ಕೊಮಾರಪಂತರ ಕುಲಚರಿತ್ರೆ, ಜೀವನ, ಸಂಪ್ರದಾಯ, ಆಚರಣೆ, ಸಂಸ್ಕೃತಿ

Posted by

·

ಕೊಮಾರ ಪೈಕ (ಪಂತ) :

೧. ಕ್ಷಾತ್ರಪರಂಪರೆ : ಇತ್ತೀಚಿನ ದಿನಗಳಲ್ಲಿ ಕೃಷಿಕರಾಗಿ, ಸರಕಾರಿ ಹಾಗೂ ಖಾಸಗಿ ನೌಕರರಾಗಿ. ಕೂಲಿಕಾರ್ಮಿಕರಾಗಿ, ಸಣ್ಣ ಪುಟ್ಟ ಗುತ್ತಿಗೆದಾರರಾಗಿ. ಜೀವನ ನಿರ್ವಹಿಸುತ್ತಿರುವ ಕೊಮಾರ ಪೈಕ (ಕುಮಾರ + ಪಾಯಕ)ರು ಮೂಲತಃ ಕ್ಷಾತ್ರವೃತ್ತಿಯಲ್ಲಿ ತೊಡಗಿಕೊಂಡವರು. ಕುಮಾರ > ಕೊಮಾರ + ಪಾಯಕ > ಪೈಕ ಎಂದರೆ ತರುಣ + ಸಿಪಾಯಿ, ವೀರಸೈನಿಕನೆಂದರ್ಥ, ಹೆಚ್ಚಾಗಿ ಪದಾತಿದಳದವರು. ಕೊಮಾರ ಪೈಕದಂತೆ ಹಳೇ ಪೈಕ, ಸೆಣೆ ಪೈಕ ಎಂಬ ಬೇರೆ ಬೇರೆ ) ಸಮುದಾಯಕ್ಕೆ ಸೇರಿದ ಕಾಲ್ಹಳದವರೂ ಇದ್ದಾರೆ. ಕೊಮಾರಪೈಕರ ಮಧ್ಯಮಗಾತ್ರದ, ಗಟ್ಟಿಮುಟ್ಟಾದ ಆಕರ್ಷಕ ನಿಲುವು ಇವರು ಸೈನಿಕರೆನ್ನುವುದನ್ನು ಸಾಬೀತುಪಡಿಸುತ್ತದೆ. ಇವರನ್ನು ಕುಮಾರ ಕ್ಚತ್ರಿಯರೆಂದೂ ಕರೆಯಲಾಗುತ್ತದೆ. ಮೇತ್ರಿ, ಮಹತ್ತರ, ನಾಯ್ಕ ಮುಂತಾದ ಇವರಲ್ಲಿ ಪ್ರಚಲಿತವಿರುವ ಅಡ್ಡ ಹೆಸರುಗಳು ಮುಂದಾಳತ್ವವನ್ನು ಸೂಚಿಸುತ್ತವೆ. ಕೊಮಾರ ಪೈಕರದಲ್ಲಿ ಮೇತ್ರಿ ಮನೆತನದವರು, ಹಿಂದೆ ಕುದುರೆ ಸವಾರಿಯಲ್ಲಿ ಪಳಗಿದ್ದು, ಸ್ವಾದಿ ಅರಸರ ರೆವಿನ್ಯೂ ಕಲೆಕ್ಟರರಾಗಿ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳಲಾಗುತ್ತದೆ. ಕೊಮಾರ ಪೈಕರು ವಿಜಯನಗರ, ಸ್ವಾದಿ ದೊರೆಗಳಲ್ಲಿ ಸೈನಿಕ ಸೇವೆಯಲ್ಲಿ ತೊಡಗಿಕೊಂಡ ವೀರಜನಾಂಗ, ಮೈಸೂರಿನ ಸುಲ್ತಾನರು, ಪೋರ್ತುಗೀಜರು, ಬ್ರಿಟಿಷರು ಇವರ ಆಳಿಕೆಯ ವಿರುದ್ಧ ಹೋರಾಡಿದ ಕಲಿಗಳವರು. ಕ್ರಿ. ಶ. ೧೭೬೩ ರಿಂದ ೧೭೯೯ ರ ವರೆಗೆ ನಡೆದ ಹೋರಾಟದ ಕರ್ಣಧಾರತ್ವವನ್ನು ವಹಿಸಿಕೊಂಡವ ಕೊಮಾರ ಪೈಕ ವೀರ ಹೆಂಜನಾಯಕ (ಕ್ರಿ.ಶ. ೧೭೩೬-೧೮೦೧) ಈತನು ಸೋಂದೆ ರಾಜ್ಯದ ಪಾಳೆಯಗಾರ ಕುಟುಂಬದವನೆಂದು ಹೇಳಲಾಗುತ್ತದೆ. ಈತನು ಪಂಚಮಹಲ್‌ ಎಂದು ಕರೆಯಲಾಗುವ ಗೋವೆಯ ಕೆಲವು ಭಾಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳನ್ನು ಆಕ್ರಮಿಸಿದ್ದ ನೆಂದು ತಿಳಿದು ಬರುತ್ತದೆ. ಖಡ್ಗ ವಿದ್ಯೆ, ಬಂದೂಕು ಹಾರಿಸುವುದು, ಹಾಗೂ ಮಲ್ಲಕಾಳಗದಲ್ಲಿ ಪ್ರವೀಣನೀತ; ಈಸಾಡುವುದರಲ್ಲಿ ನಿಸ್ಸೀಮ; ಮಂತ್ರ ತಂತ್ರ ವಿದ್ಯಾಪಾರಂಗತ. ಮುಸಲ್ಮಾನರು, ಬ್ರಿಟಿಷರು, ಪೋರ್ತುಗೀಜರ ವಿರುದ್ಧ ಹೋರಾಡಲು ಅಶ್ವದಳವನ್ನು ಕಟ್ಟಿ, ಅವರಿಗೆ ಸಿಂಹಸ್ವಪ್ನವಾಗಿದ್ದ. ಇವನನ್ನು ಪಂಚಮಹಲಿನ ಜನರು “ಹೆಂಜ ನಾಯಕ ಚಕಮಕಜಂಗ್‌ ಬಾಹಾದ್ದೂರ್‌” ಎಂದು ಗೌರವಿಸುತ್ತಿದ್ದರಂತೆ. ಬ್ರಿಟಿಷರು ಧೂರ್ತ ನಯದಿಂದ ಇವನ ಸ್ನೇಹ ಸಂಪಾದಿಸಿ ಸಂಧಾನ ಮಾಡಿಕೊಂಡು, ಕ್ರಮೇಣ ಇವನ ಉತ್ಕರ್ಷವನ್ನು ಸಹಿಸಲಾಗದೆ. ಈತ ಕಾಳಿನದಿಯನ್ನು ಈಸಾಡಿ ದಾಟುತ್ತಿರುವಾಗ ಇವನ ಮೇಖೆ ಗುಂಡುಹಾರಿಸಿ. ಇವನನ್ನು ಕಪಟತನದಿಂದ ಕೊಂದರಂತೆ. ಇವನ ಸ್ಮಾರಕವು ಕೋಡಿಭಾಗದಲ್ಲಿ ಕಾರವಾರ ಗೋವೆಯ ಹೆದ್ದಾರಿಯ ಮೇಲಿದೆ. ಅನಂತರಿನ ದಿನಗಳಲ್ಲಿ ಕೊಮಾರ ಪೈಕರು ಬ್ರಿಟಿಷರಿಗೆ ಶರಣಾಗಿ, ಅವರ ದಂಡಿನಲ್ಲಿ ಸೈನಿಕರಾಗಿ ಸೇವೆಸಲ್ಲಿಸಿದರು. ಕೊಮಾರ ಪೈಕರ ಕೆಲವು ಕುಟುಂಬಗಳಲ್ಲಿ ಅವರ ಕ್ಷಾತ್ರ ವೃತ್ತಿಯನ್ನು ಬಿಂಬಿಸುವ ಆಯುಧಗಳಿವೆ; ಯುದ್ಧದಲ್ಲಿ ಇವರು ತೋರಿದ ಸಾಹಸಕ್ಕೆ ನೀಡಿದ ಉಂಬಳಿಗಳಿವೆ.

೨. ಮತಪಂಥ : ಕ್ಷಾತ್ರ ವೃತ್ತಿಯನ್ನವಲಂಬಿಸಿದ ಕೊಮಾರ ಪೈಕರು ಕಲಾದಗಿಯ ಕುಮಾರ ಸ್ವಾಮಿಯಿಂದ ವೀರಶೈವ ದೀಕ್ಷೆ ಪಡೆದು, ಕೋಮಾರ ಪಂತರಾದರೆಂದು ಹೇಳಲಾಗುತ್ತದೆ. ಕುಮಾರ > ಕೊಮಾರ + ಪಂಥ > ಪಂತ ಎಂದರೆ ಕುಮಾರ ಸ್ವಾಮಿಯ ಪಂಥದವರು, ಅವನ ಅನುಯಾಯಿಗಳು ಎಂದರ್ಥ. ಕರಾವಳಿಯಲ್ಲಿ ಸೆಟ್‌ಪಂತ್‌, ಗೌಡ್‌ಪಂತ್‌, ಕೊಮಾರಪಂತ್‌ ಎಂಬ ಹೆಸರುಗಳು ಚಾಲ್ತಿಯಲ್ಲಿವೆ. ಕೆಲವು ಕೊಮಾರ ಪಂತರು, ಅಮದಳ್ಳಿ, ಸಿದ್ದರದಲ್ಲಿಯ ಲಿಂಗಾಯತ ಜಂಗಮರಿಗೆ ಇಂದಿಗೂ ತಮ್ಮ ಭಕ್ತಿನಿಷ್ಠೆಯನ್ನು ವ್ಯಕ್ತಪಡಿಸುವುದಿದೆ. ಬಿಜ್ಜಳನ ಸೈನಿಕರು
ಚೆನ್ನಬಸವಣ್ಣನನ್ನು ಬೆನ್ನುಹತ್ತಿದಾಗ ಕೊಮಾರ ಪೈಕ ಯುವಕರು ಅವನಿಗೆ ರಕ್ಷಣೆ ಕೊಟ್ಟು, ಅವನೊಡನೆ ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಬಂದು ನೆಲಸಿ, ಕ್ರಮೇಣ ಮುಂದೆ ಪಶ್ಚಿಮ ಕರಾವಳಿಯೆಡೆ ಪಸರಿಸಿ, ಗೋವಾ, ಕಾರವಾರ, ಅಂಕೋಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದರೆಂದು ಹೇಳಲಾಗುತ್ತದೆ. ಹೆಂಜ ನಾಯಕನು ಉಳವಿಯ ಚೆನ್ನಬಸವೇಶ್ವರ ಗುಡಿಗೆ ತೂಗು ಹಾಕಿದ ಗಂಟೆಯಿದೆ. ಉಳವಿಯ ಚೆನ್ನಬಸವೇಶ್ವರನ ಉತ್ಸವ ಸಮಯದಲ್ಲಿ ಕೋಡಿಭಾಗದ ಮೇಶ್ರಿ ಮನೆತನದವರಿಗೆ ಈಗಲೂ ಪ್ರಸಾದ ಸಲ್ಲುತ್ತದೆ. ಕೊಮಾರ ಪಂತರು ಸುಗ್ಗಿಯ ಕಳದಲ್ಲಿ ಮಾದೇವರಾಯ, ಬಸವೇಶ್ವರಾಯರನ್ನು ಪ್ರಥಮವಾಗಿ ಸ್ತುತಿಸುತ್ತಾರೆ. ಇವೆಲ್ಲ ಸಂಗತಿಗಳು ಇವರ ವೀರಶೈವ ಪರಂಪರೆಯನ್ನು ಸೂಚಿಸಿದರೂ, ಇಂದು ಕೊಮಾರ ಪಂತರು, ವೀರಶೈವ ಮತಾವಲಂಬಿಗಳಾಗಿಲ್ಲ. ಇವರು ಕಲಬುರ್ಗಿಯಿಂದ ಗೋವಾ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದರೆಂಬ ಹೇಳಿಕೆಯೂ ಇದೆ. ಲಿಂಗಾಯತ ಮತಾವಲಂಬಿಗಳಾದ ಇವರ ಪೂರ್ವಜರು ಕರಾವಳಿಗೆ ವಲಸೆ ಬಂದ ಮೇಲೆ, ಕರಾವಳಿಯ ಟೊಟೆಮ್‌ ಸಂಸ್ಕೃತಿಗೆ ಸೇರಿದ ಹೆಣ್ಣನ್ನು ಮದುವೆಯಾಗಿ, ಮೀನ ಮಾಂಸಗಳನ್ನು ತಿಂದು, ತಾಳೆಯ ಮರದಿಂದ ಸೇಂದಿಯನ್ನು ತೆಗೆದು, ವೀರಶೈವ ಧರ್ಮಕ್ಕೆ ವಿರುದ್ಧವಾದ ಕಾರ್ಯವನ್ನೆಸಗಿ ಅಧರ್ಮದಿಂದ ಬಹಿಷ್ಕ್ರತತರಾದಂತಿದೆ. ಹೀಗಾಗಿ ಇವರಲ್ಲಿ ವೀರಶೈವರಿಗೆ ಸಹಜವಾದ ಗುರು, ಲಿಂಗ, ಜಂಗಮ ನಿಷ್ಠೆಯಾಗಲಿ, ವಿಭೂತಿ ಲೇಪನ, ಲಿಂಗಧಾರಣೆ ಕಂಡುಬರುತ್ತಿಲ್ಲ. ಇಂದು ಕೊಮಾರ ಪಂತರು ವೈದಿಕ ಧರ್ಮಾನುಯಾಯಿಗಳಾಗಿದ್ದಾರೆ. ಇವರು ತಮ್ಮನ್ನು ಕ್ಷತ್ರಿಯ ಕೊಮಾರ ಪಂತರೆಂದು ಕರೆದುಕೊಳ್ಳುತ್ತಿದ್ದರೂ, ಕ್ಷತ್ರಿಯೋಚಿತವಾಗಿ ಇವರು ಜನಿವಾರ ತೊಡುವುದಿಲ್ಲ. ಆದರೆ ಇವರಿಗೆ ಜನಿವಾರ ತೊಡುವ ಅಧಿಕಾರವಿದೆಯೆಂದು ಶಿವಾನಂದ ಮಹಾರಾಜರು ಹೇಳಿ ಕಾರವಾರದವರೊಬ್ಬರಿಗೆ ಜನಿವಾರ ತೊಡಿಸಿದ ಸಂಗತಿಯನ್ನು ಕೆಲವರು ಹೇಳುತ್ತಾರೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೊಮಾರ ಪಂತರನ್ನು ಶೂದ್ರರೆಂದು ಪರಿಗಣಿಸಲಾಗುತ್ತದೆ.

೩. ನೆಲೆ : ಜನಸಂಖ್ಯೆ : ಇವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ, ಅರ್ಗಾ, ಅಮದಳ್ಳಿ, ಕಡವಾಡ, ಶಿರವಾಡ, ಸದಾಶಿವಗಡ, ಮುಡಗೇರಿ, ಹಳಗಾ, ಉಳಗಾ, ಹಣಕೋಣ, ಕದ್ರಾ, ಮಾಜಾಳಿ, ದೇವಭಾಗ್‌, ಅಂಗಡಿ, ಹೊಸಾಳ, ದೊಡ್‌ಭಾಗ್‌, ಹೊಸಪಟ್ಟಣ, ದುಮನಸಿಟ್ಟಾ, ಸಣ್‌ಮುಡಗೇರಿ, ನಚ್ಕನ್‌ಭಾಗ್‌, ಕೋಡಿಭಾಗ್‌, ಗಾಂವ್‌ಗೋರಿ, ಬಿಡ್ತುಭಾಗ್‌, ವಾಘವಾಡ, ಕಣಸಗಿರಿ, ಕಾರ್ಗೆಜೂಗ್‌, ಹಳಗೆಜೂಗ್‌, ಬಸುಣಗಾ, ಬಾಳ್ನಿ, ಬೈರೆ, ಗೋಟೆಗಾಳಿ, ಮಲ್ಲಾಪುರ, ದೇವಳಮಕ್ಕಿ, ಕಿನ್ನರ, ಸಿದ್ದರ, ಅಟ್ಟುನಾರ್‌, ಕೆರೋಡಿ, ವೈಲ್‌ವಾಡಾ, ಬೇಳೂರ್‌, ಹಾಗೂ ಅಂಕೋಲಾ ತಾಲೂಕಿನ ಹಾರವಾಡಾ, ಅವರ್ಸಾ, ಹಟ್ಟಿಕೇರಿ, ಬೇಲೆಕೇರಿ, ಭಾವಿಕೇರಿ, ಅಲಗೇರಿ, ಬಾಳೆಗುಳಿ, ಸಿರಕುಳಿ, ಹೊನ್ನೆಕೇರಿ, ಕುಂಬಾರಕೇರಿ, ತೆಂಕಣಕೇರಿ, ಬಬ್ರುವಾಡ, ಕೆರೆಕಂಟ, ಸುಂಕಸಾಳ ಈ ಮುಂತಾದ ಹಳ್ಳಿಗಳಲ್ಲಿ ನೆಲೆಸಿರುತ್ತಾರೆ. ಕುಮಟಾ. ಹೊನ್ನಾವರ, ಶಿರಸಿ, ಯಲ್ಲಾ ಪುರ, ದಾಂಡೇಲಿ, ಜೊಯಡಾಗಳಲ್ಲಿಯೂ ಅಲ್ಪ ಸ್ವಲ್ಲ ಪ್ರಮಾಣದಲ್ಲಿದ್ದಾರೆ. ಕರ್ನಾಟಕದ ಹೊರಗೆ ಗೋವಾದಲ್ಲಿಯೂ ಇವರ ನೆಲೆಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರ ಸಂಖ್ಯೆ ಸುಮಾರು ಅಯ್ವತ್ತೈದು ಸಾವಿರದಷ್ಟಾಗಬಹುದು.

೪. ಆಡಳಿತ ವ್ಯವಸ್ಥೆ : ಕೊಮಾರ ಪಂತರು ತಾವು ನೆಲೆಸಿರುವ ಗೋವಾ ರಾಜ್ಯದ ಪೋಂಡಾದಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟೆಯ ವರೆಗಿನ ಪ್ರದೇಶವನ್ನು ಹಿಂದೆ ಬಾಡಮಹಲ್‌, ಶಿವೇಶ್ವರ ಮಹಲ್‌, ಮಡಗೇರಿ ಮಹಲ್‌, ಕಡವಾಡ ಮಹಲ್‌. ಅಂಕೋಲಾ ಮಹಲ್‌ ಹೀಗೆ ಪಂಚ ಮಹಲುಗಳಲ್ಲಿ ವಿಂಗಡಿಸಿಕೊಂಡಿದ್ದರು. ಪಂಚಮಹಲುಗಳ ಅಧೀಶನಿಗೆ ಕಳಸನೆಂದು ಕರೆಯುತ್ತಿದ್ದರು. ಕಳಸನಿರುವುದು ಕಾರವಾರದಲ್ಲಿ. ಈತನ ಕೆಳಗೆ ಒಂದೊಂದು ಮಹಲಿಗೆ ಹಾಗೂ ಗ್ರಾಮಕ್ಕೆ ಒಬ್ಬೊಬ್ಬ ಬುದುವಂತನಿರುತ್ತಿದ್ದನು. ಇವರ ಹೊರತಾಗಿ ಮೇತ್ರಿ, ಪಡೇದಾರ, ಚೌಗುಲೆ, ಮುಂತಾದ ಹಕ್ಕುದಾರರಿರುತ್ತಿದ್ದರು. ಸಭೆ ಸಮಾರಂಭಗಳನ್ನು ಕರೆಯಲು ಕೋಲಕಾರರಿರುತ್ತಿದ್ದರು.
ಗ್ರಾಮ ಮಟ್ಟದ ತಂಟೆ ತಕರಾರುಗಳನ್ನು ಗ್ರಾಮ ಬುದುವಂತನು ಇತರ ಹಕ್ಕುದಾರರ ಸಹಾಯದಿಂದ ತೀರಿಸುತ್ತಿದ್ದನು. ಅವನಿಂದ ನ್ಯಾಯ ನಿಖಾಲೆಯಾಗದಿದ್ದಲ್ಲಿ ಮಹಲು ಮಟ್ಟದಲ್ಲಿ ‘ಕಳಸ’ ನ್ಯಾಯ ನಿರ್ಣಯವನ್ನು ಕೊಡುತ್ತಿದ್ದನು. ಕಳಸನಿಂದಲೂ ಬಗೆಹರಿಯದ ಸಮಸ್ಯೆಗಳನ್ನು ಶೃಂಗೇರಿ ಮಠದ ಸ್ವಾಮಿಗಳು ಕೊನೆಗೊಳಿಸುತ್ತಿದ್ದರು. ಜಾತಿಯ ಸಭೆ ಸಮ್ಮೆಲನಗಳಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕಲಾಪಗಳಲ್ಲಿ ಜಾತಿಯ ಮುಖಂಡರಿಗೆ, ಹಕ್ಕುದಾರರಿಗೆ ಅವರವರ ಅಂತಸ್ತಿಗೆ ತಕ್ಕ ಸ್ಥಾನಮಾನ ಮರ್ಯಾದೆಗಳು ಸಲ್ಲುತ್ತಿದ್ದವು. ಕ್ರಮ ವೃತ್ಯಯವಾದಲ್ಲಿ ಜಗಳಕ್ಕೆ ಕಾರಣವಾಗುತ್ತಿತ್ತು. ಈ ಬಗೆಯ ಜಾತಿ ಸಂಘಟನಾ ವ್ಯವಸ್ಥೆಯಿಂದು ಸಂಪೂರ್ಣ ಶಿಥಿಲವಾಗಿ, ಕಳಸ, ಬುದುವಂತ, ಮೇತ್ರಿಯರ ತೀರ್ಮಾನಗಳು ಮೌಲ್ಯಕಳೆದುಕೊಳ್ಳಹತ್ತಿವೆ.

೫. ವಸತಿ ವ್ಯವಸ್ಥೆ : ಕಡುಬಡವರಾದ ಇವರಲ್ಲನೇಕರ ಮನೆಗಳಿಗೆ ಭದ್ರವಾದ ನೆಲಗಟ್ಟಿಲ್ಲ. ಸುತ್ತಲೂ ಬಿದಿರಿನ ತಟ್ಟಿ, ತೆಂಗಿನ ಗಳಗಳಿಂದ ಮರೆಮಾಡಿದ ಇಲ್ಲವೆ ಮಣ್ಣಿನ ಗೋಡೆಗಳ ಮೇಲೆ ಹುಲ್ಲಿನ ಮೇಲ್ಚಪ್ಪರವುಳ್ಳ ಮನೆಗಳಲ್ಲಿ ಇವರು ವಾಸಿಸುತ್ತಾರೆ. ಮನೆಯ ಒಂದು ಬದಿಗೆ ಕೋಳಿಗಳ ಗೂಡಿರುತ್ತದೆ. ಮನೆಯ ಪಕ್ಕದಲ್ಲಿ ದನಗಳ ಕೊಟ್ಟಿಗೆಯಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸುಧಾರಣೆಯ ಗಾಳಿ ಬಿಸಿದಲ್ಲಿ, ಅನುಕೂಲಸ್ಥರಾದವರು ಕಲ್ಲಿನಿಂದ ಕಟ್ಟಿದ ಮಹಡಿಯುಳ್ಳ ಹಂಚಿನ ಇಲ್ಲವೆ ತಾರಸಿಯ ಮನೆಗಳಲ್ಲಿ ವಾಸಿಸುತ್ತಾರೆ. ಇಂಥವರ ಸಂಖ್ಯೆ ದಿನಗಳುರುಳಿದಂತೆ ಹೆಚ್ಚಾಗುತ್ತಲಿದೆ. ಹುಲ್ಲಿನ ಗುಡಿಸಲುಗಳು ಕಡಿಮೆಯಾಗತೊಡಗಿವೆ.

೬. ಆಹಾರ: ಇವರ ಮುಖ್ಯ ಆಹಾರ ಅಕ್ಕಿ, ರಾಗಿ, ಮೀನ ಮತ್ತು ಮಾಂಸ. ಹಸಿರು ಕಾಯಿಪಲ್ಲೆ ಬೇಳೆಕಾಳುಗಳನ್ನು ಬಳಸುವ ವಾಡಿಕೆ. ತೆಂಗಿನಕಾಯಿಯ ಬಳಕೆಯೂ ಇದೆ. ನಿತ್ಯ ಮೂರು ಊಟ ಮಾಡುವ ರೂಢಿಯಿದೆ. ಒಪ್ಪತ್ತು ಊಟ ಮಾಡುವ ತೀರ ಬಡವರೂ ಹಲವರಿದ್ದಾರೆ. ರುಚಿಕಟ್ಟಾದ ತಿಂಡಿ, ತಿನಿಸುಗಳನ್ನು ನಿತ್ಯ ಮಾಡುವುದು ಕಡಿಮೆ. ಹಬ್ಬ ಹರಿದಿನಗಳಲ್ಲಿ ಪಾಯಸ, ಒಡೆ, ಕಡುಬು, ದೋಸೆ, ಚಕ್ಕುಲಿ ಮುಂತಾದ ಕಜ್ಜಾ ಯಗಳನ್ನು ಮಾಡುತ್ತಾರೆ. ಶ್ರೀಮಂತರಾದವರು, ನಾಗರಿಕತೆಯ ಸಂಪರ್ಕವುಳ್ಳವರು ರುಚಿಕಟ್ಟಾದ ಆಧುನಿಕ ತಿಂಡಿ ತಿನಿಸುಗಳನ್ನು ಮಾಡುತ್ತಾರೆ.

೭. ಉಡುಗೆ – ತೊಡುಗೆ : ವಿವಾಹಿತ ಹೆಂಗಸರು ಪಂಚಕಾಸದಲ್ಲಿ ಅಂಚುಳ್ಳ ಸೀರೆಯನ್ನುಡುತ್ತಾರೆ. ಮಂಡೆ ಬಾಚಿ, ತುರುಬು ಕಟ್ಟಿ ಹೂಮುಡಿಯುತ್ತಾರೆ. ಅಡ್ಡಪಟ್ಟೆಯಲ್ಲಿ ಕುಂಕುಮವಿಡುತ್ತಾರೆ. ದಾರಿಗುಂಡು ಎರಡು ತಾಳಿಯಿರುವ ಅಯ್ದೆಳೆಯಿರುವ ಕರಿಮಣಿಸರವನ್ನು ತೊಡುತ್ತಾರೆ. ಕೈಗೆ ಹಸಿರು ಇಲ್ಲವೆ ಕರಿಯ ಕಾಜಿನ ಬಳೆ, ಬೆಳ್ಳಿಯ ಕಡಗಗಳನ್ನು ಧರಿಸುತ್ತಾರೆ. ಮೂಗಿಗೆ ಮೂಗುತ್ತಿ, ಕಿವಿಗೆ ಕುಡಕ, ಕಾಲ್ಬೆರಳಿಗೆ ಉಂಗುರ ತೊಡುತ್ತಾ ರೆ. ಈ ಬಗೆಯ ಉಡುಗೆ ತೊಡುಗೆಗಳ ನಿರ್ಬಂಧ ಅವಿವಾಹಿತರಿಗಿಲ್ಲ. ವರ್ತಮಾನದಲ್ಲಿ ಮದುವೆಯಾದವರೂ ಸಹ ಈ ಕಟ್ಟಳೆಯನ್ನು ಪಾಲಿಸುವುದಿಲ್ಲ. ಮುಂದುವರಿದ ಇತರ ಮಹಿಳೆಯರಂತೆ ಸಹ ಈ ಕಟ್ಟಳೆಯನ್ನು ಪಾಲಿಸುವುದಿಲ್ಲ. ಶ್ರೀಮಂತ ಹೆಂಗಸರು ಕೈಗೆ ಬಂಗಾರದ ಕಡಗ, ತೋಳಬರದಿ, ಕಿವಿಗೆ ಕರಾಪ್ಲಿ, ಮುಗ್ಳು, ಬಾಬ್ಲಿ, ಕೊರಳಿಗೆ ವಬ್ರತಿಕ್ಕಿ, ಗೆಜ್ಜೆ ತಿಕ್ಕಿ, ಏಕದಾನಿ, ಪಾವ್ನಸರಗಳನ್ನು ಧರಿಸುತ್ತಾರೆ. ಹಳ್ಳಿ ಗಾಡಿನಲ್ಲಿ ವಾಸಿಸುವ ಗಂಡಸರು ಕಚ್ಚೆ ರುಮಾಲನ್ನು ಧರಿಸಿದರೆ. ಪಟ್ಟಣ ಸಂಪರ್ಕವುಳ್ಳ ವರು ಹೆಚ್ಚಾ ಗಿ ಪಂಚಕಾಸದಲ್ಲಿ ಮೊಳಕಾಲವರೆಗೆ ದೋತರ, ಅಂಗಿ, ಕೋಟು, ತಲೆಗೆ ಬಿಳಿ ಇಲ್ಲವೆ ಕೆಂಪು ರುಮಾಲು, ಕಿವಿಗೆ ಗೂಡುಮುರು ಧರಿಸುವ ವಾಡಿಕೆ. ಈಗ ಈ ಉಡುಗೆ ತೊಡುಗೆಗಳ ಸ್ಥಾನವನ್ನು ಆಧುನಿಕ ಉಡುಗೆಗಳು ಆಕ್ರಮಿಸಿವೆ.

೮. ಉದ್ಯೋಗ – ವ್ಯವಸಾಯ ಮತ್ತು ಶಿಕ್ಷಣ : ಒಂದು ಕಾಲಕ್ಕೆ ಭೂಮಾಲಿಕತ್ವವನ್ನು ಹೊಂದಿದ ಇವರು, ವಿಲಾಸಜೀವನಕ್ಕೆ ತುತ್ತಾಗಿ, ಸಾಲಮಾಡಿ ಸಾಹುಕಾರನಿಗೆ ತಮ್ಮ ಭೂಮಿಯನ್ನು ಒತ್ತೆಯಿಟ್ಟು ತಮ್ಮ ಭೂ ಮಾಲಿಕತ್ವವನ್ನು ಕಳೆದುಕೊಂಡ ಹಲವಾರು ಉದಾಹರಣೆಗಳು ದೊರಕುತ್ತವೆ. ಇಂದು ಉಳುವವನೇ ಹೊಲದೊಡೆಯನೆನ್ನುವ ಕಾನೂನು ಬಂದ ಪ್ರಯುಕ್ತ ಗೇಣಿದಾರರೆಲ್ಲ ಭೂಮಾಲಿಕರಾಗಿ, ಬೆವರಿಳಿಸಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಚಿಕ್ಕಪುಟ್ಟ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಸಣ್ಣ ಪುಟ್ಟ ಸರಕಾರಿ ಹಾಗೂ ಖಾಸಗಿ ನೌಕರರಾಗಿ ಸೇವೆ ಸಲ್ಲಿಸಿದರೆ, ಕ್ವಚಿತ್ತಾಗಿ ಕೆಲವರು ಒಳ್ಳೊಳ್ಳೆ ಸರಕಾರಿ ಹಾಗೂ ಖಾಸಗಿ ಹುದ್ದೆಗಳಲ್ಲಿದ್ದು ಸ್ಥಿತಿವಂತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕಾರ್ಮಿಕರು. ಹಲವರು ಅರಣ್ಯ ಗುತ್ತಿಗೆದಾರರಲ್ಲಿ ಮರಕಡಿಯುವ, ಕಟ್ಟಿಗೆ ಕೊರೆಯುವ ಕಾರ್ಯದಲ್ಲಿ ನಿರತರಾದರೆ ಮತ್ತೆ ಕೆಲವರು ಕೂಲಿನಾಲಿ ಮಾಡಿ ಹೊಟ್ಟೆ ಹೊರಕೊಳ್ಳುವ ಕಡುಬಡವರು. ಉದ್ದಿಮೆದಾರರ ಸಂಖ್ಯೆ ತೀರ ಕಡಿಮೆ. ಉದ್ಯೋಗ ವ್ಯವಸಾಯಗಳನ್ನು ಕಲ್ಪಿಸಿಕೊಡುವ ಇವರದೇ ಆದ ಸಂಘಸಂಸ್ಥೆಗಳಿಲ್ಲ. ಶ್ರಮಜೀವಿಗಳಾದ ಇವರಲ್ಲಿ , ವಿದ್ಯಾವಂತರ ಸಂಖ್ಯೆ ಸಾಕಷ್ಟಿಲ್ಲ. ಇವರ ಸಾಕ್ಷರತಾಪ್ರಮಾಣ ನೂರಕ್ಕೆ ಅರವತ್ತನ್ನು ದಾಟಲಾರದು. ಉನ್ನತ ಶಿಕ್ಷಣ ಹಾಗೂ ಹುದ್ದೆ ಪಡೆದವರ ಸಂಖ್ಯೆ ತೀರ ಕಡಿಮೆ. ಈ ಸಮಾಜದಲ್ಲಿ ಈ ವರೆಗೆ ಯಾರೊಬ್ಬರೂ ಶಾಸಕ ಇಲ್ಲವೆ ಸಂಸತ್‌ ಸದಸ್ಯರಾಗಿ ಸೇವೆ ಸಲ್ಲಿಸಿಲ್ಲ. ಹೀಗಾಗಿ ರಾಜಕೀಯದಲ್ಲಿಯೂ ಇವರು ತೀರ ಹಿಂದಿದ್ದಾರೆ. ಇವರನ್ನು ಬಹುಕಾಲದವರೆಗೆ ಮುಂದುವರಿದವರ ಯಾದಿಯಲ್ಲಿ ಸೇರಿಸಿದ್ದರ ಪ್ರಯುಕ್ತ ಇವರ ಉತ್ಥಾನಕ್ಕೆ ಸರಕಾರದ ನೆರವು ಲಭ್ಯವಾಗದೆ ಇವರು ಇನ್ನ ಷ್ಟು ಹಿಂದುಳಿಯುವಂತಾಯ್ತು.

೯. ಕುಲ, ಘರವೈ > ಗರವೈ : ವೈ ದಿಕ ಗೋತ್ರ ಪದ್ದತಿಯಾಗಲಿ, ಅವೈದಿಕ ಬಳಿ ಪದ್ದತಿಯಾಗಲಿ ಇವರಲ್ಲಿದ್ದಂತಿಲ್ಲ. ಇವರಲ್ಲಿ ಕುಲ ಇಲ್ಲವೆ ಘರವೈ > ಗರವೈ ಗಳು, ಬಳಿ ಹಾಗೂ ಗೋತ್ರ ಗಳ ಸ್ಥಾನದಲ್ಲಿವೆ, ಕಾಣಕೋಣದ ಮಲ್ಲಿಕಾರ್ಜುನ. ಮಾಜಾಳಿಯ ರಾಮನಾಥ, ಕಾಜುಭಾಗದ ಕಾಲಬೈರವೇಶ್ವರ, ಅರಗಾದ ಮಹಾಲ್‌ ಮಾಸ್ತಿ, ಅವರ್ಸಾದ ಭೂಮ್ತಾಯಿ, ಅಲಗೇರಿ ಸಣ್ಣಮ್ಮ ಹೀಗೆ ಆಯಾ ಊರಿನ ಪ್ರಸಿದ್ಧ ದೇವತೆಗಳಿಗೆ ಸಂಬಂಧಿಸಿದ ಕುಲ, ಗರವೈಗಳಿವೆ. ಒಂದು ಕುಲ, ಗರವೈಗೆ ಸೇರಿದವರು ರಕ್ತ ಸಂಬಂಧಿಗಳೆಂದು ತಿಳಿಸುತ್ತಾರೆ.

೧೦. ಸಂಸ್ಕಾರಗಳು : ಮದುವೆ, ಹುಟ್ಟು, ಸಾವು ಮುಂತಾದ ಸಂಸ್ಕಾರಗಳಿಗೆ ಸಂಬಂಧಿಸಿದ ಆಚರಣಾ ವಿಧಿವಿಧಾನಗಳು ಇತರ ಹಿಂದೂ ಸಮಾಜಗಳ ಆಚರಣಾ ವಿಧಾನಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ.

೧೦.೧ ಮದುವೆ : ಮದುವೆಯ ಕಾಲಕ್ಕೆ ಕುಲ, ಗರವೈಗಳಿಗೆ
ಪ್ರಾಧಾನ್ಯ ನೀಡಲಾಗುತ್ತದೆ. ಒಂದೇ ಕುಲಕ್ಕೆ ಸೇರಿದ ಗಂಡು, ಹೆಣ್ಣುಗಳು ವಿವಾಹವಾಗಲು ನಿಷೇಧವಿದೆ. ಮದುವೆಯ ನಿಶ್ಚಯದಲ್ಲಿ ವಧೂವರರ ತಂದೆ ತಾಯಿ ಹಾಗೂ ಜಾತಿಯ ಮುಖಂಡರಿಗೆ ವಿಶೇಷ ಪ್ರಾಧಾನ್ಯವಿದೆ. ಹೆಣ್ಣು ಗಂಡುಗಳು ಪರಸ್ಪರ ಒಪ್ಪಿಗೆಯಾದ ಮೇಲೆ, ಕುಲ, ಗರವೈ ನೋಡಿ, ಜಾತಕ ಪರಿಶೀಲಿಸಿ ಎಲ್ಲಾ ಸರಿಹೊಂದಿದರೆ ಮದುವೆ ನಿಶ್ಚಯವಾಗುತ್ತದೆ. ಮದುವೆಯಲ್ಲಿ ಜಾತಿಯ ಹಕ್ಕುದಾರರ ಸ್ಥಾನಮಾನಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಗೌರವಿಸುವ ಪದ್ಧತಿಯಿದೆ. ವಿಧವೆ, ವಿಧುರರು ಮರುಮದುವೆಯಾಗಲು ಅವಕಾಶವಿದೆ. ಮೂರನೆಯ ಮದುವೆಯನ್ನು ಅನಿಷ್ಟವೆಂದು ಪರಿಗಣಿಸಲಾಗುತ್ತದೆ. ಮೂರನೆಯ ಮದುವೆಯಾಗುವವಳು ಹೆಣ್ಣಾದರೆ, ಅನಿಷ್ಟ ನಿವಾರಣೆಗಾಗಿ, ಅವಳನ್ನು ಮೂರನೆಯ ವಿವಾಹ ಪೂರ್ವದಲ್ಲಿ ಕೋಳಿ ಹುಂಜನ ಜೊತೆಗೆ ಮದುವೆ ಮಾಡಿಸಿ, ಹೆಣ್ಣಿನ ಕೈಯಿಂದ ಕೋಳಿಯ ಕುತ್ತಿಗೆಯನ್ನು ಕತ್ತರಿಸುತ್ತಾರೆ. ಮೂರನೇ ವಿವಾಹವಾಗುವವರು ಗಂಡಾದರೆ, ಆತನ ಮದುವೆಯನ್ನು ಬಾಳೆಯ ಜೊತೆಯಲ್ಲಿ ಮಾಡಿಸಿ, ಬಾಳೆಯನ್ನು ಗಂಡಿನ ಕೈಯಿಂದ ಕಡಿಸುತ್ತಾರೆ. ಅನಂತರ ನಿಶ್ಚಯವಾದ ಗಂಡು ಇಲ್ಲವೆ ಹೆಣ್ಣಿನ ಜೊತೆಗೆ ಮದುವೆ ನೆರವೇರುತ್ತದೆ. ವಿಧವೆಯ ಮದುವೆ ರಾತ್ರಿಯಲ್ಲಿ ವಿಶೇಷ ಸಮಾರಂಭವಿಲ್ಲದೆ ನಡೆಯುತ್ತದೆ. ಆದರೆ ವಿಧುರರ ಮದುವೆ ಆಡಂಬರದಿಂದ ನಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕಟ್ಟು ಕಟ್ಟಳೆಗಳನ್ನು ಪಾಲಿಸುವುದು ಕಡಿಮೆ.

೧೦.೨. ಜನನ : ಮಗು ಹುಟ್ಟಿದ ಆರನೆಯ ದಿನಕ್ಕೆ ‘ಅಮೆ’ ಅಂದರೆ ಸಟ್ಟಿದೇವತೆಯನ್ನು ಬಾಣಂತಿ ಪೂಜಿಸುತ್ತಾಳೆ. ಪೂಜೆಯಾದ ಮೇಲೆ ಅತ್ತೆ ಬಾಣಂತಿಯ ಸೋಗುಳ ತುಂಬುತ್ತಾಳೆ. ಹನ್ನೊಂದನೆಯ ದಿನಕ್ಕೆ ನಾಮಕರಣವಾಗುತ್ತದೆ. ಈ ಕಾರ್ಯಕ್ಕೆ “ಪುಣ್ಯಾವಾಚನ”ವೆನ್ನುತ್ತಾರೆ. ಅಂದು ಮಗುವಿನ ಹುಟ್ಟು ಹೆಸರು ಮತ್ತು ಕರೆಯುವ ಹೆಸರುಗಳೆರಡನ್ನೂ ಇಡಲಾಗುತ್ತದೆ. ಮಗು ಗಂಡಾದರೆ, ಈರ, ಪುರುಸ, ಸಿದ್ಧ ರಾಮ, ರುಮ್ಮ, ಸಿದ್ದಪ್ಪ, ದಾನು, ಹೇರಂಭ, ತಾಕು, ಲಿಂಗಪ್ಪ, ಮಾದಪ್ಪ, ಬಲಿಯಾ ಮುಂತಾದ ಹೆಸರುಗಳನ್ನಿಡುತ್ತಾ ರೆ. ಹೆಣ್ಣಾದರೆ, ಓಮಿ, ಬಾಗಿ, ಈರಿ, ಚಂದ್ರಬಾಗಿ, ಸಿವೈ, ಗೆನಾಯ್‌, ಸೆನಾಯ್‌, ಆನಂದಿ ಮುಂತಾದ ಹೆಸರುಗಳನ್ನಿಡುವ ವಾಡಿಕೆ ಹಿಂದಕ್ಕಿತ್ತು. ಈಗ ಆಧುನಿಕ ಹೆಸರುಗಳು ಚಾಲ್ತಿಯಲ್ಲಿವೆ. ಮಗುವಿಗೆ ಹೆಸರಿಟ್ಟಾದ ಮೇಲೆ ಮಗುವನ್ನು ತೊಟ್ಟಿಲಲ್ಲಿಟ್ಟು, ಮುತ್ತೈದೆಯರು ಮಗುವಿನ ತಾಯಿಯೊಡನೆ ಸೇರಿ ಜೋಗುಳವನ್ನು ಹಾಡುತ್ತಾರೆ.

೧೦.೩. ಜಾವಳ : ಮಗುವಿಗೆ ಮೂರು ವರ್ಷವಾದಾಗ ಕಿವಿಚುಚ್ಚುವ ಕಾರ್ಯಮಾಡುತ್ತಾರೆ. ಮಗು ಗಂಡಾದರೆ ಮಗುವಿನ ಕೂದಲು ತೆಗೆಯುವ ಕಾರ್ಯವೂ ಅಂದೇ ಜರುಗುತ್ತದೆ. ಈ ಸಮಾರಂಭಕ್ಕೆ ಜಾವುಳವೆನ್ನುತ್ತಾರೆ. ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸುವವನು ಮಗುವಿನ ಸೋದರಮಾವ. ಮಗುವಿಗೆ ನಾಲ್ಕು ವರ್ಷವಾದಾಗ ಮನೆತನದ ಗುರುವನ್ನು ತಂದು, ಧಾತುವಿನಿಂದ ಮುದ್ರೆ ಹಾಕಿಸುವ ಸಂಪ್ರದಾಯ ಹಿಂದಕ್ಕಿತ್ತು. ಇಂದು ಈ ಸಂಪ್ರದಾಯ ಕಣ್ಮರೆಯಾಗಿದೆ.

೧೦.೪. ಸಾವು : ಸುಮಾರು ನೂರು-ನೂರೈವತ್ತು ವರ್ಷಗಳ ಹಿಂದೆ ಕೊಮಾರ ಪಂತರೂ ಲಿಂಗಾಯತರಂತೆ ಶವಗಳನ್ನು ಹೂಳುತ್ತಿದ್ದರೆಂದು ಹೇಳುತ್ತಾರೆ. ಆದರೆ ಈಗ ಆ ಪದ್ಧತಿಯಿಲ್ಲ. ಹೆಣವನ್ನು ಸುಡುವ ಪದ್ಧತಿ ಈಗ ಪ್ರಚಲಿತವಿದೆ. ಚಿಕ್ಕಮಕ್ಕಳು, ಬಾಣಂತಿ ಹಾಗೂ ಮೈಲಿಬೇನೆಯಿಂದ ಸತ್ತವರನ್ನು ಮಾತ್ರ ಹುಗಿಯುತ್ತಾರೆ. ಸತ್ತ ಹಿರಿಯರ ಹೆಸರಿನಲ್ಲಿ ಕಂಬವೊಂದನ್ನು ಹುಗಿದು ಅದರ ಕೆಳಗೆ ಸುಲಿಯದ ತೆಂಗಿನ ಕಾಯಿಟ್ಟು, “ಮನೆಯ ಪುರುಷ > ಮಾಳ ಪುರುಸ”ನೆಂದು ಪೂಜಿಸುತ್ತಾರೆ. ಈ ತೆಂಗಿನ ಕಾಯನ್ನು ಪ್ರತಿಯುಗಾದಿಗೆ ಬದಲಿಸುವ ವಾಡಿಕೆ. “ಮಾಳಪುರುಸ” ಕುಟುಂಬದ ಹಿರಿಯನ ಮನೆಯಲ್ಲಿರುತ್ತದೆ. ಆ ಮನೆಗೆ “ಮಾಳಘರ್‌’ ಎನ್ನುತ್ತಾರೆ. ಪ್ರತಿ ವರ್ಷ ಭಾದ್ರಪದ ವದ್ಯದಲ್ಲಿ ಮಾಳಫಘರಕ್ಕೆ ಹೋಗಿ, ಚರುಬೇಯಿಸಿ, “ಮಾಳ ಪುರುಸ”ನಿಗೆ ನೈವೇದ್ಯಮಾಡಿ, ಕುಲದವನೊಬ್ಬನಿಗೆ, ಪಿತರನೆಂದು ಊಟ ಹಾಕಿ, ಬಾಕಿ ಉಳಿದ ಚರುವನ್ನು ಆ ಕುಟುಂಬದವರೆಲ್ಲ ಉಣ್ಣುತ್ತಾರೆ. ಕುಟುಂಬದ ಸದಸ್ಯರಲ್ಲದವರಿಗೆ ಚರುವನ್ನು ಹಾಕುವುದಿಲ್ಲ. ಯುದ್ಧ ರಂಗದಲ್ಲಿ ಇಲ್ಲವೆ ಅಪಘಾತದಲ್ಲಿ ಸತ್ತವರು ಪಿಶಾಚಿಗಳಾಗುತ್ತಾರೆಂಬ ನಂಬಿಕೆ ಇವರಿಗೆ ಈ ಪಿಶಾಚಿಗಳಲ್ಲಿ ಎರಡು ಪ್ರಕಾರಗಳು. ಯುದ್ಧ ದಲ್ಲಿ ಮಡಿದ ವೀರರ ಪಿಶಾಚಕ್ಕೆ ‘ಖೇತ್ರಿ’ಯೆನ್ನುತ್ತಾರೆ. ದಸರೆಯ ಹಬ್ಬದ ದಿನ ಇವುಗಳಿಗೆ ಕೋಳಿ-ಕುರಿಗಳನ್ನು ಕೊಟ್ಟು ಆರಾಧಿಸಿದರೆ, ಆರಾಧಕರ ಮನೆಯವರಿಗೆ ಸುಖವನ್ನೂ, ಅವರ ವೈರಿಗಳಿಗೆ ಪೀಡನೆಯನ್ನು ಕೊಡುತ್ತವೆಂಬ ನಂಬಿಕೆ. ಬೇರೆ ಬಗೆಯಿಂದ. ಮೃತ್ಯುವಿಗೀಡಾದವರ ಪಿಶಾಚಿಗಳು ದುಷ್ಟ ಪಿಶಾಚಿಗಳು, ರೋಗರುಜಿನಗಳಿಗೆ ಹಾಗೂ ಇನ್ನಿತರ ಕಾಯಿಲೆಗಳಿಗೆ ಇವುಗಳೇ ಕಾರಣಗಳೆಂದು ಬಗೆದು ಅವನ್ನು ಹದ್ದುಬಸ್ತಿನಲ್ಲಿಡಲು ಗುನಗ ಗಾಡಗರನ್ನು ಮೊರೆಹೋಗುತ್ತಾರೆ.

೧೧. ಮತೀಯ ಆಚರಣೆಗಳು : ಕೊಮಾರಪಂತರ ಕುಲದೈವಗಳಾದ ಮಾಳಸಾ, ನಾರಾಯಣಿ, ರಾಮನಾಥ ಮುಂತಾದ ಕೆಲವು ದೇವತೆಗಳು ಗೋವೆಯಲ್ಲಿವೆ. ಈ ದೇವತೆಗಳ ಹೊರತಾಗಿ ಕೊಮಾರ ಪಂತರು ಕಾಲಬೈರವ, ಮಹಾದೇವ, ಬಸವ, ವೆಂಕಟರಮಣ, ಗಣಪತಿ, ಹೊನ್ನರಾಕಾ, ಬರಮನಾಥ, ಕ್ಷೇತ್ರಪಾಲ, ಬೀರ, ಜಟಗ, ಹುಲಿದೇವರು, ನಾಗದೇವತೆ, ತುಲಸಿ, ಭೂಮ್ತಾಯಿ, ಸಣ್ಣಮ್ಮ ಈ ಮುಂತಾದ ದೇವತೆಗಳನ್ನು ಆರಾಧಿಸುತ್ತಾರೆ. ಕೆಲವು ವಿಶಿಷ್ಟ ) ಕುಟುಂಬದವರು ‘ಮಂಡ’ವನ್ನು ಸ್ಥಾಪಿಸಿ, ಅಲ್ಲಿ ಮಂಡದಮ್ಮ (ಶಕ್ತಿ ದೇವತೆ)ನನ್ನು ಪೂಜಿಸುತ್ತಾರೆ. ಸಾಂಕ್ರಾಮಿಕ ಪಿಡುಗು ತಲೆದೋರಿದಾಗ ಜಾನಪದರು ಕೋಮಾರ ಪಂತರ ಮಂಡಗಳಿಗೆ ಹೋಗಿ ತಮ್ಮ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. ಶಕ್ತಿದೇವತೆಯನ್ನು ಆವಾಹನೆಗೊಳಿಸಿಕೊಂಡ ಮಂಡದ ಪೂಜಾರಿ, ಭಕ್ತರ ತೊಂದರೆ ತೊಡಕುಗಳನ್ನು ನಿವಾರಿಸುವ ಭೂತ ಪಿಶಾಚಿಗಳನ್ನು ಉಚ್ಛಾಟಿಸುವ ಕೆಲಸವನ್ನು ನಿರ್ವಹಿಸುತ್ತಾನೆ. ಮಾಸ್ತಿಯನ್ನು ಪೂಜಿಸುವ ಸಂಪ್ರದಾಯ ಇವರಲ್ಲಿ ಬಲವತ್ತರವಾಗಿದೆ. ಮಾಸ್ತಿಯ ಹೆಸರಿನಲ್ಲಿ ಮಹಾಲಯವನ್ನಾಚರಿಸುವ ರೂಢಿಯಿದೆ. ಬಂಡಿಹಬ್ಬದಲ್ಲಿ ಮಾಸ್ತಿಗೆ ವಿಶೇಷಗೌರವ ಸಲ್ಲಿಸಲಾಗುತ್ತದೆ. ಕೆಲವೆಡೆ ಬಂಡಿ ಹಬ್ಬದಲ್ಲಿ ಮಾಸ್ಮಿ ವೇಷ ಕಟ್ಟುವವರು ಕೊಮಾರ ಪಂತರು. ಇವರು ನಡಕೊಳ್ಳುವ ವೈದಿಕ ದೇವತೆಗಳಿಗೆ ಹೂ-ಹಣ್ಣು- -ಕಾಯಿ-ಕರ್ಪೂರಗಳ ಸಾತ್ವಿಕ ಸೇವೆಸಂದರೆ, ಜಟಗ, ಬೀರ, ಬಾಗಿಲ ಪೈಕ, ಗುತ್ತೀಬೀರ, ಮಾರಿಕಾಂಬೆ, ಮಾಸ್ಮಿ ಚೌಡಿಯರಿಗೆ ಕೋಳಿ, ಕುರಿಗಳ ಬಲಿಸಮರ್ಪಣೆಯಾಗುತ್ತದೆ. ಹಿಂದುಗಳು ಆಚರಿಸುವ ಬಹುತೇಕ ಎಲ್ಲ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಇವರಿಗೆ ವರ್ಷಾರಂಭ ಯುಗಾದಿಯಿಂದ. ಯುಗಾದಿ, ಗಣೇಶ ಚತುರ್ಥಿ, ಮಹಾಲಯ, ದಸರೆ, ದೀಪಾವಳಿ, ಸುಗ್ಗಿ, ಬಂಡಿಹಬ್ಬಗಳನ್ನು ವಿಶೇಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿಯಲ್ಲಿ ಬಲಿಪಾಡ್ಯದಂದು. ಇವರಲ್ಲಿ ಜರುಗುವ ಹೊಂಡೆಹಬ್ಬ ಉಲ್ಲೇಖನೀಯ. ಕವಣೆ ಬೀಸಿ ಹೊಡೆದಾಡುವ ಈ ಜಿದ್ದಿನಾಟ ಹೊನ್ನೆಕೇರಿ ಮತ್ತು ಕುಂಬಾರಕೇರಿ ಗ್ರಾಮದ ಕೊಮಾರ ಪಂತರಲ್ಲಿ ನಡೆಯುತ್ತದೆ. ಅಂಕೋಲೆಯ ಭೂಮ್ತಾಯಿ ದೇವಸ್ಥಾನದಿಂದ ಧುರವೀಳ್ಯ ಪಡೆದ ಎರಡು ಊರುಗಳ ಯುವಕರು ಎರಡು ಬಣಗಳಾಗಿ ನಿಲ್ಲುವರು. ಕವಣೆಯಲ್ಲಿ ಹಿಂಡ್ಲಿ ಕಾಯನ್ನು ಹಾಕಿ, ಮೊಣಕಾಲಿನ ಕೆಳಗೆ ಪರಸ್ಪರರು ಹೊಡೆದಾಡಿಕೊಳ್ಳುವರು. ಹಿಂಡ್ಲಿಕಾಯಿ ಪೆಟ್ಟು ಬಿದ್ದಾಗ ನೋವಿನಿಂದ ನರಳದೆ, ‘ಶಹಬ್ಬಾಸ್‌’ ಎಂದು ಈ ಕವಣೆಯ ಮಲ್ಲರು ಉತ್ಸಾಹದಿಂದ ಕೂಗುವುದನ್ನು ಕೇಳಿದಾಗ, ಮೈನವಿರೇಳುವುದು. ಈ ಆಟ ಕ್ಷತ್ರಿಯರ ಯುದ್ದ ತರಬೇತಿಯ ಕುರುಹಿನಂತಿದೆ. ದಸರೆಯ ಹಬ್ಬದಂದು ಕೆಲವರ ಮನೆಯಲ್ಲಿ ಹತಾರ ಪೂಜೆನಡೆಯುತ್ತದೆ. ಅಂದು ಕಾಲಭೈರವನಿಗೆ ಪೂಜೆಸಲ್ಲಿಸಿ, ಕೋಳಿ-ಕುರಿಗಳ ಬಲಿಕೊಡುವ ಸಂಪ್ರದಾಯ ಕೆಲವು ಕುಟುಂಬಗಳಲ್ಲಿವೆ. ಗ್ರಾಮದೇವತೆ ಅಮ್ಮ ಹಾಗೂ ಅವಳ ಪರಿವಾರ ಬಂಟರ ಹೆಸರಿನಲ್ಲಿ ಬಂಡಿಹಬ್ಬವನ್ನು ಇವರು ಗಡದ್ದಾಗಿ ಆಚರಿಸಿ, ವೀರದೇವತೆಗಳಿಗೆ ಬಲಿ ಸಮರ್ಪಣೆಯನ್ನು ಮಾಡಿ, ಮಾಂಸ ಭೋಜನ ಮಾಡುತ್ತಾರೆ.

೧೨. ಕಲೆ, ಕ್ರೀಡೆ : ಕೋಮಾರ ಪಂತರು ಅಭಿನಯ ಕುಶಲರು. ಯಕ್ಚಗಾನ ಬಯಲಾಟ, ಹಗಣ, ನಾಟಕಗಳಲ್ಲಿ ಇವರಿಗೆ ವಿಶೇಷ ಆಸಕ್ತಿ. ಒಂದು ಕಾಲಕ್ಕೆ ಕಾರವಾರದ ನರಸಿಂಹ ಕಲಾಕುಂಜ ನಾಟಕ ಮಂಡಳಿಯ ವಿಶೇಷ ಖ್ಯಾತಿವೆತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು. ಕೊಮಾರ ಪಂತರ ಸುಗ್ಗಿ ಕೋಲಾಟ ನಾಡಿನಾದ್ಯಂತ ಹೆಸರುವಾಸಿ. ಸುಗ್ಗಿಯ ಕೋಲು ಮೇಳದ ವಾರಸುದಾರಿಕೆ ಕೋಮಾರ ಪಂತರದು, ಕುಂಚದ ಮೇಳದ ವಾರಸುದಾರಿಕೆ ಹಾಲಕ್ಕಿ ಒಕ್ಕಲಿಗರದ್ದು ಎಂಬ ವದಂತಿಯಿದೆ. ಹಟ್ಟಿಕೇರಿ, ಅವರ್ಸಾಗಳ ಕೊಮಾರ ಪಂತರ ಸುಗ್ಗಿ ತುರಾಯಿಯ ವೈಭವ, ಕೋಲಾದ ಗಂಡುಗಾಡಿ ಮನಮೋಹಕ. ಬೇಟೆಯಾಡುವುದು, ಕೋಳಿ ಅಂಕ ಇವರಿಗೆ ಅತ್ಯಂತ ಪ್ರಿಯವಾದ ಹವ್ಯಾಸಿ ಕ್ರೀಡೆಗಳು. ಹಿಂದೆ ಕ್ಷಾತ್ರ ಜೀವನ ಸಾಗಿಸಿದ ಈ ಜಾತಿಯಪರ ಅನೇಕ ಕುಟುಂಬಗಳಲ್ಲಿ ವರ್ಷಕ್ಕೊಮ್ಮೆ ಕೋಳಿಯಂಕ ಆಡಲೇಬೇಕೆಂಬ ಕಟ್ಟಿಳೆಯಿದೆ. ಹಳ್ಳಿ ಹಳ್ಳಿಗಳಲ್ಲಿ ಅನೇಕ ಜನಪದ ಆಟಗಳು ಹಿಂದಕ್ಕೆ ಪ್ರಚಲಿತವಿದ್ದವು. ಇಂದು ಅವೆಲ್ಲ ನ ನಾಗರಿಕತೆಯ ದಾಳಿಯಿಂದ ಕಣ್ಮರೆಯಾಗಿವೆ.

೧೩. ಭಾಷೆ ಮತ್ತು ಸಾಹಿತ್ಯ : ಗೋವೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೆಲೆವೆಡೆ ನೆಲೆಸಿರುವ ಕೊಮಾರ ಪಂತರು ಕೊಂಕಣಿ ಭಾಷೆಯನ್ನಾಡುತ್ತಾರೆ. ಅಂಕೋಲಾ ಮತ್ತು ಕುಮಟಾ ತಾಲೂಕಿನವರು ಕನ್ನಡ ಮಾತನ್ನಾಡುತ್ತಾರೆ. ಇವರಾಡುವ ನುಡಿ ಗ್ರಾಂಥಿಕ ಕನ್ನಡದಿಂದ ತುಸು ಭಿನ್ನವಾಗಿದ್ದು ಕನ್ನಡ ದೇಶಿಯ ಹೊಗರಿನಿಂದ ಸಮೃದ್ಧವಾಗಿದೆ.

ಕೊಮಾರ ಪಂತರಲ್ಲಿ ಜನಪದ ಸಾಹಿತ್ಯ ವಿಪುಲವಾಗಿದೆ. ಮದುವೆ ಶೋಭನಾದಿ ಮಂಗಲಕಾರ್ಯಗಳಿಗೆ ಸಂಬಂಧಿಸಿದ ಹಾಡು, ಬತ್ತ ಕುಟ್ಟುವಾಗ, ಹಿಟ್ಟು ಬೀಸುವಾಗ, ತೊಟ್ಟಿಲು ತೂಗುವಾಗ ಹಾಡುವ ತ್ರಿಪದಿಗಳು, ಗುಮಟೆ ಹಾಗೂ ಕೋಲಾಟ ಪದಗಳು, ಕಳೆಗೆಯ್ಯುವಾಗ, ಸಸಿನೆಡುವಾಗ ಹೇಳುವ ಕಥೆಯ ಹಾಡುಗಳು, ವಿರಾಮ ಕಾಲದಲ್ಲಿ ಪಟ್ಟಂಗಹೊಡೆಯುವಾಗ ಹೇಳುವ ಕಥೆಗಳು ಇವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ.

ಮಾಹಿತಿ: ಕೊಮಾರಪಂತರ ಕಥನ ಕವನಗಳು, ಸಂಪಾದಕರು – ಡಾ. ಎನ್. ಆರ್.ನಾಯಕ್, ಜಾನಪದ ಪ್ರಕಾಶನ, ಹೊನ್ನಾವರ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading