಯ ನೀರನ್ನುಂಡು ಪಾಗಾರದ ಮೇಲೆ ಬೆಳೆದು ನಳನಳಿಸುತ್ತಿರುವ ಔಷಧ ಸಸ್ಯಗಳೂ ಆಗಿರುವ ಹಂಸಪಾದ, ಸಂಜೀವನಿಯ ಪ್ರಭೇದವಾದ ಕಾಗೆಕಾಲು, ಸೊಣೆ[ಶ್ರಾವಣ] ಕುಡಿ ಕೆಲವು ಜರಿಗಿಡಗಳು, ಗರಿಕೆ ಈ ಮುಂತಾದ ಅಪೂರ್ವ ಸಸ್ಯಗಳನ್ನು ಮತ್ತು ತೆನೆ ಮೂಡಿ ಹಾಲು ತುಂಬಿದ ಬತ್ತದ ಇಡೀ ಸಸಿಗಳ ಕದಿರು ಮತ್ತು ಅರಸಿನ ಕೊಂಬುಗಳೊಂದಿಗೆ ಜೋಡಿಸಿ ಮರಸಣಿಗೆಯ ಎಲೆಯಲ್ಲಿಟ್ಟು ಶಂಖುವಿನ ಆಕಾರದಲ್ಲಿ ಸುತ್ತಿ ಅದುಗಟ್ಟಿಯಾಗಿ ನಿಲ್ಲಲು ಅನುಕೂಲವಾಗುವಂತೆ ಅದಕ್ಕೆ ಕಾರಿಮುಳ್ಳಿನ್ನು ಚುಚ್ಚುತ್ತಾರೆ. ಹೀಗೆ ತಯಾರಿಸಲಾಗುವ ಸಸ್ಯಶಾಮಲೆಯೇ ಗೌರಿ. ಇದೇ ಮಣ್ಣಿನ ಭೂಮಿಯ ಮಕ್ಕಳ ಸಸ್ಯ ದೇವತೆ. ಇದೇ ಮೂಲ ಗೌರಿ ಮಾತೃ ಮೂಲೀಯ ಸಂಸ್ಕೃತಿಯ ದೇವಿ ಇವಳು. ಇದು ನಮ್ಮ ಸಸ್ಯಾರಾಧನ ಸಂಸ್ಕೃತಿಗೆ ನಮ್ಮೆದುರಿಗಿರುವ ಸಾಕ್ಷ್ಯ. ಇದನ್ನು ಪೂಜಾ ಸ್ಥಾನದಲ್ಲಿಡಲಾಗುತ್ತದೆ.
ಪೂಜೆಗೊಳ್ಳುವ ಗೌರಿ ಒಬ್ಬಳಲ್ಲ, ಇಬ್ಬರು. ಅಂದರೆ ಇಲ್ಲಿ ನಂಬಿಕೆ ಕೆಲಸ ಮಾಡಿದೆ. ಒಂದು ಶುಭವಲ್ಲ ಎಂಬ ನಂಬಿಕೆಯಿಂದ ಎರಡು ಗೌರಿಯ ಎರಡು ಸಸ್ಯ ಮೂರ್ತಿಗಳು ಇಲ್ಲಿ ಸ್ಥಾನ ಪಡೆದಿವೆ. ಆದರೆ ಕೆಸುವಿನೆಲೆ ಮತ್ತು ಅದರ ಒಡಲಲ್ಲಿರುವ ಅಪೂರ್ವ ಸಸ್ಯಗಳ ಪೊತ್ತೆಯೇ ಗೌರಿ ಎಂಬ ಅರಿವಿನ ಅಂಶ ಮರೆಯಾದ ಕಾರಣ ಅಲ್ಲಿ ಇದರ ಅರಿವಿಲ್ಲದವರು ಕಾಗದದ ಮೇಲೆ ಬರೆದ ಶಿವ ಗೌರಿಯ ಚಿತ್ರ ಅಂಟಿಸುವ ಆಚರಣೆ ರೂಢಿಗೆ ಬಂದಿದೆ. ಕೆಲವು ಕಡೆ ಎರಡೂ ಉಳಿದಿವೆ. ಕೊನೆಯಲ್ಲಿ ಕಾಗದದ ಗೊಡ್ಡು ಚಿತ್ರವಷ್ಟೇ ಉಳಿಯಬಹುದು.
ಜಗತ್ತಿನಲ್ಲಿ ಮನುಷ್ಯರು ಬೆಳೆ ತೆಗೆಯುವ ಮುನ್ನ ಸ್ವತಃ ಭೂಮಿ ಬೆಳೆದ ಕೆಸುವಿನಿ ಆಹಾರದಿಂದ ಬದುಕಿದ ಜನ ಈ ಬೆಳೆಯ ಭಾಗವನ್ನೇ ಮನೆಗೆ ತಂದು ಗೌರವಿಸುತ್ತ, ಪೂಜಿಸುತ್ತ ಬಂದಿದ್ದಾರಷ್ಟೆ. ಇದರ ಜೊತೆ ಇಲ್ಲಿ ಭತ್ತದ ಗದ್ದೆಯಲ್ಲಿ ಹಾಲು ತುಂಬಿಕೊಂಡು ಬತ್ತದ ರೂಪ ಪಡೆದು ಗಟ್ಟಿಗೊಳ್ಳುತ್ತಿರುವ ಧಾನ್ಯ ದೇವತೆಯ ಪೂಜೆಯಲ್ಲದೆ, ಬೇರೇನೂ ಅಲ್ಲ. ಬೆಳೆಗೆ ಕೃತಜ್ಞತೆ ಸಲ್ಲಿಸುವ ಒಂದು ಕ್ರಮ. ತೆನೆತುಂಬಿ ತೂಗುತ್ತಿರುವ ಬತ್ತದ ಗದ್ದೆಗೆ ನಡೆಸುವ ಸೀಮಂತದ ಹಬ್ಬ. ಕಾಲಾಂತರದಲ್ಲಿ ತಾವು ಬೆಳೆದ ಬೆಳೆಯ ಜೊತೆ ತಮ್ಮ ಆರೋಗ್ಯ ಕಾಪಾಡುವ ಔಷಧ ಸಸ್ಯಗಳನ್ನು ಪೂಜೆಗೆ ಸೇರಿಸಿಕೊಳ್ಳಲಾಯಿತು. ಈ ಔಷಧ ಸಸ್ಯಗಳು ಬಸುರಿಯ ಆರೋಗ್ಯವನ್ನು ಕಾಪಾಡಬಲ್ಲ ಮನೆಮದ್ದಿನ ಪರಿಕರಗಳು. ಇವುಗಳನ್ನೂ ಇಲ್ಲಿ ಪೂಜಾರ್ಹ ಗೊಳಿಸಿಕೊಳ್ಳಲಾಯಿತು. ಹೀಗೆ ಗೌರಿ ಬೇರೆ ಯಾರೂ ಅಲ್ಲ ಭೂಲೋಕದ ಹೊಲ ಗದ್ದೆಗಳಲ್ಲಿ ನೆಲೆಸಿರುವ ಬೆಳೆ. ಗೌರಿಪೂಜೆ ಇಲ್ಲಿ, ಬೆಳೆಯ ಮುಖ್ಯವಾಗಿ ಕೆಸುವಿನ ಮತ್ತು ಭತ್ತದಾದಿಯಾಗಿ ಇತರ ಬೆಳೆಯ ಪೂಜೆ. ಇದು ಗೌರಿಹಬ್ಬದ ವಾಸ್ತವಿಕ ಮೂಲ ಆಚರಣೆ ಬಳಿಕ ಈ ಆಚರಣೆಯಲ್ಲಿಯ ಈ ಬೆಳೆಯನ್ನು ಮಾನವೀಕರಣಗೊಳಿಸಲಾಯಿತು. ಜನಪದರು ನಂಬಿದರು, ಒಪ್ಪಿಕೊಂಡರು. ಬೆಳೆಯನ್ನು ತಮ್ಮಂಥ ಹೆಣ್ಣಾಗಿ ಸ್ವೀಕರಿಸಿದರು. ಭಾವುಕರಾದ ಕೃಷಿಕರು ಕಾಲ್ಪನಿಕ ಗೌರಿಯನ್ನು ತಮ್ಮ ಮನೆ ಮಗಳೆಂದು ಭಾವಿಸಿದರಲ್ಲದೆ ತಮ್ಮ ಮನೆಗೆ ಹಬ್ಬಕ್ಕೆ ಬರುವ ಮಗಳೊಂದಿಗೆ ಆ ಗೌರಿಯನ್ನು ಹೋಲಿಸಿದರು. ಇವಳನ್ನು ಮುತ್ತೈದೆಯೆಂದು ಪರಿಗಣಿಸಲಾಯಿತು. ತಮ್ಮ ಮಗಳ ಇಷ್ಟದ ಅಡುಗೆ ಅಲಂಕಾರಗಳು ಗೌರಿಗೂ ಇಷ್ಟವೆಂದು ಬಗೆದು ಅವುಗಳನ್ನು ಗೌರಿಗೆ ಅರ್ಪಿಸಿದರು. ತಮ್ಮ ಮಗಳು ಧರಿಸುವ ಬಳೆ ಹೂವು ಕುಂಕುಮ, ಕೊಳ್‌ನುಗಳನ್ನು ಈ ಮಗಳಿಗೂ ಅರ್ಪಿಸುವ ಸಂಪ್ರದಾಯ ಮುಂದುವರಿಯಿತು ಗೌರಿಯ ಪೂಜೆಗಾಗಿ ಮುತ್ತಯ್ದೆ ಅಲಂಕಾರ ವಸ್ತುಗಳಾದ ಬಳೆ ಕೊನ್ನುಗುಲು ಕುಂಕುಮ, ಅರಶಿನ ಕಪ್ಪಿಟ್ಟು ಬುಕ್ಕಿಟ್ಟುಗಳನ್ನು ಕೂಡಿಸಿ ಇವರಿಗೆ ಪೂಜಾ ಸಾಮಗ್ರಿ ಮಾರಾಟಗಾರರು ಮೂವತ್ತು ರೂಪಾಯಿಗೆ ಒದಗಿಸತೊಡಗಿದರು. ಹೀಗೆ ಕೃಷಿಕ ಸಂಸ್ಕೃತಿಯಿಂದ ಮುತ್ತೈದೆ ಸಂಸ್ಕೃತಿಗೆ ಆಚರಣೆ ಮಾರ್ಪಾಟಾಯಿತು. ಸಸ್ಯ ದೇವತೆ ಶ್ರೀ ಗೌರಿಯಾದಳು. ಪ್ರಥಮಾಚರಣೆಯಲ್ಲಿ ವಾಸ್ತವಿಕ ಮೌಲ್ಯವಿತ್ತು, ಅರ್ಥವಿತ್ತು. ಮುಂದೆ ಆಚರಣೆಗಳಲ್ಲಿ ಅಪಮೌಲ್ಯಗಳೇ ಹೆಚ್ಚಾದವು.
ಹಿಂದೆ ಹಬ್ಬಕ್ಕೆ ಬಂದ ಮನೆಮಗಳು, ಗೌರಿಗೆ ನೀಡುವ ವಸ್ತುಗಳನ್ನು ತಾನು ಬಳಸುತ್ತಿದ್ದಳು. ಒಂದು ಕಾಲದಲ್ಲಿ ಅಲಂಕಾರ ಮೌಲ್ಯವಿರುವ ಆದರೆ ಈಗ ಆ ಮೌಲ್ಯ ಕಳೆದುಕೊಂಡಿರುವ ಈ ವಸ್ತುಗಳಲ್ಲಿ ಈಗಿನ ಮುತ್ತಯ್ದೆಯರು ಬಳಸಲಾರದ ವಸ್ತುಗಳೇ ಹೆಚ್ಚು. ಹಿಂದೆ ಕುಪ್ಪುಸ ತೊಡದ ಕಾಲದ ಮಹಿಳೆಯರು ಸೀರೆಯ ಸೆರಗನ್ನು ಹಿಂದುಗಡೆ ಬೆನ್ನಿಗೆ ಇಳಿಬಿಡದೆ ಸೆರಗನ್ನು ಕೊನ್ನುಗುಲು ಅಂದರೆ ಕೊರಳ ನುಗ ಲಿಗೆ[ದಾರ] ಸಿಕ್ಕಿಸುತ್ತಿದ್ದರು. ಆದ್ದರಿಂದ ಆಗ ಕೊನ್ನುಗಲಿಗೆ ಮಹತ್ವವಿತ್ತು ಗೌರಿಯ ಹಬ್ಬಕ್ಕೆ ತವರಿಗೆ ಬಂದ ಮಗಳು ಇವುಗಳನ್ನು ಪ್ರೀತಿಯಿಂದ ಪಡೆದು ತಾನು ಧರಿಸುತ್ತಿದ್ದಳು. ಈಗ ಅವೆಲ್ಲ ಕಸದ ಬುಟ್ಟಿಗೆ ಸೇರುತ್ತವೆ. ಆಚರಣೆಗಳು ಸಾರ್ವಕಾಲಿಕ ಮಹತ್ವನ್ನು ಪಡೆದಿರುವದಿಲ್ಲ. ಅಲ್ಲವೇ?
ಅಡುಗೆಯ ವಿಷಯದಲ್ಲಿಯೂ ಅಷ್ಟೆ. ಚವತಿಯ ಹೊತ್ತಿಗೆ ಕರಾವಳಿಯಲ್ಲಿ ಬಿತ್ತಿದ ಪೈರು ಇನ್ನೂ ಕೈಗೆ ಬಂದಿರುವದಿಲ್ಲ. ಗೌರಿಯ ತವರಿನಲ್ಲಿ ಅಂದರೆ ಕೃಷಿಕರ ಮನೆಯಲ್ಲಿ ಕೆಸುವಿನ ಸೊಪ್ಪನ್ನು ತಿಂದು ಬದುಕುವ ಕಾಲ ಅದು. ಈ ಮೊದಲು ಕೆಸುವಿನ ಸೊಪ್ಪಿಗೂ ಉಪ್ಪಿಲ್ಲದಷ್ಟು ಬಡತನವಿತ್ತು. ಇದೀಗ ಈ ಮಳೆಗಾಲದ ಬಡತನ ಕಳೆಯ ತೊಡಗಿವೆ. ಸವತೆ, ಬೆಂಡೆ, ಹೀರೆಗಳು ಮಿಡಿಬಿಟ್ಟಿವೆ. ಆ ಪ್ರಥಮ ಫಲಗಳನ್ನೆಲ್ಲ ವಿಘ್ನೇಶ್ವರನಾದ ಗಣಪತಿಗೆ ಅರ್ಪಿಸಲು ಹಾಗೂ ಗೌರಿಯನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಆಹಾರ ದೊರೆಯದ ಮಳೆಗಾಲದಲ್ಲಿ ಜನರ ನೆರವಿಗೆ ಬಂದವಳು ಈ ಕೆಸು. ಕೆಸುವು ಜಾನಪದರ ಪ್ರೀತಿಯ ತರಕಾರಿ ತಾವು ತಿನ್ನುವದನ್ನು ತಮ್ಮದೇವರಿಗೂ ಅರ್ಪಿಸುವದು ಜಾನಪದರ ಜಾಯಮಾನ. ಆದ್ದರಿಂದ ತಮಗೆ ಪ್ರಿಯವಾದ ಈ ತರಕಾರಿಯನ್ನು ಗೌರಿಗೂ ಪ್ರಿಯವಾದ ತರಕಾರಿಯೆಂದು ಇವರು ನಂಬಿಕೊಂಡಿದ್ದಾರೆ. ಆದ್ದರಿಂದ ಕೆಸುವನ್ನು ಜನಪದರು ಮಾನವೀಕರಣಗೊಂಡ ಗೌರಿಯ ನೈವೇದ್ಯಕ್ಕೆ ಯೋಗ್ಯವಾದ ತರಕಾರಿಯೆನ್ನುತ್ತಾರೆ. ತಮ್ಮ ಬೇಕು ಬೇಡಗಳನ್ನು ಇಲ್ಲಿ ಗೌರಿಗೂ ಆರೋಪಿಸಲಾಗಿದೆ. ಕೆಸುವಿನ ಎಲೆಗಳ ಆಹಾರ ಮೌಲ್ಯವನ್ನು ಅರಿತ ನಮ್ಮ ಹಿರಿಯರು ಇದಕ್ಕೆ ಧಾರ್ಮಿಕ ಮಹತ್ವವನ್ನು ತಂದುಕೊಡುವ ಸಲುವಾಗಿ ಚವತಿ ಹಬ್ಬಕ್ಕಾಗಿ ತವರಿಗೆ ಬರುವ ಗೌರಿಯ ಹಾಡಿನಲ್ಲಿ ’ಕರಿಯ ಕೆಸುವಿನ ಸೊಪ್ಪಾ ಹಸನಾಗಿ ಕೊಯ್ತಂದು ಹಸಿಯನೆ ಮಾಡೆ ಹಡದಮ್ಮ’ ಎಂದು ಗೌರಿತನ್ನ ತಾಯಿಯಲ್ಲಿ ಕೇಳಿಕೊಳ್ಳುವ ಸಂದರ್ಭದ ವರ್ಣನೆಯನ್ನು ಸೇರಿಸಿದ್ದಾರೆ. ಗೌರಿಗೆ ಕೆಸುವಿನ ಅಡುಗೆಮಾಡಿ ಬಡಿಸುತ್ತಾರೆ. ಕೆಸುವಿನ ಅಡುಗೆಯಲ್ಲಿ ಕಡ್ಲೆಕಾಳು ಮತ್ತು ಕೆಸುವಿನ ಎಲೆ ಬೆರಿಸಿದ ಸುಕ್ಕ, ಕರಿಕೆಸುವಿನೆಲೆಯ ರಾಂದಾಯಿ ಇವು ಪ್ರಮುಖವಾಗಿದೆ. ಬಡವರ ಆಹಾರವೆಂದು ಹೀಗಳೆಯಲ್ಪಟ್ಟಿರುವ ಕೀರೆಸೊಪ್ಪು ಸೊರೆಸೊಪ್ಪುಗಳ ನೈವೇದ್ಯ ಗೌರಿಗೆ ಸಲ್ಲುತ್ತದೆ. ಈ ಆಚರಣೆಯ ಹಿನ್ನೆಲೆಯನ್ನು ಗಮನಿಸಿದಾಗ ಜನಪದರು ಪ್ರಾಚೀನ ಕಾಲದಿಂದ ತಮಗೆ ಆಹಾರ ಪರಿಕರಗಳನ್ನು ನೀಡುವ ಮತ್ತು ಇತರ ಅನೇಕ ಸಂದರ್ಭಗಳಲ್ಲಿ ಜನರ ಮತ್ತು ಇತರ ಜೀವಿಗಳ ಬದುಕಿಗೆ ನೆರವಾಗುವ ಸಸ್ಯಸಂಪತ್ತನ್ನು ದೇವತಾ ಸ್ಥಾನದಲ್ಲಿಟ್ಟು ನೇರವಾಗಿ ಪೂಜಿಸಿದ್ದಾರೆಂಬ ಸತ್ಯಕ್ಕೆ ಇಲ್ಲಿ ಇದು ಒಂದು ಸಾಕ್ಷ್ಯವಾಗಿ ದೊರೆಯುತ್ತದೆ.
ಮಾಹಿತಿ: Folk Knowledge







Leave a Reply