ಇವರು. ಮೂಲತ: ಮಹಾರಾಷ್ಟ್ರ ಮತ್ತು ಗೋವಾದವರು. ಪಶುಪಾಲಕ ವೃತ್ತಿಯವರಾದ ಇವರು ಮಹಾರಾಷ್ಟದ ಅಜ್ಮೀರ್, ಕೊಲ್ಲಾಪುರ ಮತ್ತು ಸುತ್ತು ಮುತ್ತಲ ಪ್ರದೇಶಗಳಿಂದ ವಲಸೆ ಬಂದವರು. ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾಂ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ.

ಶಿವಾಜಿ ವಂಶಸ್ಥರೆಂದು ಹೇಳಿಕೊಳ್ಳುವ ಇವರು ಕಿವಿಗೆ ರಾಸ್ಗತಿ, ಕೊರಳಿಗೆ ಮಣಿಸರ ಮತ್ತು ರೂಪಾಯಿ ಸರ, ಕೈ ಬೆರಳಿಗೆ ತಾಮ್ರದ ಸಲಾ, ಬೆಳ್ಳಿ ಕಡಗಗಳನ್ನು ಧರಿಸುತ್ತಾರೆ. , ಅರ್ಧಚಂದ್ರಾಕಾರವಾಗಿ ತಲೆ ಬೋಳಿಸಿಕೊಂಡು ಜುಟ್ಟು ಬಿಡುವುದು ಇವರ ಸಾಂಪ್ರದಾಯಿಕ ಶೈಲಿ. ಈ ಜುಟ್ಟಿನ ಮೇಲೆ ಪೇಶ್ವೆಗಳ ಮಾದರಿಯ ಮುಂಡಾಸು ಇರುತ್ತದೆ. ಇದನ್ನು ‘ಪಾಗೋಟು’ ಎಂದು ಕರೆಯುತ್ತಾರೆ. ಹೆಂಗಸರು ಸೀರೆಯನ್ನು ಕಚ್ಚೆ ಕಟ್ಟಿಕೊಳ್ಳುವುದೇ ರೂಢಿ. ಇವರ ಭಾಷೆ ಮರಾಠಿಯ ಉಪಭಾಷೆಯಾಗಿದೆ.

ಗಜ್ಜಾಗಲಾಚ, ಜಗಾ ಕುಣಿತ, ಜಿಮ್ಮಾ ಕುಣಿತ, ಫೇರ ನೃತ್ಯಗಳು ಕಚ್ಚೆಗೌಳಿಗರ ವಿಶೇಷ ನೃತ್ಯಗಳು.


ಗಜ್ಜಾಗಲಾಚ: ಕೊಳಲುವಾದನ ಮತ್ತು ಡೋಲು ನುಡಿತಗಳು ಈ ಕುಣಿತಕ್ಕೆ ಪ್ರಮುಖ ಹಿಮ್ಮೇಳಗಳಾಗಿರುತ್ತವೆ. ಜತೆಗೆ ಶೃತಿಗಾಗಿ ಪುಂಗಿಯೂ ಇರುತ್ತದೆ. ಇವುಗಳ ನುಡಿತದೊಂದಿಗೆ ಕೃಷ್ಣ ಮತ್ತು ರಾಧೆಯರ ಹಾಡುಗಳನ್ನು ಹೇಳುತ್ತ ನರ್ತಿಸಲಾಗುತ್ತದೆ. ಇದು ಗೌಳಿಗ ಗಂಡಸರ ಮುಖ್ಯ ನೃತ್ಯಗಳಲ್ಲೊಂದು.
ಜಗಾ ಕುಣಿತ: ಹೋಳಿಹುಣ್ಣಿಮೆ, ದೀಪಾವಳಿ ಮತ್ತು ದಸರಾ ಹಬ್ಬಗಳಲ್ಲಿ ಜಗಾ ಕುಣಿತವಿರುತ್ತದೆ. ಜಗಾ ಧರಿಸಿ ಕುಣಿಯುವುದರಿಂದಲೇ ಇದಕ್ಕೆ ಈ ಹೆಸರು.
ಬೆನ್ನಲ್ಲಿ ಚಂದ್ರಾಕಾರದ ಕಸೂತಿ ಇರುವ ನೀಲಿ ವರ್ಣದ ನಿಲುವಂಗಿ, ಕಾಸೆ, ತಲೆಗೆ ಪಾಗೋಟು, ಕಾಲಿಗೆ ಗೆಜ್ಜೆ ಕೈಯಲ್ಲಿ ತಲ್ವಾರ್ ಇವು ಜಗಾ ಕುಣಿತದ ವೇಷಭೂಷಣಗಳು. ಡೋಲು ಈ ಕುಣಿತದ ಹಿಮ್ಮೇಳ ವಾದ್ಯ. ಇದರೊಂದಿಗೆ ಜಾಗಟೆಯೂ ಇರುತ್ತದೆ. ಸುಮಾರು ಹತ್ತರಿಂದ ಹದಿನೈದು ಜನ ಗಂಡಸರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಕುಣಿತದ ನಡು ನಡುವೆ ‘ಛಾಂಗ್ ಭಲಾ’ ಎನ್ನುತ್ತಿರುತ್ತಾರೆ. ಇದು ಕೂಡ ಪುರುಷರದೇ ಕುಣಿತ.
ಜಿಮ್ಮಾ ಕುಣಿತ : ಇದು ಗೌಳಿಗರ ಹೆಣ್ಣು ಮಕ್ಕಳ ಕುಣಿತ. ಇದರಲ್ಲಿ ಎರಡು, ಆರು ಅಥವಾ ಎಂಟು ಮಂದಿಯಿರುತ್ತಾರೆ. ಒಬ್ಬರೆದುರು ಇನ್ನೊಬ್ಬರು ನಿಂತು ಚಪ್ಪಾಳೆ ಕೊಡುತ್ತ ತಾಳಬದ್ಧವಾಗಿ ಸುತ್ತುತ್ತಾರೆ. ಜತೆ ಜತೆಗೆ ಹಾಡೂ ಇರುತ್ತದೆ. ಇದರಲ್ಲಿ ಇಬ್ಬರು ನಾಲ್ವರು ಆಡುವ ನೃತ್ಯಗಳೂ ಇರುತ್ತವೆ. ಭುಜದ ಮೇಲಕ್ಕೆ ಕೈಗಳನ್ನು ರೆಕ್ಕೆಯಂತೆ ಎತ್ತರಿಸಿ ಪರಸ್ಪರ ಏರಿ ಹೋಗಿ ಚಪ್ಪಾಳೆ ತಟ್ಟುವುದು, ತೊಡೆಗಳ ಮೇಲೆ ಕೈ ಅಪ್ಪಳಿಸಿ ಹಿಂದೆ ಮುಂದೆ ತೂಗುತ್ತ ಚಪ್ಪಾಳೆ ಕೊಡುವುದು ಇದರ ವೈಶಿಷ್ಟ್ಯಗಳು. ಕುಣಿತದೊಂದಿಗೆ ಬೇರೆ ಬೇರೆ ರೀತಿಯ ಹಾಡುಗಳಿದ್ದು ಅದರ ಕನ್ನಡ ಅನುವಾದ ಕೊಡಲಾಗಿದೆ –
ಬನ್ನಿರಿ ಬನ್ನಿರಿ ರುಕ್ಮಿಣಿ
ಸುತ್ತೋಣು ಸುತ್ತೋಣು ಬನ್ನಿ
ಹಸರು ಹಳದಿ ನೀಲಿ
ಸೀರಿ ಕುಪ್ಪಸಾ ತನ್ನಿ
ಫೇರ ಕುಣಿತ : ಇದು ಕೂಡ ಜಿಮ್ಮಾ ಕುಣಿತದಂತೆಯೇ ಇರುತ್ತದೆ. ಆದರೆ ಇಲ್ಲಿ ನರ್ತಕರ ಸಂಖ್ಯೆ ನಿರ್ದಿಷ್ಟವಾಗಿರುವುದಿಲ್ಲ. ಸುತ್ತುವಾಗ ಪ್ರತಿಯೊಬ್ಬರೂ ನೆಲ ಮುಟ್ಟಿ ಮುಂದೆ ಸಾಗುವುದು ಈ ನೃತ್ಯದ ಆಕರ್ಷಣೆ. ಇದರಲ್ಲಿಯೇ ‘ಸೂಪನ್ಭತ್ಯ’ ಎನ್ನುವ ಇನ್ನೊಂದು ಪ್ರಕಾರವಿದೆ. ಇದರಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಹೆಣ್ಣುಮಕ್ಕಳು ವೃತ್ತಾಕಾರವಾಗಿ ನಿಲ್ಲುತ್ತಾರೆ. ಅವರಲ್ಲಿ ಒಂದಿಬ್ಬರು ಕೈಯಲ್ಲಿ ಮೊರ ಹಿಡಿದು ಹಾಡುಹೇಳುತ್ತಾ ವರ್ತುಲದ ಮಧ್ಯೆ ಕುಣಿಯುತ್ತಿರುತ್ತಾರೆ.
ಮಾಹಿತಿ ಮೂಲ: ಕರ್ನಾಟಕ ಜನಪದ ಕಲೆಗಳ ಕೋಶ, ಸಂಪಾದಕರು: ಹಿ. ಚಿ. ಬೋರಲಿಂಗಯ್ಯ


Leave a Reply