ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲ್ಲೂಕಿನ ಶಾಂತಾರಾಮ್ ಬುಡ್ನ ಸಿದ್ಧಿಯವರು ಸಿದ್ಧಿ ಪಂಗಡದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಮೊದಲ ಆಫ್ರಿಕನ್ ಮೂಲದ ಭಾರತೀಯ ಶಾಸಕರಾಗಿದ್ದಾರೆ. ಶಾಂತಾರಾಮ್ ಅವರನ್ನು 22 ಜುಲೈ 2020ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನ ಮಾಡಿದರು. ಇದು ಉತ್ತರ ಕನ್ನಡ ಬುಡಕಟ್ಟು ಸಮುದಾಯಕ್ಕೆ ದೊರೆತ ಶ್ರೇಯಸ್ಸಾಗಿದೆ.
ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದ ಶ್ರೀಯುತ ಶಾಂತರಾಮ್ ಅವರು ಬಡ ಮತ್ತು ಸಾಮಾಜಿಕ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ ಇವರು ಪೂರ್ವ ಆಫ್ರಿಕಾದ ಮೂಲದ ಬಂಟು ಜನಾಂಗಕ್ಕೆ ಸೇರಿದವರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿಟ್ಲಳ್ಳಿ ಗ್ರಾಮದವರು. ಶಾಂತರಾಮ್ ಸಿದ್ಧಿ ಅವರು 1988ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಸಿದ್ಧಿ ಸಮುದಾಯದ ಮೊದಲ ಪದವೀಧರರಾಗಿದ್ದರು. ಅವರು ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರಿದರು. ಅವರು ಸಿದ್ಧಿ ಬುಡಕಟ್ಟಿನ ಮೊದಲ ಪದವೀಧರರಾದರು, ಮತ್ತು ಅವರ ಪದವಿ ನಂತರ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸಿದ್ದರು.
ಸಿದ್ಧಿ ಬುಡಕಟ್ಟು ಕಲ್ಯಾಣ ಮತ್ತು ಆರ್‌ಎಸ್‌ಎಸ್ ಸಂಯೋಜಿತ ವನವಾಸಿ ಕಲ್ಯಾಣ ಆಶ್ರಮದಲ್ಲಿ 1989 ರಲ್ಲಿ ಸ್ವಯಂಸೇವಕರಾಗಿ ಸೇರಿದರು. ಅಲ್ಲಿ ಅವರು ಹಾಸ್ಟೆಲ್ ವಾರ್ಡ್‌ನ್ ಆಗಿ ಸೇವೆ ಸಲ್ಲಿಸಿದರು. ಮತ್ತು ಪ್ರಸ್ತುತ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದಾರೆ. ಅವರು ಮೊದಲಿಗೆ ಸಿದ್ದಿ ಸಮುದಾಯದೊಂದಿಗೆ ಕೆಲಸ ಮಾಡಿದರು. ಆದರೆ ಈಗ ಕರ್ನಾಟಕದ ಎಲ್ಲಾ ಬುಡಕಟ್ಟು ಸಮುದಾಯಗಳೊಂದಿಗೆ ಕೆಲಸ ಮಾಡುತ್ತಾರೆ. ಅವರು ಹಲವಾರು ಪರಿಸರ ಚಳುವಳಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬೇಡ್ತಿ ನದಿ ಕಣಿವೆ ಸಂರಕ್ಷಣಾ ಚಳುವಳಿ, ಅಪ್ಪಿಕೋ ಚಳುವಳಿ ಮತ್ತು ವ್ರಕ್ಷ-ಲಕ್ಷ ಆಂದೋಲನ ಹಾಗೂ ಕರ್ನಾಟಕ ಸರ್ಕಾರ ನೇಮಿಸಿದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಶ್ರೀ ಶಾಂತರಾಮ್ ಸಿದ್ಧಿಯವರು 2008-2009ರಲ್ಲಿ ರಾಜ್ಯ ಸರ್ಕಾರದ ಪಶ್ಚಿಮಘಟ್ಟ ಕಾರ್ಯಪಡೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಸಿದ್ಧಿ ಅಖಿಲ ಕರ್ನಾಟಕ ಸಿದ್ಧಿ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಡಿಯಾಗೋ ಬಸ್ತ್ಯಾವ್ ಸಿದ್ದಿ ಅವರು ಹೇಳುವ ಪ್ರಕಾರ “ನಮ್ಮ ಜನರು 12ನೇ ಶತಮಾನದಲ್ಲಿ ಇಲ್ಲಿಗೆ ಬಂದರು. ಆದರೆ ನಾವು ಅಜ್ಞಾತರಾಗಿದ್ದೇವೆ. ನಾವು ನಮ್ಮ ಗುರುತಿಗಾಗಿ ಹೋರಾಡುತಿದ್ದೇವೆ. ಅನೇಕ ರಾಜಕೀಯ ಪಕ್ಷಗಳ ಬಳಿ ನಮಗೆ ಪ್ರಾತಿನಿಧ್ಯ ನೀಡುವಂತೆ ವಿನಂತಿಸಿಕೊಂಡಿದ್ದೇವೆ. ಶಾಂತರಾಮ್ ಸಿದ್ಧಿಯವರು ರಾಜಕೀಯ ನಾಯಕರಾಗಿರುವುದು ನಮ್ಮ ಜನಾಂಗಕ್ಕೆ ಸಿಕ್ಕ ಒಳ್ಳೆಯ ಮನ್ನಣೆಯಾಗಿದೆ. ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ್ಯವಾದಗಳನ್ನು ತಿಳಿಸಬಯಸುತ್ತೇವೆ. ನಮ್ಮ ಸಮುದಾಯವನ್ನು ಅಂತಿಮವಾಗಿ ಗುರುತಿಸಲಾಗಿದೆ.” ಎಂದಿದ್ದಾರೆ.
ಅಂದು ದೇಶದಲ್ಲಿ ಸುಮಾರು 50,000 ರಿಂದ 70.000 ಸಿದ್ಧಿ ಜನರು ವಾಸಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 10,477 ಸಿದ್ಧಿ ಜನಾಂಗದವರು ವಾಸಿಸುತ್ತಿದ್ದಾರೆ.
ಕಳೆದ 32 ವರ್ಷಗಳಲ್ಲಿ, ಶ್ರೀ ಶಾಂತರಾಮ್ ಸಿದ್ಧಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಬುಡಕಟ್ಟು ಸಮುದಾಯಗಳನ್ನು ಸಂಘಟಿಸುತ್ತಿದ್ದಾರೆ ಹಾಗು ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಉನ್ನತ ಶಿಕ್ಷಣ ಮತ್ತು ಉದ್ಯೋಗಳಿಗೆ ಪ್ರವೇಶ ಪಡೆಯಲು ಸಹಾಯ ಮಾಡುತ್ತಿದ್ದಾರೆ. ಅವರ ಗಮನವನ್ನು ಬುಡಕಟ್ಟು ಸಮುದಾಯಗಳ, ವಿಶೇಷವಾಗಿ ಸಿದ್ಧಿಗಳಂತಹ ಅರಣ್ಯದಲ್ಲಿ ವಾಸಿಸುವ ಗುಂಪುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ.
ಶಾಂತರಾಮ್ ಬುಡ್ನ ಸಿದ್ದಿಯವರ ನೇತೃತ್ವದಲ್ಲಿ ಸಿದ್ಧಿ ಸಮುದಾಯವು ಮುಂದಿನ ದಿನಮಾನಗಳಲ್ಲಿ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತಾಗಲಿ. ಇದರ ಜೊತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಇನ್ನು ಹಲವು ಅನಾನುಸೂಚಿತ ಬುಡಕಟ್ಟು ಸಮುದಾಯದ ಅಭಿವೃದ್ಧಿ ಮತ್ತು ಅವರ ಬೇಡಿಕೆಯನ್ನು ಪೂರೈಸುವ ಪ್ರತಿನಿಧಿಯಾಗಿ ಅವರು ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ಎಲ್ಲ ಸಮುದಾಯಕ್ಕೆ ಇದೆ.
ಶಾಂತರಾಮ್ ಬುಡ್ನ ಸಿದ್ಧಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಮತ್ತು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ಪಡೆಯಲಿ ಹಾಗು ಸಚಿವ ಸ್ಥಾನವು ಲಭಿಸಲಿ ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ನಾಗರಿಕರ ಆಶಯವಾಗಿದೆ.
ಮಾಹಿತಿ: ಜಗದೀಶ್ ಗೌಡ





Leave a Reply to ಸಿದ್ದಿ ಜನಾಂಗ – ಇತಿಹಾಸ, ಸಂಪ್ರದಾಯ, ಕಲೆ, ಜೀವನ, ಸಾಧಕರು, ಸಾಮಾಜಿಕ ಸ್ಥಿತಿ – ಸುಗ್ಗಿ ಸಂಪದCancel reply