300 ವರ್ಷಗಳ ಸಂಘರ್ಷಗಳ ತರುವಾಯ ಪಣಜಿಯಲ್ಲಿ ವಿರಾಜಮಾನಳಾಗಿದ್ದ ಕುಮಟಾದಿಂದ ಬಂದ ಮಹಾಲಕ್ಷ್ಮಿ

Posted by

·

ಈಗ ನೀವು ಸುಗ್ಗಿ ಸಂಪದ ಜಾಲತಾಣದಲ್ಲಿ ಈ ಮಾಹಿತಿಯನ್ನು ಕೇಳಬಹುದಾಗಿದೆ. 🎧

ರಾಜ್ಯದೆಲ್ಲೆಡೆ ದೇವಾಲಯಗಳಲ್ಲಿ ನವರಾತ್ರಿಯನ್ನು ಭಕ್ತಿ ಮತ್ತು ಸಂಭ್ರಮಗಳಿಂದ ಆಚರಿಸುತ್ತಾರೆ. ನವರಾತ್ರಿಯ ಉತ್ಸವವನ್ನು ಪಣಜಿಯ ಅಧಿದೇವತೆಯಾದ ಮಹಾಲಕ್ಷ್ಮಿ ದೇವಾಲಯದಲ್ಲಿ ಇತರ ಸ್ಥಳಗಳಿಗಿಂತ ಹೆಚ್ಚು ಅದ್ಧೂರಿಯಾಗಿ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಆಗಮಿಸಿ, ಪಣಜಿಯ ಅಧಿದೇವತೆಯಾಗಿ ಮೆರೆಯುತ್ತಿರುವ ತಾಯಿಗಾಗಿ ಭಕ್ತರು ನಡೆಸಿದ 300 ವರ್ಷಗಳ ಸಂಘರ್ಷದ ಒಂದು ವಿಹಂಗಮ ನೋಟ ಇಲ್ಲಿದೆ.

300 ವರ್ಷಗಳ ನಂತರ ನಿರ್ಮಾಣಗೊಂಡ ಮೊದಲ ದೇವಾಲಯ ಇದಾಗಿದೆ.

ಗೋವಾದಲ್ಲಿ ಮಹಾಲಕ್ಷ್ಮಿ ದೇವಾಲಯ ನಿರ್ಮಾಣ

ಕ್ರಿಸ್ತ ಶಕ 1569 ರಲ್ಲಿ ಪೋರ್ಚುಗೀಸ್ ಸರ್ಕಾರವು ಹೊಸ ದೇವಾಲಯಗಳನ್ನು ನಿರ್ಮಿಸಬಾರದು ಮತ್ತು ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬಾರದು ಎಂಬ ಆಜ್ಞೆಯನ್ನು ಜಾರಿಗೊಳಿಸಿತ್ತು. ಅದರಿಂದ 300 ವರ್ಷಗಳ ಅವಧಿಯಲ್ಲಿ ಗೋವೆಯಲ್ಲಿ ಒಂದೇ ಒಂದು ದೇವಾಲಯವನ್ನು ನಿರ್ಮಿಸಲು ಅವಕಾಶ ನೀಡಲಿಲ್ಲ.

ಆದರೂ, ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂಬುದನ್ನು ಅರಿತ ಪೋರ್ಚುಗೀಸ್ ಆಡಳಿತ, ಕ್ರಿಸ್ತ ಶಕ 1818 ರಲ್ಲಿ ಮಹಾಲಕ್ಷ್ಮಿ ದೇವಿಯ ಮಂದಿರ ನಿರ್ಮಾಣಕ್ಕೆ ಪರವಾನಗಿಯನ್ನು ನೀಡಿತು. ಹೀಗೆ 300 ವರ್ಷಗಳ ನಂತರ ಗೋವಾದಲ್ಲಿ ನಿರ್ಮಾಣಗೊಂಡ ಮೊಟ್ಟಮೊದಲ ಹಿಂದೂ ದೇವಾಲಯ ಇದಾಗಿದೆ.

ಕುಮಟಾದಿಂದ ಗೋವಾ ರಾಜ್ಯಕ್ಕೆ ಆಗಮಿಸಿದ ಮಹಾಲಕ್ಷ್ಮಿ

16 ನೇ ಶತಮಾನದಲ್ಲಿ ಕಾರವಾರ-ಕುಮಟಾ ಭಾಗದಿಂದ ಭಿಕ್ಷಾಟನೆಗೆಂದು ಆಗಮಿಸಿದ ಹವ್ಯಕ ಬ್ರಾಹ್ಮಣರು ಪಣಜಿಯ ಸಮೀಪದ ತಾಲೀಗಾವ್ ಎಂಬ ಹಳ್ಳಿಯನ್ನು ತಲುಪಿದರು. ಅವರು ತಾವು ಹೋದಡೆಯಲ್ಲೆಲ್ಲ ತಮ್ಮೊಡನೆ ತಮ್ಮ ಆರಾಧ್ಯ ದೇವಿಯಾದ ಲಕ್ಷ್ಮಿಯ ಅಮೃತಶಿಲೆಯ ಚಿಕ್ಕ ವಿಗ್ರಹವನ್ನು ಕೊಂಡೊಯ್ಯುತ್ತಿದ್ದರು. ತಾಲೀಗಾವ್‌ನಲ್ಲಿರುವ ವಿಠ್ಠಲ ಮಂದಿರದಲ್ಲಿ ತಂಗಿದ್ದ ಅವರಿಗೆ, ಅಲ್ಲಿನ ಜನರು ಪೋರ್ಚುಗೀಸ್ ಆಡಳಿತವು ಯಾವುದೇ ವಿಗ್ರಹಗಳನ್ನು ಇರಿಸಿಕೊಳ್ಳದಂತೆ ಆದೇಶ ಹೊರಡಿಸಿರುವುದಾಗಿ ಹೇಳಿ, ಅಲ್ಲಿಂದ ತಪ್ಪಿಸಿಕೊಳ್ಳುವಂತೆ ತಿಳಿಸಿದರು.

ಶತಮಾನಗಳ ಕಾಲ ಅಜ್ಞಾತವಾಸದಲ್ಲಿದ್ದ ವಿಗ್ರಹ

ವಿಗ್ರಹದ ಸಹಿತ ಅಲ್ಲಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬುದನ್ನು ಅರಿತ ಬ್ರಾಹ್ಮಣರು, ಪೋರ್ಚುಗೀಸ್ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಘವೇಂದ್ರ ಕಾಮತ ಮಹಾಮಾಯಿ ಎಂಬುವವರಲ್ಲಿ ಆ ವಿಗ್ರಹವನ್ನು ಅಡಗಿಸಿಟ್ಟರು. ಇಂತಹ ಅಪರಾಧಗಳಲ್ಲಿ ಸಿಕ್ಕಿಬಿದ್ದರೆ, ಪೋರ್ಚುಗೀಸರು ನೀಡುವ ಶಿಕ್ಷೆಯ ಅರಿವಿದ್ದ ಕಾಮತ ಮಹಾಮಾಯಿ ಅವರು ವಿಗ್ರಹವನ್ನು ಗೋವೆಯ ಉತ್ತರ ಗಡಿಯ ಹಳ್ಳಿಯೊಂದರಲ್ಲಿ ಅಡಗಿಸಿಟ್ಟರು. ಶತಮಾನಗಳ ಕಾಲ ಲಕ್ಷ್ಮಿಯ ವಿಗ್ರಹ ಅಲ್ಲಿಯೇ ಉಳಿಯಿತು.

ಪಣಜಿಗೆ ಆಗಮಿಸಿದ ಮಹಾಲಕ್ಷ್ಮಿ

ಕ್ರಿಸ್ತ ಶಕ 1817 ರಲ್ಲಿ ಮಹಾಲಕ್ಷ್ಮಿಯು ಕನಸಿನಲ್ಲಿ ಕಾಣಿಸಿಕೊಂಡ ನಂತರ, ನಾರಾಯಣ ಕಾಮತ ಮಹಾಮಾಯಿ ಎಂಬುವವರು ವಿಗ್ರಹವನ್ನು ತಂದು ತಮ್ಮ ಪೂರ್ವಜರ ಮನೆಯೊಂದರಲ್ಲಿ ಅಡಗಿಸಿಟ್ಟರು. ಅಲ್ಲಿಯೂ ಅದು ಸುರಕ್ಷಿತವಲ್ಲವೆಂದು ಭಾವಿಸಿದ ಹಿಂದೂಗಳೆಲ್ಲ ಸೇರಿ ವಿಗ್ರಹವನ್ನು ಪಣಜಿಯ ಪೀಪಲ್ಸ್ ಹೈಸ್ಕೂಲ್ ಸಮೀಪದ ಹುಣಸೆ ಮರದ ಕೆಳಗಡೆ ಅಡಗಿಸಿಟ್ಟರು. ಇನ್ನೂ ಸುಮ್ಮನಿರುವುದು ಸರಿಯಲ್ಲವೆಂದು ನಿರ್ಣಯಿಸಿದ ಹಿಂದೂಗಳು, ಕ್ರಿಸ್ತ ಶಕ 1818 ರಲ್ಲಿ ಕಾಮತ ಮಹಾಮಾಯಿ ಅವರ ನೇತೃತ್ವದಲ್ಲಿ ಪೋರ್ಚುಗಲ್‌ನ ರಾಜನಿಂದಲೇ ದೇವಾಲಯದ ನಿರ್ಮಾಣಕ್ಕೆ ಅನುಮತಿಯನ್ನು ಪಡೆದುಕೊಂಡರು.

200 ವರ್ಷಗಳ ಹಿಂದೆ ನಿರ್ಮಾಣಗೊಂಡ ದೇವಾಲಯ

ಹೀಗೆ 300 ವರ್ಷಗಳ ಸಂಘರ್ಷದ ಬಳಿಕ, ಕ್ರಿಸ್ತ ಶಕ 1819 ರಲ್ಲಿ ಜನರೆಲ್ಲರ ದೇಣಿಗೆಯಿಂದ ಪಣಜಿಯಲ್ಲಿ ಮಹಾಲಕ್ಷ್ಮಿಯ ಮಂದಿರವನ್ನು ನಿರ್ಮಿಸಿ, ಕಪ್ಪು ಕಲ್ಲಿನ ಚತುರ್ಭುಜ ಮಹಾಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಕ್ರಿಸ್ತ ಶಕ 1983 ರಲ್ಲಿ ಈಗಿನ ಭವ್ಯ ಮಂದಿರವನ್ನು ನಿರ್ಮಿಸಲಾಗಿದ್ದು, ದೇವಿಯ ಅಮೃತಶಿಲೆಯ ಮೂಲ ವಿಗ್ರಹವನ್ನು ಗರ್ಭಗುಡಿಯ ಸಣ್ಣ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

ಪಣಜಿ ಮತ್ತು ಸುತ್ತಮುತ್ತಲಿನ ಎಲ್ಲಾ ಸಮುದಾಯದವರು ಇಂದು ಮಹಾಲಕ್ಷ್ಮಿಯ ಬಗ್ಗೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ನವರಾತ್ರಿ ಇಲ್ಲಿನ ಪ್ರಮುಖ ಉತ್ಸವವಾಗಿದ್ದು, ಒಂಬತ್ತು ದಿನಗಳ ಕಾಲ ಪೂಜೆ, ಭಜನೆ, ಕೀರ್ತನೆ, ಮತ್ತು ಗರ್ಭಾ ನೃತ್ಯಗಳಿಂದ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ.

✍️ ವಿಘ್ನೇಶ್ವರ ಗುನಗಾ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading